ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖಾತೆ’ ತೆರೆದ ಭಿನ್ನಮತದ ಕಿಡಿ

ಶ್ರೀರಾಮುಲು ಬೆಂಬಲಿಗರ ಪ್ರತಿಭಟನೆ: ಹಿರಿಯರ ಮುನಿಸಿಗೆ ಬಿಜೆಪಿ ಕಂಗಾಲು
Last Updated 27 ಆಗಸ್ಟ್ 2019, 19:50 IST
ಅಕ್ಷರ ಗಾತ್ರ

ಬೆಂಗಳೂರು: ಉಪ ಮುಖ್ಯಮಂತ್ರಿ ಸ್ಥಾನಗಳ ಕೊಡುಗೆ, ಖಾತೆ ಹಂಚಿಕೆಯು ಬಿಜೆಪಿ ಆಂತರಿಕ ವಲಯದಲ್ಲಿ ಭಿನ್ನಮತದ ಕಿಡಿ ಎಬ್ಬಿಸಿದ್ದು, ಕೆಲವು ಜಿಲ್ಲೆಗಳಲ್ಲಿ ಶಾಸಕರು ಮತ್ತು ಸಚಿವರ ಬೆಂಬಲಿಗರು ಬೀದಿಗಿಳಿದು ತಮ್ಮ ರೋಷಾಗ್ನಿಯನ್ನು ಹೊರ ಹಾಕಿದ್ದಾರೆ.

ತಮ್ಮ ಬೇಡಿಕೆಗೆ ವರಿಷ್ಠರು ಮಣೆ ಹಾಕದಿದ್ದುದರಿಂದ ಹಿರಿಯ ಸಚಿವರಾದ ಜಗದೀಶ ಶೆಟ್ಟರ್‌, ಆರ್‌.ಅಶೋಕ್, ಕೆ.ಎಸ್‌.ಈಶ್ವರಪ್ಪ, ಸಿ.ಟಿ.ರವಿ, ಬಿ.ಶ್ರೀರಾಮುಲು ಅವರು ಮುನಿಸಿಕೊಂಡಿದ್ದಾರೆ. ಬಹಿರಂಗವಾಗಿ ಸಿಟ್ಟನ್ನು ಯಾರೊಬ್ಬರೂ ತೋರ್ಪಡಿಸಿಲ್ಲ. ಆದರೆ, ಅತೃಪ್ತರು ಅಸಮಾಧಾನವನ್ನು ಬೇರೆ ಬೇರೆ ರೀತಿಯಲ್ಲಿ ಹೊರಹಾಕುತ್ತಿರುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಲೆ ನೋವಾಗಿ ಪರಿಣಮಿಸಿದೆ.

ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಶ್ರೀರಾಮುಲು ಗೈರಾಗಿದ್ದರೆ, ಅಶೋಕ್, ಶೆಟ್ಟರ್‌ ನೆಪ ಮಾತ್ರಕ್ಕೆ ಮುಖ ತೋರಿಸಿ ಹೋದರು. ಸಿ.ಟಿ.ರವಿ ಉಪಸ್ಥಿತರಿದ್ದರೂ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಇಡೀ ಕಾರ್ಯಕ್ರಮವನ್ನು ಅವ್ಯಕ್ತ ಅಸಮಾಧಾನ, ಅಸಹನೆ ಆವರಿಸಿತ್ತು.

‘ಉಪ ಮುಖ್ಯಮಂತ್ರಿ ಹುದ್ದೆ ಸಾಂವಿಧಾನಿಕ ಹುದ್ದೆಯಲ್ಲ. ಅದಕ್ಕೆ ಹೆಚ್ಚು ಮನ್ನಣೆ ನೀಡಬೇಕಾಗಿಲ್ಲ’ ಎಂದು ಹಿರಿಯ ಸಚಿವ ಜಗದೀಶ ಶೆಟ್ಟರ್‌ ಹುಬ್ಬಳ್ಳಿಯಲ್ಲಿ ಅತೃಪ್ತಿ ಹೊರ ಹಾಕಿದ್ದಾರೆ. ಸಚಿವ ಸಂಪುಟದಲ್ಲಿ ಯಡಿಯೂರಪ್ಪ ಅವರ ನಂತರದ ಸ್ಥಾನದ ನಿರೀಕ್ಷೆಯಲ್ಲಿದ್ದ ಶೆಟ್ಟರ್‌, ಅವರ ಉತ್ತರಾಧಿಕಾರಿಯಾಗುವ ಬಯಕೆ ಹೊಂದಿದ್ದರು. ಈ ಸ್ಥಾನಕ್ಕೆ ಲಕ್ಷ್ಮಣ ಸವದಿ ಬಡ್ತಿ ಪಡೆದಿರುವುದು ಅವರ ಕೋಪಕ್ಕೆ ಕಾರಣ ಎನ್ನಲಾಗಿದೆ.

‘ರಾಜ್ಯದಲ್ಲಿ ದತ್ತಪೀಠದ ಹೋರಾಟ, ಗೋಹತ್ಯೆ ನಿಷೇಧಕ್ಕಾಗಿ ಹೋರಾಟ ಮಾಡಿದ್ದೇನೆ. ಅಶ್ವತ್ಥನಾರಾಯಣ ನಮ್ಮ ಸಿದ್ಧಾಂತದ ಪರವಾಗಿ ಯಾವ ಹೋರಾಟ ಮಾಡಿದ್ದಾರೆ. ಯಾವ ಆಧಾರದಲ್ಲಿ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲಾಗಿದೆ. ರೆಸಾರ್ಟ್‌ನಲ್ಲಿ ಅತೃಪ್ತರನ್ನು ನಿಭಾಯಿಸುವುದೇ ಅರ್ಹತೆ ಎನ್ನುವುದಾದರೆ ಅದನ್ನು ನಾವು ಇನ್ನೂ ಚೆನ್ನಾಗಿ ಮಾಡುತ್ತಿದ್ದೆವು’ ಎಂದು ಸಚಿವ ಸಿ.ಟಿ.ರವಿ ಆಪ್ತರ ಬಳಿ ಅಳಲು ತೋಡಿಕೊಂಡಿದ್ದಾರೆ.

‘ಚುನಾವಣೆಯಲ್ಲಿ ಪರಾಭವಗೊಂಡವರಿಗೆ ಸಚಿವ ಸ್ಥಾನ ನೀಡಿರುವುದು ತಪ್ಪು. ಹಲವು ಹಿರಿಯ ಶಾಸಕರನ್ನು ಕಡೆಗಣಿಸಿ ಸೋತವರಿಗೆ ಮಣೆ ಹಾಕಿರುವುದು ಸರಿಯಲ್ಲ’ ಎಂದು ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಶಾಸಕ ಸೋಮಲಿಂಗಪ್ಪ ಕಿಡಿ ಕಾರಿದ್ದಾರೆ.

ವಿವಿಧ ಜಿಲ್ಲೆಗಳಲ್ಲಿ ಆಕ್ರೋಶದ ಜ್ವಾಲೆ: ಕೊಪ್ಪಳ ಜಿಲ್ಲೆಯ ಕನಕಗಿರಿ, ಬಳ್ಳಾರಿ ಜಿಲ್ಲೆಯ ಹೊಸಪೇಟೆ, ಸಂಡೂರು, ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ಶ್ರೀರಾಮುಲು ಬೆಂಬಲಿಗರು ಬೀದಿಗಿಳಿದು ಟೈರ್‌ಗಳಿಗೆ ಬೆಂಕಿ ಹಾಕಿ, ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಕನಕಗಿರಿಯಲ್ಲಿ ಅವರ ಬೆಂಬಲಿಗರು ಬಿಜೆಪಿಅಧ್ಯಕ್ಷ ಅಮಿತ್‌ ಶಾ ಮತ್ತು ರಾಷ್ಟ್ರೀಯ ಪ್ರಧಾನ (ಸಂಘಟನಾ) ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರ ಭಾವಚಿತ್ರ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪಕ್ಷಅಧಿಕಾರಕ್ಕೆ ಬಂದರೆ ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದ ಬಿಜೆಪಿ ವರಿಷ್ಠರು ಈಗ ಮಾತು ತಪ್ಪಿದ್ದಾರೆ’ ರಾಮುಲು ಅಭಿಮಾನಿಗಳು ಹರಿಹಾಯ್ದಿದ್ದಾರೆ.

‘ಅತೃಪ್ತಿ ಮುಂದುವರಿಸಿದರೆ ರಾಜೀನಾಮೆ ಪಡೆಯಿರಿ’

ನವದೆಹಲಿ: ಪಕ್ಷದ ತೀರ್ಮಾನವನ್ನು ಒಪ್ಪದೇ ಅಸಮಾಧಾನ ಮುಂದುವರಿಸುವ ಸಚಿವರಿಂದ ನಿರ್ದಾಕ್ಷಿಣ್ಯವಾಗಿ ರಾಜೀನಾಮೆ ಪಡೆಯಿರಿ ಎಂದು ಬಿಜೆಪಿ ವರಿಷ್ಠರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ.

ಯಾವುದೇ ಕಾರಣಕ್ಕೂ ಅಶಿಸ್ತು ಸಹಿಸಲು ಆಗುವುದಿಲ್ಲ ಎಂಬ ಸೂಚನೆ ವರಿಷ್ಠರಿಂದ ಬರುತ್ತಿದ್ದಂತೆ ಅತೃಪ್ತರು ತಮ್ಮ ರಾಗ ಬದಲಿಸಿದ್ದಾರೆ. ಬಹಿರಂಗ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿದ್ದಾರೆ.

ಉಪಮುಖ್ಯಮಂತ್ರಿ ಹುದ್ದೆಗಳನ್ನು ಪ್ರಕಟಿಸುತ್ತಿದ್ದಂತೆ ಜಗದೀಶ ಶೆಟ್ಟರ್, ಆರ್.ಅಶೋಕ, ಸಿ.ಟಿ.ರವಿ ಮತ್ತು ಶ್ರೀರಾಮುಲು ಅಸಮಾಧಾನ ಹೊರಹಾಕಿದ್ದರು. ಇವರಲ್ಲಿ ಕೆಲವರು ಮಂತ್ರಿ ಸ್ಥಾನ ಸ್ವೀಕರಿಸಲು ಹಿಂದೇಟು ಹಾಕಿದ್ದರು. ಕೆಲವರು ಕಾರುಗಳನ್ನು ವಾಪಸ್ ಕಳುಹಿಸಿದ್ದರು.

‘ಅತೃಪ್ತ ಸಚಿವರು ಸುಮ್ಮನಾಗದಿದ್ದರೆ, ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಅಶಿಸ್ತು ಸಹಿಸಲು ಆಗುವುದಿಲ್ಲ ಎಂಬ ಎಚ್ಚರಿಕೆ ನೀಡಿ’ ಎಂದು ವರಿಷ್ಠರು ಯಡಿಯೂರಪ್ಪ ಮೂಲಕ ಅತೃಪ್ತ ನಾಯಕರಿಗೆ ಖಡಕ್‌ ಸೂಚನೆ ಕೊಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಒಂದು ವೇಳೆ ಯಾವುದೇ ಸಚಿವರು ಖಾತೆ ವಿಚಾರದಲ್ಲಿ ತಮ್ಮ ಆಟ ಮುಂದುವರಿಸಿದರೆ. ತಕ್ಷಣವೇ ಅವರನ್ನು ಸಂಪುಟದಿಂದ ಕೈಬಿಡಿ’ ಎಂದೂ ಯಡಿಯೂರಪ್ಪ ಅವರಿಗೆ ಹೇಳಿದ್ದಾರೆ.

***

ಯಡಿಯೂರಪ್ಪ ಅನುಭವಿಸುತ್ತಿರುವ ಅವಮಾನವನ್ನು ನೋಡುತ್ತಿದ್ದರೆ ನನ್ನಲ್ಲೂ ಅವರ ಬಗ್ಗೆ ಅನುಕಂಪ‌ ಮೂಡುತ್ತಿದೆ

–ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ

ವರಿಷ್ಠರ ನಿರ್ದೇಶನದಂತೆ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಮೋದಿ ಮತ್ತು ಅಮಿತ್ ಶಾ ಮಾರ್ಗದರ್ಶನದಲ್ಲಿ ನಡೆಯುತ್ತೇವೆ

–ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ಯಾವುದೇ ಪ್ರತಿಭಟನೆ ಮತ್ತು ಅಸಮಾಧಾನಕ್ಕೆ ಆಸ್ಪದ ಕೊಡಬಾರದು. ವರಿಷ್ಠರು ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುವುದು ನಮ್ಮ ಕೆಲಸ

–ಕೆ.ಎಸ್‌.ಈಶ್ವರಪ್ಪ, ಸಚಿವ

ಬಿಜೆಪಿಯಲ್ಲಿ ಅತೃಪ್ತರ ಮೂರು ತಂಡ ನಿರ್ಮಾಣವಾಗಿದೆ. ಶೆಟ್ಟರ್‌, ಅಶೋಕ್, ಈಶ್ವರಪ್ಪ ಸ್ವಾಭಿಮಾನ ಕಳೆದುಕೊಂಡಿದ್ದಾರೆ

–ದಿನೇಶ್‌ ಗುಂಡೂರಾವ್‌, ಅಧ್ಯಕ್ಷ, ಕೆಪಿಸಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT