ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆಗೆ ರಣ ಕಹಳೆ: ಬಿಜೆಪಿಗೆ ಬಂಡಾಯದ ಬಿಸಿ, ಪ್ರಚಾರಕ್ಕೆ ಜೆಡಿಎಸ್ ಸಜ್ಜು

ಕಾಂಗ್ರೆಸ್‌ಗೆ ಹಿರೀಕರ ತಲೆನೋವು
Last Updated 15 ನವೆಂಬರ್ 2019, 0:02 IST
ಅಕ್ಷರ ಗಾತ್ರ

ಬೆಂಗಳೂರು: ಸುಪ್ರೀಂ ಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ಉಪಚುನಾವಣೆಯ ಕಣ ರಂಗೇರಿದ್ದು, ರಾಜಕೀಯ ಪಕ್ಷಗಳು ರಣ ಕಹಳೆ ಮೊಳಗಿಸಿವೆ. ಅನರ್ಹರಿಗೆ ಟಿಕೆಟ್ ಪ್ರಕಟಿಸುತ್ತಿದ್ದಂತೆ ಬಿಜೆಪಿಯಲ್ಲಿ ಬಂಡಾಯದ ಬಿಸಿ ಬಿರುಸಾಗಿದ್ದರೆ, ಕಾಂಗ್ರೆಸ್, ಜೆಡಿಎಸ್ ಮುಖಂಡರು ಪ್ರಚಾರಕ್ಕೆ ಸಜ್ಜಾಗಿದ್ದಾರೆ.

ರೋಷನ್ ಬೇಗ್ ಹೊರತುಪಡಿಸಿ ಉಳಿದ 16 ಅನರ್ಹ ಶಾಸಕರು ಗುರುವಾರ ಬಿಜೆಪಿ ಸೇರಿದ್ದಾರೆ. ಚುನಾವಣೆ ನಡೆಯುವ 15 ಕ್ಷೇತ್ರಗಳಲ್ಲಿ ರಾಣೆಬೆನ್ನೂರು ಹೊರತುಪಡಿಸಿ ಪಕ್ಷ ಸೇರಿದ 13 ಮಂದಿಗೆ ಟಿಕೆಟ್ ನೀಡಲಾಗಿದೆ. ಈಗ ಅನರ್ಹರನ್ನು ಗೆಲ್ಲಿಸಿಕೊಳ್ಳುವ ದೊಡ್ಡ ಭಾರ ಹೊರುವುದರ ಜತೆಗೆ ‘ಭಿನ್ನ’ ದಾರಿ ತುಳಿದವರನ್ನು ಮನವೊಲಿಸುವ ಸವಾಲು ಪಕ್ಷದ ನಾಯಕರಿಗೆ ಎದುರಾಗಿದೆ.

ಬಂಡಾಯ ಎದ್ದಿರುವ ಶರತ್ ಬಚ್ಚೇಗೌಡ ಹೊಸಕೋಟೆಯಲ್ಲಿ ನಾಮಪತ್ರ ಸಲ್ಲಿಸಿದರೆ, ಕಾಗವಾಡ ಕ್ಷೇತ್ರದ ಮಾಜಿ ಶಾಸಕ ಭರಮಗೌಡ (ರಾಜು) ಕಾಗೆ ಅವರು ಕಾಂಗ್ರೆಸ್‌ ಸೇರ್ಪಡೆಯಾದರು. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಟಿಕೆಟ್‌ ಬಯಸಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ಹರೀಶ್ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಅವರ ಬೆಂಬಲಿಗರು ಟಿಕೆಟ್‌ ನೀಡುವಂತೆ ಆಗ್ರಹಿಸಿ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದರು.

ಇದೇ ಕ್ಷೇತ್ರದ ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ನೆ.ಲ.ನರೇಂದ್ರ ಬಾಬು ತೆನೆ ಹೊರಲು ಸಜ್ಜಾಗಿದ್ದಾರೆ. ಒಂದೆಡೆ ಬಂಡಾಯ ಶಮನ ಮಾಡುವ ಪ್ರಯತ್ನ ಮಾಡಿದರೆ, ಮತ್ತೊಂದೆಡೆ ಅದು ಜೋರಾಗುತ್ತಿರುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತಲೆನೋವಾಗಿದೆ.

ರಾಣೆಬೆನ್ನೂರು ಕ್ಷೇತ್ರದಲ್ಲಿ ಕೆಪಿಜೆಪಿಯ ಆರ್.ಶಂಕರ್ ಅವರಿಗೆ ಟಿಕೆಟ್ ನಿರಾಕರಿಸಿದ್ದು, ಅವರೂ ಅಸಮಾಧಾನ ಹೊರಹಾಕಿದ್ದಾರೆ. ‘ನನಗೇ ಟಿಕೆಟ್ ನೀಡಬೇಕು’ ಎಂದು ಪಟ್ಟುಹಿಡಿದಿದ್ದು, ಯಡಿಯೂರಪ್ಪ ಜತೆಗೆ ಚರ್ಚಿಸಿದ್ದಾರೆ. ಶಂಕರ್ ಸ್ಪರ್ಧಿಸಿದರೆ ಗೆಲುವು ಕಷ್ಟಕರ ಎಂದು ಆ ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರು ನೀಡಿದ ವರದಿಯನ್ನು ಆಧರಿಸಿ ಟಿಕೆಟ್ ಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ. ‘ಟಿಕೆಟ್ ಕೊಟ್ಟರೆ ಗೆದ್ದು ತೋರಿಸುತ್ತೇನೆ’ ಎಂದು ಅವರು ಹಠಕ್ಕೆ ಬಿದ್ದಿದ್ದಾರೆ.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪುತ್ರ ಕಾಂತೇಶ್ ಅವರಿಗೆ ಅವಕಾಶ ಮಾಡಿಕೊಡುವ ಸಲುವಾಗಿ ಶಂಕರ್‌ಗೆ ಟಿಕೆಟ್ ತಪ್ಪಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ರಾಣೆಬೆನ್ನೂರು ಕ್ಷೇತ್ರದಲ್ಲಿ ಬಿಜೆಪಿಗೆ ಸಮರ್ಥ ನಾಯಕರು ಇಲ್ಲವಾಗಿದ್ದು, ಈ ವಿಚಾರವನ್ನು ಮನಗಂಡಿದ್ದ ಕಾಂತೇಶ್ ಕ್ಷೇತ್ರದ ಜತೆಗೆ ಸ್ವಲ್ಪಮಟ್ಟಿಗೆ ಸಂಪರ್ಕ ಸಾಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ರಾಜಕೀಯ ಭವಿಷ್ಯ ಕಂಡುಕೊಳ್ಳುವುದು ಕಷ್ಟಕರ ಎಂಬುದು ಮನದಟ್ಟಾದ ಹಿನ್ನೆಲೆಯಲ್ಲಿ ಆ ಕಡೆಗೆ ವಲಸೆ ಹೋಗುತ್ತಿದ್ದಾರೆ. ಹಾಗಾಗಿ ಅವರು ಟಿಕೆಟ್‌ ಬಯಸಿದ್ದು, ಶಂಕರ್‌ಗೆ ಟಿಕೆಟ್ ತಪ್ಪಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್: ಕಾಂಗ್ರೆಸ್ ವಲಯದಲ್ಲೂ ಸಿದ್ದರಾಮಯ್ಯ ಹಾಗೂ ಹಿರೀಕರ ನಡುವೆ ತಿಕ್ಕಾಟ ಮುಂದುವರಿದಿದ್ದು, ಉಳಿದ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಕರೆದಿದ್ದ ಸಭೆಯಿಂದ ಹಿರಿಯ ನಾಯಕರು ದೂರವೇ ಉಳಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಟ್ಟಿಯನ್ನು ಅಂತಿಮಗೊಳಿಸಿ, ವರಿಷ್ಠರಿಗೆ ಕಳುಹಿಸಲು ನಿರ್ಧರಿಸಲಾಗಿದೆ. ಶುಕ್ರವಾರ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

‘8 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಈಗಲೂ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಲು ಪಟ್ಟಿ ಸಿದ್ಧಪಡಿಸಿಕೊಂಡಿದ್ದಾರೆ. ಹಾಗಾಗಿ ಸಭೆಯಿಂದ ದೂರವೇ ಉಳಿದಿದ್ದೇವೆ’ ಎಂದು ಮುಖಂಡರೊಬ್ಬರು ತಿಳಿಸಿದರು.

ಬೇಗ್ ದೂರವಿಟ್ಟ ಬಿಜೆಪಿ
ಅನರ್ಹ ಶಾಸಕ ರೋಷನ್ ಬೇಗ್ ಅವರಿಗೆ ಐಎಂಎ ವಂಚನೆ ಪ್ರಕರಣವೇ ಮತ್ತೊಮ್ಮೆ ಉರುಳಾಗಿ ಪರಿಣಮಿಸಿದ್ದು, ಬಿಜೆಪಿ ಮುಖಂಡರು ಬೇಗ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ.

ಐಎಂಎ ವಂಚನೆ ಪ್ರಕರಣದಲ್ಲಿ ಬೇಗ್ ಹೆಸರು ಕೇಳಿಬಂದಿದ್ದು, ಮೈತ್ರಿ ಸರ್ಕಾರದಲ್ಲಿ ರಕ್ಷಣೆ ಸಿಗಲಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡು ಶಿವಾಜಿನಗರ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಕಾಂಗ್ರೆಸ್‌ನಿಂದಲೂ ಅಮಾನತುಗೊಂಡಿದ್ದರು. ನಂತರ ಅನರ್ಹ ಶಾಸಕರ ಜತೆಗೆ ಗುರುತಿಸಿಕೊಂಡಿದ್ದು, ಅವರ ಜತೆಯಲ್ಲಿ ಬಿಜೆಪಿ ಸೇರುವುದಾಗಿ ಹೇಳಿಕೊಂಡಿದ್ದರು.

ಬೇಗ್ ಸೇರ್ಪಡೆಗೆ ಸಂಘ ಪರಿವಾರದಿಂದಲೂ ಪ್ರಬಲ ವಿರೋಧ ವ್ಯಕ್ತವಾಗಿತ್ತು. ಮೊದಲಿನಿಂದಲೂ ಸಂಘ ಪರಿವಾರವನ್ನು ಟೀಕಿಸುತ್ತಲೇ ಬಂದಿದ್ದು, ಅಂತಹವರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ಆರ್‌ಎಸ್ಎಸ್ ಮುಖಂಡರು ಬಿಜೆಪಿ ನಾಯಕರಿಗೆ ಸ್ಪಷ್ಟ ಸೂಚನೆ ನೀಡಿದ್ದರು ಎನ್ನಲಾಗಿದೆ.

‘ಬೇಗ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದರೆ ಐಎಂಎ ಹಗರಣದ ಆರೋಪಿಗಳಿಗೆ ಸರ್ಕಾರ ರಕ್ಷಣೆ ನೀಡುತ್ತಿದೆ ಎಂಬ ಆರೋಪ ಎದುರಿಸಬೇಕಾಗುತ್ತದೆ. ಅದರ ಪರಿಣಾಮ ಚುನಾವಣೆ ಮೇಲೂ ಆಗುತ್ತದೆ. ಆ ಕಾರಣಕ್ಕೆ ದೂರವಿಡಲಾಗಿದೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

‘ಎಂಎಲ್‌ಸಿ ಮಾಡಿ, ಮಂತ್ರಿ ಮಾಡ್ತೇವೆ’
‘ರಾಣೆಬೆನ್ನೂರು ಕ್ಷೇತ್ರದಿಂದ ಅನರ್ಹ ಶಾಸಕ ಆರ್‌.ಶಂಕರ್‌ ಸ್ಪರ್ಧೆ ಬಗ್ಗೆ ಪಕ್ಷದಲ್ಲಿ ಚರ್ಚೆ ಮಾಡಿದ್ದೇವೆ. ಅವರಿಗೆ ಗೆಲುವು ಕಷ್ಟವಾಗಬಹುದು. ಹಾಗಾಗಿ ಅವರನ್ನು ವಿಧಾನ ಪರಿಷತ್‌ಗೆ ಆಯ್ಕೆಮಾಡಿ, ಮಂತ್ರಿ ಮಾಡಲಾಗುವುದು’ ಎಂದುಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT