ಶನಿವಾರ, ಫೆಬ್ರವರಿ 29, 2020
19 °C

ಗೋಷ್ಠಿ ಅಧ್ಯಕ್ಷರ ಭಾಷಣಕ್ಕೆ ಅಡ್ಡಿ: ಮಾನ್ಪಡೆ ಪೊಲೀಸ್‌ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಸಾಹಿತ್ಯ ಸಮ್ಮೇಳನದ ಅಂಗವಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್‌.ಅಂಬೇಡ್ಕರ್‌ ಸಭಾಂಗಣದಲ್ಲಿ ಗುರುವಾರ ನಡೆದ ಕೃಷಿ ಮತ್ತು ನೀರಾವರಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಅವರನ್ನು ಪೊಲೀಸರು ವಶಕ್ಕೆ ಪಡೆದರು.

‘ಈ ಬಾರಿ ಕಲಬುರ್ಗಿ ಜಿಲ್ಲೆಯಲ್ಲಿ ತೊಗರಿ ಬೆಳೆ ಇಳುವರಿ ದಾಖಲೆ ಪ್ರಮಾಣದಲ್ಲಿ ಆಗಿದೆ. ಆದರೆ, ಕೇಂದ್ರ ಸರ್ಕಾರ ಪ್ರತಿಯೊಬ್ಬ ರೈತರಿಂದ ಬೆಂಬಲ ಬೆಲೆಯಡಿ ಕೇವಲ 10 ಕ್ವಿಂಟಲ್‌ ಖರೀದಿ ಮಾಡುತ್ತಿದೆ. ನಾವು ಉಳಿದವರ ಭಾಷಣಕ್ಕೆ ಅಡ್ಡಿ ಮಾಡಿಲ್ಲ. ಆದರೆ, ಸರ್ಕಾರದ ಪ್ರತಿನಿಧಿಯಾಗಿರುವ ನಿಮ್ಮ ಭಾಷಣ ನಡೆಯಲು ಬಿಡುವುದಿಲ್ಲ‘ ಎಂದು ಮಾನ್ಪಡೆ ಪಟ್ಟು ಹಿಡಿದರು.

ಇದರಿಂದ ಕೆಲ ಹೊತ್ತು ಸಭಾಂಗಣದಲ್ಲಿ ಗೊಂದಲ ಮೂಡಿತು. ವೇದಿಕೆ ಮುಂಭಾಗಕ್ಕೆ ಬಂದ ಸಭಿಕರೊಬ್ಬರು, ಈ ಗೋಷ್ಠಿ ಇರುವುದು ಬರೀ ತೊಗರಿ ಚರ್ಚೆಗಲ್ಲ. ರಾಜ್ಯದೆಲ್ಲೆಡೆಯಿಂದ ಆಸಕ್ತರು ಈ ಗೋಷ್ಠಿ ಆಲಿಸಲು ಬಂದಿದ್ದಾರೆ. ಹೀಗಾಗಿ, ಭಾಷಣವನ್ನು ಮುಂದುವರಿಸಿ ಎಂದು ಹನುಮನಗೌಡ ಅವರಿಗೆ ಒತ್ತಾಯಿಸಿದರು.

ಈ ಮಧ್ಯೆ ಸಂಘಟಕರು ಮಾನ್ಪಡೆ ಅವರಿಗೆ ಗೋಷ್ಠಿಗೆ ಅಡ್ಡಿ ಮಾಡದಂತೆ ಮನವಿ ಮಾಡಿದರು. ಆದರೆ, ಮಾನ್ಪಡೆ ಪಟ್ಟು ಸಡಿಲಿಸಲಿಲ್ಲ. ಅಲ್ಲಿಗೆ ಧಾವಿಸಿದ ಪೊಲೀಸರು ಅವರನ್ನು ಒತ್ತಾಯಪೂರ್ವಕವಾಗಿ ಹೊರಕ್ಕೆ ಎತ್ತಿಕೊಂಡು ಹೋದರು.

ಸಭಿಕರ ಒತ್ತಾಯದ ಮೇರೆಗೆ ಭಾಷಣ ಮುಂದುವರಿಸಿದ ಹನುಮನಗೌಡ, ‘ಮಾನ್ಪಡೆ ಅವರ ಬೇಡಿಕೆಯನ್ನು ಸಮ್ಮೇಳನದ ನಿರ್ಣಯದಲ್ಲಿ ಸೇರಿಸಬಹುದು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು