ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧನುರ್ಮಾಸದ ನೆಪ: ರಾಜ್ಯ ಸಚಿವ ಸಂ‍ಪುಟ ವಿಸ್ತರಣೆ ಸದ್ಯಕ್ಕೆ ಇಲ್ಲ

ಗೊಂದಲದಲ್ಲಿ ಬಿಜೆಪಿ l ಆಕಾಂಕ್ಷಿಗಳಿಗೆ ನಿರಾಸೆ
Last Updated 13 ಡಿಸೆಂಬರ್ 2019, 1:24 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ವಿಸ್ತರಣೆಗೆ ಸದ್ಯಕ್ಕೆ ಮುಹೂರ್ತ ಕೂಡಿ ಬರುವುದು ಅನುಮಾನ. ಸಂಪುಟ ವಿಸ್ತರಣೆ ಮಾಡಬೇಕೋ ಅಥವಾ ಪುನರ್‌ರಚನೆ ಮಾಡಬೇಕೋ ಎಂಬ ಗೊಂದಲ ಪಕ್ಷದಲ್ಲಿ ಮುಂದುವರಿದಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಯಡಿಯೂರಪ್ಪ ಅವರು ಭೇಟಿ ಮಾಡಿ ಚರ್ಚಿಸುವವರೆಗೆ ಇದು ಇತ್ಯರ್ಥವಾಗುವುದಿಲ್ಲ. ಅಲ್ಲಿಯವರೆಗೆ ಈ ಪ್ರಕ್ರಿಯೆ ನನೆಗುದಿಗೆ ಬೀಳಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮೈತ್ರಿ ಸರ್ಕಾರ ಬೀಳುವ ಮುನ್ನ ಜೆಡಿಎಸ್‌–ಕಾಂಗ್ರೆಸ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಲಾಗಿದೆ. ಅವರೆಲ್ಲರನ್ನೂ ಸಚಿವರಾಗಿಸಲು ಶಾಸಕರ ಅನರ್ಹತೆ ಅಡ್ಡಿಯಾಗಿತ್ತು. ಉಪಚುನಾವಣೆ ನಡೆದು ಫಲಿತಾಂಶ ಹೊರಬಿದ್ದ ಕೂಡಲೇ ಸಚಿವರಾಗುವ ನಿರೀಕ್ಷೆಯಲ್ಲಿ ಶಾಸಕರಿದ್ದರು.

ಸದ್ಯವೇ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದ್ದ ಯಡಿಯೂರಪ್ಪ, ಗುರುವಾರ ತಮ್ಮ ಮಾತಿನ ಧಾಟಿ ಬದಲಿಸಿದ್ದು, ಸದ್ಯಕ್ಕೆ ವಿಸ್ತರಣೆ ಅನುಮಾನ ಎಂಬ ಸುಳಿವು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಯಡಿಯೂರಪ್ಪ, ‘ಅಮಿತ್ ಶಾ ಅವರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನೂ ನಾಲ್ಕೈದು ದಿನ ಅವರು ಚರ್ಚೆಗೆ ಲಭ್ಯವಿರುವುದಿಲ್ಲ. ಪ್ರಚಾರ ಮುಗಿಸಿದ ನಂತರ ಅವರನ್ನು ಭೇಟಿಯಾಗಿ, ಸಚಿವ ಸಂಪುಟ ವಿಸ್ತರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ಡಿಸೆಂಬರ್‌ 20ಕ್ಕೆ ಜಾರ್ಖಂಡ್ ಚುನಾವಣೆ ಮುಗಿಯಲಿದ್ದು, 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಅಲ್ಲಿಯವರೆಗೂ ಅಮಿತ್ ಶಾ ಭೇಟಿಯಾಗುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ.

ಶಾ ಅವರ ಭೇಟಿಯಾಗಿ ವಿಸ್ತರಣೆ ಅಥವಾ ಪುನರ್‌ರಚನೆಗೆ ಒಪ್ಪಿಗೆ ಸಿಕ್ಕಿದರೂ ಇದೇ 17ರ ಬಳಿಕ ಧನುರ್ಮಾಸ ಆರಂಭವಾಗಲಿದ್ದು ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಶುಭಕಾರ್ಯ ನಡೆಸುವುದಿಲ್ಲ. ಹೀಗಾಗಿ, ಸಂಕ್ರಾಂತಿವರೆಗೆ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಕಡಿಮೆ ಎಂದು ಮೂಲಗಳು ಹೇಳಿವೆ.

ಜನವರಿ 20ರಿಂದ ಅಧಿವೇಶನ ಶುರುವಾಗಲಿದ್ದು, ಅದೇ ತಿಂಗಳ ಅಂತ್ಯದವರೆಗೆ ನಡೆಯಲಿದೆ. ಅಧಿವೇಶನದ ಹೊತ್ತಿಗೆ ಸಂಪುಟ ವಿಸ್ತರಣೆಯಾಗಬಹುದು ಅಥವಾ ಹೊಸದಾಗಿ ಸಚಿವರಾಗುವವರಿಗೆ ಕಲಾಪ ನಿಭಾಯಿಸುವುದು ಕಷ್ಟವಾಗಬಹುದು ಎಂಬ ಕಾರಣಕ್ಕೆ ಅಧಿವೇಶನ ಮುಗಿಯುವವರೆಗೂ ಮುಂದೂಡಿಕೆಯಾಗಬಹುದು ಎಂದೂ ಮೂಲಗಳು ವಿವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT