ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉತ್ತರ’ಕ್ಕೆ ಅನ್ಯಾಯ: ಬಿಜೆಪಿಯಲ್ಲಿ ಅತೃಪ್ತಿ

Last Updated 7 ಮಾರ್ಚ್ 2020, 20:58 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಬಜೆಟ್ ಮಂಡನೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಬಿಜೆಪಿಯಲ್ಲಿ ಮತ್ತೊಂದು ಸುತ್ತಿನ ಅತೃಪ್ತಿಯ ಕಿಡಿ ಹೊತ್ತಿಕೊಂಡಿದೆ.

ಕೃಷ್ಣಾ ಮೇಲ್ದಂಡೆ ಯೋಜನೆಯ–3 ನೇ ಹಂತಕ್ಕೆ ಬಿಡಿಗಾಸು ನೀಡಿಲ್ಲ, ಉತ್ತರ ಕರ್ನಾಟಕವನ್ನು ಬಜೆಟ್‌ನಲ್ಲಿ ಕಡೆಗಣಿಸಲಾಗಿದೆ ಎಂಬ ಅಪಸ್ವರ ಬಜೆಟ್‌ ಮಂಡನೆಯ ದಿನವೇ ಶುರುವಾಗಿತ್ತು. ಕೃಷ್ಣಾ ನದಿಕೊಳ್ಳದ ಸಚಿವರು, ಶಾಸಕರು, ಯಡಿಯೂರಪ್ಪ ಅವರನ್ನು ಭೇಟಿಯಾಗಿ ಅಹವಾಲು ತೋಡಿಕೊಂಡಿದ್ದರು. ಈ ಅಸಮಾಧಾನ ಬಿರುಸುಗೊಳ್ಳುವುದು ಅರಿವಾಗುತ್ತಿದ್ದಂತೆ ಎಚ್ಚೆತ್ತ ಯಡಿಯೂರಪ್ಪ, ಕೃಷ್ಣಾ ಮೇಲ್ದಂಡೆ ಯೋಜನೆಗೆ ₹10 ಸಾವಿರ ಕೋಟಿ ಕೊಡುವುದಾಗಿ ಕಲಾಪದಲ್ಲೇ ಪ್ರಕಟಿಸಿ ಸಿಟ್ಟು ತಣಿಸುವ ಯತ್ನಕ್ಕೆ ಕೈಹಾಕಿದರು.

ಅನುದಾನ ಹಂಚಿಕೆಗೆ ಬಜೆಟ್‌ನಲ್ಲಿ ಅವಕಾಶ ಮಾಡಿಕೊಡದೇ ಇರುವುದರಿಂದಾಗಿ ಇದು ಕಣ್ಣೊರೆಸುವ ತಂತ್ರ ಎಂಬ ಭಾವನೆ ಉತ್ತರ ಕರ್ನಾಟಕದ ಭಾಗದ ಶಾಸಕರಲ್ಲಿ ಮೂಡಿದೆ.

ಈ ಬಗ್ಗೆ ಬಹಿರಂಗವಾಗಿ ಧ್ವನಿ ಎತ್ತಿರುವ ಬೆಳಗಾವಿ ಜಿಲ್ಲೆ ಹುಕ್ಕೇರಿ ಶಾಸಕ ಉಮೇಶ ಕತ್ತಿ, ‘ಹಿಂದಿನ ಸರ್ಕಾರಗಳಲ್ಲಿ ಆಗಿರುವ ಅನ್ಯಾಯ ಯಡಿಯೂರಪ್ಪನವರ ಕಾಲದಲ್ಲೂ ಮುಂದುವರಿದಿದೆ. ಅಖಂಡ ಕರ್ನಾಟಕ ಎಂಬ ಭ್ರಮೆಯಲ್ಲಿ ಕುಳಿತಿದ್ದರೆ ಪ್ರಯೋಜನವಿಲ್ಲ. ಸೋಮವಾರ ಅಧಿವೇಶನದಲ್ಲಿ ಇದನ್ನು ಪ್ರಸ್ತಾಪಿಸುತ್ತೇನೆ. ಎಂತಹದೇ ಹೋರಾಟಕ್ಕೂ ನಾನು ಸಿದ್ಧ’ ಎಂದು ಪ್ರತಿಪಾದಿಸಿದ್ದಾರೆ.

ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಿಗೆ ಅನುದಾನ ಸಿಕ್ಕಿಲ್ಲ ಎಂದು ಕಂಗೆಟ್ಟಿರುವ ಶಾಸಕರ ಪೈಕಿ ಕೆಲವರು ಇದಕ್ಕೆ ಧ್ವನಿಗೂಡಿಸಿದ್ದಾರೆ. ಎಲ್ಲ ಅತೃಪ್ತರೂ ಸೇರಿ ಸೋಮವಾರ ಅಥವಾ ಮಂಗಳವಾರ ಬೆಂಗಳೂರಿನಲ್ಲಿ ಸಭೆ ಸೇರಲು ನಿರ್ಧರಿಸಿರುವುದು ಯಡಿಯೂರಪ್ಪನವರ ತಲೆನೋವಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

‘ಸರ್ಕಾರ ಬೀಳಿಸಲು ಯಾರಿಂದಲೂ ಆಗದು’
‘ಪಕ್ಷದಲ್ಲಿ ಇದ್ದುಕೊಂಡು ಸರ್ಕಾರ ಬೀಳಿಸುವ ಕೆಲಸಕ್ಕೆ ಯಾರೂ ಕೈಹಾಕುವುದಿಲ್ಲ. ಅಂತಹದನ್ನು ಯಾರೂ ಮಾಡೋಕೆ ಆಗೋಲ್ಲ. ಮಾಡುವ ಹಾಗೂ ಇಲ್ಲ’ ಎಂದು ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

‘ಮಾಜಿ ಶಾಸಕ ಸಿ.‍ಪಿ. ಯೋಗೇಶ್ವರ್ ಅತೃಪ್ತರನ್ನು ಒಗ್ಗೂಡಿಸಿ ಸರ್ಕಾರ ಬೀಳಿಸಲು ಮುಂದಾಗಿದ್ದಾರಂತೆ’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಂತಹದೆಲ್ಲ ನಮ್ಮ ಪಕ್ಷದಲ್ಲಿ ನಡೆಯುವುದಿಲ್ಲ. ಅದು ಗಾಳಿ ಸುದ್ದಿ ಅಷ್ಟೆ’ ಎಂದರು.

‘ಅನುದಾನ ಸಿಗದಿರುವ ಕುರಿತು ಕೆಲವು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿರಬಹುದು. ಅದು ಅತೃಪ್ತಿಯಲ್ಲ.ಯಾರು ಬೇಕಾದರು ಯಾವುದೇ ಸಮಸ್ಯೆಯನ್ನು ಪಕ್ಷದ ಅಧ್ಯಕ್ಷರು ಅಥವಾ ಮುಖ್ಯಮಂತ್ರಿ ಜೊತೆ ನೇರವಾಗಿ ಮಾತನಾಡಬಹುದು. ಹೀಗಾಗಿ, ಅಶಿಸ್ತಿನ ಪ್ರಶ್ನೆಯೇ ಇಲ್ಲ’ ಎಂದರು.

*
ಬಿಜೆಪಿಯಲ್ಲಿ ಯಾವುದೇ ರೀತಿ ಅತೃಪ್ತಿ ಇಲ್ಲ. ಅಂತಹುದಕ್ಕೆ ಪಕ್ಷದಲ್ಲಿ ಅವಕಾಶವೂ ಇಲ್ಲ. ಈ ಬಗ್ಗೆ ವರಿಷ್ಠರಿಂದ ಸ್ಪಷ್ಟ ಸಂದೇಶ ಇದೆ
-ಡಾ.ಸಿ.ಎನ್. ಅಶ್ವತ್ಥನಾರಾಯಣ, ಉಪಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT