ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಲಕ್ಷ ರ್‍ಯಾಪಿಡ್ ಟೆಸ್ಟ್ ಕಿಟ್ ಖರೀದಿಗೆ ನಿರ್ಧಾರ: ಡಿಸಿಎಂ ಅಶ್ವತ್ಥ ನಾರಾಯಣ

Last Updated 16 ಏಪ್ರಿಲ್ 2020, 15:11 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವೈರಸ್ ಸೋಂಕು (ಕೋವಿಡ್–19) ಪತ್ತೆಗಾಗಿ ಹೆಚ್ಚುವರಿಯಾಗಿ ಎರಡು ಲಕ್ಷ ರ್‍ಯಾಪಿಡ್ ಟೆಸ್ಟ್ ಕಿಟ್‌ಗಳನ್ನು ಕಿಟ್‌ಗಳನ್ನು ಖರೀದಿಸಲು ಗುರುವಾರ ನಡೆದ ಕೋವಿಡ್ ಕುರಿತ ಕಾರ್ಯಪಡೆ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಪಡೆ ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

‘ಚೀನಾ ಸರ್ಕಾರ ಪಟ್ಟಿ ಮಾಡಿರುವ ಅಧಿಕೃತ ಸಂಸ್ಥೆಗೇ ರ್‍ಯಾಪಿಡ್ ಟೆಸ್ಟ್ ಕಿಟ್‌ಗಳನ್ನು ಸರಬರಾಜು ಮಾಡಲು ಒಪ್ಪಿಗೆ ಸೂಚಿಸಿದ್ದು, ಅವು ಬಂದ ನಂತರ ಟೆಸ್ಟ್ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲಾಗುವುದು’ ಎಂದು ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

‘ಕೋವಿಡ್ ಲಕ್ಷಣಗಳು ಇರುವ ವ್ಯಕ್ತಿಯ ಗಂಟಲಿನ ದ್ರವದ ಮಾದರಿಗಳನ್ನು ಸಂಗ್ರಹಿಸಲು ರಾಜ್ಯದಲ್ಲಿ 250 ಕಿಯೋಸ್ಕ್‌ಗಳನ್ನು ಸ್ಥಾಪಿಸಲಾಗುವುದು. ಇಂತಹ ಕಿಯೋಸ್ಕ್‌ಗಳು ತಾಲ್ಲೂಕಿಗೆ ಒಂದರಂತೆ ಆರಂಭಿಸಲಾಗುವುದು. ಈ ಮೂಲಕ ಮಾದರಿ ಸಂಗ್ರಹ ಪ್ರಕ್ರಿಯೆಯನ್ನು ಮತ್ತಷ್ಟು ಹೆಚ್ಚಿಸಿ, ರೋಗ ಹರಡುವುದನ್ನು ತಡೆಯಲಾಗುವುದು’ ಎಂದು ಅವರು ವಿವರಿಸಿದ್ದಾರೆ.

‘ರಂಜಾನ್ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡದಿರಲು ಹಾಗೂ ಮನೆಗಳಲ್ಲಿಯೇ ಪ್ರಾರ್ಥನೆ ಮಾಡಿಕೊಳ್ಳುವಂತೆ ಸೂಚಿಸಲು ತೀರ್ಮಾನಿಸಲಾಗಿದೆ. ವೈಯಕ್ತಿಕ ಅಂತರವನ್ನು ಕಾಪಾಡಿಕೊಳ್ಳುವುದನ್ನು ಕಡ್ಡಾಯ ಮಾಡಿದ್ದು, ಇದನ್ನು ಸ್ಥಳೀಯ ಮಟ್ಟದಲ್ಲಿ ಮುಸ್ಲಿಂ ಧರ್ಮಗುರುಗಳ ಮೂಲಕವೂ ಜನರಲ್ಲಿ ಜಾಗೃತಿ ಮೂಡಿಸಲು ಸಲಹೆ ನೀಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ವೈದ್ಯರ ರಕ್ಷಣಾ ಕವಚಗಳು (ಪಿಪಿಇ) ರಾಜ್ಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇವೆ. ಅಗತ್ಯ ಇರುವ 25 ಸಾವಿರ ಆರ್‍ಟಿಪಿಸಿಆರ್ ಕಿಟ್‍ಗಳ ಖರೀದಿಗೂ ಒಪ್ಪಿಗೆ ನೀಡಲಾಗಿದೆ’ ಎಂದು ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಜಿಲ್ಲಾ ಆಸ್ಪತ್ರೆ ಗಳಲ್ಲಿ ಕನಿಷ್ಠ 50 ರಿಂದ 100 ಹಾಸಿಗೆಗಳಿಗೆ ಕೇಂದ್ರಿಕೃತ ಆಮ್ಲಜನಕ ಸರಬರಾಜು ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಯಿತು ಎಂದೂ ಅವರು ಹೇಳಿದ್ದಾರೆ.

ರಕ್ತ/ಗಂಟಲಿನ ದ್ರವ ಮಾದರಿಗಳ ಸಂಗ್ರಹಕ್ಕೆ ಸಂಬಂಧಿಸಿದಂತೆ ಡಾ.ಸುದರ್ಶನ ನೇತೃತ್ವದ ತಂಡ ಕೊಟ್ಟಿರುವ ವರದಿಯನ್ನು ಅಂಗೀಕರಿಸಲಾಗಿದೆ.

ಕೋವಿಡ್ ಸೋಂಕಿತರಿಗೆ ಸರ್ಕಾರ ನಿಗದಿಪಡಿಸಿರುವ ಆಸ್ಪತ್ರೆಗಳಲ್ಲೇ ಚಿಕಿತ್ಸೆ ನೀಡಬೇಕು. ಮಾಮೂಲಿ ರೋಗಿಗಳು ಇರುವ ಕಡೆ ಚಿಕಿತ್ಸೆ ನೀಡಬಾರದು ಎನ್ನುವ ತೀರ್ಮಾನವನ್ನೂ ಸಭೆಯಲ್ಲಿ ಕೈಗೊಳ್ಳಲಾಯಿತು.

ಸಹಾಯವಾಣಿ: ಕೋವಿಡ್ ಸಲುವಾಗಿಯೆ ಪ್ರತ್ಯೇಕ ಸಹಾಯವಾಣಿ ತೆರೆಯಲಾಗುವುದು. ಕನಿಷ್ಟ 300 ಜನರು, 50 ಸಾವಿರ ಕರೆ ಸ್ವೀಕರಿಸಲಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಪತ್ತೆ ಕಾರ್ಯ ಪೂರ್ಣ: ದೆಹಲಿಯ ತಬ್ಲೀಗಿ ಜಮಾತ್ ಮತ್ತು ನಂಜನಗೂಡಿನ ಜೂಬಿಲಿಯಂಟ್ ಕಾರ್ಖಾನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಪತ್ತೆ ಕಾರ್ಯ ಪೂರ್ಣವಾಗಿದ್ದು, ಪಾಸಿಟಿವ್ ಇರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕ್ವಾರಂಟೈನ್‍ನಲ್ಲಿ ಇರುವವರ ಮೇಲೆ ನಿಗಾ ಇಡಲಾಗಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT