ಶುಕ್ರವಾರ, ಫೆಬ್ರವರಿ 26, 2021
31 °C

ಮಳೆ–ಪ್ರವಾಹ Live | ತುಂಗಾ ಜಲಾಶಯದಿಂದ ನೀರು ಬಿಡುಗಡೆ, ಹಂಪಿ ಸ್ಮಾರಕಗಳು ಜಲಾವೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತರ ಕರ್ನಾಟಕದ ಜಿಲ್ಲೆಗಳು, ಕರಾವಳಿ, ಮಲೆನಾಡು, ಕೊಡಗು ಹಾಗೂ ಮೈಸೂರು ಭಾಗದಲ್ಲಿ ಮಳೆ ಭಾನುವಾರವೂ ಮಳೆ ಮುಂದುವರಿದ ಪರಿಣಾಮ ಜನಜೀವನ ದುಸ್ತರವಾಗಿದೆ. ಮಳೆಗೆ ಸಂಬಂಧಿಸಿದ ಕ್ಷಣಕ್ಷಣದ ಅಪ್‌ಡೇಟ್ ಇಲ್ಲಿದೆ. 

04:00– ಹೊಸಪೇಟೆ: ತುಂಗಾ ಜಲಾಶಯದಿಂದ ನದಿಗೆ 3ಲಕ್ಷ‌ ಕ್ಯೂಸೆಕ್ ನೀರು ಬಿಟ್ಟ ಹಿನ್ನೆಲೆಯಲ್ಲಿ ವಿಶ್ವಪರಂಪರೆ ಹಂಪಿಯ ಬಹುತೇಕ ಸ್ಮಾರಕಗಳು ಜಲಾವೃತವಾಗಿವೆ.

ಹಂಪಿಯ ಸಂಚಾರ ಪೊಲೀಸ್ ಠಾಣೆ ಮತ್ತು ವೃತ್ತ ನಿರೀಕ್ಷಕರ ಕಚೇರಿಗಳು ಜಲಾವೃತ್ತವಾಗಿದ್ದು, ಅವುಗಳನ್ನು ಜೈನಮಂಟಪಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗುತ್ತಿದೆ. ಹಂಪಿಯ ಬರುವ ಪ್ರವಾಸಿಗರಿಗೆ ನದಿ ಹಾಗೂ ನೀರಿನತ್ತ ತೆರಳದಂತೆ ಮನವಿ ಮಾಡಲಾಗುತ್ತಿದೆ.

03:30– ಕೊಳ್ಳೇಗಾಲ: ಕಾವೇರಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದಂತೆಯೇ, ತಾಲ್ಲೂಕಿನ ದಾಸನಪುರ, ಮುಳ್ಳೂರು, ಹಳೆಅಣಗಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ನೀರಿನಿಂದ ಆವೃತವಾಗಲು ಆರಂಭಿಸಿದ್ದು, ಗ್ರಾಮಸ್ಥರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ‌ ತೆರಳುತ್ತಿದ್ದಾರೆ.

03:00–  ಉತ್ತರ ಕರ್ನಾಟಕ ಭಾಗದ ಪ್ರವಾಹ ಪೀಡಿತ ಪ್ರದೇಶಗಳನ್ನು ಅವಲೋಕಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಬೆಳಗಾವಿಗೆ ಬಂದಿಳಿದರು. ಇದೇ ವೇಳೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಚಿವರಾದ  ಪ್ರಹ್ಲಾದ ಜೋಶಿ, ಸುರೇಶ ಅಂಗಡಿ ಇದ್ದರು. 

02:36– ಬೆಳಗಾವಿಯಲ್ಲಿ ಮಳೆ ಇಳಿಮುಖ

ಬೆಳಗಾವಿ ಜಿಲ್ಲೆಯಾದ್ಯಂತ ಭಾನುವಾರ ಮಳೆ ಬಿಡುವು ನೀಡಿದೆ. ಬೆಳಗಾವಿ, ಖಾನಾಪುರ, ಚಿಕ್ಕೋಡಿ, ಬೈಲಹೊಂಗಲ ಸೇರಿದಂತೆ ಕಳೆದ ಹಲವು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿದಿದ್ದ ಸ್ಥಳಗಳಲ್ಲಿ ಭಾನುವಾರ ಮಳೆಯಾಗಿಲ್ಲ. 

ಮಲಪ್ರಭಾ ಹಾಗೂ ಘಟಪ್ರಭಾ ಒಳಹರಿವು ಕಡಿಮೆಯಾಗಿದೆ. ಕೃಷ್ಣಾ ಒಳಹರಿವು ಯಥಾಸ್ಥಿತಿಯಲ್ಲಿದೆ. ಮಲಪ್ರಭಾ ಜಲಾಶಯಕ್ಕೆ 25,000 ಕ್ಯುಸೆಕ್‌ ಒಳಹರಿವು ಇದ್ದು, 51,064 ಕ್ಯುಸೆಕ್‌ ಹೊರಗೆ ಬಿಡಲಾಗಿದೆ. ಘಟಪ್ರಭಾ ಜಲಾಶಯಕ್ಕೆ 58,218 ಕ್ಯುಸೆಕ್‌ ಒಳಹರಿವು ಇದ್ದು, 52,320 ಕ್ಯುಸೆಕ್‌ ಹೊರಗೆ ಬಿಡಲಾಗಿದೆ. 

ಮಳೆ ವಿವರ (ಸೆಂ.ಮೀ): ಕಣಕುಂಬಿ– 10.8, ಖಾನಾಪುರ– 5.3, ಬೆಳಗಾವಿ– 2.5

 

02:32– ಮಂತ್ರಾಲಯ ಮಠದಿಂದ ₹10 ಲಕ್ಷ ನೆರವು ಘೋಷಣೆ

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಪ್ರವಾಹ ಪೀಡಿತ ಜನರ ನೆರವಿಗಾಗಿ ₹10 ಲಕ್ಷ ಪರಿಹಾರ ಘೋಷಿಸಿದ್ದಾರೆ. ಬೆಳಗಾವಿ, ಬಾಗಲಕೋಟ ಶಾಖಾಮಠಗಳಿಂದ ಈಗಾಗಲೇ ಆಹಾರಧಾನ್ಯಗಳ ವಿತರಣೆ ಮಾಡಲಾಗುತ್ತಿದೆ. ಚಾತುರ್ಮಾಸ ಪೂರ್ಣಗೊಂಡ ನಂತರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದಾಗಿ ಸ್ವಾಮೀಜಿ ಭಾನುವಾರ ರಾಯಚೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.


ಸುಬುಧೇಂದ್ರ ತೀರ್ಥ ಸ್ವಾಮೀಜಿ

02:28– ಕೊಚ್ಚಿಹೋದ ಅನಾರು ಸೇತುವೆ: ಬೆಳ್ತಂಗಡಿ ತಾಲ್ಲೂಕು ಚಾರ್ಮಾಡಿ ಸಮೀಪದ ಅನಾರು ಮಲೆಕುಡಿಯ ಕಾಲೊನಿಯನ್ನು ಸಂಪರ್ಕಿಸುವ ಅನಾರು ಸೇತುವೆ ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಈ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಬೆಳ್ತಂಗಡಿ ತಾಲ್ಲೂಕಿನ ಅನಾರು ಸೇತುವೆ ಕೊಚ್ಚಿ ಹೋಗಿದೆ.

 


ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸ್ಥಳ ಪರಿಶೀಲನೆ ನಡೆಸಿದರು.

02:25– ಅನಾಹುತ ಪರಿಶೀಲನೆ: ಬೆಳ್ತಂಗಡಿಯ ಕುಕ್ಕಾವು ಪ್ರದೇಶದಲ್ಲಿ ಪ್ರವಾಹದಿಂದ ಆಗಿರುವ ಅನಾಹುತವನ್ನು ವೀಕ್ಷಿಸುತ್ತಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ.


ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪ್ರವಾಹದ ಅನಾಹುತ ವೀಕ್ಷಿಸಿದರು.

02:15– ಹಂಪಿಯಲ್ಲಿ ‍ಪ್ರವಾಸಿಗರ ಪರದಾಟ: ಹಂಪಿಯ ತಳವಾರಘಟ್ಟದಲ್ಲಿ ತುಂಗಭದ್ರಾ ನದಿ ನೀರು ಬಂದಿರುವುದರಿಂದ ಸಂಚಾರ ಕಡಿತಗೊಂಡಿದ್ದು, ಹಂಪಿಗೆ ಬಂದಿದ್ದ ಪ್ರವಾಸಿಗರ ವಾಹನಗಳು ಸಾಲುಗಟ್ಟಿ ನಿಂತಿವೆ. ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.


ಹಂಪಿಯಲ್ಲಿ ಸಾಲುಗಟ್ಟಿ ನಿಂತಿರುವ ವಾಹನಗಳು

02:10– ಸೇತುವೆ ಮಣ್ಣು ಕುಸಿತ: ಕೊಪ್ಪ ತಾಲ್ಲೂಕಿನ ಬಾಳಗಡಿ ಸೇತುವೆಯ ಬಳಿ ರಸ್ತೆ ಬದಿ ಮಣ್ಣು ಕುಸಿದಿದ್ದು, ವಾಹನ ಸವಾರರಲ್ಲಿ ಆತಂಕ ಮೂಡಿದೆ.


ಕೊಪ್ಪ ತಾಲ್ಲೂಕು ಬಾಳಗಡಿ

 


ಕೊಪ್ಪ ತಾಲ್ಲೂಕು ಬಾಳಗಡಿ

02:09– ರಸ್ತೆಗೆ ನೀರು: ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಕಳಸಾಪುರದಲ್ಲಿ (ಜಾರ್ಕಲ್) ಕೆರೆ ಕೋಡಿ ಒಡೆದು ನೀರು ರಸ್ತೆಗೆ ನುಗ್ಗಿ ಅವಾಂತರವಾಗಿದೆ.

01:48– ಸೇತುವೆ ಬಿರುಕು: ಚಿಕ್ಕಮಗಳೂರು ಜಿಲ್ಲೆ ಜಯಪುರ ಕೊಗ್ರೆ ಬಸರೀಕಟ್ಟೆ ಮೂಲಕ ಕಳಸ ಸಂಪರ್ಕ ಕಲ್ಪಿಸುವ ರಸ್ತೆ ಕೊಗ್ರೆ ಬಳಿ ಬಿರುಕು ಬಿಟ್ಟಿದೆ.


ಕೊಗ್ರೆ ಬಳಿ ಸೇತುವೆ ಬಿರುಕುಬಿಟ್ಟಿದೆ

01:11– ಸಂಜೆ ವೇಳೆಗೆ ತುಂಗಭದ್ರಾ ಜಲಾಶಯದಿಂದ 3 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

 

12:55– ಅಪಘಾತ: ಪರಿಹಾರ ಕೇಂದ್ರಕ್ಕೆ ಸಾಮಗ್ರಿ ಕೊಟ್ಟು ಬರುತ್ತಿದ್ದ ಮೂವರ ಸಾವು

12:01– ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಚಾಮರಾಜನಗರ ಜಿಲ್ಲಾಡಳಿತ ಮನವಿ

ಕೊಳ್ಳೇಗಾಲ ತಾಲ್ಲೂಕು ದಾಸನಪುರ ಗ್ರಾಮಕ್ಕೆ‌ ನೀರು ನುಗ್ಗುತ್ತಿದ್ದರೂ ಸುರಕ್ಷಿತ ಸ್ಥಳಗಳಿಗೆ ತೆರಳಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳು ಜನರ ಮನವಲಿಸಲು ಸತತ ಪ್ರಯತ್ನ ನಡೆಸಿದರೂ ಪ್ರಯೋಜನವಾಗುತ್ತಿಲ್ಲ. ಬಲವಂತವಾಗಿ ಮನೆ ಖಾಲಿ ಮಾಡಿಸುತ್ತಿರುವ ದೃಶ್ಯ ಕಂಡು ಬರುತ್ತಿದೆ. ಕಳೆದ ವರ್ಷ ಸರಿಯಾಗಿ ಪರಿಹಾರ ನೀಡಿಲ್ಲ ಎಂದು‌ ಜನರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

11:54– ಹತ್ತು ಹಳ್ಳಿಗಳ ಸ್ಥಳಾಂತರಕ್ಕೆ ಮುಂದಾದ ಜಿಲ್ಲಾಡಳಿತ

ತುಂಗಾಭದ್ರಾ ಜಲಾಶಯದಿಂದ ಇಂದು ಸಂಜೆಯೊಳಗೆ ನದಿಗೆ 3 ಲಕ್ಷ ಕ್ಯೂಸೆಕ್ ಪ್ರಮಾಣದ ನೀರು ಹರಿಸುವ ನಿರೀಕ್ಷೆ ಇದೆ. ಹೊಸಪೇಟೆ ಮತ್ತು ಕಂಪ್ಲಿ ತಾಲ್ಲೂಕುಗಳ ತಲಾ ಐದು ಹಳ್ಳಿಗಳು ಮುಳುಗಡೆಯಾಗುವ ಸಾಧ್ಯತೆ ಇದೆ. ಜನರ ಸ್ಥಳಾಂತರಕ್ಕೆ ಜಿಲ್ಲಾಡಳಿತ ಅಗತ್ಯ ಕ್ರಮ ತೆಗೆದುಕೊಳ್ಳುತ್ತಿದೆ.


ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿದೆ

11.47– ರಬಕವಿ: ಮನೆಗಳಿಗೆ ಕೃಷ್ಣಾ ನೀರು, ಸಂಕಷ್ಟದಲ್ಲಿ ನೇಕಾರರು

ಬಾಗಲಕೋಟೆ ಜಿಲ್ಲೆಯ ರಬಕವಿ ನಗರಕ್ಕೆ ಕೃಷ್ಣಾ ನದಿಯ ನೀರು 300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದೆ. ಕೈಮಗ್ಗ ಹಾಗೂ ಯಂತ್ರಚಾಲಿತ ಮಗ್ಗಗಳು ನೀರಿನಲ್ಲಿ ಮುಳುಗಿವೆ. ಕೊಟ್ಯಾಂತರ  ಮೌಲ್ಯದ ಸೈಜಿಂಗ್ ಯಂತ್ರೊಪಕರಣಗಳು, ವ್ಯಾಪಾರಿಗಳ ಗೋದಾಮುಗಳಿನಿಂದ ನೀರಿನಿಂದ ಹಾನಿಯಾಗಿದೆ.


ರಬಕವಿ ಪಟ್ಟಣದಲ್ಲಿ ಮನೆಗಳಿಗೆ ಕೃಷ್ಣಾ ನದಿ ನೀರು ನುಗ್ಗಿದ್ದು, ಮಗ್ಗಗಳು ಹಾಳಾಗಿವೆ

11:37– ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಇಳಿಮುಖ

ಮಹಾರಾಷ್ಟ್ರದ ವಿವಿಧ ಅಣೆಕಟ್ಟುಗಳಿಂದ ಕೃಷ್ಣಾ ಮತ್ತು ಅದರ ಉಪನದಿಗಳಿಗೆ ಬಿಡುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಿದೆ. ಭಾನುವಾರ ಬೆಳಗಾವಿ– ಮಹಾರಾಷ್ಟ್ರ ಗಡಿಯಲ್ಲಿ ಕೃಷ್ಣಾ ನದಿಯ ಹರಿವು 3.44 ಲಕ್ಷ ಕ್ಯೂಸೆಕ್ ದಾಖಲಾಗಿತ್ತು.

ಪ್ರವಾಹ ಸ್ಥಿತಿ ಉಲ್ಬಣಿಸಿದ ನಂತರ ಇದೇ ಮೊದಲು ಬಾರಿಗೆ ಕೃಷ್ಣಾ ನದಿಯ ಹರಿವಿನ ಪ್ರಮಾಣ ಕಡಿಮೆಯಾಗಿದೆ. ಆದರೂ ನಿಪ್ಪಾಣಿ, ಚಿಕ್ಕೋಡಿ, ರಾಯಭಾಗ, ಅಥಣಿ ಮತ್ತು ಕಾಗವಾಡ ತಾಲ್ಲೂಕುಗಳ 245 ಗ್ರಾಮಗಳಲ್ಲಿ ಪರಿಸ್ಥಿತಿ ಗಂಭೀರವಾಗಿಯೇ ಇದೆ.

ಮಲಪ್ರಭಾ ನದಿಯ ನವಿಲುತೀರ್ಥ ಮತ್ತು ಘಟಪ್ರಭಾ ನದಿಯ ಹಿಡ್ಕಲ್ ಜಲಾಶಯಗಳಿಗೂ ಒಳಹರಿವು ಭಾನುವಾರ ಕಡಿಮೆಯಾಗಿದೆ.

11:26– ಕರಾವಳಿಯಲ್ಲಿ ತಗ್ಗಿದ ಮಳೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆಯಿಂದ ಮಳೆ ತಗ್ಗಿದ್ದು, ನೇತ್ರಾವತಿಯ ಪ್ರವಾಹ ಕಡಿಮೆಯಾಗಿದೆ. ಬಂಟ್ವಾಳ- ಬೆಳ್ತಂಗಡಿ ರಸ್ತೆಯಲ್ಲಿ‌ ವಾಹನಗಳ ಸಂಚಾರ ಆರಂಭವಾಗಿದೆ.

10.31– ರಂಗನತಿಟ್ಟು ಪಕ್ಷಿಧಾಮ ಭಾಗಶಃ ಜಲಾವೃತ

ಶ್ರೀರಂಗಪಟ್ಟಣ ಸಮೀಪದ ರಂಗನತಿಟ್ಟು ಪಕ್ಷಿಧಾಮ ಭಾಗಶಃ ಜಲಾವೃತವಾಗಿದೆ. ಪಕ್ಷಿಧಾಮದ ಹಲವು ನಡುಗಡ್ಡೆಗಳು ಮುಳುಗಿವೆ. ಸದ್ಯ ಇರುವ ಐಬಿಸ್ ಜಾತಿಯ ಪಕ್ಷಿ ಸಂಕುಲಕ್ಕೆ ಅತಂಕ ಎದುರಾಗಿದೆ. ಪಕ್ಷಿಗಳು ಎತ್ತರದ ಮರಗಳ ಮೇಲೆ ಆಶ್ರಯ ಪಡೆದಿವೆ. ಕೆಳಮಟ್ಟದಲ್ಲಿ ಇದ್ದ ಗೂಡುಗಳು ಕೊಚ್ಚಿ ಹೋಗಿವೆ. ರಂಗನತಿಟ್ಡು ಪಕ್ಷಿಧಾಮದ ಟಿಕೆಟ್ ಕೌಂಟರ್‌ಗೆ ನೀರು ನುಗ್ಗಿದೆ.

 

10.05– ಆಲಮಟ್ಟಿ ಜಲಾಶಯದಿಂದ 5.30 ಲಕ್ಷ ಕ್ಯುಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದೆ. ಜಲಾಶಯದ ಒಳ ಹರಿವು 6.45 ಲಕ್ಷ ಕ್ಯುಸೆಕ್ ಇದೆ. ಭಾನುವಾರ ಜಲಾಶಯದ ಮಟ್ಟ 517.76 ಮೀಟರ್ ಇತ್ತು. ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್.

09.45– ತೆರವು ಕಾರ್ಯಾಚರಣೆ ಆರಂಭ: ಚಿಕ್ಕಮಗಳೂರು ತಾಲ್ಲೂಕಿನ ಬಾಬಾಬುಡನ್‌ಗಿರಿ ಮಾರ್ಗದ ಸರ್ಪದಾರಿಯಲ್ಲಿ ರಸ್ತೆಯ ಮೇಲೆ ಕುಸಿದಿದ್ದ ಗುಡ್ಡದಮಣ್ಣು ತೆರವು ಕಾರ್ಯಾಚರಣೆ ಆರಂಭವಾಗಿದೆ.

09.33– ಪರಿಹಾರ ಸಾಮಗ್ರಿ: ಧಾರವಾಡ ಜಿಲ್ಲಾಡಳಿತ ಕಳಿಸಿಕೊಟ್ಟಿದ್ದ ಪರಿಹಾರ ಸಾಮಗ್ರಿಗಳು ಬಾಗಲಕೋಟ ಜಿಲ್ಲಾಡಳಿತ ಆರಂಭಿಸಿರುವ ಪರಿಹಾರ ಕೇಂದ್ರಗಳಿಗೆ ಭಾನುವಾರ ಮುಂಜಾನೆ ತಲುಪಿತು.

 

09.20– ಚಂದ್ರದ್ರೋಣ ಗಿರಿ ಮಾರ್ಗ: ಪ್ರವಾಸಿಗರಿಗೆ ಸಂಚಾರ ನಿರ್ಬಂಧ

ಚಿಕ್ಕಮಗಳೂರು ತಾಲ್ಲೂಕಿನ ಗಿರಿಶ್ರೇಣಿ ಮಾರ್ಗದ ಶ್ರೀಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿಗೆ ಪ್ರವಾಸಿಗರ ಸಂಚಾರವನ್ನು ಇದೇ 14ರವರೆಗೆ ನಿಷೇಧಿಸಲಾಗಿದೆ. ಸತತ ಮಳೆಯಿಂದಾಗಿ ಗಿರಿ ಮಾರ್ಗದಲ್ಲಿ ಕೆಲವೆಡೆ ಗುಡ್ಡದ ಮಣ್ಣು ರಸ್ತೆಗೆ ಕುಸಿದಿದೆ, ಹೀಗಾಗಿ ಈ ಭಾಗಕ್ಕೆ ಪ್ರವಾಸಿಗರ ಸಂಚಾರ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.

08.55– ಶ್ರೀರಂಗಪಟ್ಟಣದಲ್ಲಿ ಭೋರ್ಗರೆಯುತ್ತಿದ್ದಾಳೆ ಕಾವೇರಿ: ಮೈಸೂರಿನ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದಿಂದ ಕಾವೇರಿ ನದಿಗೆ 1 ಲಕ್ಷ ಕ್ಯುಸೆಕ್ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ಸಮೀಪ ನದಿ ಭೋರ್ಗರೆಯುತ್ತಿದೆ. ಇತಿಹಾಸ ಪ್ರಸಿದ್ಧ ವೆಲ್ಲಿಸ್ಲಿ ಸೇತುವೆಯ ಮೇಲೆ ಜನ ಸಂಚಾರ ನಿಷೇಧಿಸಲಾಗಿದೆ.


ಶ್ರೀರಂಗಪಟ್ಟಣದ ವೆಲ್ಲಿಸ್ಲಿ ಸೇತುವೆ ಸಮೀಪ ಭೂರ್ಗರೆಯುತ್ತಿರುವ ಕಾವೇರಿ (ಪ್ರಜಾವಾಣಿ ಚಿತ್ರ: ನಂಜೇಗೌಡ)


ಶ್ರೀರಂಗಪಟ್ಟಣ ವೆಲ್ಲೆಸ್ಲಿ ಸೇತುವೆಯ ಮೇಲೆ ಜನರ ಸಂಚಾರ ನಿಷೇಧಿಸಲಾಗಿದೆ (ಪ್ರಜಾವಾಣಿ ಚಿತ್ರ: ನಂಜೇಗೌಡ)

08.30– ಬಾಬಾಬುಡನ್‌ಗಿರಿಯಲ್ಲಿ ಮಣ್ಣು ಕುಸಿತ: ಚಿಕ್ಕಮಗಳೂರು ತಾಲ್ಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಬಾಬಾಬುಡನ್‌ಗಿರಿ ಮಾರ್ಗದ ಸರ್ಪ ದಾರಿಯಲ್ಲಿ ಗುಡ್ಡದ ಮಣ್ಣು ರಸ್ತೆಗೆ ಅಡ್ಡಲಾಗಿ ಕುಸಿದಿದೆ.

08.20– ಕೆಆರ್‌ಎಸ್‌ಗೆ 1.87 ಲಕ್ಷ ಕ್ಯೂಸೆಕ್ ಒಳಹರಿವು: ಕೆಆರ್‌ಎಸ್ ಜಲಾಶಯಕ್ಕೆ ಭಾನುವಾರ 1.87 ಲಕ್ಷ ಕ್ಯೂಸೆಕ್ ಒಳಹರಿವು ಬರುತ್ತಿದೆ. ಅಣೆಕಟ್ಟೆಯಿಂದ 1.19 ಲಕ್ಷ ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಅಣೆಕಟ್ಟೆಯಲ್ಲಿ ಭಾನುವಾರ ನೀರಿನ ಮಟ್ಟ 118.75 ಅಡಿ ಇತ್ತು. ಗರಿಷ್ಠ ಅಡಿ 124.80 ಅಡಿ.

08.10– ಕೆಆರ್‌ಎಸ್‌ನಿಂದ ನೀರು ಬಿಡುಗಡೆ: ಮೈಸೂರಿನ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದಿಂದ ನದಿಗೆ 1 ಲಕ್ಷ ಕ್ಯುಸೆಕ್ ನೀರು ಬಿಡಲಾಗಿದೆ. ನದಿಪಾತ್ರದ ಹೊಲ, ಗದ್ದೆಗಳು ಮುಳುಗಿವೆ. ಶ್ರೀರಂಗಪಟ್ಟಣ ವೆಲ್ಲೆಸ್ಲಿ ಸೇತುವೆ ಮೇಲೆ ನೀರು ಹರಿಯುತ್ತಿದೆ. ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.

07.51– ಹಂಪಿ ಜಲಾವೃತ: ತುಂಗಭದ್ರಾ ಜಲಾಶಯದ ಎಲ್ಲ 34 ಕ್ರಸ್ಟ್ ಗೇಟ್ ಗಳನ್ನು ತೆಗೆದು ನದಿಗೆ ಸುಮಾರು 2 ಲಕ್ಷ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಹಂಪಿಯ ಚಕ್ರತೀರ್ಥ, ಪುರಂದರ ಮಂಟಪ ಸ್ಮಾರಕಗಳು ಜಲಾವೃತವಾಗಿವೆ.


ಕಂಪ್ಲಿಯ ಕೋಟೆ ಆಂಜನೇಯ ದೇಗುಲಕ್ಕೆ ನೀರು ನುಗ್ಗಿದೆ.

07.50– ಕಂಪ್ಲಿ ಪಟ್ಟಣದಲ್ಲಿ ಮನೆಗಳಿಗೆ ನೀರು: ತುಂಗಭದ್ರಾ ಅಣೆಕಟ್ಟೆಯಿಂದ ನದಿಗೆ 2 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಕಂಪ್ಲಿಯ ಕೋಟೆ ಆಂಜನೇಯ ದೇವಸ್ಥಾನಕ್ಕೆ, ಮನೆಗಳಿಗೆ ನೀರು ನುಗ್ಗಿದೆ. ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನದಿ ಪಾತ್ರದ ಜನರಿಗೆ ಅಧಿಕಾರಿಗಳು ಸೂಚಿಸಿದ್ದಾರೆ.


ತುಂಗಭದ್ರಾ ನದಿಯಲ್ಲಿ ಕಂಪ್ಲಿ ಸೇತುವೆ ಮುಳುಗಿದೆ.

07.44– ತುಂಗಭದ್ರಾ ಜಲಾಶಯದಿಂದ 1.5 ಲಕ್ಷ ಕ್ಯೂಸೆಕ್ ಬಿಡುಗಡೆ: ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕಿನಲ್ಲಿರುವ ತುಂಗಭದ್ರಾ ಜಲಾಶಯದ 28 ಕ್ರಸ್ಟ್ ಗೇಟ್ ತೆರೆದು ಒಂದೂವರೆ ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಕಂಪ್ಲಿ- ಗಂಗಾವತಿ ಸೇತುವೆ ಮುಳುಗಡೆಯಾಗಿದೆ. ಹೊಸಪೇಟೆಗೆ ಹೈದರಾಬಾದ್ ಕರ್ನಾಟಕದ ಕಲಬುರ್ಗಿ, ಬೀದರ್, ರಾಯಚೂರು, ಮಂತ್ರಾಲಯ, ಹೈದರಾಬಾದ್ ಸಂಪರ್ಕ ಕಡಿತಗೊಂಡಿದೆ.

07.30– ದಕ್ಷಿಣ ಕನ್ನಡ ಸಮೀಕ್ಷೆ ರದ್ದು: ಅಮಿತ್ ಶಾ ಜೊತೆಗೆ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸುವ ಕಾರ್ಯಕ್ರಮ ನಿಗದಿಯಾಗಿದೆ. ಹೀಗಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪ್ರವಾಸವನ್ನು ಯಡಿಯೂರಪ್ಪ ಅವರು ರದ್ದುಗೊಳಿಸಿದ್ದಾರೆ.

07.20– ಬೆಳಗಾವಿಗೆ ಅಮಿತ್‌ ಶಾ: ಪ್ರವಾಹ ಪರಿಸ್ಥಿತಿ ವೀಕ್ಷಿಸಲು ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಭಾನುವಾರ ಮಧ್ಯಾಹ್ನ ಬೆಳಗಾವಿಗೆ ಆಗಮಿಸಲಿರುವ ಅಮಿತ್ ಶಾ ಜೊತೆ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

 

 

 

 

 

 

 

 

 

ಆಗಸ್ಟ್ 10, 2019– ಶನಿವಾರ

08.10– ಪ್ರವಾಹ ಪರಿಸ್ಥಿತಿ ಅವಲೋಕಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ ಬೆಳಗಾವಿಗೆ ಆಗಮಿಸಲಿರುವ ಅಮಿತ್ ಶಾ ಜತೆ ಮುಖ್ಯಮಂತ್ರಿ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳ ನಾಳೆಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪ್ರವಾಸ ರದ್ದುಗೊಳಿಸಲಾಗಿದೆ.

07.50– ಕೊಡಗಿನಲ್ಲಿ ಮತ್ತೆ ಭಾರಿ ಮಳೆ ಆಗಲಿದ್ದು ಆ.12ರ ತನಕ 'ರೆಡ್ ಅಲರ್ಟ್' ಘೋಷಣೆ ಮಾಡಲಾಗಿದೆ.

ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್‌ ಅವರು ಶನಿವಾರ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು.

ರಾಜ್ಯದ 17 ಜಿಲ್ಲೆಯ 80 ತಾಲ್ಲೂಕು ಪ್ರವಾಹಪೀಡಿತ ಪ್ರದೇಶ: ಸರ್ಕಾರ ಘೋಷಣೆ

ಬೆಂಗಳೂರು: ರಾಜ್ಯದ 17 ಜಿಲ್ಲೆಗಳ 80 ತಾಲ್ಲೂಕುಗಳನ್ನು ಪ್ರವಾಹ ಪೀಡಿತ ಪ್ರದೇಶಗಳೆಂದು ರಾಜ್ಯ ಸರ್ಕಾರ ಘೋಷಿಸಿದೆ.

ಈ ಸಂಬಂಧ ಶನಿವಾರ ಅಧಿಕೃತವಾಗಿ ಆದೇಶ ಹೊರಡಿಸಿರುವ ಸರ್ಕಾರ, ಆಗಸ್ಟ್‌ 1ರಿಂದ 9ರ ವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿದ್ದ ಮಳೆ ಹಾಗೂ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಿಂದ ತುಂಬಿರುವ ಜಲಾಶಯಗಳಿಂದ ಭಾರೀ ಪ್ರಮಾಣದ ನೀರುನ್ನು ಹರಿಯ ಬಿಟ್ಟ ಪರಿಣಾಮ ಉತ್ತರ ಕರ್ನಾಟಕದಲ್ಲಿ ಕೃಷ್ಣಾ ಕಣಿವೆ ಪ್ರದೇಶದಲ್ಲಿ ಪ್ರವಾಹ ಉಂಟಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಉಡುಪಿ ಜಿಲ್ಲೆಗಳು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ಪ್ರವಾಹದಿಂದ ಹಾನಿಯಾಗಿದೆ. ಆದ್ದರಿಂದ, ತಕ್ಷಣದಿಂದ ಜಾರಿಗೆ ಬರುವಂತೆ ಈ ತಾಲ್ಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಿರುವುದಾಗಿ ಆದೇಶದಲ್ಲಿ ಉಲ್ಲೇಖಿಸಿದೆ. 

ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಶಿಫಾಸರು ಮಾಡಲಾಗಿತ್ತು.

ಘೊಷಣೆಯಾದ ಜಿಲ್ಲೆ ಮತ್ತು ತಾಲ್ಲೂಕು  ಕೇಂದ್ರಗಳು

ಆ.11ರಂದು ದಕ್ಷಿಣ ಕನ್ನಡ, ಆ.12ರಂದು ಉಡುಪಿ ಜಿಲ್ಲೆಗೆ ಸಿಎಂ ಪ್ರವಾಸ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಗಸ್ಟ್‌ 11ರಂದು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಆ.12ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಪ್ರವಾಹ ಮತ್ತು ಭೂಕುಸಿತ ಉಂಟಾಗಿರುವ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

ಈ ಮುಂಚಿನ ಕಾರ್ಯಕ್ರಮದಂತೆ ಮುಖ್ಯಮಂತ್ರಿ ಅವರು ಇಂದೇ ಮಂಗಳೂರಿಗೆ ಭೇಟಿ ನೀಡಬೇಕಾಗಿತ್ತು. ಪ್ರಸ್ತುತ ಹವಾಮಾನದಲ್ಲಿ ವೈಮಾನಿಕ ಸಮೀಕ್ಷೆ ಸಾಧ್ಯವಿಲ್ಲದ ಕಾರಣ ರಸ್ತೆ ಮೂಲಕವೇ ಪ್ರವಾಹ ಪೀಡಿತ ಸ್ಥಳಗಳಿಗೆ ಅವರು ಭೇಟಿ ನೀಡುವರು.


ಗಂಜಿ ಕೇಂದ್ರಕ್ಕೆ ಎಚ್‌.ಡಿ.ಕುಮಾರಸ್ವಾಮಿ ಭೇಟಿ ನೀಡಿದರು.

03.45– ಬೆಳಗಾವಿ: ಗಂಜಿ ಕೇಂದ್ರಕ್ಕೆ ಎಚ್‌ಡಿಕೆ ಭೇಟಿ

ಬೆಳಗಾವಿ: ಸಂಕೇಶ್ವರದ ಶಂಕರಲಿಂಗ ಸಮುದಾಯ ಭವನದಲ್ಲಿ ತೆರೆಯಲಾಗಿರುವ ಗಂಜಿ ಕೇಂದ್ರಕ್ಕೆ ಜೆಡಿಎಸ್  ಮುಖಂಡ ಎಚ್.ಡಿ. ಕುಮಾರಸ್ವಾಮಿ ಶನಿವಾರ ಭೇಟಿ ನೀಡಿ, ಸಂತ್ರಸ್ತರ ಅಳಲು ಆಲಿಸಿದರು.

ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, 'ಅಧಿಕಾರಿಗಳೇ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಪೂರ್ಣ ಪ್ರಮಾಣದ ಸರ್ಕಾರ ಇಲ್ಲದೇ ಇರುವುದರಿಂದ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲು ಅನಾನುಕೂಲವಾಗುತ್ತಿದೆ' ಎಂದು ಹೇಳಿದರು.

'ಮುಖ್ಯಮಂತ್ರಿ‌ ಬಿ.ಎಸ್. ಯಡಿಯೂರಪ್ಪ ಒಬ್ಬರೇ ರಾಜ್ಯಾದ್ಯಂತ ಸುತ್ತಾಡುತ್ತಿದ್ದಾರೆ. ನೆರೆ ಪ್ರವಾಹದ ಸಂಪೂರ್ಣ ಮಾಹಿತಿ ಪಡೆಯಲು ತಿಂಗಳೇ ಬೇಕಾಗಬಹುದು. ಸಚಿವರಿದ್ದಿದ್ದರೆ ತುರ್ತು ಕ್ರಮಕೈಗೊಳ್ಳಲು ಅನುಕೂಲವಾಗುತ್ತಿತ್ತು' ಎಂದರು.

'ಸಂತ್ರಸ್ತರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು' ‌ಎಂದು ಹೇಳಿದರು.

ಶಾಸಕರಾದ ಸಾ.ರಾ.‌ಮಹೇಶ, ಬಂಡೆಪ್ಪ ಕಾಶೆಂಪುರ, ಮುಖಂಡ ಎನ್.ಎಚ್. ಕೋನರಡ್ಡಿ ಇದ್ದರು.

03.30– ವಿಜಯಪುರ: ಕೃಷ್ಣಾ, ಭೀಮಾ ಪ್ರವಾಹ, 3,007 ಹೆಕ್ಟೇರ್ ಜಮೀನು ಜಲಾವೃತ

ವಿಜಯಪುರ: ಜಿಲ್ಲೆಯಲ್ಲಿ ಮಳೆ ಆಗದಿದ್ದರೂ ಕೃಷ್ಣಾ ಮತ್ತು ಭೀಮಾ ನದಿ ಪ್ರವಾಹದಿಂದ 3,007 ಹೆಕ್ಟೇರ್ ಜಮೀನಿಗೆ ನೀರು ನುಗ್ಗಿದೆ.
ನಿಡಗುಂದಿ ತಾಲ್ಲೂಕಿನ 6 ಗ್ರಾಮಗಳು, ಮುದ್ದೇಬಿಹಾಳ ತಾಲ್ಲೂಕಿನ 22 ಗ್ರಾಮಗಳು, ಸಿಂದಗಿ 12, ಇಂಡಿ 11 ಹಾಗೂ ಚಡಚಣ ತಾಲ್ಲೂಕಿನ 19 ಸೇರಿ ಒಟ್ಟು 70 ಗ್ರಾಮಗಳ 48,240 ಜನರು ತೊಂದರೆಗೆ ಒಳಗಾಗಿದ್ದಾರೆ.

‘ಜಿಲ್ಲೆಯಲ್ಲಿ 7 ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿದ್ದು, 755 ಜನರಿಗೆ ಅಗತ್ಯ ಸೌಲಭ್ಯ ಒದಗಿಸಲಾಗುತ್ತಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.

03.00–ಕೆಆರ್‌ಎಸ್‌ನಿಂದ 50 ಸಾವಿರ ಕ್ಯುಸೆಕ್‌ ನೀರು ಬಿಡುಗೆ, ಜರಿಗೆ ಎಚ್ಚರಿಕೆ

ಮಂಡ್ಯ: ಕೆಆರ್‌ಎಸ್‌ ಜಲಾಶಯದಿಂದ ನದಿಗೆ 50,000 ಕ್ಯುಸೆಕ್ ನೀರು ಬಿಡುಗಡೆ. ಪ್ಲಸ್ 103 ಮಟ್ಟದ 30 ಗೇಟ್‌ಗಳ ಮೂಲಕ ನದಿಗೆ ನೀರು ಹರಿಸಲಾಗುತ್ತಿದೆ. 

ಒಳ ಹರಿವು 1.30 ಲಕ್ಷ ಕ್ಯುಸೆಕ್‌ಗೆ ಹೆಚ್ಚಿದೆ. ಜಲಾಶಯದ ನೀರಿನ ಮಟ್ಟ 112 ಅಡಿ ತಲುಪಿದೆ. ನದಿ ತಟದ ಗ್ರಾಮಗಳ ಜನರಿಗೆ ಕಾವೇರಿ ನೀರಾವರಿ ನಿಗಮ ಎಚ್ಚರಿಕೆ ನೀಡಿದೆ.

ಪ್ರವಾಹ ಪರಿಸ್ಥಿತಿಯಲ್ಲಿ ನಿಭಾಯಿಸಲು ನೋಡೆಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ.
 

02.50– ₹5,000 ಕೋಟಿ ಪರಿಹಾರಕ್ಕೆ ಉಗ್ರಪ್ಪ ಒತ್ತಾಯ

ದಾವಣಗೆರೆ: ರಾಜ್ಯದಲ್ಲಿ ತಲೆದೋರಿರುವ ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ನೆರವಿಗೆ ಬರಬೇಕು. ರಾಜ್ಯಕ್ಕೆ ₹5000 ಕೋಟಿ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್‌ ಮುಖಂಡ ವಿ.ಎಸ್. ಒತ್ತಾಯಿಸಿದರು.

ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಬೇಕು. ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಪ್ರಕೃತಿ ವಿಕೋಪದಿಂದ ಉಂಟಾಗಿರುವ ನಷ್ಟದ ತೀವ್ರತೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿದ್ದು,. ರಾಜ್ಯದಲ್ಲಿ  ಇಂದು ಏಕವ್ಯಕ್ತಿ ಆಡಳಿತವಿದೆ. ಜಿಲ್ಲಾ ಉಸ್ತುವಾರಿ ಸಚಿವರುಗಳು ಇಲ್ಲದೇ ಜನರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ಆರೋಪಿಸಿದರು.


ಗಂಜಿಕೇಂದ್ರದಲ್ಲಿ ಸಂತ್ರಸ್ತರಿಗೆ ಪುಲಾವ್ ಹಾಗೂ ಬಾಳೆ ಹಣ್ಣು ವಿತರಿಸಲಾಯಿತು

02.40–ಬಾಗಲಕೋಟೆ | ಗಂಜಿಕೇಂದ್ರದಲ್ಲಿರುವ ಸಂತ್ರಸ್ತರಿಗೆ ಗ್ರಾಮಸ್ಥರಿಂದ ಆಹಾರ ವಿತರಣೆ 

ಬಾಗಲಕೋಟೆ: ಐಹೊಳೆಯ ಗಂಜಿಕೇಂದ್ರದಲ್ಲಿರುವ ಸಂತ್ರಸ್ತರಿಗೆ ಪಕ್ಕದ ರಕ್ಕಸಗಿ ಗ್ರಾಮದ ಗೆಳೆಯರ ಬಳಗದ ಸದಸ್ಯರು ಶನಿವಾರ ಮಧ್ಯಾಹ್ನ ಪುಲಾವ್ ಹಾಗೂ ಬಾಳೆ ಹಣ್ಣು ವಿತರಿಸಿದರು. ಕೇಂದ್ರದಲ್ಲಿ 73 ಕುಟುಂಬಗಳು ಆಶ್ರಯ ಪಡೆದಿವೆ.
 

02.30– ಮಲ್ಲೇಶನಗುಡ್ಡ ಕುಸಿತ : ಶೆಡ್ ವೊಂದರಲ್ಲಿ ಸಿಲುಕಿದ 30 ಜನರ ರಕ್ಷಣೆಗೆ ಮನವಿ 

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕಳಸ ಭಾಗದ ಮಲ್ಲೇಶನಗುಡ್ಡದಲ್ಲಿ ಗುಡ್ಡ ಕುಸಿದಿದ್ದು, ಸುಮಾರು 30 ಮಂದಿ ಶೆಡ್ ವೊಂದರಲ್ಲಿ ಇದ್ದಾರೆ. ಈ ಪ್ರದೇಶ ಜಲಾವೃತವಾಗಿದೆ. ಅವರನ್ನು ರಕ್ಷಣೆಗೆ ಹೆಲಿಕಾಪ್ಟರ್ ಕಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.

ಮೂಡಿಗರೆ ತಾಲ್ಲೂಕಿನ ಕೊಟ್ಟಿಗೆಹಾರದ ಮೊರಾರ್ಜಿ ವಸತಿ ಶಾಲೆ, ಕಳಸದ ಹಿರೇಬೈಲಿನ ಗಣಪತಿ ಸಮುದಾಯ ಭವನ, ಸರ್ಕಾರಿ ಪ್ರಾಥಮಿಕ ಶಾಲೆ, ಗೋಣಿಬೀಡಿನ ಮೆಟ್ರಿಕ್ ಪೂರ್ವ ವಸತಿನಿಲಯ ಹಾಗೂ ಎನ್.ಆರ್.ಪುರ ತಾಲ್ಲೂಕಿನ ಬಾಳೆಹೊನ್ನೂರಿನ ಚರ್ಚ್ ಹಾಲ್, ಸರ್ಕಾರಿ ಪ್ರೌಢಶಾಲೆಯಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. 

ಈ ಕೇಂದ್ರಗಳಲ್ಲಿ ಒಟ್ಟಾರೆ 375 ಮಂದಿ ಆಶ್ರಯ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

01.55– ಕೇರಳದ ಬಾಣಾಸುರ ಅಣೆಕಟ್ಟೆಯಿಂದ ನೀರು: ಕಬಿನಿ ಪ್ರವಾಹ ಮತ್ತಷ್ಟು ಏರಿಕೆ ಸಾಧ್ಯತೆ

ಮೈಸೂರು: ಕೇರಳದ ವಯನಾಡಿನಲ್ಲಿರುವ ಬಾಣಾಸುರ ಅಣೆಕಟ್ಟೆ ತುಂಬಿದ್ದು, ಶನಿವಾರ ಮಧ್ಯಾಹ್ನ 3ಕ್ಕೆ ನೀರನ್ನು  ಕಬಿನಿಯ ಉಪ ನದಿಗೆ ಬಿಡಲಾಗುತ್ತದೆ ಎಂದು ಅಣೆಕಟ್ಟೆಯ ಅಧಿಕಾರಿಗಳು ತಿಳಿಸಿದ್ದಾರೆ .

ಈ ನದಿಯ ನೀರು ಕಬಿನಿಗೆ ಸೇರುವುದರಿಂದ ನದಿಯ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.‌ ಶನಿವಾರ ರಾತ್ರಿ ಇಲ್ಲವೆ ಭಾನುವಾರ ಬೆಳಿಗ್ಗೆ ನಂಜನಗೂಡು, ಎಚ್.ಡಿ.ಕೋಟೆ ತಾಲ್ಲೂಕಿನ ಇನ್ನಷ್ಟು ಭಾಗಗಳು ಜಲಾವೃತ ಆಗಲಿವೆ.

ಸದ್ಯ ಕಬಿನಿ ಜಲಾಶಯದಿಂದ 1.10 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ‌.

01. 00–ದಕ್ಷಿಣ ಕನ್ನಡದಲ್ಲಿ‌ಧಾರಾಕಾರ ಮಳೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಬಂಟ್ವಾಳ ತಾಲ್ಲೂಕಿನಲ್ಲಿ 15.9, ಬೆಳ್ತಂಗಡಿ ತಾಲ್ಲೂಕಿನಲ್ಲಿ 23.2, ಮಂಗಳೂರು ತಾಲ್ಲೂಕಿನಲ್ಲಿ 12.9, ಪುತ್ತೂರು ತಾಲ್ಲೂಕಿನಲ್ಲಿ 16.7, ಸುಳ್ಯ ತಾಲ್ಲೂಕಿನಲ್ಲಿ 14.6 ಸೆಂ.ಮೀ. ಮಳೆಯಾಗಿದೆ.
ನೇತ್ರಾವತಿ ಗರಿಷ್ಠ ಮಟ್ಟ 8.5 ಮೀಟರ್ ಇದ್ದು, ಶನಿವಾರ 11.5  ಮೀಟರ್ ಎತ್ತರಕ್ಕೆ ಹರಿಯುತ್ತಿದೆ. ಕುಮಾರಧಾರಾ ನದಿ ಗರಿಷ್ಠ ಮಟ್ಟ 26.5 ಮೀಟರ್ ಇದ್ದು, ಶನಿವಾರ 31 ಮೀಟರ್ ಎತ್ತರಕ್ಕೆ ಹರಿಯುತ್ತಿದೆ.

12. 40–ಚಾಮರಾಜನಗರ: ಕಾವೇರಿ‌ನದಿಯಲ್ಲಿ ನೀರು ಹೆಚ್ಚಾದ ಕಾರಣ ಕೊಳ್ಳೇಗಾಲದ ಭರಚುಕ್ಕಿ ಜಲಪಾತ ಭೋರ್ಗರೆಯುತ್ತಿದ್ದು ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

12. 20–ಚಾಮರಾಜನಗರ: ಕಬಿನಿಯಿಂದ ಭಾರಿ ಪ್ರಮಾಣದಲ್ಲಿ ನೀರು ಹೊರಬಿಡುತ್ತಿರುವುದರಿಂದ ಕೊಳ್ಳೇಗಾಲ ತಾಲ್ಲೂಕಿನ ನದಿ ಪಾತ್ರದ ಹಳೆ ಅಣ್ಣಿಗೇರಿ ಗ್ರಾಮದ ಜಮೀನುಗಳಿಗೆ ನೀರು ನುಗ್ಗಿದೆ.

12. 08–ಮಂಗಳೂರು: ನೇತ್ರಾವತಿ, ಕುಮಾರಧಾರ ಜತೆಗೆ ಇದೀಗ ಫಲ್ಗುಣಿ ನದಿಯು ಈಗ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ತಿಳಿಸಿದ್ದಾರೆ.

11. 58–ಪ್ರವಾಹ ಪರಿಹಾರ ಕಾರ್ಯಗಳಿಗಾಗಿ ರಾಜ್ಯ ಸರ್ಕಾರಿ ನೌಕರರು ಒಂದು ದಿನದ ಸಂಬಳ ನೀಡಲಿದ್ದು, ಸುಮಾರು 200 ಕೋಟಿ ರೂಪಾಯಿ ಸಂಗ್ರಹವಾಗಲಿದೆ ಎಂದು ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.

11. 43–ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಬೆಳಗಾವಿಯಲ್ಲಿ ಶನಿವಾರ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು.

11. 31–ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ ಗ್ರಾಮಕ್ಕೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಳೆ ಸಂತ್ರಸ್ತರಿಗೆ ಬೆಡ್ ಶೀಟ್ ವಿತರಿಸಿದರು.

11. 17–ಬಾಗಲಕೋಟೆ: ಮಲಪ್ರಭಾ ನದಿಯಲ್ಲಿ ಶುಕ್ರವಾರ ರಾತ್ರಿಯಿಂದ ಪ್ರವಾಹದ ಮಟ್ಟ ಇಳಿಕೆಯಾಗಿದೆ. ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ಬಳಿ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 2018 ಗೋವನಕೊಪ್ಪ ಬ್ರಿಜ್ ಬಳಿ ಹಾಳು ಬಿದ್ದ ಯುದ್ಧಭೂಮಿಯಂತೆ ಗೋಚರವಾಗುತ್ತಿದೆ.

11. 08–ಬೆಳಗಾವಿ: ಜಿಲ್ಲೆಯ ಪ್ರವಾಹಪೀಡಿತ ಪ್ರದೇಶಗಳ ಬಗ್ಗೆ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಇದ್ದಾರೆ.

10. 46–ಪ್ರವಾಹ: ಎಸ್‌ಬಿಐ ಪರೀಕ್ಷೆ ಮುಂಡೂಡಿಕೆ
ಬೆಳಗಾವಿ:
ಬೆಳಗಾವಿ ಹಾಗೂ ಕೊಲ್ಹಾಪುರದಲ್ಲಿ ಇಂದು ನಡೆಯಬೇಕಾಗಿದ್ದ ಎಸ್ ಬಿ ಐ  ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯನ್ನು, ಮಳೆ ಹಾಗೂ ಪ್ರವಾಹದ ಕಾರಣದಿಂದ ಮುಂದೂಡಲಾಗಿದೆ. ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ.
ಮುಂದಿನ ದಿನಗಳಲ್ಲಿ ಮರು ಪರೀಕ್ಷೆ ನಡೆಸಲಾಗುವುದು. ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲ ಮಾಡಿಕೊಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದ್ದಾರೆ.

10. 35–ಮಂಗಳೂರಿನ ತಣ್ಣೀರುಬಾವಿ ಬೀಚ್ ಸಮೀಪದ ಕಸಬಾ ಬೆಂಗರೆಯಲ್ಲಿ ಪ್ರವಾಹದಿಂದ ಹಲವು ಮನೆಗಳಿಗೆ ನೀರು ನುಗ್ಗಿದೆ.

10. 27–ಮಡಿಕೇರಿ- ಮೈಸೂರು ನಡುವೆ ವಾಹನ ಸಂಚಾರ ಬಂದ್ 
ಮಡಿಕೇರಿ:
ಕೊಡಗಿನ ದಕ್ಷಿಣ ಭಾಗದಲ್ಲಿ ಮಳೆ ಮಂದುವರೆದಿದೆ. ಕಾವೇರಿ ನದಿಯ ನೀರು ಕುಶಾಲನಗರ ಸಮೀಪದ ಕೊಪ್ಪ ಸೇತುವೇ ಮೇಲೆ ಹರಿಯುತ್ತಿದ್ದು, ಮಡಿಕೇರಿ-ಕುಶಾಲನಗರ - ಮೈಸೂರು ನಡುವೆ ವಾಹನ ಸಂಚಾರ ಬಂದ್ ಆಗಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ‌ ಸುರಿಯುತ್ತಿರುವ ಮಳೆಯಿಂದ ನದಿಯಲ್ಲಿ ನೀರಿನಮಟ್ಟ ಏರಿಕೆ ಆಗುತ್ತಲೇ ಇದೆ. ಅಪಾಯ ಪ್ರದೇಶದಲ್ಲಿ ಇದ್ದವರ ರಕ್ಷಣಾ ಕಾರ್ಯ ಮುಂದುವರೆದಿದೆ.

10.11–ಹೊಳೆ ಮಸೂತಿ ಗ್ರಾಮಕ್ಕೆ ನುಗ್ಗಿದ ನೀರು
ವಿಜಯಪುರ:
ಆಲಮಟ್ಟಿ ಜಲಾಶಯದಿಂದ ದಾಖಲೆಯ 5.30 ಲಕ್ಷ ಕ್ಯುಸೆಕ್ ನೀರು ಹರಿಬಿಟ್ಟಿದ್ದರಿಂದ ನಿಡಗುಂದಿ ತಾಲ್ಲೂಕು ಹೊಳೆ ಮಸೂತಿ ಗ್ರಾಮಕ್ಕೆ ನೀರು ನುಗ್ಗಿದೆ.

09.48–ವಿಜಯಪುರದಲ್ಲಿ 50 ಕುಟುಂಬಗಳ ಸ್ಥಳಾಂತರ
ವಿಜಯಪುರ:
ಆಲಮಟ್ಟಿ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಬಿಡಲಾಗಿದ್ದು, ಇದರಿಂದ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುದ್ದೇಬಿಹಾಳ ತಾಲ್ಲೂಕಿನ ಕಮಲದಿನ್ನಿ ಹಾಗೂ ಕುಂಚಗನೂರು ಗ್ರಾಮಗಳ ಸುಮಾರು 50 ಕುಟುಂಬಗಳನ್ನು ತಂಗಡಗಿ ಗ್ರಾಮದ ಸರ್ಕಾರಿ ಶಾಲೆಗೆ ಸ್ಥಳಾಂತರಿಸಲಾಗಿದೆ.

09.32–ಬೆಳಗಾವಿಯಲ್ಲಿ ಮಳೆಯ ರಭಸ ಇಳಿಮುಖ
ಬೆಳಗಾವಿ: ಜಿಲ್ಲೆಯ ವಿವಿಧೆಡೆ ಶನಿವಾರ ಮಳೆಯ ರಭಸ ಇಳಿಮುಖವಾಗಿದೆ. ಬೆಳಗಾವಿ, ಖಾನಾಪುರ, ಬೈಲಹೊಂಗಲ ಸೇರಿದಂತೆ ವಿವಿಧೆಡೆ ಮಳೆ ಕಡಿಮೆಯಾಗಿದೆ. ಮಲಪ್ರಭಾ ಜಲಾಶಯದ ಒಳ ಹರಿವು ಕಡಿಮೆಯಾಗಿದೆ. 54,321 ಕ್ಯುಸೆಕ್ ನೀರು ಹರಿವಿದ್ದು, 50,964 ಹೊರಹರಿವು ಇದೆ.

08.42–ಆಲಮಟ್ಟಿ ಸಂಗೀತ ( ಮೊಘಲ್) ಉದ್ಯಾನ ಸಂಪೂರ್ಣ ಜಲಾವೃತಗೊಂಡಿದೆ.

08.28– ಮಲಪ್ರಭಾ ನೀರಿನಿಂದ ಜಲಾವೃತವಾದ ಹುನಗುಂದ ತಾಲ್ಲೂಕಿನ ಕಮತಗಿ ಪಟ್ಟಣ.

08.15– ಬಾಗಲಕೋಟೆ : ಪೆಟ್ರೋಲ್-ಡೀಸೆಲ್ ಪೂರೈಕೆ ಕೊರತೆ ಆಗಿದೆ ಎಂದು ಉತ್ತರ ಕರ್ನಾಟಕ ಭಾಗದ ಪ್ರವಾಹಪೀಡಿತ ಜಿಲ್ಲೆಗಳಲ್ಲಿ ಹರಡಿರುವ ವದಂತಿ ಹಿನ್ನೆಲೆಯಲ್ಲಿ ಭಾರತೀಯ ತೈಲ ನಿಗಮ ಸ್ಪಷ್ಟನೆ ನೀಡಿದೆ. ಗಾಳಿ ಸುದ್ದಿಗಳಿಗೆ ಕಿವಿಗೊಡದಂತೆ ತಿಳಿಸಿದೆ.

08.08– ಬಾಗಲಕೋಟೆ: ಆಲಮಟ್ಟಿಯಿಂದ ರಾಂಪುರ ಮಾರ್ಗವಾಗಿ ಬಾಗಲಕೋಟೆ ರಸ್ತೆ  ಕೃಷ್ಣಾ ನದಿ ಪ್ರವಾಹದ ನೀರಿನಲ್ಲಿ ಜಲಾವೃತವಾಗಿದೆ. ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. 

08.01– ನಾರಾಯಣಪುರ ಅಣೆಕಟ್ಟೆಯಿಂದ 5.23 ಲಕ್ಷ ಕ್ಯುಸೆಕ್ ನೀರು ಹೊರಕ್ಕೆ
ಯಾದಗಿರಿ: ಜಿಲ್ಲೆಯ ನಾರಾಯಣಪುರ ಜಲಾಶಯದಿಂದ ಮಧ್ಯರಾತ್ರಿ 12 ಗಂಟೆಯಿಂದ ಕೃಷ್ಣಾ ನದಿಗೆ 5.23 ಲಕ್ಷ ಕ್ಯುಸೆಕ್ ನೀರು ಹರಿಸಲಾಗಿದೆ. ಜಲಾಶಯದಿಂದ 2009 ರಲ್ಲಿ 5 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿತ್ತು. ಈ ವರ್ಷ ದಾಖಲೆಯ ನೀರು ಬಿಡುಗಡೆ ಮಾಡಲಾಗಿದೆ. ನದಿ ಪಾತ್ರದ ಗ್ರಾಮಗಳಿಗೆ ಹೈ ಅಲರ್ಟ್ ಘೋಷಿಸಲಾಗಿದೆ. ಇದರಿಂದ ನದಿ ಪಾತ್ರದ ಮತ್ತಷ್ಟು ಗ್ರಾಮಗಳ ಜಮೀನುಗಳು ಜಲಾವೃತ್ತವಾಗಿದೆ. ಗ್ರಾಮಸ್ಥರು ಮತ್ತಷ್ಟು ಆತಂಕ ಪಡುವಂತೆ ಮಾಡಿದೆ.

***

ಶುಕ್ರವಾರ (09–08–2019)

04.30– ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ಕಳೆದ 24 ಗಂಟೆಗಳಲ್ಲಿ 400 ಮಿ.ಮೀ. ಮಳೆಯಾಗಿದೆ. 

04.00– ಕಾರವಾರ: ಅಂಕೋಲಾ ತಾಲ್ಲೂಕಿನ ಸುಂಕಸಾಳದ ಹೋಟೆಲ್ ಹೈಲ್ಯಾಂಡ್ ಬಳಿ ಪ್ರವಾಹದಲ್ಲಿ ಸಿಲುಕಿದ್ದ ಲಾರಿ ಚಾಲಕ, ಸಾರ್ವಜನಿಕರನ್ನು ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.


ಕುಶಾಲನಗರದ ಸದ್ಯದ ಸ್ಥಿತಿ

03.30– ಮಡಿಕೇರಿ: ಭಾಗಮಂಡಲ ಸಮೀಪದ ಕೋರಂಗಾಲದಲ್ಲಿ ಭೂಕುಸಿತದಿಂದ ಐವರು ಸಾವನ್ನಪ್ಪಿದ್ದಾರೆ. ಮನೆಯ ಮೇಲೆ ಬೆಟ್ಟದ ಮಣ್ಣು ಕುಸಿದಿದೆ. ಅತ್ತೇಡಿ ಯಶವಂತ, ಬೋಳನ ಬಾಲಕೃಷ್ಣ, ಬೋಳನ ಯಮುನಾ, ಕಾಳನ ಉದಯ ಅವರು ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮತ್ತೊಬ್ಬರ ಗುರುತು ಪತ್ತೆಯಾಗಿಲ್ಲ. ಮೃತದೇಹಗಳನ್ನು ಹೊರ ತೆಗೆಯಲಾಗಿದೆ.

03.00– ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದ್ದು ಪ್ರವಾಹ ಸಂತ್ರಸ್ಥರಿಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಾಗಿದೆ. ಪರಿಹಾರ ಕಾಮಗಾರಿಯಲ್ಲಿ ತೊಡಗಿಸಿಕೊಂಡಿರುವ ಜಿಲ್ಲೆಯ ಎಲ್ಲ ಅಧಿಕಾರಿಗಳೂ ಮುಂದಿನ ಮೂರು ದಿನಗಳ ರಜೆ ಅವಧಿಯಲ್ಲಿ ಕೇಂದ್ರಸ್ಥಾನ ಬಿಡದಂತೆ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಸೂಚಿಸಿದ್ದಾರೆ.

02.50–  ಬಾದಾಮಿ ತಾಲೂಕಿನ ವಿಶ್ವಪ್ರಸಿದ್ಧ ಪ್ರವಾಸಿ ತಾಣ ಪಟ್ಟದಕಲ್ಲು ಮಲಪ್ರಭೆಯ ನೀರಿನಿಂದ ಆವೃತವಾಗಿದೆ.

01.51– ಅಂಕೋಲಾ ತಾಲೂಕಿನ ಹೊನ್ನಳ್ಳಿ ರಾಷ್ಟ್ರೀಯ ಹೆದ್ದಾರಿ ಗಂಗಾವಳಿ ನದಿ ನೀರಿನಿಂದ ಜಲಾವೃತಗೊಂಡಿದೆ. ಕಾರೊಂದು ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ವಾಹನಗಳು ಸಾಲುಗಟ್ಟಿನಿಂತಿವೆ.

01.37–ಬಾದಾಮಿ ತಾಲೂಕಿನ ವಿಶ್ವಪ್ರಸಿದ್ಧ ಪ್ರವಾಸಿ ತಾಣ ಪಟ್ಟದಕಲ್ಲು ಮಲಪ್ರಭೆಯ ನೀರಿನಿಂದ ಆವೃತವಾಗಿದೆ.

01.17–ಅಪಾಯದ ಮಟ್ಟದಲ್ಲಿ ನೇತ್ರಾವತಿ: ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ
ಮಂಗಳೂರು:
ನೇತ್ರಾವತಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಉಪ್ಪಿನಂಗಡಿಯಿಂದ ಮಂಗಳೈರಿನವರೆಗೆ ನದಿ ತೀರದಲ್ಲಿ ವಾಸಿಸುತ್ತಿರುವವರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ‌. ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಜಿಲ್ಲಾಡಳಿತ ತೀವ್ರ ನಿಗಾ  ಇರಿಸಿದೆ. ತಗ್ಗು ಪ್ರದೇಶಗಳಲ್ಲಿ ನೋಡಲ್ ಅಧಿಕಾರಿಗಳು ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ನೇತ್ರಾವತಿ ನದಿ ನೀರಿನ ಮಟ್ಟ ಉಪ್ಪಿನಂಗಡಿ ಬಳಿ 31.5 ಮೀಟರ್ ಮತ್ತು ಬಂಟ್ವಾಳ ಸಮೀಪ 8.4  ಮೀಟರ್ ಇದೆ ಎಂದು ತಿಳಿಸಿದ್ದಾರೆ.

01.02–ಕೊಡಗಿನಲ್ಲಿ ಮಹಾಮಳೆ: ಭೂ ಕುಸಿತಕ್ಕೆ 3 ಬಲಿ
ಮಡಿಕೇರಿ: ಭಾಗಮಂಡಲ ಸಮೀಪದ ಕೋರಂಗಾಲದಲ್ಲಿ ಭೂ ಕುಸಿತಕ್ಕೆ ಮೂವರು ಬಲಿಯಾಗಿದ್ದಾರೆ.  ಕೇಂದ್ರ ಸಚಿವ ಸದಾನಂದ ಗೌಡ ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. 

12.56–ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಪ್ರವಾಹ ಪೀಡಿತ ಮುಧೋಳ ಹಾಗೂ ಜಮಖಂಡಿ ತಾಲ್ಲೂಕುಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು.

12.49–ಬಾದಾಮಿ ತಾಲೂಕಿನ ಶಿವಯೋಗ ಮಂದಿರ ಮಲಪ್ರಭಾ ನದಿ ಪ್ರವಾಹಕ್ಕೆ ಸಿಲುಕಿ ಜಲಾವೃತವಾಗಿದೆ

12.35–ಸೇನಾ ಹೆಲಿಕಾಪ್ಟರ್‌ ಮೂಲಕ 7 ಜನ ರಕ್ಷಣೆ 
ಬಾಗಲಕೋಟೆ: ಮುಧೋಳ ತಾಲ್ಲೂಕಿನ ರೂಗಿ ಗ್ರಾಮದ ಬಳಿ ಘಟಪ್ರಭಾ ನದಿ ಪ್ರವಾಹದಲ್ಲಿ ಸಿಲುಕಿದ್ದ 7 ಮಂದಿಯನ್ನು ಸೇನಾಪಡೆ ಹೆಲಿಕಾಪ್ಟರ್ ಮೂಲಕ ಶುಕ್ರವಾರ ರಕ್ಷಣೆ ಮಾಡಲಾಯಿತು. ಬೆಳಗಾವಿಯಿಂದ ಬಂದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ರಕ್ಷಣೆ ಕಾರ್ಯ ನಡೆಸಿತು. ಸೇನಾ ಸಿಬ್ಬಂದಿಗಳಿಗೆ ರೂಗಿ ಗ್ರಾಮದ ಜನತೆ ಧನ್ಯವಾದ ಹೇಳಿದರು. 

12.21–ಚಿಕ್ಕಮಗಳೂರು ಜಿಲ್ಲೆಯ ಕಳಸ ಬಳಿಯ ಅಬ್ಬುಗೂಡಿಯಲ್ಲಿ ಗುಡ್ಡದ ಮಣ್ಣು ಕುಸಿದು ಮನೆಗಳಿಗೆ ಹಾನಿಯಾಗಿದೆ.

12.08–ಉಪ್ಪಿನಂಗಡಿಯಲ್ಲಿ ನೇತ್ರಾವತಿ ಮತ್ತು ಕುಮಾರಧಾರ ನದಿ ನೀರು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಇಲ್ಲಿನ ಶ್ರಿ ಸಹಸ್ರಲಿಂಗೇಶ್ವರ ದೇವಾಲಯದ ಆವರಣವನ್ನು ಸುತ್ತುವರಿದೆ. ದೇವಾಲಯದ ಸುತ್ತ ಭಕ್ತಾರು ಜಮಾಯಿಸಿದ್ದು, ಸಂಗಮದ ನಿರೀಕ್ಷೆಯಲ್ಲಿ ಕಾತರದಿಂದ ಕಾಯುತ್ತಿದ್ದಾರೆ.

11.52–ಕೊಟ್ಟಿಗೆಹಾರ: ಬಣಕಲ್,ಕೊಟ್ಟಿಗೆಹಾರ ಸುತ್ತಮುತ್ತ ಭಾಗದಲ್ಲಿ ವಿದ್ಯುತ್ ಕಂಬಗಳು ರಸ್ತೆಗೆ ಉರುಳಿದ್ದು ಕೊಟ್ಟಿಗೆಹಾರದಲ್ಲಿ ವಿದ್ಯುತ್ ಸಮಸ್ಯೆ 5ನೇ ದಿನಕ್ಕೆ ಕಾಲಿಟ್ಟಿದೆ.

11.40–ಭೂಕುಸಿತದಲ್ಲಿ ಸಿಲುಕಿದ ಐವರು
ಮಡಿಕೇರಿ: ತಾಲ್ಲೂಕಿನ ಭಾಗಮಂಡಲ ಸಮೀಪದ ಕೋರಂಗಾಲದಲ್ಲಿ ಭೂಕುಸಿತ ಸಂಭವಿಸಿದ್ದು ಐವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಪ್ರವಾಹ ಉಕ್ಕೇರುತ್ತಿದ್ದು ಸ್ಥಳಕ್ಕೆ ಯಾರಿಗೆ ತೆರಳಲು ಸಾಧ್ಯವಾಗುತ್ತಿಲ್ಲ.

11.26–ಮುಧೋಳ ನಗರದ ಹೃದಯಭಾಗ ಹಾಗೂ ಬಸ್ ನಿಲ್ದಾಣದ ಸಮೀಪದ ಬಸವನಗುಡಿಯ ಮುಖ್ಯ ರಸ್ತೆ ಘಟಪ್ರಭಾ ನದಿ ನೀರಿನಿಂದ ಆವೃತವಾಗಿದೆ. ಪ್ರವಾಹದ ನೀರು ನಗರವನ್ನು ಇಬ್ಭಾಗವಾಗಿಸಿದೆ.

11.12–ಚಿಕ್ಕಮಗಳೂರು: ಜಿಲ್ಲೆಯ ಕಣಿವೆಹಳ್ಳಿ ಬಳಿ ರೈಲು ಹಳಿ ಮೇಲೆ ಗುಡ್ಡದ ಕಲ್ಲುಗಳು ಬಿದ್ದಿದ್ದು ಈ ಮಾರ್ಗದಲ್ಲಿ ರೈಲು ಸಂಚಾರವನ್ನು ಬೆಳಿಗ್ಗೆಯಿಂದಲೇ ನಿರ್ಬಂಧಿಸಲಾಗಿದೆ. ಅಧಿಕಾರಿಗಳು, ಸಿಬ್ಬಂದಿ ಸ್ಥಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

11.00–ನಂಜನಗೂಡಿನಲ್ಲಿ ಮಲ್ಲನ ಮೂಲೆ ಮಠ ಜಲಾವೃತಗೊಂಡಿದೆ.

10.51–ಸೇನಾ ಹೆಲಿಕಾಪ್ಟರ್ ಕಾರ್ಯಾಚರಣೆ; ನಡುಗಡ್ಡೆಯಲ್ಲಿದ್ದ 44 ಸಂತ್ರಸ್ತರ ರಕ್ಷಣೆ
ಬೆಳಗಾವಿ: ಬಾಗಲಕೋಟೆ ಬೆಳಗಾವಿ ಜಿಲ್ಲೆಯ ವಿವಿಧೆಡೆ ಪ್ರವಾಹದಿಂದಾಗಿ ನಡುಗಡ್ಡೆಯಾಗಿದ್ದ ಪ್ರದೇಶಗಳಲ್ಲಿ ಸಿಲುಕಿದ್ದ 44 ಮಂದಿಯನ್ನು ಸೇನೆಯ ಮೂರು ಹೆಲಿಕಾಪ್ಟರಗಳನ್ನು ಬಳಸಿ ರಕ್ಷಣೆ ಮಾಡಲಾಯಿತು. 

10.40– ಅಂಕೋಲಾ: ರಕ್ಷಣಾ ಕಾರ್ಯಾಚಣೆಗೆ ನೌಕಾಪಡೆಯ ಹೆಲಿಕಾಪ್ಟರ್
ಕಾರವಾರ:
ಅಂಕೋಲಾ ತಾಲ್ಲೂಕಿನಲ್ಲಿ ಗಂಗಾವಳಿ ನದಿಯ ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯಾಚರಣೆಗೆ ನೌಕಾಪಡೆಯ ಹೆಲಿಕಾಪ್ಟರ್ ಬಳಸಿಕೊಳ್ಳಲು ಜಿಲ್ಲಾಡಳಿತ ತೀರ್ಮಾನಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, 'ಯಾರೂ ಗಾಬರಿ, ಆತಂಕಕ್ಕೆ ಒಳಗಾಗಬೇಕಿಲ್ಲ. ಜಿಲ್ಲಾಡಳಿತ ರಕ್ಷಣಾ ಕಾರ್ಯಾಚರಣೆ ಮಾಡುತ್ತಿದೆ. ಗಂಗಾವಳಿ ನದಿ ತೀರದ ಸಾರ್ವಜನಿಕರು ಶಾಂತಿಯುತವಾಗಿದ್ದು, ಕಾರ್ಯಾಚರಣೆಗೆ ಸಹಕರಿಸಿ' ಎಂದು ಮನವಿ ಮಾಡಿದ್ದಾರೆ.

10.15– 1.20 ಲಕ್ಷ ಕ್ಯುಸೆಕ್ ಕಬಿನಿ ನದಿಗೆ
ಮೈಸೂರು:
ಕಬಿನಿ, ತಾರಕ ಹಾಗೂ ನುಗು ಜಲಾಶಯಗಳಿಂದ ಕಬಿನಿ ನದಿಗೆ 1.20 ಲಕ್ಷ ಕ್ಯುಸೆಕ್ ನಷ್ಟು ಪ್ರಮಾಣದಲ್ಲಿ ನೀರನ್ನು ಬಿಡಲಾಗುತ್ತಿದೆ‌. ಇದರಿಂದ ಮೈಸೂರು ಎಚ್.ಡಿ.ಕೋಟೆ ಸಂಪರ್ಕ  ಬಂದ್ ಆಗಿದೆ. ಮೈಸೂರು ಊಟಿ ರಸ್ತೆ, ಮೈಸೂರು ಸರಗೂರು ರಸ್ತೆಗಳು ಬಂದ್ ಆಗಿವೆ.  ಸಂಚಾರಕ್ಕೆ ಬದಲಿ ಮಾರ್ಗವನ್ನು ವ್ಯವಸ್ಥೆ ಮಾಡಲಾಗಿದೆ.

10.00– ಶಿರಸಿ- ಯಲ್ಲಾಪುರ ನಡುವಿನ ಬೇಡ್ತಿ ಸೇತುವೆ ಕೊಚ್ಚಿ ಹೋಗಿರುವುದು

09.48– ಜೆಡಿಎಸ್ ಶಾಸಕರಿಂದ ಒಂದು ತಿಂಗಳ ಸಂಬಳ ಪರಿಹಾರ ಕಾರ್ಯಕ್ಕೆ ದೇಣಿಗೆ

09.31–ಚಿಕ್ಕಮಗಳೂರು: ಕಳಸ- ಬಾಳೆಹೊನ್ನೂರು ಮಾರ್ಗದ ಮಹಾಲ್ ಗೋಡು ಬಳಿ ರಸ್ತೆ ಜಲಾವೃತವಾಗಿದ್ದು, ಸಂಚಾರ ಬಂದ್ ಆಗಿದೆ.

09.17–ಬೆಳಗಾವಿಯಲ್ಲಿ ಮತ್ತೆ ಅಬ್ಬರಿಸುತ್ತಿರುವ ಮಳೆ
ಬೆಳಗಾವಿ ನಗರದಲ್ಲಿ ರಾತ್ರಿಯಿಂದಲೂ ಮಳೆ ಮತ್ತೆ ಅಬ್ಬರಿಸುತ್ತಿದೆ. ಗುರುವಾರ ಕೆಲಕಾಲ ಬಿಡುವು ಕೊಟ್ಟಿದ್ದ ಮಳೆ, ರಾತ್ರಿಯಿಂದ ಜೋರಾಗಿದೆ. ಇದರಿಂದಾಗಿ ಜನರು ಮತ್ತಷ್ಟು ಆತಂಕಗೊಂಡಿದ್ದಾರೆ. ಮರಾಠಾ ಕಾಲೊನಿ, ಕಪಿಲೇಶ್ವರ ಕಾಲೊನಿ‌ ಮೊದಲಾದ ಕಡೆಗಳಲ್ಲಿ ಮನೆಗಳು ಜಲಾವೃತವಾಗಿವೆ.

ಶಿರಸಿ- ಯಲ್ಲಾಪುರ ಸಂಪರ್ಕ ಕಡಿತ 
09.03–ಶಿರಸಿ: ಬೇಡ್ತಿ ಸೇತುವೆಯ ಮೇಲೆ ಬೇಡ್ತಿ ನದಿ ನೀರು ಉಕ್ಕಿ ಹರಿಯುತ್ತಿರುವ ಕಾರಣ ಶಿರಸಿ- ಯಲ್ಲಾಪುರ ನಡುವಿನ ಏಕೈಕ ಸಂಪರ್ಕ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತೊಳಿಸಲಾಗಿದೆ.

08.53–ಮಡಿಕೇರಿ: ಕೊಡಗಿನಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ಮೈಸೂರು- ಮಡಿಕೇರಿ ಹೆದ್ದಾರಿ ಜಲಾವೃತಗೊಂಡಿದೆ. 

ಗದಗದಲ್ಲಿ ಮಲಪ್ರಭಾ ಪ್ರವಾಹ: ಸಂತ್ರಸ್ತರ ಏರ್ ಲಿಫ್ಟ್‌ಗೆ ಸಿದ್ಧತೆ 
08.40–ಗದಗ ಜಿಲ್ಲೆಯ ಹೊಳೆ ಆಲೂರು ಹೋಬಳಿ ಕೇಂದ್ರವು ಮಲಪ್ರಭಾ ನದಿ ಮತ್ತು ಬೆಣ್ಣೆಹಳ್ಳದ ಪ್ರವಾಹಕ್ಕೆ ತತ್ತರಿಸಿದೆ.  ಕೆಲವರು ಗ್ರಾಮಗಳಲ್ಲೇ ಉಳಿದುಕೊಂಡಿದ್ದು, ಅವರನ್ನು ಹೆಲಿಕಾಫ್ಟರ್‌ ಬಳಸಿ ಏರ್ ಲಿಫ್ಟ್ ಮಾಡುವುದಕ್ಕಾಗಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. 

08.10–ಮುಧೋಳದಲ್ಲಿ ವಾಸ್ತವ್ಯ ಹೂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಮುಂಜಾನೆ  ಘಟಪ್ರಭಾ ನದಿ ಪ್ರವಾಹದಿಂದ ಬಾಧಿತರಾಗಿರುವ ಸ್ಥಳೀಯರ ಅಹವಾಲು ಆಲಿಸಿದರು.

08.00–ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಬಂದ್‌
ಬಾಗಲಕೋಟೆ: ಕೊಣ್ಣೂರು- ಕುಳಗೇರಿ ಕ್ರಾಸ್ ನಡುವೆ ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಹೊಸ ಸೇತುವೆ ಪ್ರವಾಹದ ನೀರಿನಿಂದ ಆವೃತವಾಗಿದ್ದು, ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 219ರಲ್ಲಿ ರಸ್ತೆ ಸಂಚಾರ ಬಂದ್ ಆಗಿದೆ.

***

ಗುರುವಾರ (08–08–2019)

06.00– ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ತಮ್ಮ ಒಂದು ತಿಂಗಳ ವೇತನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವುದಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಫೇಸ್‌ಬುಕ್‌ನಲ್ಲಿ ತಿಳಿಸಿದ್ದಾರೆ. 

05.00– ನಂಜನಗೂಡು: ಕಬಿನಿ ನದಿ ಉಕ್ಕಿ ಹರಿಯುತ್ತಿದ್ದು, ಹದಿನಾರುಕಾಲು ಮಂಟಪ ಜಲಾವೃತಗೊಂಡಿದೆ. ನದಿಯಿಂದ ಭಾರೀ ಪ್ರಮಾಣದ ನೀರನ್ನು ಹೊರಬಿಡಲಾಗಿದೆ.
 

04.20– ದೇವದುರ್ಗ (ರಾಯಚೂರು): ಕೊಪ್ಪರ ಗ್ರಾಮದ ಐತಿಹಾಸಿಕ ಲಕ್ಷ್ಮಿ ನರಸಿಂಹ ದೇವಸ್ಥಾನ ಕೃಷ್ಣಾ ನದಿಯಲ್ಲಿ ಮುಳುಗಿದೆ. ಕ್ಷಣದಿಂದ ಕ್ಷಣಕ್ಕೆ ನೀರಿನ‌ ಮಟ್ಟ ಏರುತ್ತಿದ್ದು, ದೇವಸ್ಥಾನದ ಬಳಿ ಯಾರನ್ನೂ ಬಿಡುತ್ತಿಲ್ಲ. ನೀರಲ್ಲಿ ದೇವಸ್ಥಾನದ ಗರ್ಭಗುಡಿ ಮುಳುಗುತ್ತಿದ್ದರೂ ಪೂಜೆ ಮಾತ್ರ ನಿಂತಿಲ್ಲ. ಅರ್ಚಕರು ನಿತ್ಯ ಬೆಳಿಗ್ಗೆ ಹಗ್ಗದ ಸಹಾಯದ ದೇವಸ್ಥಾನದ ಗರ್ಭಗುಡಿಗೆ ತೆರಳಿ ಪೂಜೆ ‌ಸಲ್ಲಿಸುತ್ತಿದ್ದಾರೆ‌.

03.00– ಬೆಳಗಾವಿ: ನಿಪ್ಪಾಣಿ ಬಳಿಯ ವೇದಗಂಗಾ ನದಿಯ ಪ್ರವಾಹವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪರಿಶೀಲಿಸಿದರು.

02.44– ಬಿಬಿಎಂಪಿ ಸದಸ್ಯರು 1 ತಿಂಗಳ ವೇತನವನ್ನು ಪ್ರವಾಹ ಸಂತ್ರಸ್ತರಿಗೆ ನೀಡಲು ತಿರ್ಮಾನಿಸಿದ್ದು ಅದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಿದ್ದಾರೆ. 

ಮೈಸೂರು- ಕಲ್ಲಿಕೋಟೆ ಮಧ್ಯ ಬಸ್ ಸಂಚಾರ ಸ್ಥಗಿತ
02.34– ಮೈಸೂರು: ಕೇರಳದ ನೀಲಂಬುರ್ ನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿವೆ. ಹೀಗಾಗಿ ಮೈಸೂರು - ಕಲ್ಲಿಕೋಟೆ ಮಧ್ಯ ಸಂಚರಿಸಬೇಕಿದ್ದ ಎಲ್ಲ 13 ಬಸ್ ಗಳ ಸಂಚಾರವನ್ನು ಗುರುವಾರ ಸ್ಥಗಿತಗೊಳಿಸಲಾಗಿದೆ. 

02.27– ಶೃಂಗೇರಿಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು ತುಂಗಾ ನದಿ ಉಕ್ಕಿ ಹರಿಯುತ್ತಿದ್ದು ನಗರ ರಸ್ತೆಗಳು ನೀರಿನಿಂದ ಮುಳುಗಡೆಯಾಗಿವೆ. 

02.03– ಮೈಸೂರಿನ ಎಚ್‌.ಡಿ‌.ಕೋಟೆ ತಾಲ್ಲೂಕಿನ ಹಂಪಾಪುರ ಸಮೀಪದ ಮಾದಾಪುರ - ಬೆಳತ್ತೂರು ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.

01.43– ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಅಗತ್ಯ ನೆರವು: ರಕ್ಷಣಾ ‌ಸಚಿವ ರಾಜನಾಥ್ ಸಿಂಗ್
ಮುಖ್ಯಮಂತ್ರಿ ಯಡಿಯೂರಪ್ಪಗೆ ದೂರವಾಣಿ ಕರೆ ಮಾಡಿದ ಕೇಂದ್ರ ರಕ್ಷಣಾ ‌ಸಚಿವ ರಾಜನಾಥ್ ಸಿಂಗ್ ಅವರು ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ. ಸೇನಾ ಹೆಲಿಕಾಪ್ಟರ್ ಹಾಗೂ ಅಗತ್ಯ ಕೇಂದ್ರ ರಕ್ಷಣಾ ತಂಡಗಳನ್ನು  ಸಂಜೆಯೊಳಗೆ ಕಳುಹಿಸುವುದಾಗಿ ಹೇಳಿದ್ದಾರೆ. 

01. 30–ನಾಲ್ಕು ದಿನವಾದರೂ ಮುಕ್ತಗೊಳ್ಳದ ಹೂವಿನ ಹಡಗಿ ಸೇತುವೆ
ದೇವದುರ್ಗ (ರಾಯಚೂರು ಜಿಲ್ಲೆ): ರಾಯಚೂರಿಂದ ಕಲಬುರ್ಗಿ ಹಾಗೂ ಮಹಾರಾಷ್ಟ್ರ ರಾಜ್ಯವನ್ನು ಸಂಪರ್ಕಿಸುವ ತಾಲ್ಲೂಕಿನ ಹೂವಿನ ಹಡಗಿ ಸೇತುವೆ ಮುಳುಗಡೆಯಾಗಿ ನಾಲ್ಕು ದಿನವಾಗಿದ್ದು, ಕೃಷ್ಣಾ ನದಿ ನೀರಿನ ಪ್ರವಾಹ ಇಳಿಮುಖವಾಗದೇ ಇರುವುದರಿಂದ ವಾಹನ ಸಂಚಾರಕ್ಕೆ ಮುಕ್ತವಾಗಿಲ್ಲ‌.

ಭತ್ತದ ಗದ್ದೆಗಳು ಜಲಾವೃತ
01. 16–ದೇವದುರ್ಗ: ಇಲ್ಲಿಗೆ ಸಮೀಪದ ಹೂವಿನ ಹಡಗಿ ಬಳಿ ಕೃಷ್ಣಾ ನದಿ ಸೇತುವೆ ಬಳಿ ದಿನೇ ದಿನೇ ನೀರಿನ ಪ್ರಮಾಣ ಹೆಚ್ಚುತ್ತಿರುವುದರಿಂದ ನದಿಯಂಚಿನ ಭತ್ತದ ಗದ್ದೆಗಳು ಜಲಾವೃತವಾಗಿವೆ.

01. 03–ಎನ್ ಡಿಆರ್ ಎಫ್ ಕಾರ್ಯಾಚರಣೆ ಆರಂಭ
ಹುಬ್ಬಳ್ಳಿ: ಇ
ಲ್ಲಿನ ಇಂಗಳಹಳ್ಳಿಯಲ್ಲಿ ಬೆಣ್ಣೆಹಳ್ಳದ ಪ್ರವಾಹದ ನೀರಿನ ಮಧ್ಯೆ ಸಿಲುಕಿರುವ ಹನ್ನೊಂದು ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯನ್ನು ಎನ್ ಡಿಆರ್ ಎಫ್ ಸಿಬ್ಬಂದಿ ಆರಂಭಿಸಿದರು. ಒಟ್ಟು 24 ಮಂದಿಯ ತಂಡ ಸ್ಥಳಕ್ಕೆ ಬಂದಿದೆ.

12. 43–ಬೆಳಗಾವಿಯಲ್ಲಿ ಹಿರಣ್ಯಕೇಶಿ ನದಿ ಪ್ರವಾಹದಿಂದ ಮುಳುಗಡೆಯಾಗಿರುವ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಪಟ್ಟಣದ ಮಠ ಓಣಿ, ಕುಂಬಾರ ಗಲ್ಲಿ, ತಳವಾರ ಗಲ್ಲಿಯ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಯಿತು.

12. 32–ಸಂಗಮಕ್ಕೆ ಕ್ಷಣಗಣನೆ
ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿಯ ಕುಮಾರಾಧಾರಾ ಮತ್ತು ನೇತ್ರಾವತಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಇಲ್ಲಿನ ಸುಪ್ರಸಿದ್ಧ ಸಹಸ್ರಲಿಂಗೇಶ್ವರದಲ್ಲಿ ಸಂಗಮಕ್ಕೆ ಕ್ಷಣಗಣನೆ ಶುರುವಾಗಿದೆ. ದಕ್ಷಿಣದ ಕಾಶಿ ಎಂದೇ ಕರೆಯಲ್ಪಡುವ ಸಂಗಮದಲ್ಲಿ ಕರಾವಳಿ ಮಾತ್ರವಲ್ಲದೇ ರಾಜ್ಯ, ಹೊರ ರಾಜ್ಯದವರೂ ತಮ್ಮ ಹಿರಿಯರ ಅಪರ ಕ್ರಿಯೆ ನಡೆಸುತ್ತಾರೆ. ಸಂಗಮಕ್ಕೆ ಧಾರ್ಮಿಕವಾಗಿಯೂ ಅತ್ಯಂತ ಮಹತ್ವವಿದೆ.

12. 20–ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಹಾರಂಗಿ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದಿಂದ 10,000 ಕ್ಯುಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.

12. 08–ಗದಗ: ಸವದತ್ತಿ ಬಳಿ ನಿರ್ಮಿಸಿರುವ ನವಿಲುತೀರ್ಥ ಜಲಾಶಯದಿಂದ ದಾಖಲೆ ಪ್ರಮಾಣದಲ್ಲಿ ನೀರು ಹೊರಗೆ ಬಿಟ್ಟಿರುವುದರಿಂದ, ಮಲಪ್ರಭಾ ನದಿ ಪಾತ್ರದಲ್ಲಿ ಬರುವ ಗದಗ ಜಿಲ್ಲೆಯ ರೋಣ, ನರಗುಂದ ತಾಲ್ಲೂಕುಗಳ 13 ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. 

ನರಗುಂದ ತಾಲ್ಲೂಕಿನ ಕೊಣ್ಣೂರ, ವಾಸನ, ಲಖಮಾಪೂರ, ಬೂದಿಹಾಳ ಗ್ರಾಮಗಳು ಜಲಾವೃತಗೊಂಡಿವೆ. ಜಿಲ್ಲಾಡಳಿತವು ಈಗಾಗಲೇ ಈ ಪ್ರದೇಶಗಳ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ. ಜಿಲ್ಲೆಯಲ್ಲಿ ಬೆಣ್ಣೆಹಳ್ಳವೂ ತುಂಬಿ ಹರಿಯುತ್ತಿದ್ದು, ಬೆಣ್ಣಿಹಳ್ಳದ ಪ್ರವಾಹದಿಂದ ನರಗುಂದ ತಾಲ್ಲೂಕಿನ ಕುರ್ಲಗೇರಿ, ಸುರಕೋಡ ಗ್ರಾಮಗಳು ನಡುಗಡ್ಡೆಗಳಾಗಿವೆ.

11. 53–ಬಾಗಲಕೋಟೆಯ ಮುಧೋಳ ಹೊರವಲಯದ ಜೀರಗಾಳ-ಚಿಚಖಂಡಿ ನಡುವೆ ವಿಜಯಪುರ-ಧಾರವಾಡ ರಾಜ್ಯ ಹೆದ್ದಾರಿಯಲ್ಲಿ ಐದು ಕಿ.ಮೀ ದೂರ ಘಟಪ್ರಭಾ ನದಿ ನೀರು ವ್ಯಾಪಿಸಿದೆ

11. 41– ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ  75 ರಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಾಡಿ ಗ್ರಾಮದ ಉದನೆ ಎಂಬಲ್ಲಿ ರಸ್ತೆಗೆ ಕೆಂಪುಹೊಳೆ(ಅಡ್ಡಹೊಳೆಯ) ನೆರೆ ನೀರು ಬಂದಿದ್ದು  ವಾಹನಗಳ ಸಂಚಾರಕ್ಕೆ ತಡೆಯುಂಟಾಗಿದೆ.

11. 28– ದಕ್ಷಿಣಕನ್ನಡ ಜಿಲ್ಲೆ ಹಾಗೂ ಪಶ್ಚಿಮಘಟ್ಟ ಪ್ರದೇಶದಲ್ಲಿ ಇಂದು ಕೂಡಾ ಭಾರೀ ಮಳೆಯಾಗುತ್ತಿದೆ. ಮಳೆಯಿಂದಾಗಿ ಕುಮಾರಧಾರಾ ಮತ್ತು ನೇತ್ರಾವತಿ ನದಿ ಉಕ್ಕಿ ಹರಿಯುತ್ತಿದ್ದು ,ಜಿಲ್ಲೆಯ ಹಲವೆಡೆ ಪ್ರವಾಹದ ಭೀತಿ ಎದುರಾಗಿದೆ. 

11.16–ಮಲಪ್ರಭಾ ಪ್ರವಾಹ: ನರಗುಂದದಲ್ಲಿ ಗ್ರಾಮಗಳು ಜಲಾವೃತ
ಗದಗ:
ಸವದತ್ತಿ ಬಳಿ ನಿರ್ಮಿಸಿರುವ ನವಿಲುತೀರ್ಥ ಜಲಾಶಯದಿಂದ ದಾಖಲೆ ಪ್ರಮಾಣದಲ್ಲಿ ನೀರು ಹೊರಗೆ ಬಿಟ್ಟಿರುವುದರಿಂದ, ಮಲಪ್ರಭಾ ನದಿ ಪಾತ್ರದಲ್ಲಿ ಬರುವ ಗದಗ ಜಿಲ್ಲೆಯ ರೋಣ, ನರಗುಂದ ತಾಲ್ಲೂಕುಗಳ 13 ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. 

11.05–ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಬೆಳಗಾವಿ ನಗರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

10.54–ಚಾಮರಾಜನಗರ: ಜಿಲ್ಲೆಯಾದ್ಯಂತ ಬೆಳಿಗ್ಗೆಯಿಂದ ಎಡೆ ಬಿಡದೆ ಬಿರುಸಿನ ಮಳೆಯಾಗುತ್ತಿದೆ. ಕಬಿನಿ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು ಹಾಗೂ  ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.  

10.43–ಹೆಬ್ಬಳ ಜಲಾಶಯ ಭರ್ತಿ: ಸುಮಾರು ಆರೇಳು ವರ್ಷದಿಂದ ತುಂಬದ ಹೆಬ್ಬಳ್ಳ ಜಲಾಶಯ ಸತತ 60 ಗಂಟೆಗಳ ಮಳೆಗೆ ತುಂಬಿ ದಾಖಲೆ ನಿರ್ಮಿಸಿದೆ.

10.38–ಎಚ್.ಡಿ.ಕೋಟೆ- ಹುಣಸೂರು ಸಂಪರ್ಕ ಕಡಿತ
ಮೈಸೂರು:
ಹೆಬ್ಬಳ ಜಲಾಶಯ ಸಮೀಪ ಮರವೊಂದು ಉರುಳಿ ಬಿದ್ದಿದ್ದು, ಎಚ್.ಡಿ.ಕೋಟೆ ಮತ್ತು ಹುಣಸೂರು ಸಂಪರ್ಕ ಕಡಿತಗೊಂಡಿದೆ. ಸುರಿಯುತ್ತಿರುವ ಧಾರಾಕಾರ ಮಳೆಯು ಮರ ತೆರವು ಮಾಡಲು ಅಡ್ಡಿಯಾಗಿದೆ.‌ ನೂರಾರು ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿವೆ‌.

10.31–ಮಡಿಕೇರಿ- ವಿರಾಜಪೇಟೆ ಮಾರ್ಗಬೇತ್ರಿ ಸೇತುವೆ ಮುಳುಗಡೆಯಾಗಿದ್ದು ಅದರ ಮೇಲೆ ಕಾವೇರಿ ನೀರು ಹರಿಯುತ್ತಿದೆ

10.14–ಹುಬ್ಬಳ್ಳಿಯ ದೇವಿನಗರ ಜಲಾವೃತಗೊಂಡಿದ್ದು ಮನೆಗಳಲ್ಲಿ ಸಿಲುಕಿರುವ ಜನರ ರಕ್ಷಣೆ ಮಾಡಲಾಯಿತು​

09.54–ಮುಂದುವರಿದ ಜೋರು ಮಳೆ
ಬೆಳಗಾವಿ:
ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಜೋರು ಮಳೆ, ಗಾಳಿ ಮುಂದುವರಿದಿದೆ. ವಿದ್ಯುತ್ ಕಂಬಗಳು ಮುರಿದಿದ್ದು, ಟ್ರಾನ್ಸ್ ಫಾರ್ಮರ್ ಗಳು ಕೆಟ್ಟಿರುವುದರಿಂದ ಬಹುತೇಕ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆ ಇಲ್ಲ. ಬಹುತೇಕ ಅಪಾರ್ಟ್ಮೆಂಟ್ ಗಳ ಸೆಲ್ಲಾರ್ ಗಳಿಗೆ ನೀರು ನುಗ್ಗಿದೆ. ಧಾರಾಕಾರ ಮಳೆಯಿಂದಾಗಿ ಜನರು ಜರ್ಜರಿತವಾಗಿ ಹೋಗಿದ್ದಾರೆ

09.40–ಹುಬ್ಬಳ್ಳಿಯಲ್ಲೇ ನಿಂತ ತತ್ಕಾಲ್ ಎಕ್ಸ್‌ಪ್ರೆಸ್ ರೈಲು
ಬೆಳಗಾವಿ: ಬೆಂಗಳೂರಿನಿಂದ ಬೆಳಗಾವಿಗೆ ಹೊರಟಿದ್ದ ತತ್ಕಾಲ್ ವಿಶೇಷ ರೈಲನ್ನು ಹುಬ್ಬಳ್ಳಿ ನಿಲ್ದಾಣದಲ್ಲೇ ನಿಲ್ಲಿಸಲಾಗಿದೆ. 'ಬೆಳಗಾವಿಯಲ್ಲಿ ಧಾರಾಕಾರ ಮಳೆ ಇರುವುದರಿಂದ ಈ ರೈಲು ಬೆಳಗಾವಿಗೆ ಬರಲಾಗದ ಸ್ಥಿತಿ‌ ಇದೆ. ಹೀಗಾಗಿ ಧಾರವಾಡ ಹಾಗೂ ಬೆಳಗಾವಿಗೆ ಹೋಗುವ ಪ್ರಯಾಣಿಕರ ಅನುಕೂಲಕ್ಕಾಗಿ 15 ಬಸ್ಸುಗಳನ್ನು ರೈಲು ನಿಲ್ದಾಣದಿಂದಲೇ ಒದಗಿಸಲಾಗಿದೆ. ಯಾವುದೇ ಪ್ರಯಾಣಿಕರಿಗೂ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚಿಸಿದ್ದೇನೆ' ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದ್ದಾರೆ.

09.26– ಭೋರ್ಗರೆಯುತ್ತಿರುವ ಕಬಿನಿ; ಪ್ರವಾಹದ ಎಚ್ಚರಿಕೆ: ಮೈಸೂರು: ಕೇರಳದ ವೈನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ 23 ಸಾವಿರ ಕ್ಯುಸೆಕ್ ಗೂ ಹೆಚ್ಚಿದ್ದು ನೀರನ್ನು ಹೊರಬಿಡಲಾಗುತ್ತಿದೆ. 

09.16– ಹುಬ್ಬಳ್ಳಿಯ ಉಣಕಲ್ ಕೆರೆಯಿಂದ ಹರಿದುಬರುತ್ತಿರುವ ನೀರು ಹೂಗಾರ ಬಡಾವಣೆ, ಲಿಂಗರಾಜನಗರ, ಶ್ರೀನಗರ, ದೇವಿನಗರದ ನೂರಾರು ಮನೆಗಳಿಗೆ ನುಗ್ಗಿದೆ.


ಉಣಕಲ್ ಕೆರೆ ನೀರು

09.00– ಬೆಣ್ಣೆಹಳ್ಳದ ಹರಿವು ಹೆಚ್ಚಳ:  60 ಕುಟುಂಬಗಳ ಸ್ಥಳಾಂತರ

ಹುಬ್ಬಳ್ಳಿ: ನಿರಂತರ ಮಳೆಯಿಂದಾಗಿ ಹುಬ್ಬಳ್ಳಿ ತಾಲೂಕಿನ ಬೆಣ್ಣಿಹಳ್ಳ ಹಾಗೂ ತುಪ್ಪರಿಹಳ್ಳ ದಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ಕಿರೇಸೂರು ಹಾಗೂ ಹೆಬಸೂರು ಗ್ರಾಮದ 60 ಕುಟುಂಬಗಳನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಮಂಟೂರು ಹಾಗೂ ಶಿರಗುಪ್ಪಿ ಗ್ರಾಮದ 35 ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದ್ದು, ಶೀಘ್ರವಾಗಿ ಪುನರ್ವಸತಿ ಕೇಂದ್ರಗಳನ್ನು‌ ತೆರೆಯಲಾಗುತ್ತಿದೆ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.

08.11–ಉಣಕಲ್ ಕೆರೆಗೆ ಕೋಡಿ: ಹೆಚ್ಚಿದ ಆತಂಕ

ಹುಬ್ಬಳ್ಳಿ: ಕೋಡಿ ಬಿದ್ದಿರುವ ಉಣಕಲ್ ಕೆರೆಯಿಂದ ವೇಗವಾಗಿ ನೀರು ಹರಿದು ಹೊರ ಬರುತ್ತಿದ್ದು, ಲಿಂಗರಾಜ ನಗರದ ಕೆಲ‌ ಮನೆಗಳಿಗೆ ಬುಧವಾರ ತಡರಾತ್ರಿ ನೀರು ಹೊಕ್ಕಿವೆ.

ತಡರಾತ್ರಿಯೂ ಕಾರ್ಯಾಚರಣೆ ನಡೆಸಿರುವ ಪೊಲೀಸರು ಹಾಗೂ ಪಾಲಿಕೆ ಸಿಬ್ಬಂದಿ ನೀರು ಸರಾಗವಾಗಿ ಹೋಗುವಂತೆ ಮಾಡಲು ಹರಸಾಹಸ ಪಡುತ್ತಿದ್ದರು. ಉತ್ತರಾಧಿಮಠದ ಬಳಿ ಇರುವ ದೇವಿನಗರದ ಅಪಾರ್ಟ್ ಮೆಂಟ್ ನ ನಿವಾಸಿಗಳು ಮಧ್ಯರಾತ್ರಿ ದಿನಸಿ ಸಾಮಾನು ತೆಗೆದುಕೊಂಡು ಬೇರೆಡೆ ಹೋಗುತ್ತಿದ್ದ ಚಿತ್ರಣ ಕಂಡುಬಂತು. ಮಧ್ಯರಾತ್ರಿಯೂ ಮಳೆ ಅಬ್ಬರ ಜೋರಾಗಿತ್ತು. ಇದೇ ರೀತಿ ಮಳೆ ಮುಂದುವರಿದರೆ ಲಿಂಗರಾಜ ನಗರ, ದೇವಿ ನಗರ, ಬನಶಂಕರಿ ಬಡಾವಣೆ, ಜಗದೀಶ ನಗರ, ಕಾಳಿದಾಸ ನಗರದ ಮನೆಗಳಲ್ಲಿ ನೀರು ಹೋಗುವ ಆತಂಕ ಎದುರಾಗಿದೆ.

ಬುಧವಾರ, 7–08–2019

ವಿಡಿಯೊ | ಮೈದುಂಬಿದೆ ಘಟಪ್ರಭಾ, ಗೋಕಾಕ ಜಲಪಾತ ಈಗ ರುದ್ರ, ರಮಣೀಯ

ಹುಬ್ಬಳ್ಳಿಯಲ್ಲಿ ನಿರಂತರ ಮಳೆ: ಕೆಪಿಎಲ್ ಪಂದ್ಯ ಬೆಂಗಳೂರಿಗೆ ಸ್ಥಳಾಂತರ

ಹುಬ್ಬಳ್ಳಿ: ನಗರದಲ್ಲಿ ನಿರಂತರವಾಗಿ ಮಳೆ ಬೀಳುತ್ತಿರುವ ಕಾರಣ ಈ ಬಾರಿಯ ಕೆಪಿಎಲ್ ಟೂರ್ನಿಯ ಹುಬ್ಬಳ್ಳಿ ಆವೃತ್ತಿಯ ಪಂದ್ಯಗಳನ್ನು ಬೆಂಗಳೂರು ಹಾಗೂ ಮೈಸೂರಿಗೆ ಸ್ಥಳಾಂತರಿಸಲಾಗಿದೆ.

ವಾಣಿಜ್ಯ ನಗರಿಯಲ್ಲಿ ಇದೇ 21ರಿಂದ ಪಂದ್ಯಗಳು ನಡೆಯಬೇಕಿದ್ದವು. ಒಟ್ಟು 7 ಪಂದ್ಯಗಳು ಆಯೋಜನೆಯಾಗಿದ್ದವು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಬುಧವಾರ ತುರ್ತು ಸಭೆ ನಡೆಸಿ ಹುಬ್ಬಳ್ಳಿ ಎಲ್ಲ ಪಂದ್ಯಗಳನ್ನು ಸ್ಥಳಾಂತರ ಮಾಡಲು ನಿರ್ಧರಿಸಿತು. ಹೋದ ವರ್ಷ ಕೂಡ ಮಳೆಯ ಕಾರಣಕ್ಕೆ ಪಂದ್ಯಗಳನ್ನು ಸ್ಥಳಾಂತರಿಸಲಾಗಿತ್ತು.

 

ವಿಡಿಯೊ | ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಮಳೆ

 

ವಿಡಿಯೊ | ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿರುಸು ಮಳೆ

 

ವಿಡಿಯೊ | ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಚಿಕ್ಕಮಗಳೂರು ಜಿಲ್ಲೆಯ 5 ತಾಲ್ಲೂಕುಗಳ ಶಾಲಾ ಕಾಲೇಜಿಗೆ ಆ.8ರಂದು ರಜೆ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿದ್ದು, ಮುನ್ನೆಚ್ಚರಿಕೆಯಾಗಿ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ ಮತ್ತು ಎನ್ಆರ್‌ ಪುರ ತಾಲ್ಲೂಕುಗಳ ಶಾಲಾಕಾಲೇಜುಗಳಿಗೆ ಆ.8ರಂದು ರಜೆ ಘೋಷಿಸಲಾಗಿದೆ. 

ಮಳೆ ಜೋರಾಗಿದ್ದು ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಮುಂಜಾಗ್ರತೆಯಾಗಿ ಐದು ತಾಲ್ಲೂಕುಗಳಲ್ಲಿ ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪಿಯು ಕಾಲೇಜುಗಳಿಗೆ ಆ.8ರಂದು ರಜೆ ನೀಡಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.


ಬೀದರ್ ನಲ್ಲಿ 10 ನಿಮಿಷ ಮಳೆ ಸುರಿಯಿತು.

  

04.00– ಶಿರಾಡಿ ಘಾಟಿ: ಮರ ಬಿದ್ದು ಸಂಚಾರ ಸ್ಥಗಿತ

ಶಿರಾಡಿ ಘಾಟಿಯ ಕೊಡ್ಯಕಲ್ ಎಂಬಲ್ಲಿ ಮರ ಬಿದ್ದು, ಅರ್ಧ ಗಂಟೆ ಸಂಚಾರ ಸ್ಥಗಿತಗೊಂಡಿದೆ. ಮರ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಒಂದು ಗಂಟೆಯಲ್ಲಿ ಸಂಚಾರ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಯಾದಗಿರಿ-ರಾಯಚೂರು ಜಿಲ್ಲೆಗಳನ್ನು ಪ್ರತ್ಯೇಕಿಸುವ ತಿಂಥಣಿ ಸೇತುವೆ ಕೆಳಗೆ ವಿಶಾಲ ಪಾತ್ರದಲ್ಲಿ ಹರಿಯುತ್ತಿರುವ ಕೃಷ್ಣಾ ನದಿ.


ತಿಂಥಣಿ ಸೇತುವೆ ಕೆಳಗೆ ವಿಶಾಲ ಪಾತ್ರದಲ್ಲಿ ಹರಿಯುತ್ತಿರುವ ಕೃಷ್ಣಾ ನದಿ.

 

03.40– ಕೊಡಗಿನಲ್ಲಿ ರೆಡ್ ಅಲರ್ಟ್: ಮತ್ತೆ ಎರಡು ದಿನ ‌ರಜೆ ವಿಸ್ತರಣೆ

ಮಡಿಕೇರಿ: ಕೊಡಗಿನಲ್ಲಿ ರೆಡ್ ಅಲರ್ಟ್ ಮುಂದುವರೆಸಲಾಗಿದೆ. ಮಳೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದ್ದು, ಆ.8 ಹಾಗೂ 9ರಂದು ಜಿಲ್ಲೆಯ ಎಲ್ಲ ಶಾಲಾ, ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶಿಸಿದ್ದಾರೆ.


ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್.ಪುರ ತುಂಗಾ ನದಿಯ ಭೋರ್ಗರೆದು ಹರಿಯುತ್ತಿದ್ದು, ತೋಟಗಳು ಜಲಾವೃತವಾಗಿದೆ.

 02.55–ಹೇಮಾವತಿ ಜಲಾಶಯದಿಂದ ಹೇಮಾವತಿ ಕಾಲುವೆ ಜಾಲಕ್ಕೆ ಇಂದಿನಿಂದ  14.53 ಟಿಎಂಸಿ ನೀರು ಬಿಡಲು ಸರ್ಕಾರ ಅನುಮತಿ ನೀಡಿದೆ.

 02.30–ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವಿನಲ್ಲಿ ಭಾರಿ ಹೆಚ್ಚಳ ಉಂಟಾಗಿದೆ. ಬುಧವಾರ 40,781 ಕ್ಯುಸೆಕ್‌ ಒಳಹರಿವು ದಾಖಲಾಗಿದ್ದು, 1,612.44 ಅಡಿ ನೀರಿನ ಸಂಗ್ರಹವಾಗಿದೆ.


ತುಂಗಭದ್ರಾ ಜಲಾಶಯ

 02.18–ಬೆಳಗಾವಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದರೂ ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಿಂದ ​ವಿಮಾನಗಳ ಹಾರಾಟಕ್ಕೆ ಯಾವುದೇ ತೊಂದರೆಯಾಗಿಲ್ಲ.

 02.06–ಕೃಷ್ಣಾ ಕಣಿವೆಯಲ್ಲಿ ಭಾರಿ ವರ್ಷಧಾರೆ, ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ವಿವಿಧ ಗ್ರಾಮಗಳ ಪಕ್ಕದ ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ

 01.46–ಬೆಳಗಾವಿ ನಗರದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಆದರೆ, ಕುಡಿಯುವ ನೀರು ಸರಬರಾಜು ಇಲ್ಲದೇ ಇರುವುದರಿಂದ ಜನರು ಜೀವ ಜಲಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

 01.26–ಬೆಳಗಾವಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿರುವುದರಿಂದಾಗಿ, ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳು, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಿಗೆ ಆ. 8ರಿಂದ 10ರವರೆಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ.

 12.59–ಮಲಪ್ರಭಾ ನದಿಯಿಂದ ದಾಖಲೆ ಪ್ರಮಾಣದಲ್ಲಿ ನೀರು ಹೊರಕ್ಕೆ  

12.42–ಯಲ್ಲಾಪುರ (ಉತ್ತರ ಕನ್ನಡ): ಇಲ್ಲಿಗೆ ಪ್ರವಾಸಕ್ಕೆ ಬಂದು ನೀರಿನಲ್ಲಿ ಸಿಲುಕಿದ್ದ ಮಹಿಳೆ ಸೇರಿ ಆರು ಜನರನ್ನು ರಕ್ಷಣೆ ಮಾಡಲಾಗಿದೆ. ಹುಬ್ಬಳ್ಳಿಯಿಂದ ಹತ್ತು ಜನರ ತಂಡ ಯಲ್ಲಾಪುರ ತಾಲ್ಲೂಕಿನ ಅರಬೈಲ್ ಘಟ್ಟದ ಶಿರ್ಲೆ ಫಾಲ್ಸ್ ಗೆ ಪ್ರವಾಸಕ್ಕೆ ಬಂದಿತ್ತು.

12.40–ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಬಳಿಯ ಚಂದನ ಹೊಸುರು ಗ್ರಾಮದಲ್ಲಿ ಮನೆ ಕುಸಿದು ಯಲ್ಲಪ್ಪ ಗಂಗಾರಾಮ ಬಣ್ಣಾವರ (30) ಮೃತರಾಗಿದ್ದಾರೆ.

12.39–ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಮಲ್ಲಮ್ಮನ ಬೆಳವಡಿ–ಧಾರವಾಡ ಸಂಪರ್ಕ ರಸ್ತೆಯಲ್ಲಿ ಮರ ಬಿದ್ದಿದ್ದು, ಸಂಚಾರ ಸ್ಥಗಿತಗೊಂಡಿದೆ.

12.33–ಶಿರಸಿ- ಹಾವೇರಿ ಮಾರ್ಗದ 4ರ ಕತ್ರಿ ಹನುಮನಕೊಪ್ಪದ ಬಳಿ ಚಲಿಸುತ್ತಿದ್ದ ಬಸ್ಸಿನ‌ ಮೇಲೆ ಮರ ಬಿದ್ದಿದ್ದು, ಪ್ರಯಾಣಿಕರಿಗೆ ತೊಂದರೆಯಾಗಿಲ್ಲ ಎಂದು ಪ್ರಾಥಮಿಕ‌ ವರದಿಗಳು ಹೇಳಿವೆ

12.28–ಕೊಡಗಿನಲ್ಲಿ ಮಳೆ ಅಬ್ಬರ

12.23–ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮಿರ್ಜಿ ಗ್ರಾಮದಲ್ಲಿ ಬುಧವಾರ ಘಟಪ್ರಭಾ ನದಿಯ ಪ್ರವಾಹದ ನೀರು ಊರೊಳಗೆ ನುಗ್ಗಿದ್ದು ಜನ ಜೀವನ ದುಸ್ತರವಾಗಿದೆ. 

12.12–ದಕ್ಷಿಣ ಕನ್ನಡ ಮತ್ತು ಹಾಸನ ಜಿಲ್ಲೆಗಳ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 234ರ ಮಾರ್ಗದ ಚಾರ್ಮಾಡಿ ಘಾಟಿಯಲ್ಲಿ ಒಂಬತ್ತು ಸ್ಥಳಗಳಲ್ಲಿ ಭೂಕುಸಿತ ಸಂಭವಿಸಿದೆ. ಈ ಮಾರ್ಗದಲ್ಲಿ ವಾಹನ ಸಂಚಾರವನ್ನು 2 ದಿನ ಸಂಪೂರ್ಣ ಬಂದ್ ಮಾಡಲಾಗಿದೆ.

11.58–ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಕೊಣ್ಣೂರು ಪಟ್ಟಣ ಸಂಪೂರ್ಣ ಮುಳುಗಿದೆ.

11.54– ಚಾರ್ಮಾಡಿ ಘಾಟಿ ರಸ್ತೆ ಬಂದ್‌ ಆಗಿರುವುದರಿಂದ ಕೊಟ್ಡಿಗೆಹಾರದಲ್ಲಿ ವಾಹನಗಳನ್ನು ತಡೆಯಲಾಗಿದೆ. 

11.50– ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹಂತೂರಿನಲ್ಲಿ ಇಸ್ಕಾನ್ ಸಂಸ್ಥೆಯ ಸದಸ್ಯರು ವಾಸವಿದ್ದ ಮನೆಗೆ ಹೇಮಾವತಿ ನದಿ ನೀರು ನುಗ್ಗಿತ್ತು. ಸ್ಥಳೀಯ ಯುವಕರು, ಅಗ್ನಿಶಾಮಕ ದಳದ ಸಿಬ್ಬಂದಿ ಮನೆಯಲ್ಲಿದ್ದವರನ್ನು ರಕ್ಷಿಸಿದ್ದಾರೆ.

11.30– ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಂತೂರಿನಲ್ಲಿ ಹೇಮಾವತಿ ನದಿ ಮೈದುಂಬಿ ಹರಿಯುತ್ತಿರುವುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು