ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನ ಪಯಣ ಮುಗಿಸಿದ ‘ಬಕಾಲ ಕವಿ’ ಸಿದ್ದಯ್ಯ

Last Updated 18 ಅಕ್ಟೋಬರ್ 2019, 10:01 IST
ಅಕ್ಷರ ಗಾತ್ರ

ತುಮಕೂರು: ‘ಬಕಾಲ ಕವಿ’ಯಂದು ಹೆಸರಾದ ಸಾಹಿತಿ ಕೆ.ಬಿ.ಸಿದ್ದಯ್ಯ ಅವರು ಬರಹಕ್ಕಿಂತ ನಡೆ, ನುಡಿಯಿಂದ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದ್ದರು. ವಿಶಿಷ್ಟ ಬರಹಗಳಿಂದಲೇ ಸಾಹಿತ್ಯ ವಲಯದಲ್ಲಿ ಗಮನ ಸೆಳೆದಿದ್ದರು.

ಖಂಡಕಾವ್ಯವನ್ನು ಆಯ್ಕೆ ಮಾಡಿಕೊಂಡು ದೇಶೀಯತೆ ಮೂಲಕ ಜಗತ್ತನ್ನು ಕಾಣಲು ಬಯಸಿದ್ದರು. ಕಾವ್ಯದಲ್ಲಿ ಅಧ್ಯಾತ್ಮ ಪೋಣಿಸುವುದರಲ್ಲಿ ಪರಿಣಿತರು. ಭಾಷಣ ಶುರು ಮಾಡಿದರೆ ಸಿದ್ದಯ್ಯ ಅವರ ಮಾತನಲ್ಲಿ ಹೊಸ ವಿಷಯ ಪ್ರಸ್ತಾಪ ಆಗುತ್ತಿದ್ದವು. ಕೆಲವೊಮ್ಮೆ ಅವು ಗಂಭೀರ ವಾಗ್ವಾದಕ್ಕೂ ಕಾರಣ ಆಗುತ್ತಿದ್ದವು.

ದಲಿತ, ಬಂಡಾಯದ ಸಾಹಿತ್ಯ ಚಿಂತಕರಾದ ಇವರು ವಿಮರ್ಶೆಯಲ್ಲೂ ಕೃಷಿ ಮಾಡಿದ್ದರು. ದಕ್ಲಕಥಾದೇವಿ, ಬಕಾಲ, ಅನಾತ್ಮ, ಗಲ್ಲೇಬಾನಿ ಎಂಬ ಖಂಡಕಾವ್ಯಗಳು ಇವರ ಕೈಯಿಂದ ರಚಿಸಲ್ಪಟ್ಟಿವೆ. ನಾಲ್ಕು ಶ್ರೇಷ್ಠ ಸತ್ಯಗಳು ಎನ್ನುವ ಕೃತಿಯನ್ನು ಸಂಪಾದಿಸಿದ್ದರು.

ದಲಿತ ಚಳವಳಿಯೊಂದಿಗೆ ನಡೆದು ಬಂದ ಸಿದ್ದಯ್ಯ ಅವರು ರಾಜ್ಯದ ಸಾಹಿತ್ಯ ವಲಯದಲ್ಲಿ ಎದ್ದು ಕಾಣುತ್ತಿದ್ದರು.

ಸಿದ್ದಯ್ಯ ಅವರ ಹುಟ್ಟೂರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲ್ಲೂಕಿನ ಕೆಂಕೆರೆ. ಹುಟ್ಟಿದ್ದು 1954ರ ಮಾರ್ಚ್‌ 2ರಂದು. ತಂದೆ ಬೈಲಪ್ಪ. ತಾಯಿ ಅಂತೂರಮ್ಮ.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲೀಷ್‌ನಲ್ಲಿ ಎಂ.ಎ. ಪದವಿ ಗಳಿಸಿದ ಬಳಿಕ, ಅವರು ತುಮಕೂರಿನ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಕಾರ್ಯ ಆರಂಭಿಸಿ, ಪ್ರಾಂಶುಪಾಲರಾಗಿ ನಿವೃತ್ತರಾದರು. ತುಮಕೂರು ರೈಲು ನಿಲ್ದಾಣ ಸಮೀಪದ ಉಪ್ಪಾರಹಳ್ಳಿಯಲ್ಲಿ ನೆಲೆಸಿದ್ದರು.

ಕಾಂಗ್ರೆಸ್‌ ಮುಖಂಡ ಜಿ.ಪರಮೇಶ್ವರ್ ಅವರ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಲ್ಲಿದ್ದರೂ, ಪರಮೇಶ್ವರ್‌ ಒಳಮೀಸಲಾತಿ ಪರ ಇಲ್ಲ ಎಂಬ ಕಾರಣಕ್ಕೆ ‘ಕಾಂಗ್ರೆಸ್‌ ಗೆಲ್ಲಿಸಿ, ಪರಮೇಶ್ವರ್ ಸೋಲಿಸಿ’ ಎಂಬ ಅಭಿಯಾನ ಆರಂಭಿಸಿದ್ದರು. ಇದರಿಂದ ವಿವಾದ ಬುಗಿಲೆದ್ದು ಪರ–ವಿರೋಧದ ಚರ್ಚೆ ಚುನಾವಣಾ ಕಾಲದಲ್ಲಿ ತೀವ್ರಗೊಂಡಿತ್ತು.

ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಸಿದ್ದಯ್ಯ ಮನೆಗೆ ಕರೆಸಿಕೊಂಡು ಟೀಕೆಗೂ ಗುರಿಯಾಗಿದ್ದರು. ಕಾರ್ಯಕ್ರಮವೊಂದರಲ್ಲಿ ಸಾಹಿತಿ ದೇವನೂರು ಮಹಾದೇವ ಅವರನ್ನು ಟೀಕೆ ಮಾಡಿ, ಬೌದ್ಧಿಕ ವಲಯದಲ್ಲಿ ಸಂಘರ್ಷಕ್ಕೆ ಕಿಡಿಹೊತ್ತಿಸಿದ್ದರು.

ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದ ಇವರು ಪಟ್ಟಿ ಬಿಡುಗಡೆಯಾಗುವ ಮೊದಲೇ ಸಮಿತಿಯಿಂದ ಹೊರಬಂದಿದ್ದರು. ಬಳಿಕ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿತ್ತು. ಇದು ಕೂಡ ಚರ್ಚೆಗೆ ಎಡೆಕೊಟ್ಟಿತ್ತು.

ಸಾಹಿತಿ ಯು.ಆರ್.ಅನಂತಮೂರ್ತಿ ಅವರ ಶಿಷ್ಯರಾಗಿದ್ದರು. ಕಾಂಗ್ರೆಸ್‌ನ ಹಿರಿಯ ಮುಖಂಡ ಸಿದ್ದರಾಮಯ್ಯ ಅವರ ಆಪ್ತರಾಗಿದ್ದರು. ಬುದ್ಧ ಮತ್ತು ಅಲ್ಲಮನ ಕುರಿತು ಗಂಭೀರವಾಗಿ ಓದಿಕೊಂಡಿದ್ದರು. ಅಲ್ಲಮನ ವಚನಗಳನ್ನು ಕೇಳುಗರಿಗೆ ಮನಮುಟ್ಟುವಂತೆ ವಿವರಿಸುತ್ತಿದ್ದರು. ಒಳಮೀಸಲಾತಿಯ ಪರವಾದ ಹೋರಾಟದಲ್ಲೂ ಗುರುತಿಸಿಕೊಂಡಿದ್ದರು.

ಇವರಿಗೆ 2013ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಬಂದಿತ್ತು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 2004ರಲ್ಲಿಯೇ ಸಂದಿತ್ತು. ಎಲ್ಲರೊಂದಿಗೆ ಇದ್ದ ಸಿದ್ದಯ್ಯ ಅವರು ಈಗ ಇಲ್ಲ ಎಂಬುದು ಸಾಹಿತ್ಯ ಸೇರಿದಂತೆ ಸಾಮಾಜಿಕ ವಲಯದಲ್ಲಿಯೂ ಕೊರತೆಯನ್ನು ಸೃಷ್ಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT