ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್‌ ಭರವಸೆ: ಅನರ್ಹರಿಗೆ ‘ಸಂತೋಷ’

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೇಟಿ ಮಾಡಿ ಚರ್ಚೆ
Last Updated 8 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ನೀಡುವುದಾಗಿಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌.ಸಂತೋಷ್ ಅವರು ಭರವಸೆ ನೀಡಿರುವುದರಿಂದ ಅನರ್ಹ ಶಾಸಕರು ನಿರಾಳರಾಗಿದ್ದಾರೆ.

ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಬೆಂಗಳೂರಿನ ಅನರ್ಹ ಶಾಸಕರಾದ ಎಂ.ಟಿ.ಬಿ.ನಾಗರಾಜ್, ಬೈರತಿ ಬಸವರಾಜ್, ಎಸ್‌.ಟಿ.ಸೋಮಶೇಖರ್‌ ಅವರು ಸಂತೋಷ್ ಅವರನ್ನು ಭಾನುವಾರ ಭೇಟಿ ಮಾಡಿದ್ದರು.

‘ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ನೀಡುತ್ತೇವೆ. ಈ ಬಗ್ಗೆ ಸಂದೇಹ ಬೇಡ’ ಎಂಬುದಾಗಿ ಭರವಸೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.

ಇವರು ‘ಮೈತ್ರಿ’ ಸರ್ಕಾರ ಪತನದ ಮೊದಲಾಗಲಿ ಅಥವಾ ಬಳಿಕವಾಗಲಿ ಸಂತೋಷ್‌ ಅವರನ್ನು ಭೇಟಿಯಾಗಿರಲಿಲ್ಲ.ಉಪಚುನಾವಣೆ ಟಿಕೆಟ್‌ ನೀಡಿಕೆಗೆ ಸಂಬಂಧಿಸಿದಂತೆ ಒಬ್ಬೊಬ್ಬ ನಾಯಕರು ಒಂದೊಂದು ರೀತಿ ಹೇಳಿಕೆ ನೀಡುತ್ತಿರುವುದರಿಂದ, ತಮಗೆ ಟಿಕೆಟ್‌ ಸಿಗುತ್ತದೆಯೊ ಇಲ್ಲವೊ ಎಂಬುದನ್ನು ಖಾತರಿಪಡಿಸಿಕೊಳ್ಳಲು ಈ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಾಕಷ್ಟು ಬಾರಿ ಟಿಕೆಟ್‌ ಭರವಸೆ ನೀಡಿದ್ದರೂ, ಬಿಜೆಪಿಯ ಕೆಲವು ನಾಯಕರ ಗೊಂದಲಕಾರಿ ಹೇಳಿಕೆಗಳಿಂದ, ಟಿಕೆಟ್‌ ಸಿಗುವ ಬಗ್ಗೆಅನರ್ಹ ಶಾಸಕರಲ್ಲಿ ಸಂದೇಹ ಮೂಡಿತ್ತು. ವರಿಷ್ಠರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳುವ ಮತ್ತು ಟಿಕೆಟ್‌ ಬಗ್ಗೆ ಇದ್ದ ಸಂದೇಹ ಬಗೆಹರಿಸಿಕೊಳ್ಳಲು ಈ ಭೇಟಿಯ ವ್ಯವಸ್ಥೆ ಆಗಿತ್ತು ಎನ್ನಲಾಗಿದೆ. ರಮೇಶ್‌ ಜಾರಕಿಹೊಳಿ ದೂರವಾಣಿ ಮೂಲಕ ಸಂತೋಷ್‌ ಜತೆ ಮಾತುಕತೆ ನಡೆಸಿದರು.

‘ಅನರ್ಹ ಶಾಸಕರು ಮತ್ತು ಸಂತೋಷ್‌ ಮಧ್ಯೆ ಭೇಟಿ ನಡೆದಿಲ್ಲ. ಪಕ್ಷದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಅವರನ್ನು ಮಾತ್ರ ಭೇಟಿ ಮಾಡಿದ್ದರು. ಆಗ ಸಹಜವಾಗಿ ಟಿಕೆಟ್‌ ಬಗ್ಗೆ ಮಾತುಕತೆ ಆಗಿದೆ. ಇದೇ ಸಂದರ್ಭದಲ್ಲಿ ಅನರ್ಹ ಶಾಸಕರು, ಈ ಹಿಂದೆ ಚುನಾವಣೆ ವೇಳೆಯಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ವಿರುದ್ಧ ನೀಡಿದ್ದ ದೂರುಗಳನ್ನು ಹಿಂದಕ್ಕೆ ಪಡೆಯುವಂತೆಯೂ ಮನವಿ ಮಾಡಿದರು’ ಎಂದುಬಿಜೆಪಿಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸುಪ್ರೀಂಕೋರ್ಟ್‌ನಲ್ಲಿ ಶಾಸಕ ಸ್ಥಾನದ ಅನರ್ಹತೆಯ ಪ್ರಶ್ನೆ ಇತ್ಯರ್ಥವಾಗದೇ ಈ 17 ಮಂದಿ ಬಿಜೆಪಿ ಸೇರಿಕೊಳ್ಳಲು ಆಗುವುದಿಲ್ಲ. ಡಿಸೆಂಬರ್‌ನಲ್ಲಿ ಉಪಚುನಾವಣೆಗೆ ಮೊದಲೇ ತೀರ್ಪು ಹೊರ ಬರುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಅನರ್ಹ ಶಾಸಕರು ಕಾಯಲೇಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT