ಮಂಗಳವಾರ, ಏಪ್ರಿಲ್ 7, 2020
19 °C

ಎಚ್‌ಡಿಕೆ ಭೇಟಿಯಾದ ಕತ್ತಿ: ಬಿಜೆಪಿಯಲ್ಲಿ ಭಿನ್ನಸ್ವರ, ಹೆಚ್ಚುತ್ತಿದೆ ಅತೃಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆ‍ಪಿಯಲ್ಲಿ ಆಂತರಿಕ ಅಸಮಾಧಾನ ಬಿರುಸುಗೊಳ್ಳುತ್ತಿದ್ದು, ಉಮೇಶ ಕತ್ತಿ ನೇತೃತ್ವದಲ್ಲಿ ಮೂವರು ಶಾಸಕರು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

‘ಉಮೇಶ ಕತ್ತಿ, ಮುರುಗೇಶ ನಿರಾಣಿ, ಗೂಳಿಹಟ್ಟಿ ಶೇಖರ್ ಅವರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಪಕ್ಷದಲ್ಲಿ ಅನ್ಯಾಯವಾಗುತ್ತಿರುವುದರ ಬಗ್ಗೆ ಚರ್ಚೆ ನಡೆಸಿದ್ದಾರೆ’ ಎಂದು ಜೆಡಿಎಸ್‌ ಮೂಲಗಳು ಹೇಳಿವೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ನಿರಾಣಿ, ‘ನಿಖಿಲ್‌ ಕುಮಾರಸ್ವಾಮಿ ನಿಶ್ಚಿತಾರ್ಥದ ದಿನ ಕೈಕುಲುಕಿದ್ದು ಬಿಟ್ಟರೆ ಕುಮಾರಸ್ವಾಮಿಯನ್ನು ಭೇಟಿ ಮಾಡಿದ್ದು ಸುಳ್ಳು. ರಾಜಕೀಯ ವಿಷಯ ಚರ್ಚಿಸಲು ಅವರನ್ನು ಭೇಟಿ ಮಾಡುವ ಅವಶ್ಯಕತೆ ಇಲ್ಲ. ಯಡಿಯೂರಪ್ಪನವರ ನಾಯಕತ್ವದ ಮೇಲೆ ವಿಶ್ವಾಸವಿದ್ದು, ನನಗೆ ಯಾವ ಅಸಮಾಧಾನವೂ ಇಲ್ಲ’ ಎಂದರು.

ಭಿನ್ನಸ್ವರ ಬಿರುಸು: ಜೆಡಿಎಸ್‌–ಕಾಂಗ್ರೆಸ್‌ನಿಂದ ಬಂದವರಿಗೆ ಸಚಿವ ಸ್ಥಾನ ಕೊಟ್ಟು, ‘ಮೂಲ’ ಬಿಜೆಪಿಯವರನ್ನು ಕಡೆಗಣಿಸಿದ್ದಾರೆ ಎಂಬ ಆಕ್ರೋಶ ಪಕ್ಷದಲ್ಲಿ ಗುಂಪುಗಾರಿಕೆಗೆ ದಾರಿ ಮಾಡಿಕೊಟ್ಟಿದೆ. ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ.

‘ಮೊದಲ ಹಂತದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಒತ್ತಡ ಹೇರುವುದು. ಅದು ಸಾಧ್ಯವಾಗದೇ ಇದ್ದರೆ ಸರ್ಕಾರವನ್ನೇ ಕೆಡಹಲು ತಾವು ಅಂಜುವುದಿಲ್ಲ. ನಿಮ್ಮ ನೆರವು ಬೇಕು’ ಎಂದು ಭಿನ್ನರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಶಾಸಕರು ಮನವಿ ಮಾಡಿದ್ದಾಗಿ ಕುಮಾರಸ್ವಾಮಿ ಆಪ್ತ ಮೂಲಗಳು ಹೇಳಿವೆ.

‘ಸರ್ಕಾರ ಕೆಡಹುವ ವಿಷಯದಲ್ಲಿ ನನ್ನನ್ನು ಎಳೆಯಬೇಡಿ’ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದರು ಎನ್ನಲಾಗಿದೆ.

ಬಣ ರಾಜಕೀಯ ಚುರುಕು
ಬಿಜೆಪಿಯಲ್ಲಿ ಬಣ ರಾಜಕೀಯ ದಿನೇ ದಿನೇ ಹೆಚ್ಚುತ್ತಿದೆ. ವೀರಶೈವ ಪಂಚಮಸಾಲಿ ಮಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸಭೆ ಸೇರಿದ್ದ ಆ ಸಮುದಾಯದ ಶಾಸಕರು ಹೆಚ್ಚಿನ ಪ್ರಾತಿನಿಧ್ಯಕ್ಕಾಗಿ ಹಕ್ಕೊತ್ತಾಯ ಮಂಡಿಸಲು ಮುಂದಾಗಿದ್ದಾರೆ. ಸಭೆಯಲ್ಲಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಮುರುಗೇಶ ನಿರಾಣಿ, ಸಿದ್ದು ಸವದಿ ಮೊದಲಾದವರು ಪಾಲ್ಗೊಂಡಿದ್ದರು. ಸಚಿವ ಸಂಪುಟ ವಿಸ್ತರಣೆ ವೇಳೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು, ಮೋಹನ ಲಿಂಬಿಕಾಯಿ ಅವರನ್ನು ವಿಧಾನಪರಿಷತ್ತಿಗೆ ನೇಮಕ ಮಾಡಬೇಕು ಎಂದು ಬಿಜೆಪಿ ವರಿಷ್ಠರ ಮೇಲೆ ಒತ್ತಡ ಹೇರುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು