ಶನಿವಾರ, ಫೆಬ್ರವರಿ 29, 2020
19 °C
ಕೃಷಿ, ನೀರಾವರಿ ಗೋಷ್ಠಿಯಲ್ಲಿ ಸಾವಯವ ಕೃಷಿ ಸಾಧಕ ರೈತ ರಾಜಶೇಖರ ನಿಂಬರಗಿ ಅಭಿಮತ

ಮನೆ ಬೀಜ ಒಳ್ಳೆ ಮಗ: ಕಂಪನಿ ಬೀಜ ಕುಡುಕ ಮಗ!

ಮನೋಜಕುಮಾರ್‌ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಡಾ.ಚೆನ್ನಣ್ಣ ವಾಲಿಕಾರ ವೇದಿಕೆ (ಕಲಬುರ್ಗಿ): ಹೈಬ್ರಿಡ್‌ ಬೆಳೆಯಿಂದಾಗಿ ಭೂಮಿಯ ಆರೋಗ್ಯದ ಮೇಲೆ ಆದ ದುಷ್ಪರಿಣಾಮ, ರಾಜ್ಯದಲ್ಲಿ ಸಾವಿರಾರು ಕೆರೆಗಳಿದ್ದರೂ– ಉತ್ತಮ ಮಳೆ ಬಿದ್ದರೂ ನೀರಿಗಾಗಿ ಹಾಹಾಕಾರ ಏಕೆ ಏಳುತ್ತಿದೆ ಎಂಬುದನ್ನು ಇಲ್ಲಿ ನಡೆದ ಕೃಷಿ ಮತ್ತು ನೀರಾವರಿ ಗೋಷ್ಠಿ ಸವಿವರವಾಗಿ ಬಿಚ್ಚಿಟ್ಟಿತು.

ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ಸಾಯಯವ ಕೃಷಿ ಸಾಧಕ ರಾಜಶೇಖರ ನಿಂಬರಗಿ,  ‘ವಿವಿಧ ಬೀಜ ತಯಾರಿಕಾ ಕಂಪನಿಗಳು ಹಾಗೂ ರೈತ ಸಂಪರ್ಕ ಕೇಂದ್ರಗಳು ವಿತರಿಸುವ ಬೀಜಗಳು ಕುಡುಕ ಮಗನಿದ್ದಂತೆ, ಇವು ಹೇಳಿದ ಮಾತು ಕೇಳುವುದಿಲ್ಲ. ಆದರೆ, ಮನೆಯಲ್ಲೇ ಸಂಗ್ರಹಿಸಿದ ಬೀಜಗಳು ಒಳ್ಳೆಯ ಮಗನಿದ್ದಂತೆ’ ಎಂದು ಅಭಿಪ್ರಾಯಪಟ್ಟರು.

‘ಬಹುರಾಷ್ಟ್ರೀಯ ಕಂಪನಿಗಳು ಪೂರೈಸುವ ಬೀಜಗಳಿಂದ ಇಳುವರಿ ಬರುವುದಿಲ್ಲ ಎಂದು ಅರಿತೆ. ಸುಭಾಷ್‌ ಪಾಳೇಕರ್ ಅವರ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ನಮ್ಮ ಸಂಗ್ರಹದಲ್ಲೇ ಇರುವ ಬೀಜಗಳನ್ನು ಬಳಸುವುದು ಶುರು ಮಾಡಿದ ಮೇಲೆ ಲಾಭ ಹೆಚ್ಚಾಗಿದೆ. 16 ಎಕರೆ ಜಮೀನಿನಲ್ಲಿ ಸಾವಯವ ಭೂಮಿಯಲ್ಲಿ ಕೃಷಿ ಮಾಡಿದ ಪರಿಣಾಮ ಲಾಭಾಂಶ ಹೆಚ್ಚಾಗಿದೆ. ನಮ್ಮ ಜಮೀನಿನಲ್ಲಿ ಬೆಳೆಯುವ ನಿಂಬೆ, ಸಪೋಟ, ನುಗ್ಗೇಕಾಯಿ ಬೀಜಗಳಿಗೆ ಮುಂಬೈ, ನಾಸಿಕ್‌, ನಾಂದೇಡ್‌, ಬೆಂಗಳೂರು, ಮೈಸೂರು ಮಂಡ್ಯದಿಂದಲೂ ಬೇಡಿಕೆ ಬರುತ್ತಿದೆ’
ಎಂದರು.

‘ಮುಂಚೆ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಕೃಷಿ ಮಾಡುತ್ತಿದ್ದೆ. ಇಳುವರಿ ಬಂದರೂ ಹಣವೆಲ್ಲವೂ ಕೂಲಿಯಾಳು, ನೀರಾವರಿ ಮತ್ತಿತರ ಖರ್ಚಿಗೆ ವೆಚ್ಚವಾಗುತ್ತಿತ್ತು. ಆದರೆ 2006ರಲ್ಲಿ ಕೂಡಲಸಂಗಮದಲ್ಲಿ ನಡೆದ ಪಾಳೇಕರ್ ಅವರ ಕೃಷಿ ಶಿಬಿರದಲ್ಲಿ ಭಾಗವಹಿಸಿದ ಬಳಿಕ ಕೃಷಿ ಪದ್ಧತಿಯನ್ನು ಸಂಪೂರ್ಣವಾಗಿ
ಬದಲಾಯಿಸಿಕೊಂಡೆ. ಅಂದಿನಿಂದ ಭೂಮಿಗೆ ಯಾವುದೇ ರಾಸಾಯನಿಕ ಹಾಕಿಲ್ಲ. ಪ್ರತಿ ತಿಂಗಳೂ ಲಕ್ಷಾಂತರ ಆದಾಯ ಬರುತ್ತಿದೆ’ ಎಂದು ವಿವರಿಸಿದರು.

‘ದೂರದಿಂದ ನೀರು ತರುವ ಯೋಜನೆಗಳು ಅವೈಜ್ಞಾನಿಕ: ಹತ್ತಾರು ಕಿ.ಮೀ. ದೂರದಿಂದ ನೀರು ತರುವ ಯೋಜನೆಗಳು ಬರೀ ಅಧಿಕಾರದಲ್ಲಿರುವವರ ಜೇಬು ತುಂಬಿಸುತ್ತಿವೆಯೇ ಹೊರತು ಅದರಿಂದ ರೈತರಿಗೆ ಪ್ರಯೋಜನವಾಗಿಲ್ಲ’ ಎಂದು ನೀರಾವರಿ ತಜ್ಞ ಶಿವಾನಂದ ಕಳವೆ ಪ್ರತಿಪಾದಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಿಂದ ಬಯಲುಸೀಮೆಯ ಪ್ರದೇಶವಾದ ಚಿಕ್ಕಬಳ್ಳಾಪುರ ಜಿಲ್ಲೆಗೆ ಎತ್ತಿನ ಹೊಳೆ ಯೋಜನೆಯಡಿ ನೀರು ಹರಿಸಲಾಗುತ್ತದೆ. ಆರಂಭದಲ್ಲಿ ಇದ್ದ ಯೋಜನಾ ವೆಚ್ಚ ₹13 ಸಾವಿರ ಕೋಟಿಯಿಂದ ₹20 ಸಾವಿರ ಕೋಟಿಗೆ ಏರಿದೆ. ಮತ್ತೊಂದೆಡೆ ಪ್ರವಾಹ ಪ‍ರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲಿಕ್ಕೆ ಆಗದೇ ಇದ್ದುದರಿಂದ ಬೇಸಿಗೆ ಕಾಲದಲ್ಲಿ ಕರಾವಳಿಯಂತಹ ಸಮೃದ್ಧ ಜಿಲ್ಲೆಗಳಲ್ಲೂ ಕುಡಿಯುವ ನೀರಿಗೆ ತತ್ವಾರ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಲೇಖಕಿ ಸುಮಂಗಲಾ ಮುಮ್ಮಿಗಟ್ಟಿ ಮಾತನಾಡಿ, ‘ಬರ ಹಾಗೂ ನೆರೆಯಂತಹ ಪ್ರಾಕೃತಿಕ ವಿಕೋಪಗಳು ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತವೆ. ಬರ ಹಾಗೂ ನೆರೆಗಿಂತಲೂ ಪ್ರತಿ ವರ್ಷ ಸಿಡಿಲಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಹವಾಮಾನ ಬದಲಾವಣೆಯಿಂದಾಗಿ ಮುಂಗಾರು ಮಳೆಯಲ್ಲಷ್ಟೇ ಅಲ್ಲದೇ ಹಿಂಗಾರು ಮಳೆಯಲ್ಲೂ ಸಿಡಿಲುಗಳು ಬೀಳುತ್ತಿವೆ’ ಎಂದರು.

***

ಓಡುವ ನೀರನ್ನು ನಿಲ್ಲಿಸುವ, ನಿಂತ ನೀರನ್ನು ಇಂಗಿಸುವ ಕೆಲಸ ತುರ್ತಾಗಿ ಆಗಬೇಕು. ರಾಜ್ಯದಲ್ಲಿಯೂ 38,608 ಕೆರೆಗಳಲ್ಲೂ ನೀರು ನಿಂತುಕೊಳ್ಳುವಂತೆ ನೋಡಿಕೊಳ್ಳಬೇಕು

– ಶಿವಾನಂದ ಕಳವೆ, ನೀರಾವರಿ ತಜ್ಞ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು