ಕಣ್ಣೂರು ಜಿಲ್ಲೆಯ 10 ಮಂದಿ ಐಎಸ್‌ ಸಂಘಟನೆಗೆ!

7
ಅಫ್ಗಾನಿಸ್ತಾನದಲ್ಲಿರುವ ಶಿಬಿರಕ್ಕೆ ಸೇರಿರುವ ಶಂಕೆ

ಕಣ್ಣೂರು ಜಿಲ್ಲೆಯ 10 ಮಂದಿ ಐಎಸ್‌ ಸಂಘಟನೆಗೆ!

Published:
Updated:

ಕಾಸರಗೋಡು: ಕಣ್ಣೂರು ಜಿಲ್ಲೆಯಿಂದ ಮತ್ತೆ ಹತ್ತು ಮಂದಿ ಉಗ್ರಗಾಮಿ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್‌ಗೆ ಸೇರಲು ಭಾರತವನ್ನು ತೊರೆದಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಕಣ್ಣೂರು ಅಝಿಕೋಡು ಪೂತಪ್ಪಾರ ಎಂಬಲ್ಲಿನ ಎರಡು ಕುಟುಂಬಗಳು ಹಾಗೂ ಸಿಟಿ ಕೂರುವ ಎನ್ನುವ ಊರಿನ ಒಬ್ಬ ಉಗ್ರಗಾಮಿ ಸಂಘಟನೆಗೆ ಸೇರಿದವರು ಎಂಬ ಮಾಹಿತಿ ಲಭಿಸಿದೆ. ಭಾರತ ಬಿಟ್ಟವರು ಸಿರಿಯಾ ಅಥವಾ ಅಫ್ಗಾನಿಸ್ತಾನದ ಐಎಸ್ ಶಿಬಿರಗಳಿಗೆ ತೆರಳಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.

ಪೂತಪ್ಪಾರದ ಕೆ.ಸಜ್ಜಾದ್, ಶಾಹೀನಾ ದಂಪತಿ ಹಾಗೂ ಇವರ ಇಬ್ಬರು ಮಕ್ಕಳು, ಪೂತಪ್ಪಾರದ ಅನ್ವರ್, ಆಫ್ಸೀಲಾ ದಂಪತಿ ಹಾಗೂ ಇವರ ಮೂವರು ಮಕ್ಕಳು, ಕುರುವದ ಟಿ.ಪಿ.ನಿಜಾಂ ಎಂಬವರು ದೇಶ ಬಿಟ್ಟು ಉಗ್ರಗಾಮಿ ತಂಡಕ್ಕೆ ಸೇರಿದವರು ಎಂದು ಗುರುತಿಸಲಾಗಿದೆ.

ಇವರೆಲ್ಲಾ ಜತೆಯಾಗಿ ನವೆಂಬರ್‌ 20 ರಂದು ಮೈಸೂರಿಗೆ ಹೋಗುತ್ತೇವೆಂದು ಹೋಗಿದ್ದರು. ಮರಳಿ ಬರದೇ ಇದ್ದಾಗ ಪೊಲೀಸರಿಗೆ ದೂರು ನೀಡಿದ್ದು, ತನಿಖೆಯ ಸಂದರ್ಭದಲ್ಲಿ ಯುಎಇಗೆ ಹೋಗಿದ್ದಾರೆಂಬ ಮಾಹಿತಿ ಲಭಿಸಿತ್ತು. ಅಲ್ಲಿಂದ ಎಲ್ಲರೂ ಅಜ್ಞಾತ ಸ್ಥಳಕ್ಕೆ ಹೋಗಿದ್ದರು.

ಸಿರಿಯಾದಲ್ಲಿ ಉಗ್ರಗಾಮಿ ತಂಡಗಳ ಕೇಂದ್ರ ಸಂಪೂರ್ಣ ಭಗ್ನಗೊಂಡಿರುವುದರಿಂದ ಇವರು ಅಫ್ಗಾನಿಸ್ತಾನದ ಯಾವುದೋ ಕೇಂದ್ರಕ್ಕೆ ತಲುಪಿರಬೇಕೆಂದು ಪೊಲೀಸರು ಶಂಕಿಸುತ್ತಿದ್ದಾರೆ. ಕಣ್ಣೂರು ಡಿವೈಎಸ್ಪಿ ಕೆ. ಸದಾನಂದನ್ ಪ್ರಕರಣ ತನಿಖೆ ನಡೆಸುತ್ತಿದ್ದಾರೆ.

ಕಣ್ಣೂರು ಪಾಪಿನಶೇರಿಯಿಂದ ಐಎಸ್‌ಗೆ ಸೇರಿ, ಬಳಿಕ ಸಿರಿಯಾದಲ್ಲಿ ಹತ್ಯೆಗೀಡಾದ ಶಮೀರ್ ಎಂಬಾತನ ಪತ್ನಿ ಫೌಸಿಯಾಳ ತಂಗಿಯೇ ಆಫ್ಸೀಲಾ. ಆಫ್ಸೀಲಾ, ಆಕೆಯ ಗಂಡ ಅನ್ವರ್ ಮತ್ತು ಇಬ್ಬರು ಮಕ್ಕಳೂ ಈಗ ಐಎಸ್‌ಗೆ ಸೇರಲು ತೆರಳಿದ್ದಾರೆ. ಶಮೀರ್‌ನ ಇನೊಬ್ಬ ಮಿತ್ರ ಈಗ ಐಎಸ್‌ಗೆ ತೆರಳಿದ ಸಜ್ಜಾದ್. ಸಜ್ಜಾದ್‌ನ ಪತ್ನಿ ಶಾಹೀನಾ ಕೊಡಗು ನಿವಾಸಿಯಾಗಿದ್ದು, ಮತಾಂತರಗೊಂಡು ಶಾಹೀನಾ ಎಂದು ಹೆಸರು ಬದಲಾಯಿಸಿಕೊಂಡು ಸಜ್ಜಾದ್‌ನನ್ನು ಮದುವೆ ಆಗಿದ್ದಳು.

ಕಣ್ಣೂರು ಜಿಲ್ಲೆ ಹಾಗೂ ಕಾಸರಗೋಡು ಜಿಲ್ಲೆಯಿಂದ ಈ ಮೊದಲು 35 ಮಂದಿ ಐಎಸ್ ಸಂಘಟನೆಗೆ ಸೇರಿದ್ದರು. ಇವರಲ್ಲಿ ಹಲವರು ಹತ್ಯೆಯಾಗಿದ್ದಾರೆ ಎನ್ನಲಾಗಿದೆ. ಐದು ಮಂದಿಯನ್ನು ಟರ್ಕಿಯಲ್ಲಿ ಬಂಧಿಸಿ, ಮರಳಿ ಭಾರತಕ್ಕೆ ಕಳುಹಿಸಲಾಗಿತ್ತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !