ಮಳೆ ಅಬ್ಬರಕ್ಕೆ ಕುಸಿಯುತ್ತಿವೆ ಕೊಡಗಿನ ಬೆಟ್ಟಗಳು: ರಕ್ಷಣಕಾರ್ಯಕ್ಕೂ ಮಳೆ ಅಡ್ಡಿ

7

ಮಳೆ ಅಬ್ಬರಕ್ಕೆ ಕುಸಿಯುತ್ತಿವೆ ಕೊಡಗಿನ ಬೆಟ್ಟಗಳು: ರಕ್ಷಣಕಾರ್ಯಕ್ಕೂ ಮಳೆ ಅಡ್ಡಿ

Published:
Updated:

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಮುಂದುವರಿದಿದ್ದು, ಪ್ರವಾಹ ಪರಿಸ್ಥಿತಿ ತಗ್ಗಿಲ್ಲ. ಹಟ್ಟಿಹೊಳೆ ಭಾಗದಲ್ಲಿ ರಾತ್ರಿಯಿಡೀ ಮಳೆಗೆ ಮತ್ತಷ್ಟು ನೀರು ಏರಿಕೆಯಾಗುದೆ.

ಬೆಟ್ಟಗುಡ್ಡ ಕುಸಿತದಿಂದ ಎಷ್ಟು ಮಂದಿ ಅಪಾಯಕ್ಕೆ ಸಿಲುಕಿದ್ದಾರೆ ಎಂಬ ಮಾಹಿತಿ ಸಿಗುತ್ತಿಲ್ಲ. ಕುಸಿದ ಸ್ಥಳದಲ್ಲಿ ಬರೀ ಮನೆಗಳು ಕಾಣಿಸುತ್ತಿವೆ. ಬೆಟ್ಟ ಕುಸಿಯುತ್ತಲೇ ಇರುವುದರಿಂದ ಕಾರ್ಯಾಚರಣೆಯೂ ಸಾಧ್ಯವಾಗುತ್ತಿಲ್ಲ. ಪ್ರವಾಹ ಸ್ಥಿತಿಯಲ್ಲಿ ಇದ್ದವರನ್ನು ಮಾತ್ರ ರಕ್ಷಣೆ ಮಾಡಲಾಗುತ್ತಿದೆ. ಬೆಟ್ಟಗುಡ್ಡಗಳಲ್ಲಿ ಜೀವನ್ಮರಣ ಹೋರಾಟ ಮುಂದುವರಿದಿದೆ.

ಎನ್‌ಡಿಆರ್‌ಎಫ್‌ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕೆಲವರನ್ನು ರಕ್ಷಣೆ ಮಾಡಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ ಅವರ ಲೈನ್‌ಮನೆಯಲ್ಲಿ ಇರಿಸಲಾಗಿದೆ.ಮಕ್ಕಂದೂರು ಬೆಟ್ಟದಲ್ಲಿ ಮತ್ತಷ್ಟು ಮಂದಿ ಇರುವ ಶಂಕೆಯಿದ್ದು ಭಾರಿ ಮಳೆಯಿಂದ ಹೆಲಿಕಾಪ್ಟರ್‌ನಿಂದ ರಕ್ಷಣಾ ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ. ಸೇನಾ ಪಡೆಯ ಮೂರು ರಕ್ಷಣಾ ತಂಡಗಳು ಕಾರ್ಯಾಚರಣೆಗೆ ಬರಲಿವೆ.

 

ಆಶ್ರಯ ಕಳೆದುಕೊಂಡವರ ಸಂಖ್ಯೆ ಇನ್ನೂ ನಿಖರವಾಗಿ ತಿಳಿಯುತ್ತಿಲ್ಲ. ಮಡಿಕೇರಿ- ವಿರಾಜಪೇಟೆ ರಸ್ತೆಯ ಬೇತ್ರಿ ಬಳಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು,ಸಂಚಾರ ಮತ್ತೆ ಬಂದ್ ಆಗಿದೆ‌. ಮೈಸೂರು- ಬಂಟ್ವಾಳ ರಸ್ತೆಯಲ್ಲಿ ಮತ್ತೆ ಗುಡ್ಡ ಕುಸಿದು ತೆರವು ಕಾರ್ಯಾಚರಣೆ ಆರಂಭವಾಗಿದೆ.

ಮಳೆಯ ಅಬ್ಬರಕ್ಕೆ ಕೊಡಗು ಜಿಲ್ಲೆ ನಲುಗಿ ಹೋಗಿದೆ. ಪ್ರವಾಹದಿಂದ ದ್ವೀಪವಾಗಿರುವ ಗ್ರಾಮಗಳಿಂದ ಹೊರಬರಲು ಜನರಿಗೆ ಸಾಧ್ಯವಾಗುತ್ತಿಲ್ಲ. ವಿದ್ಯುತ್ ಇಲ್ಲದೇ ಹಲವು ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ. ಮೊಬೈಲ್ ನೆಟ್‌ವರ್ಕ್ ಸಹ ಇಲ್ಲದೇ ಜನರು ಸಂಕಷ್ಟಕ್ಕೀಡಾಗಿದ್ದಾರೆ.
 

 

ಕೊಡಗಿನ ಶಕ್ತಿ‌ ಪತ್ರಿಕೆ ಕಚೇರಿಗೆ ನೀರು ನುಗ್ಗಿದ್ದು, ಪತ್ರಿಕೆಯ ಶುಕ್ರವಾರದ ಸಂಚಿಕೆ ಮುದ್ರಣ ಆಗಿಲ್ಲ. 

 

 

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 6

  Sad
 • 0

  Frustrated
 • 1

  Angry

Comments:

0 comments

Write the first review for this !