ಶುಕ್ರವಾರ, ಜನವರಿ 24, 2020
17 °C

ಸಿಎಎಗೆ ಕವಿ ಚೆನ್ನವೀರ ಕಣವಿ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತು ಜನಸಂಖ್ಯಾ ನೋಂದಣಿಗೆ (ಎನ್‌ಪಿಆರ್‌) ವಿರೋಧ ವ್ಯಕ್ತಪಡಿಸಿರುವ ಹಿರಿಯ ಕವಿ ಚೆನ್ನವೀರ ಕಣವಿ, ಸಾರ್ವಜನಿಕ ಶಾಂತಿ ಮತ್ತು ಸಾಮಾಜಿಕ ಸಾಮರಸ್ಯದ ದೃಷ್ಟಿಯಿಂದ ಇವುಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂಬಂಧ ನಡೆದ ‍‍‍ಪ್ರತಿಭಟನೆಯ ವೇಳೆ ಸರಕಾರಿ ಯಂತ್ರದಿಂದ ನಡೆದಿರುವ ದೌರ್ಜನ್ಯ ಕುರಿತ ಸಾರ್ವಜನಿಕ ದೂರುಗಳನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

‘ಈ ಶತಮಾನದಲ್ಲಿ ಬಡತನ, ನಿರುದ್ಯೋಗ, ಅನಾರೋಗ್ಯ, ಅನ್ಯಾಯ, ವಿಷಮತೆಯ ಸವಾಲುಗಳನ್ನು ಎದುರಿಸಿ, ದೇಶಕ್ಕೆ ಸಮೃದ್ಧಿ ತರಲು ಸಾಮಾಜಿಕ ಸೌಹಾರ್ದತೆ ಅತ್ಯವಶ್ಯ. ಈ ಸಂದರ್ಭದಲ್ಲಿ ಪೌರತ್ವ ಇತ್ಯಾದಿ ನೆಪಗಳಿಂದ ಅಶಾಂತಿ, ಕೋಮು ಬಿಕ್ಕಟ್ಟು, ಕ್ಷೋಭೆ, ಭವಿಷ್ಯದ ಬಗ್ಗೆ ಚಿಂತೆ ಇತ್ಯಾದಿಗಳನ್ನು ಉತ್ಪಾದಿಸುವ ಕಾನೂನುಗಳನ್ನು ಪ್ರಗತಿ ವಿರೋಧಿ ಹಾಗೂ ಜನ ವಿರೋಧಿ ಎಂದೇ ಭಾವಿಸಬಹುದು’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

‘ಭಾರತೀಯ ಸಂಸ್ಕೃತಿ ಎಂದರೆ ನಾನಾ ನದಿಗಳು ಸೇರಿದ ಸಾಗರವಿದ್ದಂತೆ. ಅನೇಕ ಬಗೆಯ ಧಾರ್ಮಿಕ ನಂಬಿಕೆಗಳು, ಸಾಹಿತ್ಯ, ಸಂಸ್ಕೃತಿ, ಭಾಷೆಗಳಿಂದ ಪಕ್ವವಾದ ಸಂಸ್ಕೃತಿ ನಮ್ಮದು. ಪರಸ್ಪರ ಸಾಮರಸ್ಯದಿಂದ ಸಮನ್ವಯಗೊಂಡು ಅನೇಕ ಮುತ್ತು-ರತ್ನಗಳನ್ನು ಈ ಸಾಗರ ಕೊಟ್ಟಿದೆ. ಇದೇ ನಮ್ಮ ಶಕ್ತಿ ಮತ್ತು ಸತ್ವ. ನಮ್ಮ ಬಹುತ್ವದಲ್ಲಿರುವ ಸೌಹಾರ್ದತೆಯಿಂದ ಜಗತ್ತೇ ಬೆರಗಾಗಿದೆ’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

‘ಎಲ್ಲಾ ಜಾತಿ, ಮತ, ಪಂಥಗಳನ್ನೂ ಮೀರಿದ ಸಂತರಿಂದ, ಅನುಭಾವಿಗಳಿಂದ ನಮ್ಮ ಆಧ್ಯಾತ್ಮಿಕ ಜಗತ್ತು, ಅದೇ ರೀತಿ ಸಾಹಿತ್ಯ, ಸಂಗೀತ, ಕಲಾ ಪ್ರಪಂಚ ಸಂಪದ್ಭರಿತವಾಗಿದೆ. ಇದರಲ್ಲಿ ಒಂದೇ ತರಹದ ಜಾತಿ, ಮತಗಳ ಸಂಕುಚಿತ ಭಾವನೆಯ ಬೀಜ ಬಿತ್ತುವುದು ನಮ್ಮ ಪರಂಪರೆಗೇ ಬಗೆಯುವ ದ್ರೋಹ’ ಎಂದು ಕಣವಿ ವ್ಯಾಖ್ಯಾನಿಸಿದ್ದಾರೆ.

‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇಡೀ ಭಾರತದ ಜನತೆ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿದರು. ಅವರ ತ್ಯಾಗ, ಬಲಿದಾನಗಳ ಮೂಲಕ ನಾವು ಸ್ವಾತಂತ್ರ್ಯ ಪಡೆದೆವು. "ಒಡೆದು ಆಳು" ಎಂಬ ಬ್ರಿಟಿಷ್ ಕುತಂತ್ರವನ್ನು ನಾವು ಹೊಡೆದು ಹಾಕಿದೆವು. ಅಂಥ ಒಗ್ಗಟ್ಟನ್ನು ಈಗ ಮತ್ತೆ ಮುರಿಯುವ ಶಕ್ತಿಗಳಿಂದ ನಮ್ಮ ಸ್ವಾತಂತ್ರ್ಯ, ಸಾರ್ವಭೌಮತ್ವ, ಪ್ರಜಾಪ್ರಭುತ್ವ ಅಪಾಯಕ್ಕೀಡಾಗುವ ಸಂದರ್ಭ ಬಂದಿದೆ. ಇದು ನಮ್ಮ ಎಲ್ಲಾ ಹುತಾತ್ಮರಿಗೆ, ಸ್ವಾತಂತ್ರ್ಯವೀರರಿಗೆ ಮಾಡುವ ಅಪಮಾನ’ ಎಂದು ಹೇಳಿದ್ದಾರೆ. ‘ಸದ್ಯ ದೇಶದಲ್ಲಿ ಅಶಾಂತಿ, ಹಾಹಾಕಾರ ಉಂಟುಮಾಡಿದ ಪೌರತ್ವ ಸಂಬಂಧಿತ ಎಲ್ಲಾ ಕಾನೂನು, ಕಾರ್ಯಕ್ರಮಗಳನ್ನು ಕೈ ಬಿಟ್ಟು, ಸರಕಾರ ಮತ್ತು ರಾಜಕೀಯ ಧುರೀಣರು ಸಾಮಾಜಿಕ ಸಾಮರಸ್ಯ ಸ್ಥಾಪಿಸಲು ಶ್ರಮಿಸಬೇಕು’ ಎಂದು ಕಳಕಳಿಯ ಮನವಿ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು