ಗುರುವಾರ , ಫೆಬ್ರವರಿ 20, 2020
29 °C
ಇನ್ನೆಷ್ಟು ದಿನ?

ಸಂಪುಟ ವಿಸ್ತರಣೆ ಅನಿಶ್ಚಿತ: ಯಡಿಯೂರಪ್ಪ, ಅಮಿತ್‌ ಶಾ ಚರ್ಚೆ ಬಗ್ಗೆಯೇ ಗೊಂದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಯಾವುದೇ ಸ್ಪಷ್ಟ ನಿರ್ದೇಶನ ನೀಡದ ಕಾರಣ ಗೊಂದಲ ಇನ್ನೂ ಮುಂದುವರಿದಿದೆ.

ಅಮಿತ್‌ ಶಾ ಅವರು ಬೆಂಗಳೂರಿಗೆ ಬಂದಾಗ ಮಾತುಕತೆ ನಡೆಸಿ, ದಾವೋಸ್‌ನಿಂದ ಬಂದ ತಕ್ಷಣವೇ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದರು. ಸಂಪುಟ ವಿಸ್ತರಣೆ ಕುರಿತಂತೆ ಆಖೈರು ನಿರ್ಧಾರ ಕೈಗೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಇಬ್ಬರ ಮಧ್ಯೆ ಮಾತುಕತೆ ನಡೆದಿಲ್ಲ ಎಂದು ಮೂಲಗಳು ಹೇಳಿವೆ.

‘ಅಮಿತ್‌ ಶಾ ಮತ್ತು ಯಡಿಯೂರಪ್ಪ ಅವರ ಮಧ್ಯೆ 20 ನಿಮಿಷಗಳ ಮಾತುಕತೆ ನಡೆದಿದೆ. ಉಪಚುನಾವಣೆಯಲ್ಲಿ ಗೆದ್ದ ‘ಅರ್ಹ’ರಾದ 11 ಶಾಸಕರನ್ನು ಸೇರಿಸಿಕೊಂಡು ಸಚಿವ ಸಂಪುಟ ವಿಸ್ತರಣೆ ಮಾಡಲು ಒಪ್ಪಿದ್ದಾರೆ. ಅದಕ್ಕೂ ಮುನ್ನ ಇದೇ 20 ರಂದು ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಜೆ.ಪಿ.ನಡ್ಡಾ ಅವರಿಂದಲೂ ಒಪ್ಪಿಗೆ ಪಡೆಯಲು ಸಲಹೆ ನೀಡಿದ್ದಾರೆ’ ಎಂದು ಯಡಿಯೂರಪ್ಪ ಆಪ್ತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಭಾನುವಾರ ಬೆಳಿಗ್ಗೆ ದಾವೋಸ್‌ಗೆ ಹೋಗುವ ಯಡಿಯೂರಪ್ಪ ಇದೇ 24 ರಂದು ವಾಪಸ್‌ ಬರಲಿದ್ದು, ಆ ಬಳಿಕ ನಡ್ಡಾ ಜತೆ ಮಾತುಕತೆ ನಡೆಸಲಿದ್ದಾರೆ. ಈ ತಿಂಗಳ ಕೊನೆಗೆ ಅಥವಾ ಫೆಬ್ರುವರಿ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆ ಮಾಡಲಿದ್ದಾರೆ’ ಎಂದು ಹೇಳಿವೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ‘ಅಮಿತ್‌ ಶಾ ಅವರು ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿಲ್ಲ. ಧನುರ್ಮಾಸ ಇದ್ದ ಕಾರಣ ಸಂಪುಟ ವಿಸ್ತರಣೆ ಆಗಿಲ್ಲ. ಮುಖ್ಯಮಂತ್ರಿ ವಿದೇಶ ಪ್ರವಾಸದಿಂದ ಬಂದ ಬಳಿಕ ಸಂಪುಟ ವಿಸ್ತರಣೆ ಆಗುತ್ತದೆ’ ಎಂದಿದ್ದಾರೆ.

ಜ.26 ರವರೆಗೆ ವಿಸ್ತರಣೆ ಇಲ್ಲ

ಸಚಿವ ಸಂಪುಟ ವಿಸ್ತರಣೆ ಇದೇ 26 ರೊಳಗೆ ನಡೆಯುವ ಸಾಧ್ಯತೆ ಇಲ್ಲ. ಗಣರಾಜ್ಯೋತ್ಸವ ಧ್ವಜಾರೋಹಣ ಮಾಡುವ ಸಚಿವರ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. 12 ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ಮಾಡಲಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರೇ ಧ್ವಜಾರೋಹಣ ಮಾಡುತ್ತಾರೆ. ಹೀಗಾಗಿ, ಅಲ್ಲಿಯವರೆಗೆ ವಿಸ್ತರಣೆ ಆಗುವುದಿಲ್ಲ ಎನ್ನಲಾಗಿದೆ.

ವಿಸ್ತರಣೆಗೆ ಮುಹೂರ್ತ ಕೂಡಿ ಬಂದಿಲ್ಲ. ಶಾಸಕರು ಶಾ ಜತೆ ಏನು‌ ಮಾತನಾಡಿದ್ದಾರೋ ಗೊತ್ತಿಲ್ಲ. ಆ ವಿಚಾರ ಮುಖ್ಯಮಂತ್ರಿ ಮತ್ತು ಶಾ ಅವರಿಗೆ ಸೇರಿದ್ದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದರು.

ಇನ್ನಷ್ಟು...

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು