ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟ್ಟಿ ಕುಂದಾಪುರಕ್ಕೆ ಹೋದಂತೆ: ಬಿಎಸ್‌ವೈ ಪ್ರವಾಸಕ್ಕೆ ಬೋಜೇಗೌಡ ವ್ಯಂಗ್ಯ

Last Updated 9 ಮಾರ್ಚ್ 2020, 23:18 IST
ಅಕ್ಷರ ಗಾತ್ರ

ಬೆಂಗಳೂರು: ‘ಕುಟ್ಟಿ ಕುಂದಾಪುರಕ್ಕೆ ಹೋದ ಕತೆ’ ವಿಧಾನಪರಿಷತ್ತಿನಲ್ಲಿ ಸ್ವಾರಸ್ಯಕರ ಚರ್ಚೆಗೆ ದಾರಿ ಮಾಡಿಕೊಟ್ಟಿತು.

ರಾಜ್ಯವು ಮಳೆ ಮತ್ತು ಪ್ರವಾಹದಿಂದ ಕಂಗೆಟ್ಟಿದ್ದಾಗ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೊಬ್ಬರೇ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದರು’ ಎಂದು ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಹೇಳಿದರು.

ಆಗ ಪ್ರತಿಕ್ರಿಯಿಸಿದ ಜೆಡಿಎಸ್‌ನ ಎಸ್‌.ಎಲ್‌. ಬೋಜೇಗೌಡ, ‘ಮಂಗಳೂರಿನಲ್ಲಿ ಗಂಡ–ಹೆಂಡತಿ ಪರಸ್ಪರ ಮಾತನಾಡಿಕೊಳ್ಳುವಾಗ ‘ಕುಟ್ಟಿ’ಯನ್ನು ಕುಂದಾಪುರಕ್ಕೆ ಕಳುಹಿಸಬೇಕು ಎಂದು ಚರ್ಚಿಸಿದ್ದರು. ಏತಕ್ಕಾಗಿ ಕುಂದಾಪುರಕ್ಕೆ ಹೋಗಬೇಕು ಎಂದು ಗೊತ್ತಿಲ್ಲದ ಕುಟ್ಟಿ, ಯಜಮಾನರನ್ನು ಮೆಚ್ಚಿಸಲು ಅಲ್ಲಿಗೆ ಹೋಗಿ ವಾಪಸ್ ಆದ. ಏನು ಮಾಡಬೇಕು ಎಂದು ಗೊತ್ತಿಲ್ಲದೇ ಮಾಡುವುದನ್ನು ಕುಟ್ಟಿ ಕುಂದಾಪುರಕ್ಕೆ ಹೋಗಿ ಬಂದಂಗಾಯ್ತು ಎಂದು ಟೀಕೆ ಮಾಡುತ್ತಾರೆ. ಯಡಿಯೂರಪ್ಪ ಕೂಡ ಹಾಗೆಯೇ ಹೋಗಿ ಬಂದರು’ ಎಂದು ಕುಟುಕಿದರು.

ಅದಕ್ಕೆ ತಿರುಗೇಟು ಕೊಟ್ಟ ನಾರಾಯಣಸ್ವಾಮಿ, ‘ಕುಮಾರಸ್ವಾಮಿ ವೆಸ್ಟ್ ಎಂಡ್ ಹೋಟೆಲ್‌ನಿಂದ ಈಚೆಗೆ ಬರಲಿಲ್ಲವಲ್ಲ’ ಎಂದು ಕೆಣಕಿದಾಗ, ‘₹25 ಸಾವಿರ ಕೋಟಿ ಸಾಲ ಮನ್ನಾ ಮಾಡಿಲ್ಲವೇ’ ಎಂದು ಬೋಜೇಗೌಡ ಪ್ರಶ್ನಿಸಿದರು.

ಮಧ್ಯಪ್ರವೇಶಿಸಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ‘ಕುಮಾರಸ್ವಾಮಿ 2006–07ರಲ್ಲಿ ಗ್ರಾಮವಾಸ್ತವ್ಯ ಮಾಡಿದಾಗ ಎಲ್ಲಿ ಊಟ ಮಾಡಿದ್ದರು, ಎಲ್ಲಿ ಮಲಗಿದ್ದರು ಎಂಬುದು ಗೊತ್ತಿದೆ. ಆಗ ಕೊಟ್ಟ ಯಾವ ಭರವಸೆಯನ್ನು ಅವರು ಈಡೇರಿಸಲಿಲ್ಲ’ ಎಂದು ಹಂಗಿಸಿದರು. ಊಟ–ಮಲಗಿದ ವಿಷಯ ಕಾವೇರಿದ ಚರ್ಚೆಗೆ ವೇದಿಕೆಯಾಯಿತು. ಕುಮಾರಸ್ವಾಮಿ ಗ್ರಾಮವಾಸ್ತವ್ಯ ಹಾಗೂ ಯಡಿಯೂರಪ್ಪ ಅವರ ಪರಿಹಾರ ಕ್ರಮದ ಬಗ್ಗೆ ವಿವರವಾಗಿ ಚರ್ಚೆ ಮಾಡೋಣ ಎಂದು ಹೇಳಿದ ಸವದಿ, ಈ ಚರ್ಚೆಗೆ ತೆರೆ ಎಳೆದರು.

ಬಿಜೆಪಿಯ ಆಯನೂರು ಮಂಜುನಾಥ್‌, ‘ಈ ಕುಟ್ಟಿ (ಬಿಎಸ್‌ವೈ) ನೆರೆ ಪೀಡಿತ ಪ್ರದೇಶಗಳ ಜನರ ಅಹವಾಲು ಆಲಿಸಿದರು. ಈ ಕುಟ್ಟಿ (ಬೋಜೇಗೌಡ) ಕ್ಷೇತ್ರದ ಕಡೆಯೂ ಮುಖ ಮಾಡಲಿಲ್ಲ. ಇನ್ನೊಬ್ಬರ ದುಡ್ಡಿನಲ್ಲಿ ದೇವಸ್ಥಾನಗಳಿಗೆ ಹೋದರು. ಯಾರೋ ತಂದ ಹಣ್ಣು–ಕಾಯಿಯನ್ನೇ ದೇವರ ಮುಂದಿಟ್ಟಿದ್ದು ಬಿಟ್ಟರೆ ಏನೂ ಮಾಡಲಿಲ್ಲ’ ಎಂದರು. ಮರು ಮಾತನಾಡದೇ ಬೋಜೇಗೌಡ ಸುಮ್ಮನಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT