ಕೆ.ಆರ್.ಪೇಟೆಯಲ್ಲಿ ಠೇವಣಿಯೂ ಬರ್ತಿರ್ಲಿಲ್ಲ, ಈಗ ಗೆಲುವು ನಮ್ಮದಾಗಿದೆ: ವಿಜಯೇಂದ್ರ

ಕೆ.ಆರ್. ಪೇಟೆ: ಕ್ಷೇತ್ರದ ಮತದಾರರು ಪಕ್ಷಾತೀತವಾಗಿ, ಜಾತ್ಯತೀತವಾಗಿ ನಾರಾಯಣಗೌಡರನ್ನು ಬೆಂಬಲಿಸಿದ್ದಾರೆ. ನಮಗೆ ಸಂತೋಷವಾಗಿದೆ. ನಾವು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧರಾಗಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಗ ಮತ್ತು ಕೆ.ಆರ್.ಪೇಟೆ ಕ್ಷೇತ್ರದ ಉಸ್ತುವಾರಿ ಹೊತ್ತಿದ್ದ ಬಿ.ವೈ.ವಿಜಯೇಂದ್ರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
‘ಇದು ನನ್ನೊಬ್ಬನ ಸಾಧನೆ ಅಲ್ಲ. ಸಾಮೂಹಿಕ ನಾಯಕತ್ವ ಮತ್ತು ನಮ್ಮೆಲ್ಲರ ಒಗ್ಗಟ್ಟಿನಿಂದ ಗೆಲುವು ಸಾಧ್ಯವಾಯಿತು. ನಾರಾಯಣಗೌಡರನ್ನು ಬೆಂಬಲಿಸಿದ ಜನರಿಗೆ ನಾವು ಕೃತಜ್ಞತೆ ಅರ್ಪಿಸುತ್ತೇವೆ’ ಎಂದು ಅವರು ಹೇಳಿದರು.
ಇದನ್ನೂ ಓದಿ: ಸೋಲೊಪ್ಪಿಕೊಂಡಿದ್ದೇವೆ: ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್
ಕೆ.ಆರ್.ಪೇಟೆ ತಾಲ್ಲೂಕಿನ ಮಗ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದಾನೆ. ಅದನ್ನು ಜನರು ಒಪ್ಪಿಕೊಂಡಿದ್ದಾರೆ. ಅಭಿವೃದ್ಧಿ ಒಂದನ್ನೇ ಮತದಾರರು ಅಪೇಕ್ಷಿಸುವುದು. ಅದರ ಮುಂದೆ ಯಾವುದೇ ಜಾತಿ ಬರುವುದಿಲ್ಲ. ನಾವು 10 ಸಾವಿರ ಲೀಡ್ ತಗೊಂಡಿದ್ದೇವೆ. ಈ ಹಿಂದೆ ಠೇವಣಿ ಸಹ ಬರುತ್ತಿರಲಿಲ್ಲ. ನಮಗೆ ಖುಷಿಯಾಗಿದೆ ಎಂದು ವಿಜಯೇಂದ್ರ ಹೇಳಿದರು.
ಎಲ್ಲ ಜಾತಿ, ಸಮಾಜಗಳಿಗೂ ನಾವು ಅಭಿವೃದ್ಧಿಯ ವಿಚಾರವನ್ನು ಮನಗಾಣಿಸಿದೆವು. ಇದೊಂದು ಬಾರಿ ಪಕ್ಷ–ಜಾತಿ ಮರೆತು ಬಿಜೆಪಿ ಬೆಂಬಲಿಸಲು ಮನವಿ ಮಾಡಿದ್ದೆವು. ಅದರಂತೆ ನಮಗೆ ಜನರು ಬೆಂಬಲಿಸಿದ್ದಾರೆ. ನಾವು ಕ್ಷೇತ್ರವನ್ನೇ ದೃಷ್ಟಿಯಲ್ಲಿರಿಸಿಕೊಂಡು ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದ್ದೆವು ಎಂದು ವಿಜಯೇಂದ್ರ ನೆನಪಿಸಿಕೊಂಡರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.