ಬುಧವಾರ, ನವೆಂಬರ್ 13, 2019
22 °C

ರೋಗ ಏನೆಂದೇ ಹೇಳಿಕೊಂಡಿಲ್ಲ: ಅತೃಪ್ತರ ವಿರುದ್ಧ ಕುಮಾರಸ್ವಾಮಿ ವ್ಯಂಗ್ಯ

Published:
Updated:
Prajavani

ಬೆಂಗಳೂರು: ‘ನಮ್ಮದೇ ಪಕ್ಷದ ಶಾಸಕರು ನನ್ನ ವಿರುದ್ಧ ಸಿಟ್ಟು ಮಾಡಿಕೊಂಡಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ. ಚಿಕಿತ್ಸೆ ನೀಡುವುದಕ್ಕೆ ರೋಗ ಏನು ಅಂತ ಬಂದು ಹೇಳಿಕೊಂಡರೆ ತಾನೇ ಗೊತ್ತಾಗುವುದು?’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌. ಡಿ. ಕುಮಾರಸ್ವಾಮಿ ಕಟಕಿಯಾಡಿದ್ದಾರೆ.

ಬೆಂಗಳೂರು ಪ್ರೆಸ್‌ಕ್ಲಬ್‌ ಶನಿವಾರ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿ ಅವರು, ‘ಕೆಲವರು ನನ್ನ ಪಕ್ಷ ಬಿಟ್ಟು ಹೋಗ್ತಾರೆ ಅಂತೆಲ್ಲಾ ಹೇಳುತ್ತಾರೆ. ಆದರೆ ಹೋಗುವವರನ್ನು ಹಿಡಿದಿಟ್ಟುಕೊಳ್ಳಲು ಸಾದ್ಯವೇ? ಎಲ್ಲ ಪಕ್ಷದಲ್ಲೂ ಒಂದಷ್ಟು ಅಸಮಾಧಾನ ಇರುವುದು ನಿಜ, ನಮ್ಮಲ್ಲೂ ಇರಬಹುದು. ಆದರೆ ನಿಯಂತ್ರಣದಲ್ಲಿದೆ, ಅದನ್ನು ನಾವು ಬಗೆಹರಿಸುತ್ತೇವೆ. ಜೆಡಿಎಸ್‌ನ ಯಾವುದೇ ಶಾಸಕರು ಪಕ್ಷ ಬಿಟ್ಟು ಹೋಗುತ್ತಾರೆ ಎನ್ನುವ ಕಾರಣಕ್ಕೆ ನಾನು ಬಿಜೆಪಿ ಪರ ಹೇಳಿಕೆ ನೀಡುತ್ತಿಲ್ಲ’ ಎಂದು ಹೇಳಿದರು.

‘ಭಿನ್ನಮತ ಶಮನಕ್ಕಾಗಿ ಶಾಸಕರನ್ನು ಮಲೇಷ್ಯಾಗೆ ಕರೆದುಕೊಂಡು ಹೋಗುವುದಿಲ್ಲ. ಬದಲಿಗೆ ನಾನು ನನ್ನ ಮಗನ ಜತೆ ಮುಂದಿನ ಸಿನಿಮಾ ಯೋಜನೆ ನಿಮಿತ್ತ ನಾಡಿದ್ದು ಲಂಡನ್‌ಗೆ ಹೋಗುತ್ತಿದ್ದೇನೆ. ಹೀಗಾಗಿ ಇದೇ 6ರಂದು ಶಾಸಕರ ಜತೆಗೆ ದೇವೇಗೌಡರು ನಡೆಸುವ ಸಭೆಯಲ್ಲಿ ನಾನು ಇರುವುದಿಲ್ಲ, 8ಕ್ಕೆ ನಾನು ಹಿಂದಿರುಗಲಿದ್ದೇನೆ’ ಎಂದರು.

ಬೆಂಬಲ: ‘ನಮ್ಮ ರೈತರಿಗೆ ಬರುವ ಹಣ ಬಂದುಬಿಟ್ಟರೆ, ಯೋಜನೆಗಳು ಸಮರ್ಪಕವಾಗಿ ಜಾರಿಯಾದರೆ ನಾನು ಯಡಿಯೂರಪ್ಪ ಅವರಿಗೂ ಬೆಂಬಲ ಕೊಡುತ್ತೇನೆ, ಸಿದ್ದರಾಮಯ್ಯ ಸರ್ಕಾರ ಬಂದರೆ ಅವರಿಗೂ ಬೆಂಬಲ ಕೊಡುತ್ತೇನೆ’ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

‘ಟೆಲಿಫೋನ್‌ ಟ್ಯಾಪಿಂಗ್‌, ಐಎಂಎ ಹಗರಣ, ಐಟಿ ದಾಳಿಗೆ ಹೆದರಿ ಬಿಜೆಪಿ ಸರ್ಕಾರದ ಜತೆಗೆ ನಾನು ಮೃದು ಧೋರಣೆ ತಳೆದಿಲ್ಲ. ರಾಜಕಾರಣ ಮಾಡಿ ಸರ್ಕಾರ ಅಸ್ಥಿರಗೊಳಿಸಿದರೆ, ರಾಷ್ಟ್ರಪತಿ ಆಡಳಿತ ಜಾರಿಗೆ ಬಂದರೆ ನೆರೆ ಪೀಡಿತರ ಕತೆ ಏನು ಎಂಬುದಷ್ಟೇ ನನ್ನ ಆತಂಕ’ ಎಂದರು.

ಏಕಾಂಗಿ ಸ್ಪರ್ಧೆ: ‘ಜನರಿಗೆ ಒಳ್ಳೆಯದು ಮಾಡುವ ಯಾವೊಂದು ಕೆಲಸವನ್ನೂ ಯಡಿಯೂರಪ್ಪ ಸರ್ಕಾರ ಮಾಡಿಲ್ಲ. ಹೀಗಾಗಿ ಉಪಚುನಾವಣೆ ಇರಬಹುದು, ಮಧ್ಯಂತರ ಚುನಾವಣೆ ಇರಬಹುದು, ಪಕ್ಷ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದೆ ಏಕಾಂಗಿಯಾಗಿಯೇ ಸ್ಪರ್ಧಿಸಲಿದೆ. ಆದರೆ ಮುಂದೆ ಸಹ ಅತಂತ್ರ ಸ್ಥಿತಿಯೇ ಇರಲಿದೆ, ಅದಕ್ಕಾಗಿಯೇ ಮಧ್ಯಂತರ ಚುನಾವಣೆ ಬೇಕಾ ಎಂದು ನಾನು ಕೇಳುತ್ತಿರುವುದು’ ಎಂದರು.

ಅನುದಾನ ಹೆಚ್ಚಿಸಿಕೊಂಡಿದ್ದೇ 100 ದಿನದ ಸಾಧನೆ: ‘ಶಿಕಾರಿಪುರ ಸುತ್ತಮುತ್ತ ಕೆರೆ ತುಂಬಿಸಲು ನಾನು ಸಿ.ಎಂ ಆಗಿದ್ದಾಗ ₹ 450 ಕೋಟಿ ನೀಡಿದ್ದೆ. ಯಡಿಯೂರಪ್ಪ ಸಿ.ಎಂ ಆಗುತ್ತಿದ್ದಂತೆ ಇದನ್ನು ₹ 850 ಕೋಟಿಗೆ ಏರಿಕೆ ಮಾಡಿಕೊಂಡರು.‌ ಇದೇ ಬಿಜೆಪಿ ಸರ್ಕಾರದ 100 ದಿನದ ಸಾಧನೆ. ಇಷ್ಟು ದಿನಗಳಲ್ಲಿ ಯಾವ ಇಲಾಖೆಗೆ ಎಷ್ಟು ಹಣ ನೀಡಿದ್ದೀರಿ ಎಂಬ ಲೆಕ್ಕ ಕೊಡಲಿ ಎಂದರು.

‘ಅಪ್ಪನ ಮಾತು ಮೀರಿ ಹೋಗಿಲ್ಲ’
‘ಅಪ್ಪನ ಮಾತು ಕೇಳದ ಮಕ್ಕಳು’ ಎಂಬ ಮಾಧ್ಯಮ ವರದಿ ನೋಡಿದ್ದೇನೆ. ಆದರೆ ಹಾಗೇನೂ ಇಲ್ಲ. 2006ರಲ್ಲಿ ಒಮ್ಮೆ ಅಪ್ಪನ ಮಾತು ಕೇಳದೆ ಹೋದುದು ಬಿಟ್ಟರೆ ಇದುವರೆಗೂ ಅಪ್ಪನ ಮಾತನ್ನು ಮೀರಿ ಹೋಗಿಲ್ಲ. ಹೀಗಾಗಿ ಅವರಿಗೆ ನೋವು ಕೊಡುವ ಪ್ರಶ್ನೆಯೇ ಇಲ್ಲ’ ಎಂದರು.

‘20–20 ಸರ್ಕಾರದಲ್ಲಿ ನಾನು ಮಾತಿಗೆ ಬದ್ಧನಾಗಿ ಯಡಿಯೂರಪ್ಪ ಅವರಿಗೆ ಅಧಿಕಾರ ಬಿಟ್ಟುಕೊಟ್ಟಿದ್ದೆ. ಆದರೆ ಕೇಂದ್ರದ ಬಿಜೆಪಿ ನಾಯಕರೇ ಷರತ್ತು ಮುಂದಿಟ್ಟರು. ಅದರಿಂದಾಗಿಯೇ ಸರ್ಕಾರ ಪತನವಾಯಿತು. 2009ರಲ್ಲಿ ಸೋನಿಯಾ ಗಾಂಧಿ ಸೀಟು ಹಂಚಿಕೆ ಮಾಡಲು ಬಯಸಿದ್ದರು, ಆದರೆ ತೃತೀಯ ರಂಗದೊಂದಿಗೆ ಇರಬೇಕು ಎಂಬ ತಂದೆಯ ಸೂಚನೆ ಪಾಲಿಸಿದೆ, 2014ರಲ್ಲಿ ಬಿಜೆಪಿಯವರು 10 ಸೀಟು ಬಿಟ್ಟುಕೊಡಲು ಬಯಸಿದ್ದರು. ಆದರೆ ತಂದೆಯ ಮಾತಿಗೆ ಒಪ್ಪಿ ಆಗಲೂ ಆದನ್ನು ತಿರಸ್ಕರಿಸಿದೆ’ ಎಂದು ಕುಮಾರಸ್ವಾಮಿ ಹೇಳಿಕೊಂಡರು.

ನೆರೆ ಪರಿಹಾರ: ಸಿದ್ದರಾಮಯ್ಯ ಹೇಳಿಕೆ ಒಪ್ಪದ ಎಚ್‌ಡಿಕೆ 
ನೆರೆ ಸಂತ್ರಸ್ತರಿಗೆ ಪರಿಹಾರ ದೊರೆತೇ ಇಲ್ಲ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಕುಮಾರಸ್ವಾಮಿ ಪರೋಕ್ಷವಾಗಿ ಅಲ್ಲಗಳೆದರು.

‘ನೆರೆ ಪೀಡಿತ ಪ್ರದೇಶಗಳಿಗೆ ನಾನು ಭೇಟಿ ನೀಡಿದ್ದೇನೆ. ಮನೆ ಕಳೆದಕೊಂಡವರಿಗೆ ಈಗಾಗಲೇ ₹ 1 ಲಕ್ಷ ಪಾವತಿ ಆಗಿರುವುದು ನಿಜ. ಪರಿಹಾರ ಕಾರ್ಯವಿಧಾನ ಏನೇನೂ ಸಾಲದು. ಅದೆಷ್ಟೋ ಜನರಿಗೆ ಪರಿಹಾರ ಇನ್ನೂ ತಲುಪಿಲ್ಲ. ಕಂದಾಯ ಸಚಿವರು ಏನು ಮಾಡುತ್ತಿದ್ದಾರೆ ಎಂದೇ ಗೊತ್ತಾಗುತ್ತಿಲ್ಲ. ಸರ್ಕಾರಕ್ಕೆ ಸಮಯವೂ ಬೇಕು. ಕೇವಲ ಟೀಕೆ ಮಾಡುವುದರಿಂದ ಮನರಂಜನೆ ಸಿಗಬಹುದಷ್ಟೇ’ ಎಂದರು.

**
ಮೂರು ತಿಂಗಳಲ್ಲಿ ಈ ಸರ್ಕಾರ ಬರೀ ಜಾಹೀರಾತು ನೀಡಲಷ್ಟೇ ಸೀಮಿತವಾಗಿದೆ. ಅಧಿಕಾರಿಗಳು ಮತ್ತು ಸಿ.ಎಂ ನಡುವೆ ಸಮನ್ವಯ ಇಲ್ಲ.
-ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ‍ಪಕ್ಷದ ನಾಯಕ

ಪ್ರತಿಕ್ರಿಯಿಸಿ (+)