ಶನಿವಾರ, ಜನವರಿ 25, 2020
22 °C

ಉಪಚುನಾವಣೆ: ಬಿಸಿಲೇರಿದಂತೆ ಬಿರುಸುಗೊಳ್ಳುತ್ತಿದೆ ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಚಳಿಗೆ ನಡುಗಿ ಮನೆಯಲ್ಲಿಯೇ ಇದ್ದ ಜನರು ಬಿಸಿಲೇರಿದಂತೆ ಮತಗಟ್ಟೆಗಳತ್ತಾ ಧಾವಿಸುತ್ತಿದ್ದು, ಮತದಾನ ಚುರುಕು ಪಡೆಯುತ್ತಿದೆ. 15 ಕ್ಷೇತ್ರಗಳಲ್ಲಿ ಬೆಳಿಗ್ಗೆ 9 ಗಂಟೆಗೆ ಸರಾಸರಿ ಶೇ 6.06ರಷ್ಟು ಮತದಾನವಾಗಿದೆ.

ಪ್ರತಿ ಕ್ಷೇತ್ರದ ಮತದಾನ ಪ್ರಮಾಣದ ಕುರಿತು ಚುನಾವಣಾ ಆಯೋಗ ವರದಿ ನೀಡಿದೆ. ಅಥಣಿ ಶೇ 8.33, ಕಾಗವಾಡ ಶೇ 6.94, ಗೋಕಾಕಾ ಶೇ 6.11, ಯಲ್ಲಾಪುರ ಶೇ 7.54, ಹಿರೆಕೇರೂರು ಶೇ 5.59, ರಾಣೆಬೆನ್ನೂರು ಶೇ 6.22, ವಿಜಯನಗರ ಶೇ 6.5, ಚಿಕ್ಕಬಳ್ಳಾಪುರ ಶೇ 6.91, ಕೆ.ಆರ್‌.ಪುರ ಶೇ 4.04, ಯಶವಂತಪುರ ಶೇ 4.19, ಮಹಾಲಕ್ಷ್ಮಿ ಬಡಾವಣೆ ಶೇ 8.21, ಶಿವಾಜಿನಗರ ಶೇ 3.04, ಹೊಸಕೋಟೆ ಶೇ 9.01, ಕೆ.ಆರ್‌.ಪೇಟೆ ಶೇ 6.2 ಹಾಗೂ ಹುಣಸೂರು ಶೇ 6.18ರಷ್ಟು ಮತದಾನವಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತವರು ಬೂಕನಕೆರೆಯಲ್ಲಿ ಮತಯಂತ್ರದಲ್ಲಿ ದೋಷ ಕಂಡು ಬಂದಿದ್ದರಿಂದ 40 ನಿಮಿಷ ತಡವಾಗಿ ಮತದಾನ ಆರಂಭವಾಗಿದೆ.

ಶಿವಾಜಿನಗರದ ಬಿಜೆಪಿ ಅಭ್ಯರ್ಥಿ ಎಂ‌ ಶರವಣ ಅವರು ತಮ್ಮ ಪತ್ನಿ ಸಮೇತ ಬಂದು ಮತ ಚಲಾಯಿಸಿದರು, ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರು ಪತ್ನಿ ಡಾ.ಪ್ರೀತಿ, ತಂದೆ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ ಅವರೊಂದಿಗೆ ಮತ ಚಲಾಯಿಸಿದರು. ಕೆ.ಆರ್‌.ಪೇಟೆಯ ಬಂಡಿಹೊಳೆ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಮುಂಚಿತವಾಗಿಯೇ ಮತಗಟ್ಟೆಗೆ ಬಂದು, 40 ನಿಮಿಷ ಮೊದಲು ಮತ ಹಾಕಿದರು.

ಚಿಕ್ಕಬಳ್ಳಾಪುರದ ಮತಗಟ್ಟೆ ಸಂಖ್ಯೆ 147ರಲ್ಲಿ ಸಂಪೂರ್ಣ ಅಂಗವಿಕಲ ಸಿಬ್ಬಂದಿ ಚುನಾವಣೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಗವಾಡ ಕ್ಷೇತ್ರದ ಉಗಾರ ಖುರ್ದ್ ಎಸ್.ಎಚ್.ವಿ. ಪಿಯು ಕಾಲೇಜು ಮತಗಟ್ಟೆ ಸಂಖ್ಯೆ 194ರಲ್ಲಿ ವ್ಹೀಲ್ ಚೇರ್ ಇಲ್ಲದಿರುವುದರಿಂದ ಅಂಗವಿಕಲ ಮಗನನ್ನು ತಂದೆ ಎತ್ತಿಕೊಂಡು ಹೋಗಿ ಮತ ಹಾಕಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು