ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಕೈಂಕರ್ಯದಲ್ಲಿ ಅಲ್ಲಮಪ್ರಭು ಸ್ವಾಮೀಜಿ

ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ
Last Updated 31 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಚಿಕ್ಕೋಡಿ (ಬೆಳಗಾವಿ): ಎರಡು ದಶಕಗಳಿಂದ ಗಡಿ ನಾಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ತಾಲ್ಲೂಕಿನ ಚಿಂಚಣಿಯ ಅಲ್ಲಮಪ್ರಭು ಸಿದ್ಧಸಂಸ್ಥಾನಮಠದ ಅಲ್ಲಮಭು ಸ್ವಾಮೀಜಿ ಕನ್ನಡ ಕೈಂಕರ್ಯ ಕೈಗೊಂಡಿದ್ದಾರೆ.

‘ಗಡಿ ಧೋತರದ ಧಡಿ ಇದ್ದಂತೆ. ಗಡಿ ಗಟ್ಟಿಯಾಗಿದ್ದರೆ ನಾಡು ಗಟ್ಟಿಯಾಗಿರುತ್ತದೆ’ ಎಂಬ ಕವಿ ಚೆನ್ನವೀರ ಕಣವಿಯವರ ವಾಣಿಯಂತೆ ಅವರು ಗಡಿ ಕನ್ನಡಿಗರ ಬಳಗ ಕಟ್ಟಿಕೊಂಡು ಕನ್ನಡ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.

ಮಠದ ಅಲ್ಲಮಪ್ರಭು ಜನಕಲ್ಯಾಣ ಸಂಸ್ಥೆಯ ಕನ್ನಡ ಜಾಗೃತಿ ಪುಸ್ತಕಮಾಲೆ ಮೂಲಕ ಕನ್ನಡ ನಾಡು ನುಡಿ ಪರಂಪರೆ ಅನಾವರಣಗೊಳಿಸುವ 42 ಮೌಲಿಕ ಕೃತಿಗಳನ್ನು ಪ್ರಕಟಿಸಿದ್ದಾರೆ.

ಕನ್ನಡ-ಮರಾಠಿ ಭಾಷಾ ಬಾಂಧವ್ಯಕ್ಕೆ ಸಾಕ್ಷಿ ಎಂಬಂತೆ ಕನ್ನಡದ ಇತಿಹಾಸ ಪ್ರತಿಬಿಂಬಿಸುವ ಹಲವು ಮರಾಠಿ ಕೃತಿಗಳನ್ನು ಖ್ಯಾತ ಸಾಹಿತಿಗಳಿಂದ ಕನ್ನಡಕ್ಕೆ ಅನುವಾದಿಸಿ, ಅಲ್ಲಮಪ್ರಭು ಜನ ಕಲ್ಯಾಣ ಸಂಸ್ಥೆ ಮೂಲಕ ಪ್ರಕಟಿಸಿ ಕನ್ನಡ ಸಾರಸ್ವತ ಲೋಕ ಶ್ರೀಮಂತಗೊಳಿಸಲು ಕೊಡುಗೆ ನೀಡುತ್ತಿದ್ದಾರೆ.

ಧರ್ಮ ಪ್ರಸಾರದೊಂದಿಗೆ ಕನ್ನಡತನವನ್ನೂ ಬೆಳೆಸುತ್ತಿದ್ದಾರೆ. ರಾಜ್ಯೋತ್ಸವವನ್ನು ನಿತ್ಯೋತ್ಸವವನ್ನಾಗಿಸಿದ್ದಾರೆ. ನಾಡಿನಲ್ಲೇ ವಿನೂತನ ಎಂಬಂತೆ ಮಠದಲ್ಲಿ ಕನ್ನಡದ ತೇರು ನಿರ್ಮಿಸಿದ್ದಾರೆ. ಈ ರಥದ ತುಂಬಾ ಕನ್ನಡ ನಾಡಿನ ವೈಭವವೇ ತುಂಬಿ ತುಳುಕುತ್ತಿದೆ. ಪ್ರತಿ ವರ್ಷ ಯುಗಾದಿಯಂದು ಗ್ರಾಮದಲ್ಲಿ ಕನ್ನಡದ ತೇರನ್ನು ಎಳೆಯಲಾಗುತ್ತದೆ.

ಕನ್ನಡ ನಾಡಿನ ಅಸ್ಮಿತೆ ಕುರಿತ ವಿಶಿಷ್ಠ ದಾಖಲೆಗಳು, ಕಾಗದ ಪತ್ರಗಳು, ದೇಶ ವಿದೇಶಗಳ ಅಪರೂಪದ ಕರೆನ್ಸಿಗಳ ಸಂಗ್ರಹವೂ ಅವರ ಬಳಿ ಇದೆ.

‘ಗಡಿನಾಡಿನ ಕನ್ನಡದ ಗುಡಿ’ ಎಂದೇ ಪರಿಚಿತವಾಗಿರುವ ತಾಲ್ಲೂಕಿನ ಚಿಂಚಣಿಯ ಸಿದ್ಧಸಂಸ್ಥಾನಮಠದಲ್ಲಿ ಶನಿವಾರ (ನ.2) ಮಧ್ಯಾಹ್ನ 1ಕ್ಕೆ ಕನ್ನಡ ಜಯಭೇರಿ ಮೊಳಗಲಿದೆ. ಶ್ರೀಮಠದಲ್ಲಿ ಗಡಿ ಕನ್ನಡಿಗರ ಬಳಗ ಹಮ್ಮಿಕೊಂಡಿರುವ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಜಾಗೃತಿ ಪುಸ್ತಕಮಾಲೆಯ 2 ಮೌಲಿಕ ಕೃತಿಗಳು ಬಿಡುಗಡ ಆಗಲಿವೆ.

ಶ್ರೀಮಠದ ಅಲ್ಲಮಪ್ರಭು ಜನಕಲ್ಯಾಣ ಸಂಸ್ಥೆಯ ಕನ್ನಡ ಜಾಗೃತಿ ಪುಸ್ತಕ ಮಾಲೆಯು ಪ್ರಕಟಿಸುತ್ತಿರುವ ‘ಸ್ವಾತಂತ್ರ್ಯಾಚಿ ಪಹಿಲಿ ಠಿಣಗಿ ಕಿತ್ತೂರ ಚನ್ನಮ್ಮ’ ಮರಾಠಿ ಕಾದಂಬರಿ ಕನ್ನಡಕ್ಕೆ ಅನುವಾದಿಸಿ, ಬಿಡುಗಡೆ ಮಾಡಲಾಗುತ್ತಿದೆ. ಧಾರವಾಡದ ಡಾ.ಬಸವರಾಜ ನಾಯ್ಕರ ಇದರ ಮೂಲ ಲೇಖಕರಾಗಿದ್ದು, ಶಿರಸಿಯ ಅರವಿಂದ ಹೆಬ್ಬಾರ ಕನ್ನಡಕ್ಕೆ ಅನುವಾದಿಸಿದ್ದಾರೆ. ಧಾರವಾಡದ ಶಶಿಧರ ತೋಡಕರ ಗ್ರಂಥ ದಾಸೋಹ ಮಾಡಿದ್ದಾರೆ.

ಕನ್ನಡ ಜಾಗೃತಿ ಪುಸ್ತಕಮಾಲೆಯ ‘41ನೇ ಕುಸುಮ ದಾಸೋಹ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ’ ಪುಸ್ತಕವೂ ಬಿಡುಗಡೆ ಆಗಲಿದೆ. ಇದನ್ನು ಬೆಳಗಾವಿಯ ಪ್ರಕಾಶ ಗಿರಿಮಲ್ಲನ್ನವರ ರಚಿಸಿದ್ದು, ಅಶ್ವಿನಿ ಮತ್ತು ಅಕ್ಷಯ ಕೆಂಪಣ್ಣವರ ಗ್ರಂಥ ದಾಸೋಹ ಮಾಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಉದ್ಘಾಟಿಸುವರು. ಸಂಸದ ಅಣ್ಣಾಸಾಹೇಬ ಜೊಲ್ಲೆ ಪುಸ್ತಕಗಳನ್ನು ಬಿಡುಗಡೆ ಮಾಡುವರು. ಚಿತ್ರನಟಿ ತಾರಾ ಅನುರಾಧಾ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಅಲ್ಲಮಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT