ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟರಿಗೆ ಕಾಗೇರಿ ರಕ್ಷಣೆ: ರವಿ ಕೃಷ್ಣಾರೆಡ್ಡಿ ಆರೋಪ

Last Updated 29 ಮೇ 2020, 19:27 IST
ಅಕ್ಷರ ಗಾತ್ರ

ಬೆಂಗಳೂರು: ‘ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ನಡೆದಿರುವ ಅಕ್ರಮಗಳ ಕುರಿತು ವಿಧಾನಸಭೆ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ(ಪಿಎಸಿ) ತನಿಖೆಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಡೆ ನೀಡುವ ಮೂಲಕ ಭ್ರಷ್ಟರನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಆರೋಪಿಸಿದೆ.

‘ಲೆಕ್ಕಪತ್ರಗಳ ಸಮಿತಿಯ ಕೆಲಸಕ್ಕೆ ತಡೆಯಾಜ್ಞೆ ನೀಡಿರುವುದು ಕಾನೂನು ಬಾಹಿರ. ಇಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವುದಕ್ಕೆ ಈಗ ಸಂಶಯ ಉಳಿದಿಲ್ಲ. ಭ್ರಷ್ಟರನ್ನು ರಕ್ಷಿಸಲು ವಿಧಾನಸಭಾಧ್ಯಕ್ಷರ ಹುದ್ದೆಯನ್ನು ದುರುಪಯೋಗ ಪಡಿಸಿಕೊಂಡಿದ್ದೀರಿ. ಇದು ತಮ್ಮ ಹುದ್ದೆಗೆ ಗೌರವ ತರುವ ನಡವಳಿಕೆಯಲ್ಲ’ ಎಂದುಕಾಗೇರಿ ಅವರಿಗೆ ಬರೆದಿರುವ ಪತ್ರದಲ್ಲಿ ರಾಷ್ಟ್ರ ಸಮಿತಿಯ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಕಿಡಿ ಕಾರಿದ್ದಾರೆ.

‘ಈ ಪ್ರಕರಣದಲ್ಲಿ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಭ್ರಷ್ಟರೆಲ್ಲರೂ ಕೂಡಿ ಪ್ರಯತ್ನಿಸುತ್ತಿದ್ದಾರೆ. ರಾಷ್ಟ್ರ ಸಮಿತಿ ಈ ವಿಷಯವನ್ನು ಇಲ್ಲಿಗೆ ಕೈ ಬಿಡುವುದಿಲ್ಲ. ಕಾನೂನುಬದ್ಧವಾಗಿ ಲಭ್ಯ ಇರುವ ಎಲ್ಲಾ ಮಾರ್ಗಗಳನ್ನು ಬಳಸಿ ಅವರಿಗೆ ಶಿಕ್ಷೆ ಆಗುವ ತನಕ ಹೋರಾಟ ಮಾಡಲಿದೆ’ ಎಂದು ಹೇಳಿದ್ದಾರೆ.

‘ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತಿರುವ ತಾವು ಸತ್ಯ, ನ್ಯಾಯ ಮತ್ತು ಧರ್ಮದ ಹಾದಿಯಲ್ಲಿ ನಡೆಯಲು ಶಿರಸಿಯ ಮಾರಿಕಾಂಬೆ ತಮಗೆ ಪ್ರೇರಣೆ ನೀಡಲಿ. ಊರಿಗೆ ಹೋಗಿ ಮಾರಿಕಾಂಬೆಯ ಮುಂದೆ ನಿಂತಾಗ ತಮಗೆ ಪಾಪಪ್ರಜ್ಞೆ ಕಾಡದಿರಲಿ ಎಂದು ಆಶಿಸುತ್ತೇನೆ.ಪಿಎಸಿಗೆ ನೀಡಿರುವ ತಡೆಯಾಜ್ಞೆ ತೆರವು ಮಾಡಿ, ಆಗಿರುವ ಪ್ರಮಾದವನ್ನು ಸರಿಪಡಿಸಬೇಕು’ ಎಂದು ಕೋರಿದ್ದಾರೆ.

ರಾಜೀನಾಮೆಗೆ ಒತ್ತಾಯ: ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ಅಕ್ರಮ ನಡೆಸುವ ಮೂಲಕ ಜನರ ಆರೋಗ್ಯ ಮತ್ತು ಜೀವದ ಜತೆಗೆ ಸರ್ಕಾರ ಆಟವಾಡಿದೆ. ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲವಾಗಿರುವ ಸಂಬಂಧಪಟ್ಟ ಸಚಿವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು’ ಎಂದುಮತ್ತು ಭಾರತ ಕಮ್ಯುನಿಸ್ಟ್ ಪಕ್ಷದ(ಸಿಪಿಎಂ)ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಒತ್ತಾಯಿಸಿದ್ದಾರೆ.

‘ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ಹಿರಿಯ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT