ಗುರುವಾರ , ಜೂನ್ 24, 2021
27 °C
ಚುನಾವಣಾ ಕಣ ರಂಗೇರಿಸಿದ ಹಾಲಿ– ಮಾಜಿ ಸಿ.ಎಂ

ರಾಣೆಬೆನ್ನೂರು ಅಖಾಡದಲ್ಲೊಂದು ಸುತ್ತ| ಗೆಲುವಿಗಾಗಿ ಹಣ್ಣೆಲೆ– ಚಿಗುರೆಲೆ ತಿಕ್ಕಾಟ!

ಸಿದ್ದು ಆರ್.ಜಿ. ಹಳ್ಳಿ Updated:

ಅಕ್ಷರ ಗಾತ್ರ : | |

ರಾಣೆಬೆನ್ನೂರು: ಉತ್ತರ ಕರ್ನಾಟಕದ ಹೆಬ್ಬಾಗಿಲು, ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಕಣ, ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ಮತ ಸಮರದಿಂದ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬಿಜೆಪಿ– ಕಾಂಗ್ರೆಸ್ ನಡುವೆ ನೇರ ಸ್ಪರ್ಧೆಯಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಟಿಕೆಟ್‌ ಘೋಷಣೆಯಾದ ದಿನ ‘ಸಾಹೇಬ್ರು’ (ಕೆ.ಬಿ.ಕೋಳಿವಾಡ) 90:10 ಅನುಪಾತದಲ್ಲಿ ಗೆದ್ದೇಬಿಟ್ಟರು ಎಂಬಂತಿದ್ದ ಲೆಕ್ಕಾಚಾರ, ಪ್ರಸ್ತುತ ಬಿಜೆಪಿ–ಕಾಂಗ್ರೆಸ್‌ಗೆ ಗೆಲುವಿನ ಪಾಲು 50:50 ಎಂಬಂತಾಗಿದೆ. ಕ್ಷೇತ್ರದ ಮತದಾರರು ಮಾತ್ರ ಡಿ.5ರವರೆಗೂ ಕಾದು ನೋಡುವ ತಂತ್ರಕ್ಕೆ ಶರಣಾಗಿರುವುದು ಎರಡೂ ಪಕ್ಷಗಳ ಅಭ್ಯರ್ಥಿಗಳ ಹೃದಯ ಬಡಿತವನ್ನು ಹೆಚ್ಚಿಸಿದೆ.

ಲಿಂಗಾಯತ ಮತದಾರರ ಪ್ರಾಬಲ್ಯವೇ ಹೆಚ್ಚಿದ್ದರೂ, ಕುರುಬ ಮತ್ತು ಮುಸ್ಲಿಂ ಮತಗಳೂ ನಿರ್ಣಾಯಕ ಪಾತ್ರ ವಹಿಸಲಿವೆ. ಜೆಡಿಎಸ್‌ನಿಂದ ಸ್ಪರ್ಧಿಸಿರುವ ಮಲ್ಲಿಕಾರ್ಜುನಪ್ಪ ಹಲಗೇರಿ ಸೇರಿದಂತೆ ಕಣದಲ್ಲಿ ಒಟ್ಟು 9 ಅಭ್ಯರ್ಥಿಗಳಿದ್ದಾರೆ.

2013ರಲ್ಲಿ ಕೋಳಿವಾಡರ ವಿರುದ್ಧ ಸೋತಿದ್ದ ಆರ್‌.ಶಂಕರ್‌ ಅವರಿಗೆ 2018ರ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಗೆಲುವಿನ ‘ಪೇಢಾ’ ನೀಡಿದ್ದರು. ಆದರೆ, ಈಗ ‘ಅನರ್ಹ ಶಾಸಕ’ ಶಂಕರ್ ಹೆಸರು ಕೇಳಿದರೆ ಸಾಕು ಉರಿದು ಬೀಳುತ್ತಾರೆ. ‘ಹರಕು ಸೀರೆ, ಮುರುಕು ಗಡಿಯಾರ ಕೊಟ್ಟು ನಮಗೆಲ್ಲ ದ್ರೋಹ ಮಾಡಿಬಿಟ್ಟರು’ ಎಂದು ಬೇಸರ ಮತ್ತು ಸಿಟ್ಟನ್ನು ಒಟ್ಟಿಗೆ ವ್ಯಕ್ತಪಡಿಸುತ್ತಾರೆ ಗ್ರಾಮೀಣ ಮತದಾರರು.

ಶಂಕರ್‌ ಮೇಲಿನ ಮತದಾರರ ಸಿಟ್ಟನ್ನು ಮತವಾಗಿ ಪರಿವರ್ತಿಸಿಕೊಳ್ಳಲು ಕಾಂಗ್ರೆಸ್‌ ಹವಣಿಸುತ್ತಿದೆ. ‘ಪ್ರಜಾತಂತ್ರದ ಮೌಲ್ಯಗಳನ್ನು ಗಾಳಿಗೆ ತೂರಿ, ದ್ರೋಹ ಬಗೆದವರಿಗೆ ತಕ್ಕ ಪಾಠ ಕಲಿಸಿ’ ಎಂದು ಮತದಾರರಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡುತ್ತಿದ್ದಾರೆ. ಜತೆಗೆ ಕೋಳಿವಾಡ ಅವರು ‘ಇದು ನನ್ನ ಕೊನೆಯ ಚುನಾವಣೆ. ಕೈಬಿಡಬೇಡಿ’ ಎಂದು ಅನುಕಂಪದ ಮಾತುಗಳನ್ನಾಡುತ್ತಿದ್ದಾರೆ.

ಕೋಳಿವಾಡ ಅವರು 10 ಬಾರಿ ಸ್ಪರ್ಧಿಸಿ, 5 ಬಾರಿ ಗೆದ್ದಿದ್ದಾರೆ. 11ನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಅವರ ವಿರುದ್ಧ ಬಿಜೆಪಿ, ಯುವಕರಾದ ಅರುಣ್‌ ಕುಮಾರ ಪೂಜಾರ್‌ ಅವರನ್ನು ಕಣಕ್ಕೆ ಇಳಿಸಿದೆ. ಪೂಜಾರ, 2013ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಐದನೇ ಸ್ಥಾನಕ್ಕೆ ಕುಸಿದಿದ್ದರು. ಆ ಚುನಾವಣೆಯಲ್ಲಿ ಬಿಜೆಪಿ ಇಬ್ಭಾಗವಾಗಿದ್ದರ ಲಾಭ ಪಡೆದ ಕೋಳಿವಾಡ ಗೆಲುವಿನ ನಗೆ ಬೀರಿದ್ದರು.

ಮುಖಭಂಗದಿಂದ ಪಾರಾಗಲೆಂದೇ ಆರ್‌.ಶಂಕರ್‌ ಬದಲಿಗೆ ಸ್ಥಳೀಯರಾದ ಪೂಜಾರ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ. 2018ರ ಚುನಾವಣೆಯಲ್ಲಿ ಕೊನೆ ಕ್ಷಣದಲ್ಲಿ ಬಿಜೆಪಿ ಟಿಕೆಟ್‌ ಮೇಲೆ ಸ್ಪರ್ಧಿಸಿದ್ದ ಡಾ.ಬಸವರಾಜ ಕೇಲಗಾರ ಹೆಚ್ಚಿನ ಮತಗಳನ್ನು ಪಡೆಯುವುದರ ಮೂಲಕ ಅಚ್ಚರಿ ಮೂಡಿಸಿದ್ದರು. ಈ ಬಾರಿ ಟಿಕೆಟ್‌ ಸಿಗದ ಕಾರಣ ಅವರು, ‘ಯಾರ ಸಹವಾಸವೂ ಬೇಡ, ನನ್ನ ಪಾಡಿಗೆ ಇದ್ದುಬಿಡುತ್ತೇನೆ’ ಎಂದು ಬೇಸರ ವ್ಯಕ್ತಪಡಿಸಿದ್ದರು. 

ಬಸವರಾಜ ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ಹಾಗೂ ಶಂಕರ್‌ ಅವರನ್ನು ಎಂಎಲ್‌ಸಿ ಮಾಡಿ, ಮಂತ್ರಿ ಮಾಡುವ ಭರವಸೆಯನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೀಡುವ ಮೂಲಕ ಭಿನ್ನಮತವನ್ನು ಶಮನ ಮಾಡಿದ್ದಾರೆ. ಈಗ ಶಂಕರ್‌ ಮತ್ತು ಬಸವರಾಜ ಜೋಡೆತ್ತುಗಳಂತೆ ಪೂಜಾರ ಅವರ ಗೆಲುವಿಗೆ ಶ್ರಮಿಸುತ್ತಿರುವುದು ಕಾರ್ಯಕರ್ತರಿಗೆ ಹುರುಪು ನೀಡಿದೆ.

‘15 ಸ್ಥಾನವೂ ನಮ್ಮದೇ’ ಎಂದು ಅತಿಯಾದ ಆತ್ಮವಿಶ್ವಾಸದಿಂದ ಬೀಗುತ್ತಿರುವ ಯಡಿಯೂರಪ್ಪ, 17 ಶಾಸಕರ ತ್ಯಾಗದಿಂದ ಮುಖ್ಯಮಂತ್ರಿಯಾಗಿರುವೆ. ಅವರ ಋಣ ತೀರಿಸಬೇಕು’ ಎಂಬ ಉದ್ದೇಶದಿಂದ ಅಭ್ಯರ್ಥಿ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದಾರೆ. ಅಷ್ಟೇ ಅಲ್ಲ, ಜಿಲ್ಲೆಗೆ ಅನುದಾನದ ಹೊಳೆಯನ್ನೇ ಹರಿಸುವ ಭರವಸೆ ಮೂಲಕ ಮತದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ.

ಕೋಳಿವಾಡರ ಮೇಲೆ ಬಿಜೆಪಿಯವರು ‘ಮರಳುದಂಧೆ’ ಆರೋಪ ಮಾಡಿದರೆ, ಪೂಜಾರ ಅವರ ಮೇಲೆ ಕಾಂಗ್ರೆಸ್‌ನವರು ‘ಅಪರಾಧ ಹಿನ್ನೆಲೆ’ ಆರೋಪ ಹೊರಿಸುವ ಮೂಲಕ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಇದನ್ನು ಗಮನಿಸುತ್ತಿರುವ ಮತದಾರರ ಒಲವು ಯಾರ ಕಡೆ ಎಂಬುದನ್ನು ಕಾದು ನೋಡಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು