ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಕರ ಪ್ರವಾಹಕ್ಕೆ ತತ್ತರಿಸಿದ ನಾಡು: ಕೊಚ್ಚಿಹೋದ ಸೂರು, ನಿಲ್ಲದ ಕಣ್ಣೀರು

ಪರಿಹಾರ, ಪುನರ್ವಸತಿಗಾಗಿ ಕಾಯುತ್ತಿರುವವರ ಪಾಡು
Last Updated 18 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ
ADVERTISEMENT
""

ಹಿಂದೆಂದೂ ಕಂಡರಿಯದ ರೀತಿಯ ಮಳೆ, ಪ್ರವಾಹದ ಸುಳಿಗೆ ಕಳೆದ ಮುಂಗಾರು ಋತು ವಿನಲ್ಲಿ ರಾಜ್ಯದ ಬಹುಭಾಗ ಸಿಲು ಕಿತ್ತು. ಸಾವಿರಾರು ಮನೆಗಳು ಪ್ರವಾಹದಲ್ಲಿ ಕೊಚ್ಚಿ ಹೋದವು. ಮಳೆಯ ಆರ್ಭಟಕ್ಕೆ ಕುಸಿದವು. ಬದುಕಿನ ಆಧಾರವಾಗಿದ್ದ ಬೆಳೆ, ಜಾನುವಾರು ನೀರು ಪಾಲಾದವು. ಜನ ಒಮ್ಮಿಂದೊಮ್ಮೆಲೆ ನಿರ್ಗತಿ ಕರಾದರು. ಅದೇ ಸಂದರ್ಭದಲ್ಲಿ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆಯೂ ಮನೆ ಮಾಡಿತ್ತು. ಹೊಸದಾಗಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಸರ್ಕಾರ ‘ಯುದ್ಧೋಪಾದಿ’ಯಲ್ಲಿ ಪರಿಹಾರ ನೀಡುವುದಾಗಿ ಘೋಷಿಸಿತ್ತು. ಅದಾಗಿ, ಈಗ ಸುಮಾರು ಆರು ತಿಂಗಳಾಗಿವೆ. ಕೇಂದ್ರ ಸರ್ಕಾರದಿಂದ ಪ್ರವಾಹ ಪರಿಹಾರಕ್ಕೆ ನಿರೀಕ್ಷಿತ ಮೊತ್ತದ ನೆರವು ಸಿಕ್ಕಿಲ್ಲ ಎಂಬ ಆರೋಪವೂ ಇದೆ. ರಾಜ್ಯ ಸರ್ಕಾರವೂ ಅಷ್ಟೊಂದು ಮುತುವರ್ಜಿ ವಹಿಸಿಲ್ಲ ಎಂದೂ ವಿರೋಧ ಪಕ್ಷಗಳು ಆಪಾದಿಸಿವೆ. ನೆರೆ ಸಂತ್ರಸ್ತರ ಬದುಕಿನ ಬವಣೆಯತ್ತ ಕನ್ನಡಿ ಹಿಡಿಯುವ ಪ್ರಯತ್ನ ಇಲ್ಲಿದೆ...

ಎಲ್ಲೋ ಜಮೀನು, ಇನ್ನೆಲ್ಲೋ ಮನೆ
ಚಿಕ್ಕಮಗಳೂರು: ‘ಮಹಾಮಳೆಗೆ ಮನೆ, ತೋಟ ಕೊಚ್ಚಿ ಹೋದವು. ಬಣಕಲ್‌ನಲ್ಲಿ ಬಾಡಿಗೆ ಮನೆಯಲ್ಲಿ ಇದ್ದೇವೆ. ದುಡಿಮೆಯದಾರಿ ಮಕಾಡೆಯಾಗಿದೆ. ಅಪ್ಪನಿಗೆ ಪಾರ್ಶ್ವವಾಯು, ಸರ್ಕಾರದ ನೆರವು ಸಿಕ್ಕಿಲ್ಲ. ಬದುಕುವ ಆಸೆಯೇ ಕಮರುತ್ತಿದೆ’ ಎನ್ನುತ್ತಾರೆ ಮೂಡಿಗೆರೆ ತಾಲ್ಲೂಕಿನ ಮಲೆಮನೆಯ ಸಂತ್ರಸ್ತ ಎಂ.ಎನ್‌. ಅಶ್ವತ್ಥ್‌.

ಇಲ್ಲಿನ ಗ್ರಾಮಗಳಲ್ಲಿ ಮನೆ ಕಳೆದುಕೊಂಡವರಿಗೆ ನಿವೇಶನಕ್ಕಾಗಿ ಮಾವಿನಕೆರೆ ಬಳಿ 10 ಎಕರೆ ಜಾಗ ಗುರುತಿಸಲಾಗಿದೆ. ಆದರೆ ಇದು ತಮ್ಮ ಜಮೀನಿಗಿಂತ 15 ಕಿ.ಮೀ ದೂರದಲ್ಲಿದೆ ಎಂಬುದು ಸಂತ್ರಸ್ತರ ದೂರು.

ಇನ್ನೂ ಕರಗದ ನೆರೆ ಕಾರ್ಮೋಡ
ಮಂಗಳೂರು: ಆಗಸ್ಟ್‌ನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಹಾನಿಗೆ ಒಳಗಾಗಿದ್ದು ಬೆಳ್ತಂಗಡಿ ತಾಲ್ಲೂಕು. ಭೀಕರ ಭೂಕುಸಿತ ಹಾಗೂ ಪ್ರವಾಹದಿಂದ ತಾಲ್ಲೂಕಿನ 17 ಗ್ರಾಮಗಳಲ್ಲಿನ 253 ಮನೆಗಳು ಸಂಪೂರ್ಣ ಹಾನಿಗೊಂಡಿವೆ. 31 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಈಗಾಗಲೇ 257 ಫಲಾನುಭವಿಗಳ ಪುನರ್ವಸತಿಯ ಕಾಮಗಾರಿಗೆ ಆದೇಶ ಪತ್ರವನ್ನು ವಿತರಿಸಲಾಗಿದೆ.

ಬೆಳ್ತಂಗಡಿ ತಾಲ್ಲೂಕಿನ ಕೆಲವೆಡೆ ಮನೆಗಳ ನಿರ್ಮಾಣ ಕಾರ್ಯ ಮುಗಿದಿದ್ದರೂ, ಬಾಕಿ ಅನುದಾನ ಮಾತ್ರ ಇನ್ನೂ ಬಿಡುಗಡೆಯಾಗಿಲ್ಲ. ಇದುವರೆಗೆ ₹1 ಲಕ್ಷ ಮಾತ್ರ ಬಂದಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರೇ ದೂರುತ್ತಿದ್ದಾರೆ.

ಧರ್ಮಾ ತೀರದ ಜನರ ಸಂಕಷ್ಟ
ಹಾವೇರಿ: ಧರ್ಮಾ ನದಿಯ ತೀರದಲ್ಲಿರುವ ಹಾನಗಲ್‌ ತಾಲ್ಲೂಕು ಅಲ್ಲಾಪುರದಲ್ಲಿ ನೆರೆ ಇಳಿದು 6 ತಿಂಗಳು ಕಳೆದಿದ್ದರೂ ಸಂತ್ರಸ್ತರ ಕಣ್ಣೀರು ನಿಂತಿಲ್ಲ.

2019ರ ಆಗಸ್ಟ್‌ನಲ್ಲಿ ಧರ್ಮಾ ನದಿಯ ಅಬ್ಬರಕ್ಕೆ ಈ ಗ್ರಾಮದ 21 ಮನೆಗಳು ನೆಲಸಮಗೊಂಡಿವೆ. 13 ಮನೆಗಳು ಶಿಥಿಲಾವಸ್ಥೆ ತಲುಪಿವೆ. ಆದರೆ, ಒಂದೇ ಒಂದು ಮನೆಯ ಪುನರ್‌ ನಿರ್ಮಾಣ ಕಾರ್ಯ ಆರಂಭವಾಗಿಲ್ಲ.

ಮೊದಲು ತಮ್ಮ ಮನೆ ಇದ್ದ ಜಾಗದಲ್ಲೇ ಹೊಸ ಮನೆ ಕಟ್ಟಿಕೊಳ್ಳಲು ಸಂತ್ರಸ್ತರು ಮುಂದಾಗಿದ್ದಾರೆ. ಆದರೆ, ಇಲ್ಲಿಯೇ ಹೊಸ ಮನೆ ಕಟ್ಟಿದರೆ ಪ್ರವಾಹಕ್ಕೆ ಮತ್ತೆ ತುತ್ತಾಗುವ ಸಾಧ್ಯತೆ ಇದೆ ಎಂಬುದು ಕಂದಾಯ ಅಧಿಕಾರಿಗಳ ಲೆಕ್ಕಾಚಾರ.

ಕೊಚ್ಚಿ ಹೋದ ಗ್ರಾಮ ದಾಖಲೆಯಲ್ಲೇ ಇಲ್ಲ!
ಬಾಗಲಕೋಟೆ: ಬಾದಾಮಿ ತಾಲ್ಲೂಕಿನ ಮುಮ್ಮರಡ್ಡಿಕೊಪ್ಪ ಈ ಬಾರಿಯ ಮಲಪ್ರಭಾ ನದಿ ಹಾಗೂ ಬೆಣ್ಣೆಹಳ್ಳದ ಪ್ರವಾಹದಿಂದ ತೀವ್ರ ಬಾಧಿತವಾಗಿದೆ. ವಿಶೇಷವೆಂದರೆ ಸರ್ಕಾರಿ ದಾಖಲೆಯಲ್ಲಿ ಈ ಗ್ರಾಮ ಅಸ್ತಿತ್ವದಲ್ಲಿಯೇ ಇಲ್ಲ. ಹೀಗಾಗಿಗ್ರಾಮಸ್ಥರು ಅತಂತ್ರಗೊಂಡಿದ್ದಾರೆ. ₹10 ಸಾವಿರ ತುರ್ತು ನೆರವು ಬಿಟ್ಟರೆ ಬೇರೆ ಯಾವುದೇ ಪರಿಹಾರಅವರಿಗೆ ಸಿಕ್ಕಿಲ್ಲ.

2008ರಲ್ಲಿ ಊರು ಪ್ರವಾಹದ ಅಬ್ಬರಕ್ಕೆ ಸಿಲುಕಿದಾಗ ಗ್ರಾಮಸ್ಥರನ್ನು ಅಲ್ಲಿಂದಮೂರು ಕಿ.ಮೀ ದೂರದ ಆಸರೆ ಕಾಲೊನಿಗೆಸ್ಥಳಾಂತರಿಸಲಾಗಿತ್ತು. ಹೀಗಾಗಿ ಅವರು ಪರಿಹಾರಕ್ಕೆ ಅರ್ಹರಲ್ಲ ಎಂಬುದು ಅಧಿಕಾರಿಗಳ ವಿವರಣೆ.

ದೇಗುಲ ವಾಸ, ಬಯಲಲ್ಲೇ ಸ್ನಾನ
ಬೆಳಗಾವಿ: ಗುಡಿಯಲ್ಲೇ ವಾಸ. ಅಲ್ಲೇ ಅಡುಗೆ, ಊಟ, ನಿದ್ರೆ. ಕೊರೆಯುವ ಚಳಿಯಲ್ಲಿ ಬಯಲಲ್ಲೇ ಸ್ನಾನ ಮಾಡಬೇಕಾದ ದುಃಸ್ಥಿತಿ. ಶೌಚಕ್ರಿಯೆಗಾಗಿ ಕತ್ತಲಾಗುವುದನ್ನೇ ಕಾಯುತ್ತಾ, ನಿತ್ಯವೂ ಮುಜುಗರ ಅನುಭವಿಸುವ ಮಹಿಳೆಯರು. ಅಸಹಾಯಕ ಪುರುಷರು. – ಕಳೆದ ವರ್ಷ ಮಲಪ್ರಭಾ ನದಿ ಪ್ರವಾಹಕ್ಕೆ ತುತ್ತಾದ ರಾಮದುರ್ಗ ತಾಲ್ಲೂಕಿನ ಹಲಗತ್ತಿಯ ನಾಲ್ಕು ಕುಟುಂಬಗಳ ಶೋಚನೀಯ ಸ್ಥಿತಿ.

ಆರು ತಿಂಗಳುಗಳಾದರೂ, ಸರ್ಕಾರದಿಂದ ಪರಿಹಾರ ಸಿಗದಿರುವುದರಿಂದ ಇವರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಬದುಕಿಗೆ ತಗಡಿನ ಶೆಡ್ಡೇ ಗತಿ
ಗದಗ: ಮಲಪ್ರಭಾ ಮತ್ತು ಬೆಣ್ಣೆಹಳ್ಳದ ಪ್ರವಾಹದಿಂದಾಗಿ ಜಿಲ್ಲೆಯ ರೋಣ ಮತ್ತು ನರಗುಂದ ತಾಲ್ಲೂಕಿನ 30ಕ್ಕೂ ಹೆಚ್ಚು ಗ್ರಾಮಗಳ 45 ಸಾವಿರಕ್ಕೂ ಹೆಚ್ಚು ಜನರ ಬದುಕು ಬೀದಿಗೆ ಬಿದ್ದಿತ್ತು.

ಮನೆ ಸಂಪೂರ್ಣ ಹಾನಿಗೊಳಗಾದ ನರಗುಂದ ತಾಲ್ಲೂಕಿನ ಲಕಮಾಪುರ, ವಾಸನ ಮತ್ತು ಕೊಣ್ಣೂರು ಗ್ರಾಮಗಳ ಸಂತ್ರಸ್ತರಿಗೆ ಜಿಲ್ಲಾಡಳಿತ ತಾತ್ಕಾಲಿಕ ತಗಡಿನ ಶೆಡ್‌ಗಳನ್ನು ನಿರ್ಮಿಸಿಕೊಟ್ಟಿದೆ. 163 ಕುಟುಂಬಗಳು 6 ತಿಂಗಳಿನಿಂದ ತಗಡಿನ ಶೆಡ್‌ಗಳಲ್ಲೇ ವಾಸ ಇವೆ.

ನದಿ ದಾಟಲು ಈಗಲೂ ದೋಣಿಯೇ ದಾರಿ
ಕಾರವಾರ: ಅಂಕೋಲಾ ತಾಲ್ಲೂಕಿನ ಡೊಂಗ್ರಿ ಗ್ರಾಮಕ್ಕೆ ಹೊರಜಗತ್ತನ್ನು ಸಂಪರ್ಕಿಸಲು ಆಸರೆಯಾಗಿದ್ದ ತೂಗುಸೇತುವೆ ಗಂಗಾವಳಿ ನದಿಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಯಿತು. ಅದಾಗಿ ಈಗ ಆರು ತಿಂಗಳಾಗಿದೆ. ಊರಿನ ಜನರು ದೋಣಿಯಲ್ಲಿ ಹುಟ್ಟು ಹಾಕಿಕೊಂಡೇ ನದಿಯನ್ನು ದಾಟಬೇಕಾಗಿದೆ. ಸೇತುವೆ ನಿರ್ಮಾಣಕ್ಕೆ ₹ 17 ಕೋಟಿ ಮಂಜೂರಾಗಿದೆ ಎಂದು ಶಾಸಕಿ ರೂಪಾಲಿ ನಾಯ್ಕ ಈಚೆಗೆ ತಿಳಿಸಿದ್ದರು. ಅದರ ಕಾಮಗಾರಿ ಆರಂಭವಾಗಿಲ್ಲ.

ಪ್ರವಾಹದಿಂದ ಮನೆ ಹಾನಿಯಾದ ಫಲಾನುಭವಿಗೆ ಒಮ್ಮೆ ಪರಿಹಾರ ದೊರೆತಿದ್ದರೆ ಮತ್ತೆ ಪರಿಹಾರ ನೀಡಲಾ ಗದೆಂಬ ನಿಯಮ ಶೇ 10ರಷ್ಟು ಕುಟುಂಬಗಳನ್ನು ಅತಂತ್ರ ಮಾಡಿದೆ. ದಾಖಲಾತಿ ಸಮಸ್ಯೆಯಿಂದಾಗಿ ಹಲವರು ಅಲ್ಪಸ್ವಲ್ಪ ಪರಿಹಾರದಿಂದಲೂ ವಂಚಿತರಾಗಿದ್ದಾರೆ.

‘ಎರಡನೇ ಮಳೆಗೆ ಮನೆ ಪೂರ್ಣ ಕುಸಿದಿದೆ. ಆದರೆ, ಮೊದಲು ಸಿಕ್ಕಿರುವ ₹ 50ಸಾವಿರ ಪರಿಹಾರದಲ್ಲಿ ಮನೆ ಕಟ್ಟಲು ಸಾಧ್ಯವೇ’ ಎಂದು ಶಿಡ್ಲಗುಂಡಿ ನಿವಾಸಿ ಸುಬ್ರಾಯ ಭಟ್ಟ ಪ್ರಶ್ನಿಸುತ್ತಾರೆ.

ನೆಲೆ ನಿಲ್ಲಲು ನಿಲ್ಲದ ಹೋರಾಟ
ಮಡಿಕೇರಿ: ಆರು ತಿಂಗಳಾದರೂ ಕೊಡಗಿನಲ್ಲಿ ನೆರೆ ಸಂತ್ರಸ್ತರಿಗೆ ಸೂರು ಸಿಕ್ಕಿಲ್ಲ. ನಿವೇಶನ ಹಂಚಿಕೆ ಪ್ರಕ್ರಿಯೆಯೂ ಪೂರ್ಣಗೊಂಡಿಲ್ಲ. ಕೆಲ ಕುಟುಂಬಗಳಿಗೆ ಮಾತ್ರ ಬಾಡಿಗೆ ಹಣ ಕೈಸೇರಿದ್ದು, ಉಳಿದವರ ನೋವು ಅರಣ್ಯರೋದನವಾಗಿದೆ.

ಮತ್ತೊಂದು ಮಳೆಗಾಲ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಅವರ ಆತಂಕ, ಆಕ್ರೋಶವಾಗಿ ಪರಿವರ್ತನೆಯಾಗಿದೆ. ಅದಕ್ಕಾಗಿಯೇ ಗುಹ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನದಿಯಂಚಿನ ಸಂತ್ರಸ್ತರು ಇದೀಗ ಪ್ರತಿಭಟನೆಯ ಹಾದಿ ತುಳಿದಿದ್ದಾರೆ.

2018ರ ಪ್ರಾಕೃತಿಕ ವಿಕೋಪದ ಸಂತ್ರಸ್ತರಿಗೆ ನಿರ್ಮಿಸಲಾಗುತ್ತಿರುವ 800 ಮನೆಗಳ ಪೈಕಿ, ಇದುವರೆಗೆ 33 ಮನೆಗಳು ಮಾತ್ರ ಹಂಚಿಕೆಯಾಗಿವೆ!

ಚಿಕ್ಕಮಗಳೂರು ಜಿಲ್ಲೆಯ ಕಳಸ ಭಾಗದ ಕಳಕೋಡಿನಲ್ಲಿ ಅತಿವೃಷ್ಟಿಗೆ ನೆಲಸಮವಾದ ಮನೆ. (ಸಂಗ್ರಹ ಚಿತ್ರ)

ಪರಿಹಾರ ವಿತರಣೆ

* ಮನೆ ಸಂಪೂರ್ಣ ಹಾನಿಗೊಂಡಿದ್ದರೆ ಪ್ರತಿ ಮನೆಗೆ ₹5 ಲಕ್ಷ ಪರಿಹಾರ ಘೋಷಣೆ. ಮೊದಲ ಕಂತಾಗಿ ₹1 ಲಕ್ಷ ಬಿಡುಗಡೆ

* ಭಾಗಶಃ ಹಾನಿಗೆ ಒಳಗಾಗಿದ್ದರೆ ದುರಸ್ತಿಗೆ ₹3 ಲಕ್ಷ ಪರಿಹಾರ

* ಅಲ್ಪ ಸ್ವಲ್ಪ ಹಾನಿಯಾಗಿದ್ದರೆ ₹50 ಸಾವಿರ ಪರಿಹಾರ

* ಮನೆಗಳಿಗೆ ನೀರು ನುಗ್ಗಿ ಹಾಳಾದ ಗೃಹೋಪಯೋಗಿ ವಸ್ತುಗಳನ್ನು ಕೊಳ್ಳಲು ಪ್ರತಿ ಕುಟುಂಬಕ್ಕೆ ₹10 ಸಾವಿರ ಪರಿಹಾರ

* 2.7 ಲಕ್ಷ ಕುಟುಂಬಗಳಿಗೆ ₹2.7 ಕೋಟಿ ಪರಿಹಾರ ವಿತರಣೆ

ವರದಿ: ಬಿ.ಜೆ.ಧನ್ಯಪ್ರಸಾದ್‌, ಚಿದಂಬರಪ್ರಸಾದ, ಸಿದ್ದು ಆರ್‌.ಜಿ.ಹಳ್ಳಿ, ಸದಾಶಿವ ಎಂ.ಎಸ್‌./ ಸಂಧ್ಯಾ ಹೆಗಡೆ, ಕೆ.ಜಿ.ಮರಿಯಪ್ಪ, ವೆಂಕಟೇಶ ಜಿ.ಎಚ್‌., ಜೋಮನ್‌ ವರ್ಗೀಸ್‌, ಆದಿತ್ಯ ಕೆ.ಎ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT