ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಣಾ ಇಲಾಖೆ–ಕೆಎಂಎಫ್‌ ಒಪ್ಪಂದ: ಯೋಧರಿಗೆ ಸಿಗಲಿದೆ ‘ನಂದಿನಿ’ ಹಾಲಿನ ಶಕ್ತಿ

Last Updated 16 ಮಾರ್ಚ್ 2019, 20:26 IST
ಅಕ್ಷರ ಗಾತ್ರ

ಬೆಂಗಳೂರು: ‘ಯೋಧರಿಗೆ ನಂದಿನಿ ಯುಎಚ್‍ಟಿ (ಗುಡ್‍ಲೈಫ್) ಹಾಲು ಸರಬರಾಜು ಮಾಡಲು ಮುಂದಾಗಿರುವ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಈ ಸಂಬಂಧ ಕೇಂದ್ರ ರಕ್ಷಣಾ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಮಂಡಳಿ ನಿರ್ದೇಶಕ (ಮಾರುಕಟ್ಟೆ) ಮೃತ್ಯುಂಜಯ.ಟಿ.ಕುಲಕರ್ಣಿ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

‘ಕೋಲಾರ ಮತ್ತು ಹಾಸನ ಹಾಲು ಒಕ್ಕೂಟದಿಂದ ನಿತ್ಯ 18 ಸಾವಿರ ಲೀಟರ್ ಹಾಲನ್ನು ಸೈನಿಕರಿಗೆ ಒದಗಿಸಲಾಗುತ್ತದೆ. ಹಾಗೆಯೇ ತಿರುಪತಿ ದೇವಸ್ಥಾನದಲ್ಲಿ ತಯಾರಿಸುವ ಲಡ್ಡು ಪ್ರಸಾದಕ್ಕೆ 14 ಲಕ್ಷ ಕೆ.ಜಿ ನಂದಿನಿ ತುಪ್ಪ ಒದಗಿಸಲು ದೇವಸ್ಥಾನದ ಮಂಡಳಿಯ ಒಪ್ಪಿಗೆ ಪಡೆದಿದ್ದೇವೆ’ ಎಂದು ತಿಳಿಸಿದರು.

‘ಹೊರ ರಾಜ್ಯಗಳಲ್ಲಿ ನಂದಿನಿ ಹಾಲು, ಮೊಸರಿಗೆ ಹೆಚ್ಚು ಬೇಡಿಕೆ ಬಂದಿರುವ ಕಾರಣ ದಿನಕ್ಕೆ 2.50 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲು ಸರಬರಾಜು ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ಎಲ್ಲ ಮಾರುಕಟ್ಟೆ ಪ್ರದೇಶಗಳನ್ನು ಇನ್ನೂ ವಿಸ್ತರಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ’ ಎಂದೂ ವಿವರಿಸಿದರು.

‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಸಂಸ್ಥೆ ಉತ್ಪಾದಿಸುವ ಆಹಾರ ಪದಾರ್ಥಗಳಿಗೆ 600 ಮೆಟ್ರಿಕ್ ಟನ್ ನಂದಿನಿ ಕೆನೆರಹಿತ ಹಾಲಿನ ಪುಡಿ ಒದಗಿಸುತ್ತಿದ್ದು, ನಂದಿನಿ ಚೆದ್ದಾರ್‌ ಚೀಸ್, ಚೀಸ್‌ ಸ್ಲೈಸ್‌ ಸೇರಿದಂತೆ ಬಗೆಬಗೆಯ ಪದಾರ್ಥಗಳು ಹಾಗೂ ನಂದಿನಿ ಸಿಹಿ ತಿನಿಸುಗಳಂತೆ ಮುಂದಿನ ದಿನಗಳಲ್ಲಿ ಸಿರಿಧಾನ್ಯ ಲಡ್ಡು ಮತ್ತು ಹಾಲಿನ ಪುಡಿ ಶೀಘ್ರದಲ್ಲೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ’ ಎಂದು ಅವರು ಹೇಳಿದರು.

‘ಅಲ್ಲದೆ, ವಿವಿಧ ಬಗೆಯ 22 ಐಸ್ ಕ್ರೀಂ ಸಿಹಿ ತಿನಿಸುಗಳನ್ನು ಬಿಡುಗಡೆಗೆ ಮಾಡಲಾಗುವುದು’ ಎಂದರು. ‘ದೇಶದ 16 ನಗರಗಳಲ್ಲಿ ಮುಂಬೈನ ಟ್ರಾ ಸಂಶೋಧನಾ ಸಂಸ್ಥೆಯು 5 ಸಾವಿರ ವಿವಿಧ ಉತ್ಪನ್ನಗಳನ್ನು ಸಮೀಕ್ಷೆ ನಡೆಸಿದ್ದು, ಅದರಲ್ಲಿ ನಂದಿನಿ ಹಾಲಿಗೆದಕ್ಷಿಣ ಭಾರತದ ಅತ್ಯಂತ ಆಕರ್ಷಕ ಹಾಲಿನ ಬ್ರಾಂಡ್‌ ಎಂಬ ಪ್ರಶಸ್ತಿಗೆ ಪಾತ್ರವಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಪ್ರತಿದಿನ ನಂದಿನಿ ಹಾಲು ಮಾರಾಟ
35 ಲಕ್ಷ ಲೀಟರ್‌:ಸ್ಯಾಷೆ ರೂಪದ ಹಾಲು
6.5:ಲಕ್ಷ ಲೀಟರ್‌ ಯುಎಚ್‌ಟಿ ಹಾಲು
6.5:ಲಕ್ಷ ಲೀಟರ್ ಮೊಸರು

‘ನಂದಿನಿ ಕುಡಿಯುವ ನೀರು’
‘ನಂದಿನಿ ಹಾಲು ಉತ್ಪಾದನೆ ಗಣನೀಯವಾದ ಹೆಚ್ಚಳವನ್ನು ಕಂಡಿದ್ದು, ಈಗ ನಂದಿನ ಹಾಲಿನ ಹಾಗೆ ನಂದಿನಿ ನೀರಿಗೂ ಬಹು ಬೇಡಿಕೆ ಬಂದಿದೆ. ಗ್ರಾಹಕರು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. ಬೇಡಿಕೆ ಹೆಚ್ಚಾಗಿರುವ ಪರಿಣಾಮ 250, 500 ಮಿಲಿ ಲೀಟರ್‌, ‌1 ಮತ್ತು 2 ಲೀಟರ್‌ ಪ್ರಮಾಣದಲ್ಲಿ ನಂದಿನಿ ಕುಡಿಯುವ ನೀರಿನ ಬಾಟಲ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ’ ಎಂದು ಕುಲಕರ್ಣಿ ಹೇಳಿದರು.

ನಂದಿನ ಕುಡಿಯುವ ನೀರಿನ ಬಾಟಲ್‌
ನಂದಿನ ಕುಡಿಯುವ ನೀರಿನ ಬಾಟಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT