ಬುಧವಾರ, ಅಕ್ಟೋಬರ್ 23, 2019
25 °C
ವಿಧಾನಸಭೆ ಅಧಿವೇಶನ l ನಗರ ಶಾಸಕರಿಗೆ ಸಮಾನ ಅನುದಾನ; ಮುಖ್ಯಮಂತ್ರಿ ಭರವಸೆ

ಅನುದಾನಕ್ಕೆ ಕತ್ತರಿ: ರೋಷಾವೇಶ

Published:
Updated:
Prajavani

ಬೆಂಗಳೂರು: ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರ ಕ್ಷೇತ್ರಗಳಿಗೆ ಮೈತ್ರಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಅನುದಾನವನ್ನು ಹಿಂಪಡೆದ ವಿಚಾರವು ವಿಧಾನಸಭೆಯಲ್ಲಿ ಶನಿವಾರ ಭಾರಿ ಗದ್ದಲಕ್ಕೆ ಕಾರಣವಾಯಿತು.

ಕಾಂಗ್ರೆಸ್‌ ಮತ್ತು ಬಿಜೆಪಿ ಶಾಸಕರ ಮಧ್ಯೆ ಮಾತಿನ ಚಕಮಕಿ ನಡೆಯಿತು. ವೀರಾವೇಶದಲ್ಲಿದ್ದ ಶಾಸಕರನ್ನು ತಹಬದಿಗೆ ತರುವ ಕೆಲಸಕ್ಕೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರೇ ಇಳಿಯಬೇಕಾಯಿತು. ಕೂಡಲೇ ನಗರದ ಶಾಸಕರ ಸಭೆಯನ್ನು ಕರೆಯುವಂತೆಯೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಸಲಹೆ ನೀಡಿದರು.

ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ ಮಾತನಾಡಿ, ‘ಹಿಂದಿನ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರಿಗೆ ನೀಡಿದ ಅನುದಾನವನ್ನು ತಡೆ ಹಿಡಿಯಲಾಗಿದೆ. ಬಿಜೆಪಿ– ಕಾಂಗ್ರೆಸ್‌ ಎಂದು ತಾರತಮ್ಯ ಮಾಡಬೇಡಿ. ತಡೆಹಿಡಿದಿರುವ ಮೊತ್ತವನ್ನು ಬಿಡುಗಡೆ ಮಾಡಬೇಕು’ ಎಂದರು.

‘ಸಮ್ಮಿಶ್ರ ಸರ್ಕಾರ ಬಂದ ಮೇಲೆ ಮೂರು ವರ್ಷಗಳಿಗೆ ₹8,015 ಕೋಟಿ ಬಿಡುಗಡೆ ಮಾಡಲು ತೀರ್ಮಾನಿಸಿತು. ಕಾಮಗಾರಿಯಲ್ಲಿ ಅವ್ಯವಹಾರ ಆಗಿದ್ದರೆ ತನಿಖೆ ಮಾಡಿ. ವೈಟ್‌ ಟಾಪಿಂಗ್‌ ಕಡಿಮೆ ಹಣದಲ್ಲಿ ಮಾಡಿ ತೋರಿಸುತ್ತೇವೆ ಎನ್ನುವುದಾದರೆ ಮಾಡಿಕೊಳ್ಳಿ. ನಮ್ಮ ತಕರಾರಿಲ್ಲ’ ಎಂದರು.

ಆಗ ಮಧ್ಯ ಪ್ರವೇಶಿಸಿ ಉತ್ತರ ನೀಡಿದ ಯಡಿಯೂರಪ್ಪ, ‘ಎಲ್ಲರಿಗೂ ಅನುದಾನವನ್ನು ಸಮಾನವಾಗಿ ಹಂಚಿಕೆ ಮಾಡ
ಬೇಕು ಎಂಬುದು ನಮ್ಮ ಉದ್ದೇಶ. ಆಗಿರುವ ತಪ್ಪನ್ನು ಸರಿಪಡಿಸುವ ಕೆಲಸ ಮಾಡಿದ್ದೇವೆ. ಯಾರಿಗೂ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇನೆ’ ಎಂದು ಸಮಾಧಾನಪಡಿಸುವ ಪ್ರಯತ್ನ ಮಾಡಿದರು.

ಬುಕ್‌ ಅಡ್ಜೆಸ್ಟ್‌ಮೆಂಟ್‌ ಮಾಡಿದ್ದು ಯಾರು?: ‘ನಿಮ್ಮ ಕಾಲದಲ್ಲೇ ಬುಕ್‌ ಅಡ್ಜೆಸ್ಟ್‌ಮೆಂಟ್‌ ಮಾಡಿ ಬಿಜೆಪಿ ಶಾಸಕರಿಗೆ ಅನ್ಯಾಯ ಮಾಡಿದ್ದು ಗೊತ್ತಿಲ್ಲವೇ, ಕೊನೆಯಲ್ಲಿ ಬಿಜೆಪಿ ಶಾಸಕರಿಗೆ ಏನೂ ಉಳಿಸಲಿಲ್ಲ’ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಕಾಂಗ್ರೆಸ್‌ ನಾಯಕರ ವಿರುದ್ಧ ಕಿಡಿಕಾರಿದರು.

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ‘ನನ್ನ ಕ್ಷೇತ್ರಕ್ಕೆ ಕೊಟ್ಟಿದ್ದು ಶೂನ್ಯ. 2017–18 ರ ಸಾಲಿನಲ್ಲಿ ಬೇರೆಯವರಿಗೆ ₹ 300 ಕೋಟಿ ಕೊಟ್ಟರೆ ನನ್ನ ಕ್ಷೇತ್ರಕ್ಕೆ ₹80 ಕೋಟಿ ಸಿಕ್ಕಿತು. ಇದು ನ್ಯಾಯವೇ. 2018–19 ರಲ್ಲಿ ನಮಗೆ ₹400 ಕೋಟಿ ಕೊಟ್ಟರೆ, ಬಿಟಿಎಂ ಲೇಔಟ್‌ ಕ್ಷೇತ್ರಕ್ಕೆ ₹800 ಕೋಟಿ ಕೊಟ್ಟಿದ್ದೀರಿ. ಇದು ಅನ್ಯಾಯವಲ್ಲವೆ’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ‘ನನ್ನ ಕ್ಷೇತ್ರಕ್ಕೆ  ಎರಡು ಫ್ಲೈಓವರ್‌ಗಳ ನಿರ್ಮಾಣಕ್ಕೆಂದು ₹800 ಕೋಟಿ ಕೊಟ್ಟಿದ್ದು ನಿಜ. ಆ ಫ್ಲೈಓವರ್‌ನಲ್ಲಿ ಬೇರೆ ಯಾರೂ ಓಡಾಡುವುದಿಲ್ಲವೇ’ ಎಂದು ಪ್ರಶ್ನಿಸಿದರು.

ಅತಿ ಹೆಚ್ಚು ತೆರಿಗೆ ನೀಡಿದರೂ ಶೂನ್ಯ: ‘ಮಹದೇವಪುರ ಕ್ಷೇತ್ರದಿಂದ ಅತಿ ಹೆಚ್ಚು ತೆರಿಗೆ ಸಂಗ್ರಹವಾಗುತ್ತದೆ. ಬೆಂಗಳೂ
ರಿನ ಕಸ ತಂದು ಸುರಿಯುತ್ತಾರೆ. ಕ್ಷೇತ್ರದಲ್ಲಿರುವ ಎಲ್ಲ ಕೆರೆಗಳೂ ಕಲುಷಿತವಾಗಿವೆ. ಆದರೆ, ನಮ್ಮ ಕ್ಷೇತ್ರಕ್ಕೆ ಸಿಗುವ ಅನುದಾನ ಶೂನ್ಯ’ ಎಂದು ಬಿಜೆಪಿಯ ಅರವಿಂದ ಲಿಂಬಾವಳಿ ಹೇಳಿದರು.

‘ತಾರತಮ್ಯ ಸರಿಪಡಿಸಿ; ಅಭಿಮಾನ ಉಳಿಸಿಕೊಳ್ಳಿ’
ದಾಸರಹಳ್ಳಿ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರಾಗಿದ್ದ ಅನುದಾನವನ್ನು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕಡಿತ ಮಾಡಿರುವ ಬಗ್ಗೆ ಶಾಸಕ ಆರ್‌. ಮಂಜುನಾಥ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಈ ಕುರಿತು ಶನಿವಾರ ಗಮನ ಸೆಳೆಯುವ ಸೂಚನೆ ಮಂಡಿಸಿದ ಅವರು, ‘ಕ್ಷೇತ್ರದ ಜನತೆ ನಿಮ್ಮ ಬಗ್ಗೆಯೂ ಅಭಿಮಾನ ಇಟ್ಟುಕೊಂಡಿದ್ದಾರೆ. ದಯವಿಟ್ಟು ನಮ್ಮ ಕ್ಷೇತ್ರಕ್ಕೆ ಆಗಿರುವ ತಾರತಮ್ಯ ಸರಿಪಡಿಸಿ. ಜನರು ಇಟ್ಟಿರುವ ಅಭಿಮಾನವನ್ನು ಉಳಿಸಿಕೊಳ್ಳಿ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕೋರಿದರು.

‘ಕ್ಷೇತ್ರದ ಶೇ 90ರಷ್ಟು ಪ್ರದೇಶದ ವರಮಾನ ತಂದುಕೊಡುವ ಕೈಗಾರಿಕೆಗಳಿಂದ ಕೂಡಿದೆ. ಆದರೆ, ಇಲ್ಲಿ ಅಗತ್ಯ ಮೂಲಸೌಕರ್ಯಗಳೇ ಇಲ್ಲ. ಮೈತ್ರಿ ಸರ್ಕಾರದಲ್ಲಿ ಅವಧಿಯಲ್ಲಿ ಅನುದಾನ ಮಂಜೂರು ಮಾಡಿಸಿದ್ದೆ. ಈಗಿನ ಸರ್ಕಾರ ₹ 32 ಕೋಟಿಯನ್ನು ಹೊರತುಪಡಿಸಿ ಉಳಿದೆಲ್ಲ ಅನುದಾನವನ್ನು ಕಿತ್ತುಕೊಂಡಿದೆ. ಇದು ಯಾವ ನ್ಯಾಯ’ ಎಂದು ಅವರು ಪ್ರಶ್ನಿಸಿದರು.

ಮಳೆಹಾನಿ: ‘ಇತ್ತೀಚೆಗೆ ಸುರಿದ ಭಾರಿ ಮಳೆಗೆ ಕ್ಷೇತ್ರದ ಚಿಕ್ಕಬಿದಿರಕಲ್ಲು ಕೆರೆ ಏರಿ ಒಡೆದಿದ್ದರಿಂದ ನನ್ನ ಕ್ಷೇತ್ರದ 2,500 ನಿವಾಸಿಗಳು ತೊಂದರೆ ಅನುಭವಿಸಿದ್ದಾರೆ. ಅವರ ಸಂಕಷ್ಟಕ್ಕಾದರೂ ಸ್ಪಂದಿಸಿ’ ಎಂದು ಮನವಿ ಮಾಡಿದರು.

‘ವಿಪಕ್ಷ ಕ್ಷೇತ್ರಗಳ ಅನುದಾನಕ್ಕೆ ಕೊಕ್ಕೆ’
‘ನವ ಬೆಂಗಳೂರು ಯೋಜನೆ’ಯಡಿ ಮೈತ್ರಿ ಸರ್ಕಾರದಲ್ಲಿ ವಿವಿಧ ಪಕ್ಷಗಳ ಶಾಸಕರಿಗೆ ನೀಡಿದ್ದ ಅನುದಾನವನ್ನು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ‘ನವ ನಗರೋತ್ಥಾನ ಯೋಜನೆ’ ಹೆಸರಿನಲ್ಲಿ ಪರಿಷ್ಕರಣೆ ಮಾಡಿತು. ಇದರಿಂದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕ್ಷೇತ್ರಗಳಿಗೆ ಹಿಂದೆ ಹಂಚಿಕೆಯಾಗಿದ್ದ ಅನುದಾನಕ್ಕೆ ಕತ್ತರಿ ಹಾಕಿ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಹೆಚ್ಚುವರಿ ಅನುದಾನ ಸಿಕ್ಕಿದೆ.

ಜಿಎಸ್‌ಟಿ ತಿದ್ದುಪಡಿ ಮಸೂದೆ ಅಂಗೀಕಾರ
ಬೆಂಗಳೂರು:
ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ಮಸೂದೆ 2019 ಕ್ಕೆ ವಿಧಾನಸಭೆ ಅಂಗೀಕಾರ ನೀಡಿದೆ.

ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ 2017 ಕ್ಕೆ ಸಂಸತ್ತು ಕೆಲವು ತಿದ್ದುಪಡಿಗಳನ್ನು ಮಾಡಿದ್ದು, ಅದಕ್ಕೆ ಪೂರಕವಾಗಿ ಅದೇ ರೀತಿ ಇಲ್ಲೂ ತಿದ್ದುಪಡಿ ಮಾಡಲಾಗಿದೆ ಎಂದು ಮಸೂದೆ ಮಂಡಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

*
ನನ್ನ ಅವಧಿಯಲ್ಲಿ ಅನುದಾನವನ್ನು ನ್ಯಾಯೋಚಿತವಾಗಿ ನೀಡಲು ಪ್ರಯತ್ನಿಸಿದೆ. ಈ ಗೊಂದಲವನ್ನು ಯಡಿಯೂರಪ್ಪ ಬಗೆಹರಿಸಲಿ.
-ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)