ಬುಧವಾರ, ಜೂನ್ 23, 2021
30 °C
ಎಚ್.ಡಿ.ರೇವಣ್ಣ ಅವರಿಗೆ ಹಿನ್ನಡೆ?

ಕೆಎಂಎಫ್: ಬಾಲಚಂದ್ರ ಆಯ್ಕೆ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಅಧ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಯಲಿದ್ದು, ಅಧ್ಯಕ್ಷರಾಗಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು, ತೀವ್ರ ಲಾಬಿ ನಡೆಸಿದ್ದ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರಿಗೆ ತೀವ್ರ ನಿರಾಶೆ ಕಾದಿದೆ. ಮೈತ್ರಿ ಸರ್ಕಾರದಲ್ಲಿ ಸೂಪರ್ ಸಿ.ಎಂ ಎಂದೇ ಗುರುತಿಸಿಕೊಂಡಿದ್ದು, ಹಿಂದೆ ಎರಡು ಬಾರಿ ಅಧ್ಯಕ್ಷರಾಗಿದ್ದರು. ಪ್ರಸ್ತುತ ಸನ್ನಿವೇಶದಲ್ಲಿ ಸ್ಪರ್ಧೆಯಿಂದಲೇ ಹಿಂದೆ ಸರಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ.

ಬಾಲಚಂದ್ರ ಜಾರಕಿಹೊಳಿ ಅವರಿಗೆ ನೂತನ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅವರನ್ನು ಸಮಾಧಾನಪಡಿಸಲು ಕೆಎಂಎಫ್ ಅಧ್ಯಕ್ಷರನ್ನಾಗಿ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದರು. ಈಗ ಅಧಿಕಾರ ಹಿಡಿಯಲು ಬೇಕಾದ ‘ಸಿದ್ಧತೆ’ಗಳನ್ನು ಬಿಜೆಪಿ ಮುಖಂಡರು ಮಾಡಿಕೊಂಡಿದ್ದಾರೆ.

ಮೈತ್ರಿ ಸರ್ಕಾರದ ಸಮಯದಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ಜತೆಗೆ ಗುರುತಿಸಿಕೊಂಡಿರುವ ನಿರ್ದೇಶಕರೂ ಜಾರಕಿಹೊಳಿ ಬೆಂಬಲಿಸಲಿದ್ದಾರೆ. 10ಕ್ಕೂ ಹೆಚ್ಚು ನಿರ್ದೇಶಕರನ್ನು ಬೆಂಗಳೂರು ಹೊರ ವಲಯದ ರೇಸಾರ್ಟ್‌ಗೆ ಕರೆದುಕೊಂಡು ಹೋಗಿದ್ದು, ಶನಿವಾರ ಬೆಳಿಗ್ಗೆ ನೇರವಾಗಿ ಬಂದು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಿಂದೆ ರೇವಣ್ಣ ಬೆಂಬಲಕ್ಕೆ ನಿಂತಿದ್ದ ನಿರ್ದೇಶಕರೂ ಈಗ ದೂರ ಸರಿದಿದ್ದು, ಬಿಜೆಪಿ ಪಾಳಯ ಸೇರಿಕೊಂಡಿದ್ದಾರೆ. ಪ್ರಸ್ತುತ ರೇವಣ್ಣ ‘ಬಲ’ ಕುಗ್ಗಿದ್ದು, ಸ್ಪರ್ಧೆಯಿಂದಲೇ ಹಿಂದೆ ಸರಿಯಬಹುದು ಎಂದು ಹೇಳಲಾಗುತ್ತಿದೆ.

ಮಂಡ್ಯ ಹಾಲು ಒಕ್ಕೂಟದ ಆಡಳಿತ ಮಂಡಳಿಯನ್ನು ಸೂಪರ್‌ಸೀಡ್ ಮಾಡಿದ್ದು, ಅಲ್ಲಿನ ನಿರ್ದೇಶಕರಿಗೆ ಮತದಾನದ ಅವಕಾಶ ಇಲ್ಲವಾಗಿದೆ. ತುಮಕೂರು ಒಕ್ಕೂಟದ ನಿರ್ದೇಶಕರು ಮುಚ್ಚಿದ ಲಕೋಟೆಯಲ್ಲಿ ಮತದಾನ ಮಾಡಲು ಹೈಕೋರ್ಟ್ ಅವಕಾಶ ಕಲ್ಪಿಸಿದೆ. ಹೀಗಾಗಿ ಹಳೆ ಮೈಸೂರು ಭಾಗದಲ್ಲೇ ರೇವಣ್ಣಗೆ ಬೆಂಬಲ ಸಿಗದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನದ ಆಸೆ ಬಿಟ್ಟಿದ್ದಾರೆ ಎನ್ನಲಾಗಿದೆ.

ಸೆ. 29ರಂದು ಚುನಾವಣೆ ನಿಗದಿಯಾಗಿದ್ದ ಸಮಯದಲ್ಲಿ ಅಧಿಕಾರ ಹಿಡಿಯುವ ಸಲುವಾಗಿ 8 ನಿರ್ದೇಶಕರನ್ನು ಹೈದರಾಬಾದ್ ರೆಸಾರ್ಟ್‌ಗೆ ರೇವಣ್ಣ ಕರೆದುಕೊಂಡು ಹೋಗಿದ್ದರು. ಅಧಿಕಾರ ತಪ್ಪಿಸುವ ಸಲುವಾಗಿ ಚುನಾವಣೆಯನ್ನು ದಿಢೀರ್ ರದ್ದುಪಡಿಸಲಾಗಿತ್ತು. ಇದನ್ನು ಪ್ರಶ್ನಿಸಿ ರೇವಣ್ಣ, ಹೈಕೋರ್ಟ್ ಮೆಟ್ಟಿಲೇರಿದ್ದು, ಚುನಾವಣೆ ನಡೆಸುವಂತೆ ಕೋರ್ಟ್ ಆದೇಶಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು