ಬುಧವಾರ, ಸೆಪ್ಟೆಂಬರ್ 23, 2020
20 °C
ನಿಗಮ–ಮಂಡಳಿಗೂ ನೇಮಕ

22ಕ್ಕೆ ಸಂಪುಟ ವಿಸ್ತರಣೆ: ಸಮನ್ವಯ ಸಮಿತಿ ಸಭೆ ತೀರ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ‘ದೋಸ್ತಿ’ (ಜೆಡಿಎಸ್‌– ಕಾಂಗ್ರೆಸ್‌) ಪಕ್ಷದ ನಾಯಕರು ಕೊನೆಗೂ ಮುಹೂರ್ತ ನಿಗದಿ ಮಾಡಿದ್ದಾರೆ. ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಅಧಿವೇಶನ ಮುಕ್ತಾಯವಾದ ಮರುದಿನವೇ (ಡಿ. 22) ಸಂ‍ಪುಟ ವಿಸ್ತರಣೆ ಮಾಡಲು ಬುಧವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಂಪುಟದಲ್ಲಿ ಖಾಲಿ ಇರುವ ಕಾಂಗ್ರೆಸ್‌ನ ಆರು ಮತ್ತು ಜೆಡಿಎಸ್‌ನ ಎರಡು ಸಚಿವ ಸ್ಥಾನಗಳನ್ನು ಭರ್ತಿ ಮಾಡುವ ಜೊತೆಗೆ, 20 ಕಾಂಗ್ರೆಸ್‌ ಶಾಸಕರು ಮತ್ತು 10 ಜೆಡಿಎಸ್‌ ಶಾಸಕರನ್ನು ನಿಗಮ ಮಂಡಳಿಗಳಿಗೆ ನೇಮಿಸಲಾಗುವುದು. 6 ಸಂಸದೀಯ ಕಾರ್ಯದರ್ಶಿಗಳನ್ನೂ (ಕಾಂಗ್ರೆಸ್‌ 4, ಜೆಡಿಎಸ್‌ 2) ಅದೇ ದಿನ ನೇಮಿಸಿಕೊಳ್ಳಲು ನಿರ್ಧರಿಸಲಾಗಿದೆ.

ಸಭೆಯ ಬಳಿಕ ಮಾತನಾಡಿದ ಸಿದ್ದರಾಮಯ್ಯ, ‘ಇದೇ 9ರಂದು ಸಂಪುಟ ವಿಸ್ತರಣೆಗೆ ದಿನ ನಿಗದಿಪಡಿಸಿದ್ದೆವು. ಆದರೆ, ಮರು ದಿನದಿಂದ ಅಧಿವೇಶನ ನಡೆಯಲಿರುವುದರಿಂದ ಮುಂದೂಡಿದ್ದೇವೆ. ರಾಹುಲ್‌ ಗಾಂಧಿ ಜೊತೆ ಇನ್ನಷ್ಟೆ ಚರ್ಚಿಸಬೇಕಿದೆ’ ಎಂದರು.

‘ಕಾಂಗ್ರೆಸ್ ತ್ಯಜಿಸುವುದಿಲ್ಲ ಎಂದು ಸತೀಶ ಜಾರಕಿಹೊಳಿ ಹೇಳಿದ್ದಾರೆ. ಅವರಷ್ಟೇ ಅಲ್ಲ, ಕಾಂಗ್ರೆಸ್, ಜೆಡಿಎಸ್‌ನ ಯಾವ ಶಾಸಕರೂ ಪಕ್ಷ ಬಿಡುವುದಿಲ್ಲ. ಸುಮ್ಮನೆ ಯಾರೋ ಉಹಾಪೋಹ ಸೃಷ್ಟಿಸುತ್ತಿದ್ದಾರೆ. ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ. ಒಮ್ಮೆ ಆಪರೇಷನ್ ಕಮಲ ಮಾಡಿ ಗೆದ್ದಿದ್ದಾರೆ. ಪದೇ ಪದೇ ಅದು ಸಾಧ್ಯವಾಗುವುದಿಲ್ಲ’ ಎಂದರು.

ಮುಹೂರ್ತ ನಿಗದಿ ಯಾಕೆ?

* ಕಾಂಗ್ರೆಸ್‌ ಶಾಸಕರು ಪಕ್ಷ ತ್ಯಜಿಸದಂತೆ ತಡೆಯುವ ತಂತ್ರ

* ಬಿಜೆಪಿಯ ‘ಆಪರೇಷನ್‌ ಕಮಲ’ಕ್ಕೆ ಪ್ರತಿತಂತ್ರ

* ಅಧಿವೇಶನ ಸುಗಮವಾಗಿ ನಡೆಯಬೇಕೆಂಬ ಅಪೇಕ್ಷೆ

ಏನಾಗಬಹುದು?

* ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ ಆಗಬಹುದು

* ಕಲಾಪಕ್ಕೆ ಶಾಸಕರು ಗೈರಾಗಿ ಮಸೂದೆಗಳು ಅನುಮೋದನೆಗೊಳ್ಳದಂತೆ ಮಾಡಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಬಹುದು

* ಬಿಜೆಪಿ ಜತೆ ಸಂಪರ್ಕದಲ್ಲಿದ್ದಾರೆ ಎನ್ನಲಾದ ಕಾಂಗ್ರೆಸ್ ಶಾಸಕರು ಗುಂಪುಗಾರಿಕೆ ನಡೆಸಬಹುದು

*****

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೇವೆ. 22ರಂದು ಸಂಫುಟ ವಿಸ್ತರಣೆಗೆ ಅವರೂ ಒಪ್ಪಿದ್ದಾರೆ.
- ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು