ಶನಿವಾರ, ಫೆಬ್ರವರಿ 29, 2020
19 °C
17 ಮಂದಿಯೂ ಒಗ್ಗಟ್ಟಾಗಿಯೇ ಇರುತ್ತೇವೆ: ಮಹಾಲಕ್ಷ್ಮಿಲೇಔಟ್‌ ಶಾಸಕ ಬಿ.ಗೋಪಾಲಯ್ಯ

ವಿಸ್ತರಣೆ ವಿಳಂಬ: ಹೊರಬಿತ್ತು ಅತೃಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ತಮಗೆ ಸಚಿವ ಸ್ಥಾನ ಸಿಗುವುದೋ ಇಲ್ಲವೋ ಎಂಬ ಬಗ್ಗೆ 11 ‘ಅರ್ಹ’ ಶಾಸಕರಲ್ಲಿ ಆತಂಕ ಆರಂಭವಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಹಿಂದೆ ನೀಡಿದ ಭರವಸೆಯಂತೆ ನಡೆದುಕೊಳ್ಳಲೇಬೇಕು ಎಂದು ಆಗ್ರಹಿಸಿದ್ದಾರೆ.

ಕೆಲವು ಶಾಸಕರು ಶುಕ್ರವಾರ ತಮ್ಮ ಮನದಾಳದ ಮಾತುಗಳನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಶಾಸಕರ ಭವನದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಶಾಸಕ ಬಿ.ಸಿ.ಪಾಟೀಲ, ‘ಇನ್ನೂ ಸಚಿವ ಸ್ಥಾನ ಸಿಗದ ಬಗ್ಗೆ ನೋವಿದೆ. ವಿಶೇಷವಾಗಿ ನಮ್ಮ ಕ್ಷೇತ್ರದ ಜನತೆಗೆ ನೋವಾಗಿದೆ. ಮುಖ್ಯಮಂತ್ರಿಯವರು ಶೀಘ್ರವೇ ಸಂಪುಟ ವಿಸ್ತರಣೆ ಮಾಡುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಹೇಳಿಕೊಂಡರು. 

‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಎಲ್ಲರಿಗೂ ಅಧಿಕಾರ ನೀಡುವುದಾಗಿ ಭರವಸೆ ನೀಡಿದ್ದರು. ಇನ್ನು ಅವರೇ ಈ ಬಗ್ಗೆ ಸ್ಪಷ್ಟನೆ  ನೀಡಬೇಕಾಗಿದೆ. ಆದಷ್ಟು ಬೇಗ ವರಿಷ್ಠರು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದರು.

‘ಯಾವುದೇ ವಿಷಯದ ಬಗ್ಗೆ ಅಮಿತ್‌ ಶಾ ಅವರ ಜತೆ ನೇರವಾಗಿ ಚರ್ಚೆ ಮಾಡಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಅಥವಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಮಾತ್ರ ಚರ್ಚೆ ನಡೆಸಬೇಕಾಗುತ್ತದೆ’ ಎಂದೂ ಅವರು ಹೇಳಿದರು. 

ರಾಣೆಬೆನ್ನೂರಿನ ಮಾಜಿ ಶಾಸಕ ಆರ್‌.ಶಂಕರ್‌ ಮಾತನಾಡಿ, ‘ಬಿಜೆಪಿ ಸರ್ಕಾರ ರಚನೆಯಾಗಲು ಕಾರಣರಾದ  17 ಜನರಿಗೂ ಸಚಿವ ಸ್ಥಾನ ನೀಡಬೇಕು. ಉಳಿದವರಿಗೆ ಬಿಡುವ ಮೂಲಕ ಅನ್ಯಾಯ ಮಾಡಬಾರದು’ ಎಂದರು.

‘ಮುಖ್ಯಮಂತ್ರಿಯವರು ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ. ಮಾಡದಿದ್ದರೆ ಮುಂದಿನ ತೀರ್ಮಾನದ ಬಗ್ಗೆ ಯೋಚಿಸುತ್ತೇವೆ. ನಾವು ಎಲ್ಲರೂ ಒಗ್ಗಟ್ಟಾಗಿಯೇ ಇರುತ್ತೇವೆ’ ಎಂದು ಶಂಕರ್‌ ಹೇಳಿದರು.

ಮಹಾಲಕ್ಷ್ಮಿಲೇಔಟ್‌ ಶಾಸಕ ಕೆ.ಗೋಪಾಲಯ್ಯ ಮಾತನಾಡಿ, ‘ನಾವೆಲ್ಲ ಒಟ್ಟಿಗೆ ರಾಜೀನಾಮೆ ನೀಡಿ ಹೊರಗೆ ಬಂದೆವು. ಈಗಲೂ ಒಟ್ಟಿಗೇ ಇದ್ದೇವೆ. ಮುಖ್ಯಮಂತ್ರಿಯವರು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ’ ಎಂದರು.

ಶಾಸಕ ಎಸ್‌.ಟಿ.ಸೋಮಶೇಖರ್‌ ಮಾತನಾಡಿ, ‘ಮುಖ್ಯಮಂತ್ರಿಯವರನ್ನು ನಾಳೆ ಭೇಟಿ ಮಾಡಿ, ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸುತ್ತೇನೆ’ ಎಂದು ಅವರು ಹೇಳಿದರು.

‘ಕೊಟ್ಟ ಮಾತಿನಿಂದ ಹಿಂದೆ ಸರಿಯಲ್ಲ’
‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶೀಘ್ರವೇ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದು, ಎಲ್ಲ ಅರ್ಹ ಶಾಸಕರಿಗೂ ಈ ಹಿಂದೆ ಕೊಟ್ಟ ಮಾತಿನಂತೆ ನಡೆದುಕೊಳ್ಳಲಾಗುವುದು. ಅದರಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು  ಕಂದಾಯ ಸಚಿವ ಆರ್. ಅಶೋಕ ಹೇಳಿದರು.

‘ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜತೆ ಚರ್ಚಿಸಿ ಯಡಿಯೂರಪ್ಪ ಪಟ್ಟಿ ಅಂತಿಮಗೊಳಿಸುವರು. ವರಿಷ್ಠರಿಂದ ಯಾವುದೇ ಸಮಸ್ಯೆ ಇಲ್ಲ, ಸಂಪುಟ ವಿಸ್ತರಣೆಯೂ ತಡವಾಗುವುದಿಲ್ಲ’ ಎಂದರು. 

‘ವರಿಷ್ಠರು ಸೂಚಿಸಿದರೆ ತ್ಯಾಗ ಅನಿವಾರ್ಯ’
ಶಿವಮೊಗ್ಗ: ‘ವರಿಷ್ಠರು ಹೇಳಿದರೆ ಈಗಿರುವ ಸಚಿವರೂ ತಮ್ಮ ಸ್ಥಾನ ತ್ಯಾಗ ಮಾಡುವುದು ಅನಿವಾರ್ಯ. ಹಳಬರು, ಹೊಸಬರು ಎನ್ನುವ ವ್ಯತ್ಯಾಸವಿಲ್ಲ. ಎಲ್ಲರೂ ಬಿಜೆಪಿಯವರೇ. ಎಲ್ಲರಿಗೂ ಪ್ರಾತಿನಿಧ್ಯ ದೊರಕಲಿದೆ’ ಎಂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ
ಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

‘ಸರ್ಕಾರ ರಚನೆಗೆ ಕಾರಣರಾದವರಿಗೆ ಸೂಕ್ತ ಸ್ಥಾನ ದೊರಕುತ್ತದೆ. ಪಕ್ಷೇತರ ಶಾಸಕರಾಗಿದ್ದ ಶಂಕರ್ ಸೇರಿ ಎಲ್ಲರಿಗೂ ಅವಕಾಶ ಮಾಡಿಕೊಡಬೇಕಿದೆ. ಸಂಪುಟ ಪುನರ್‌ರಚನೆಯ ಸ್ಪಷ್ಟ ಚಿತ್ರಣ ಶೀಘ್ರದಲ್ಲೇ ದೊರಕಲಿದೆ’ ಎಂದರು.

*
ಸಂಪುಟ ವಿಸ್ತರಣೆ ಮಾಡದ ಯಡಿಯೂರಪ್ಪ ಅವರು ರಾಜ್ಯದ ಅಭಿವೃದ್ಧಿ ಮತ್ತು ಸಮಸ್ಯೆಗಳನ್ನು ಕಡೆಗಣಿಸಿದ್ದಾರೆ.
-ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು