ಭಾನುವಾರ, ಜೂಲೈ 5, 2020
23 °C
ಸಹಾಯಕ ಪ್ರೊಫೆಸರ್ ಹುದ್ದೆ

ಕೆ–ಸೆಟ್ ಪರೀಕ್ಷೆ ವಿಳಂಬ: ಆಕಾಂಕ್ಷಿಗಳಿಗೆ ಸಂದರ್ಶನದಿಂದ ವಂಚಿತರಾಗುವ ಆತಂಕ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

ಕಾರವಾರ: ಕೊರನಾ ಕಾರಣದಿಂದ ಎರಡೆರಡು ಬಾರಿ ಮುಂದೂಡಲಾಗಿದ್ದ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯ (ಕೆ–ಸೆಟ್) ಹೊಸ ದಿನಾಂಕ ಇನ್ನೂ ಪ್ರಕಟವಾಗಿಲ್ಲ. ಇದರಿಂದ ರಾಜ್ಯದಾದ್ಯಂತ ಸಾವಿರಾರು ಅಭ್ಯರ್ಥಿಗಳು ಸಹಾಯಕ ಪ್ರೊಫೆಸರ್ ಹುದ್ದೆಗಳ ಸಂದರ್ಶನದಿಂದ ವಂಚಿತರಾಗುವ ಆತಂಕದಲ್ಲಿದ್ದಾರೆ.

ಈ ಹುದ್ದೆಗಳನ್ನೇ ಗಮನದಲ್ಲಿಟ್ಟುಕೊಂಡು ಸಾವಿರಾರು ಅಭ್ಯರ್ಥಿಗಳು ಕೆ–ಸೆಟ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗವು (ಕೆ.ಪಿ.ಎಸ್.‌ಸಿ) ಈಗಾಗಲೇ ಕರಡು ಅಧಿಸೂಚನೆ ಸಿದ್ಧಪಡಿಸಿದೆ. ಒಂದುವೇಳೆ, ಕೆ–ಸೆಟ್ ಪರೀಕ್ಷೆಗೂ ಮೊದಲೇ ಕೆ.ಪಿ.ಎಸ್.ಸಿ ಸಂದರ್ಶನ ಹಮ್ಮಿಕೊಂಡರೆ ಸಮಸ್ಯೆಯಾಗಲಿದೆ. ಅದರಲ್ಲೂ ಗರಿಷ್ಠ ವಯೋಮಿತಿಯ (43 ವರ್ಷ) ಅಂಚಿನಲ್ಲಿರುವವರ ಕನಸು ಕಮರಲಿದೆ ಎನ್ನುವುದು ಅಭ್ಯರ್ಥಿಗಳ ಭಯವಾಗಿದೆ.

ಕಳೆದ ವರ್ಷ ಕೆ–ಸೆಟ್ ಪರೀಕ್ಷೆ ಹಮ್ಮಿಕೊಂಡಿರಲಿಲ್ಲ. ಈ ವರ್ಷ ಏಪ್ರಿಲ್ ಎರಡನೇ ವಾರ ಪರೀಕ್ಷೆ ನಿಗದಿಯಾಗಿತ್ತು. ಅಷ್ಟರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡು ಲಾಕ್‌ಡೌನ್ ಘೋಷಣೆಯಾಗಿ ಪರೀಕ್ಷೆಯನ್ನು ಜೂನ್ 21ಕ್ಕೆ ಮುಂದೂಡಲಾಗಿತ್ತು. ಆದರೆ, ಲಾಕ್‌ಡೌನ್ ತೆರವಾಗದೇ ಪುನಃ ಮುಂದೂಡಲಾಗಿತ್ತು.

‘ನಾವೀಗ ನಮ್ಮ ಊರುಗಳಿಗೆ ಮರಳಿದ್ದೇವೆ. ಪರೀಕ್ಷಾ ಕೇಂದ್ರಗಳು ದೂರದ ಮೈಸೂರು, ಬೆಂಗಳೂರು, ಹುಬ್ಬಳ್ಳಿ ಅಥವಾ ಬೆಳಗಾವಿಯಂಥ ನಗರಗಳಲ್ಲಿವೆ. ಆದ್ದರಿಂದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿ.ಯು ಪರೀಕ್ಷೆಯ ಮಾದರಿಯಲ್ಲೇ ಪರೀಕ್ಷಾ ಕೇಂದ್ರ ಬದಲಿಸಲು ಅವಕಾಶ ನೀಡಬೇಕು’ ಎನ್ನುವುದು ಕಾರವಾರದ ಅಭ್ಯರ್ಥಿ ಚೇತನ್ ಅನಿಸಿಕೆಯಾಗಿದೆ.

‘ಪರೀಕ್ಷೆಯ ದಿನಾಂಕವನ್ನು ಕೆ.ಪಿ.ಎಸ್.ಸಿ ತಿಳಿಸಬೇಕು. ಆದರೆ, ಅಲ್ಲಿಂದ ಪ್ರತಿಕ್ರಿಯೆ ಬರುತ್ತಿಲ್ಲ. ಈ ವರ್ಷ ನಾವು ಪರೀಕ್ಷೆ ಬರೆಯದಿದ್ದರೆ ಸಹಾಯಕ ಪ್ರೊಫೆಸರ್ ಹುದ್ದೆಗಳ ನೇಮಕಾತಿಯ ಸಂದರ್ಶನಕ್ಕೆ ಅರ್ಹತೆ ಪಡೆಯುವುದಿಲ್ಲ. ಈ ಸಂಬಂಧ ಕೆ.ಪಿ.ಎಸ್.‌ಸಿ.ಯು ತನ್ನ ವೆಬ್‌ಸೈಟ್‌ನಲ್ಲಿ ಅಧಿಸೂಚನೆ ಪ್ರಕಟಿಸುವ ಮೊದಲು ಕೆ–ಸೆಟ್ ಪರೀಕ್ಷೆಯ ಫಲಿತಾಂಶವನ್ನು ಗಮನಿಸಬೇಕು’ ಎಂಬುದು ಅವರ ಒತ್ತಾಯವಾಗಿದೆ.

‘ಕೇಂದ್ರ ಬದಲಾವಣೆ ಅಸಾಧ್ಯ’: ‘ಕೆ–ಸೆಟ್ ಪರೀಕ್ಷೆಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗಲೇ ಅವರ ನೋಂದಣಿ ಸಂಖ್ಯೆಯು ಆಯಾ ಪರೀಕ್ಷಾ ಕೇಂದ್ರಗಳಿಗೆ ಬಂದಿರುತ್ತದೆ. ಈಗಾಗಲೇ ಪ್ರಶ್ನೆ ಪತ್ರಿಕೆಗಳೂ ಮುದ್ರಣವಾಗಿದ್ದು, ಅಭ್ಯರ್ಥಿಗಳ ಆಸನ ವ್ಯವಸ್ಥೆಗೆ ಅನುಗುಣವಾಗಿ ಜೋಡಿಸಿ ಇಡಲಾಗಿದೆ. ಈ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರ ಬದಲಾವಣೆ ಸಾಧ್ಯವಿಲ್ಲ’ ಎಂದು ಮೈಸೂರಿನ ಕೆ–ಸೆಟ್ ಕೇಂದ್ರದ ಸಮನ್ವಯಾಧಿಕಾರಿ ಪ್ರೊ.ರಾಜಶೇಖರ್ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.

‘ಪರೀಕ್ಷಾ ದಿನಾಂಕವನ್ನು ತಿಳಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಮೂರು ನಾಲ್ಕು ದಿನಗಳಲ್ಲಿ ತಿಳಿಸಬಹುದು. ಅಭ್ಯರ್ಥಿಗಳ ಪ್ರಯಾಣದ ಅವಧಿ ಮತ್ತು ಅಗತ್ಯವಿದ್ದವರಿಗೆ ಕ್ವಾರಂಟೈನ್ ಗಮನದಲ್ಲಿ ಇಟ್ಟುಕೊಂಡೇ ಅಧಿಸೂಚನೆ ಪ್ರಕಟಿಸಲಾಗುತ್ತದೆ. ಹಾಗಾಗಿ ಅಭ್ಯರ್ಥಿಗಳು ಆತಂಕ ಪಡಬೇಕಾಗಿಲ್ಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು