ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಬಂದ್ ತೆರವಿಗೆ ಬಿಎಸ್‌ವೈ ಮೇಲೆ ಕೇರಳದ ಒತ್ತಡ

ಕರ್ನಾಟಕಕ್ಕೆ ಮಗ್ಗುಲ ಮುಳ್ಳಾದ ಕಾಸರಗೋಡು ಕೋವಿಡ್‌–19 ಪ್ರಕರಣಗಳು: ಆರೋಗ್ಯ ಇಲಾಖೆ
Last Updated 2 ಏಪ್ರಿಲ್ 2020, 13:40 IST
ಅಕ್ಷರ ಗಾತ್ರ
ADVERTISEMENT
""
""
""

ಬೆಂಗಳೂರು: ಕೇರಳದ ಕಾಸರಗೋಡು ಜಿಲ್ಲೆ ಇಡೀ ದೇಶದ ಕೊರೊನಾ ಸೋಂಕಿತರ ‘ಹಾಟ್‌ಸ್ಪಾಟ್‌’ ಎನಿಸಿದೆ. ಈ ಜಿಲ್ಲೆಗೆ ಹೊಂದಿಕೊಂಡಿರುವ ಕರ್ನಾಟಕದ ಎಲ್ಲ ಗಡಿಗಳನ್ನೂ ತೆರೆಯಬೇಕು. ರೋಗಿಗಳನ್ನು ಸಾಗಿಸಲು ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮೇಲೆ ಕೇರಳ ಒತ್ತಡ ಹೆಚ್ಚಾಗಿದೆ.

ಕೇರಳ ಮೂಲದ ಪ್ರಭಾವಿ ಸಂಘಟನೆಗಳು, ಮಾಧ್ಯಮಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿವೆ. ನ್ಯಾಯಾಲಯದ ಮೆಟ್ಟಿಲು ಹತ್ತಿ ಗಡಿ ತೆರೆಸುವ ಪ್ರಯತ್ನದ ಜತೆಗೆ, ಎಚ್‌.ಡಿ.ದೇವೇಗೌಡ ಮತ್ತು ಸಿದ್ದರಾಮಯ್ಯ ಅವರಿಂದಲೂ ಒತ್ತಡ ಹಾಕಿಸುವ ಪ್ರಯತ್ನವನ್ನೂ ನಡೆಸಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

‘ರಾಜ್ಯದ ಗಡಿ ಬಾಗಿಲುಗಳನ್ನು ತೆರೆಯುವಂತೆ ಕೇರಳ ನಿರಂತರ ಒತ್ತಡ ಹೇರುತ್ತಿದೆ. ಇತರ ಯಾವುದೇ ರಾಜ್ಯಗಳು ಈ ರೀತಿ ವರ್ತಿಸುತ್ತಿಲ್ಲ. ಆಯಾಯ ರಾಜ್ಯಗಳ ರೋಗಿಗಳನ್ನು ತಮ್ಮ ರಾಜ್ಯಗಳಲ್ಲಿಯೇ ಚಿಕಿತ್ಸೆಗೆ ಒಳಪಡಿಸುತ್ತಿವೆ. ಕೇರಳಕ್ಕೆ ಅಗತ್ಯ ವಸ್ತುಗಳ ಸಾಗಣೆ ಮೇಲೆ ಯಾವುದೇ ನಿರ್ಬಂಧವಿಲ್ಲ. ಅಂತರ ರಾಜ್ಯ ಜನ ಸಂಚಾರವನ್ನು ನಿರ್ಬಂಧಿಸುವ ಸಂಬಂಧ ಮುಖ್ಯಮಂತ್ರಿಯವರು ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದಾರೆ’ ಮುಖ್ಯಮಂತ್ರಿಯವರ ಆಪ್ತ ಮೂಲಗಳು ಹೇಳಿವೆ.

ಕಾಸಗೋಡು ಜಿಲ್ಲೆಯಲ್ಲಿ ಕೋವಿಡ್‌–19 ಪಾಸಿಟ್‌ ಆಗಿರುವವರ ಸಂಖ್ಯೆ 120 ಕ್ಕೇರಿದೆ. ಸುಮಾರು 40,000 ದಷ್ಟು ಜನರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಅಲ್ಲಿನ ಪರಿಸ್ಥಿತಿ ಗಂಭೀರವಾಗಿದೆ. ಮಂಗಳೂರಿನ ಆಸ್ಪತ್ರೆಗಳಲ್ಲಿ ಕೇವಲ 8 ಜನ ಮಾತ್ರ ಕೋವಿಡ್‌–19 ಪಾಸಿಟಿವ್‌ ಆಗಿದ್ದು, ಇವರಲ್ಲಿ ಐವರು ಕಾಸರಗೋಡಿನವರೇ ಆಗಿದ್ದಾರೆ. ಮುಂದಿನ 15 ದಿನಗಳಲ್ಲಿ 8 ಇದ್ದದ್ದು, 80 ಆದರೂ ಅಚ್ಚರಿ ಇಲ್ಲ. ಒಂದು ವೇಳೆ ಒತ್ತಡಕ್ಕೆ ಮಣಿದು ಗಡಿ ಬಾಗಿಲುಗಳನ್ನು ತೆರೆದರೆ ಮುಂದೆ ಆಗುವ ಅನಾಹುತ ಊಹಿಸುವುದೂ ಕಷ್ಟ ಎಂಬ ಅಭಿಪ್ರಾಯವನ್ನು ಜಿಲ್ಲಾಡಳಿತ ನೀಡಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕಾಸರಗೋಡು, ಕಾಂಞಗಾಡ್‌ ಮತ್ತು ಕಣ್ಣಾನೂರು ಜಿಲ್ಲೆಗಳಿಗೆ ಜನವರಿ ನಂತರ ಕೊಲ್ಲಿ ರಾಷ್ಟ್ರಗಳಿಂದ ಬಂದ ಪ್ರಯಾಣಿಕರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲೇ ಸ್ಕ್ರೀನಿಂಗ್‌ ಮಾಡಿ, ಹೋಂ ಕ್ವಾರಂಟೇನ್‌ನಲ್ಲಿ ಇರುವಂತೆ ಸೂಚಿಸಿ ಕಳಿಸಲಾಗಿತ್ತು. ಆದರೆ, ಕಾಸರಗೋಡು ಜಿಲ್ಲೆಯಲ್ಲಿ ಇದನ್ನು ಪಾಲಿಸದೇ ಬೇಕಾಬಿಟ್ಟಿ ಓಡಾಡಿದ ಕಾರಣ ಆ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಕೊರೊನಾ ಸೋಂಕು ಹರಡಿದೆ ಎಂದು ಅವರು ಹೇಳಿದರು.

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಲಾಕ್‌ಡೌನ್‌ ಮಾಡಿರುವುದರಿಂದ ವೈರಸ್‌ ಹರಡಲು ಸಾಧ್ಯವಾಗಿಲ್ಲ. ಸದ್ಯಕ್ಕೆ ಜಿಲ್ಲೆಯ ಜನತೆಗೆ ಸಾಲುವಷ್ಟು ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಿಬ್ಬಂದಿ ವ್ಯವಸ್ಥೆ ಇದೆ. ಗಡಿಯಲ್ಲಿ ಗೇಟ್‌ಗಳನ್ನು ತೆರೆದರೆ ರೋಗಿಗಳ ಹೆಸರಲ್ಲಿ ಜನರ ಪ್ರವಾಹವೇ ಹರಿದು ಬರುವ ನಿರೀಕ್ಷೆ ಇದೆ. ಇದರಿಂದ ಕರ್ನಾಟಕಕ್ಕೇ ಅಪಾಯ ಕಟ್ಟಿಟ್ಟ ಬುತ್ತಿ. ಕೋವಿಡ್‌ ರೋಗಿಗಳನ್ನು ತಂದರೆ ಮೊದಲು ಸೋಂಕಿಗೆ ತುತ್ತಾಗುವವರು ನಮ್ಮ ನರ್ಸ್‌ಗಳು, ವೈದ್ಯರು. ಹೀಗಾಗಿ ಜಿಲ್ಲೆಯ ವೈದ್ಯಕೀಯ ಸಿಬ್ಬಂದಿ ಗಡಿ ತೆರೆಯುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

ಹೃದ್ರೋಗ, ಕ್ಯಾನ್ಸರ್‌ ಸೇರಿದಂತೆ ಇತರ ವೈದ್ಯಕೀಯ ಚಿಕಿತ್ಸೆಗಳಿಗೆ ಕಾಸರಗೋಡಿನ ನೆರೆಯ ಕಾಂಞಗಾಡ್‌ ಮತ್ತು ಕಣ್ಣಾನೂರು ಜಿಲ್ಲೆಗಳಲ್ಲಿ ಉತ್ತಮ ಸೌಲಭ್ಯಗಳಿರುವ ಆಸ್ಪತ್ರೆಗಳಿವೆ. ಆದರೆ, ಕೋವಿಡ್‌ ಪ್ರಕರಣಗಳು ಕಾಸಗೋಡಿನಲ್ಲಿ ಹೆಚ್ಚಾಗಿರುವುದರಿಂದಕಾಂಞಗಾಡ್‌ ಮತ್ತು ಕಣ್ಣಾನೂರು ಜಿಲ್ಲೆಗಳ ಗಡಿಯೊಳಗೆ ಕಾಸಗೋಡಿನ ಜನರಿಗೆ ಪ್ರವೇಶ ನೀಡುತ್ತಿಲ್ಲ. ತನ್ನ ರಾಜ್ಯದ ಅಂತರ್‌ಜಿಲ್ಲೆಗಳ ಮಧ್ಯೆ ಕಟ್ಟುನಿಟ್ಟಾಗಿ ಗಡಿಗಳನ್ನು ಬಂದ್‌ ಮಾಡಿಕೊಂಡು, ಕರ್ನಾಟಕದ ಗಡಿಗಳನ್ನು ಮಾತ್ರ ತೆರೆಯಬೇಕು ಎಂದು ಒತ್ತಾಯಿಸುವ ಮೂಲಕ ಕೇರಳ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಯತ್ನ ಮಾಡಿದೆ ಎಂದು ಅವರು ಆರೋಪಿಸಿದರು.

ದೋಣಿಗಳ ಮೂಲಕವೂ ರೋಗಿಗಳು!

‘ಗಡಿ ಬಂದ್‌ ಆಗಿರುವುದರಿಂದ ಕಾಸರಗೋಡಿನಿಂದ ದೋಣಿಗಳ ಮೂಲಕ ರೋಗಿಗಳನ್ನು ತರುವ ಪ್ರಯತ್ನ ನಡೆದಿದೆ. ಸಾಮಾನ್ಯ ಜ್ವರ ಎಂದು ಕರೆ ತರುತ್ತಾರೆ. ನಿಜಕ್ಕೂ ಕೋವಿಡ್‌ ಸೋಂಕಿತರಾಗಿದ್ದರೆ, ಅದನ್ನು ಪತ್ತೆ ಹಚ್ಚುವ ವ್ಯವಸ್ಥೆ ಮಂಗಳೂರಿನಲ್ಲಿ ಇಲ್ಲ. ಗಂಟಲ ದ್ರವ ಮತ್ತು ರಕ್ತವನ್ನು ಶಿವಮೊಗ್ಗಕ್ಕೆ ಕಳಿಸಬೇಕು. ಕಾಸರಗೋಡನ್ನು ಚೀನಾದ ‘ವುಹಾನ್‌’ ಮಾದರಿಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಮಾಡಿ ಚಿಕಿತ್ಸೆ ನೀಡಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ ಸದಸ್ಯ ಡಾ. ಸಂದೀಪ್‌ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT