ಸೋಮವಾರ, ಡಿಸೆಂಬರ್ 9, 2019
17 °C

ಇಕ್ರಲಾ, ಒದಿರ್ಲಾ ಅನ್ನೋದು ತಳ ಸಮುದಾಯದ ಭಾಷೆ ಅಲ್ಲ: ವಸಂತಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಇಕ್ರಲಾ, ಒದಿರ್ಲಾ ಅನ್ನೋದು ತಳಸಮುದಾಯದ ಭಾಷೆ ಅಲ್ಲ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ಅಭಿಪ್ರಾಯಪಟ್ಟರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ತುಮಕೂರು ವಿಶ್ವವಿದ್ಯಾನಿಲಯದಿಂದ ಹಮ್ಮಿಕೊಂಡಿರುವ 'ಕೆ.ಬಿ.ಸಿದ್ದಯ್ಯ: ಬದುಕು-ಸಾಹಿತ್ಯ-ಚಳವಳಿ ಕುರಿತ ವಿಚಾರ ಸಂಕಿರಣ' ದಲ್ಲಿ ಅವರು ಮಾತನಾಡಿದರು.

ಕವಿಯ ಎರಡು ಸಾಲುಗಳನ್ನು ಇಟ್ಟುಕೊಂಡು ಅವರನ್ನು ಮತ್ತೆ ಮತ್ತೆ ಹೊಗಳಿದರೆ, ಅವರ ಸಾಧನೆಯನ್ನು ಕಟ್ಟಿಹಾಕಿದಂತೆ. ೯೦ ಕ್ಕೂ ಹೆಚ್ಚು ಕವಿತೆಗಳನ್ನು ಬರೆದಿರುವ ಸಿದ್ದಲಿಂಗಯ್ಯ ಅವರಲ್ಲಿ ಇಕ್ರಲಾ, ಒದಿರ್ಲಾ, ಚರ್ಮ ಹೆಬರ್ಲಾ ಎಂಬ ಧ್ವನಿಯ ಕವಿತೆಗಳು ಹದಿಮೂರು ಮಾತ್ರ. ಉಳಿದ ಅನೇಕ ಸಂಗತಿಗಳಲ್ಲಿ ಆ ನೋವು ಇದೆಯಲ್ಲ, ತುಂಬಿದೆ ಎಂದರು.

ದಲಿತ ಕಾವ್ಯದ ನೋವು, ದ್ವೇಷದಿಂದ, ರೋಷದಿಂದ ಹುಟ್ಟಿದ ನೋವಲ್ಲ. ಅದು ಒಡಲ ಉರಿ. ಆ ಕಿಚ್ಚು ಬೆಳಕಾಗಿ, ಧ್ವನಿಯಾಗುತ್ತೆ ಎಂದು ಹೇಳಿದರು.

ಯಾಕೆಂದರೆ ಇಕ್ಕಿಸಿಕೊಂಡು, ಒದೆಸಿಕೊಂಡು ಬದುಕಿದ ಜನ, ಆ ಇಕ್ಕಿದವರ, ಹೊಡೆದವರ ಬಗ್ಗೆ ಮಾತನಾಡುವಾಗ, ಆ ರೀತಿಯ ಪ್ರತಿಕ್ರಿಯಾತ್ಮಕ ಭಾಷೆ ಅನಿವಾರ್ಯ ಆಗುತ್ತದೆ. ಅದನ್ನು ಸಮಾಜ ಅರ್ಥ ಮಾಡಿಕೊಳ್ಳದೆ ಹೋದರೆ, ಆ ನೋವಿನ ತಳಮಳವನ್ನು ಅರ್ಥ ಮಾಡಿಕೊಳ್ಳಲು ಆಗಲ್ಲ. ಒಡಲ ಹುರಿಯನ್ನು ತಣಿಸಲಿಕ್ಕಾಗಲಿ, ಕಣ್ಣಿರನ್ನು ಒರೆಸಲಿಕ್ಕಾಗಲಿ ಆಗೊದಿಲ್ಲ. ಅದನ್ನು ಕಣ್ಣೀರು ಒರೆಸುವ ಬೆರಳುಗಳು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಹೇಳಿದಾಗ, ವೇದಿಕೆಯಲ್ಲಿದ್ದ ಕವಿ ಸಿದ್ದಲಿಂಗಯ್ಯ ಸೇರಿದಂತೆ ಅತಿಥಿಗಳೆಲ್ಲರೂ ವಸಂತಕುಮಾರ್ ಅವರ ಮುಖವನ್ನು ತದೇಕಚಿತ್ತದಿಂದ ನೋಡುತ್ತಿದ್ದರು. 

ಬರಹಕ್ಕಿಂತ ಬದುಕು ದೊಡ್ಡದು, ಬದುಕಿಗಿಂತ ಸಂಸ್ಕೃತಿ ದೊಡ್ಡದು. ದೊಡ್ಡ ಸಂಸ್ಕೃತಿಯಿಂದ ಬದುಕು ದೊಡ್ಡದಾಗುತ್ತದೆ. ದೊಡ್ಡ ಬದುಕಿನಿಂದಾಗಿ ದೊಡ್ಡ ಬರಹ ಹುಟ್ಟುತ್ತದೆ. ಕೆ.ಬಿ.ಸಿದ್ದಯ್ಯ ದೊಡ್ಡ ಬರಹ ಕೊಟ್ಟವರು ಎಂದು ಸ್ಮರಿಸಿದರು. 

ಕವಿ ಸಿದ್ದಲಿಂಗಯ್ಯ ಮಾತನಾಡುತ್ತ, ಶಿಷ್ಟ ಎಂದು ಹೇಳಲಾಗುವ ಪುರಾಣಗಳಲ್ಲಿ ಬ್ರಾಹ್ಮಣರಿಗಾಗಿ ಆಂಬೋಡೆಗಳ ಪರ್ವತಗಳು ಇರುವ ಕಲ್ಪನೆಗಳಿವೆ. ಆದರೆ, ಸಿದ್ದಯ್ಯ ಸಂಪಾದಿಸಿದ ದಲಿತ ಪುರಾಣಗಳಲ್ಲಿ, ಹೆಂಡದ ಕೆರೆಗಳು, ಮಾಂಸದ ಪರ್ವತಗಳ ಕಲ್ಪನೆ ಇದೆ. ಜನಪದ, ದಲಿತ ಪುರಾಣದಲ್ಲಿಯೂ ವೈಚಾರಿಕ ಅಧ್ಯಾತ್ಮ ಇದೆ. ಅದನ್ನು ಸಂಪೂರ್ಣವಾಗಿ ತಿಳಿದುಕೊಳ್ಳದೆ ಮೌಢ್ಯ ಎಂದು ನಾವು ನಿರ್ಧಾರಕ್ಕೆ ಬರಬಾರದು ಎಂದು ಕಿವಿಮಾತು ಹೇಳಿದರು.

ಬಾರೊ, ಬಾರೊ ಅಕ್ಷರ, 
ಬಂದು ಹೋಗೊ ಅಕ್ಷರ,
ಕಟ್ಟ ಕಡೆಯ ಮನುಷ್ಯನನ್ನು ಮುಟ್ಟಿ ಹೋಗೊ ಅಕ್ಷರ...... ಎಂದು ಕೆ.ಬಿ.ಸಿದ್ದಯ್ಯರ ಕವಿತೆಯ ಸಾಲುಗಳನ್ನು ಉಲ್ಲೇಖಿಸಿ ತಳ ಸಮುದಾಯದಲ್ಲಿನ ಅನಕ್ಷರತೆಯ ಕುರಿತು ವಿವರಿಸಿದರು.

ನಾನು ವಯಸ್ಸಿನಲ್ಲಿಯೂ, ಜೀವನ ಸಾಧನೆಯಲ್ಲಿಯೂ ಚಿಕ್ಕವನು. ಚಿಕ್ಕವನಿಗೆ ಬಣ್ಣ ಹಚ್ಚಿ, ದೊಡ್ಡ ಸ್ಥಾನದಲ್ಲಿ ಕೂರಿಸಿದ್ದಾರೆ. ಸಣ್ಣ ಲೋಪಗಳಾದರೆ ಕನ್ನಡ ವಿದ್ವತ್ತು ಲೋಕ ನನ್ನನ್ನು ಕ್ಷಮೀಸಬೇಕು.
ಬಿ.ವಿ.ವಸಂತಕುಮಾರ್, ಅಧ್ಯಕ್ಷ, ಕರ್ನಾಟಕ ಸಾಹಿತ್ಯ ಅಕಾಡೆಮಿ

ಪ್ರತಿಕ್ರಿಯಿಸಿ (+)