ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋದಂಡ ಸೋಮಣ್ಣ ಅಂತ್ಯಕ್ರಿಯೆ: ಸೇನಾ ಗೌರವ

ವಿರಾಜಪೇಟೆ: ಸಂಬಂಧಿಕರು, ಕುಟುಂಬಸ್ಥರು ಭಾಗಿ
Last Updated 14 ಜೂನ್ 2020, 19:31 IST
ಅಕ್ಷರ ಗಾತ್ರ

ವಿರಾಜಪೇಟೆ : ನಿವೃತ್ತ ಸೇನಾಧಿಕಾರಿ ಲೆ.ಜ. ಕೋದಂಡ ಎನ್.ಸೋಮಣ್ಣ (93 ವರ್ಷ) ಅವರ ಅಂತ್ಯಕ್ರಿಯೆಯು ಪಟ್ಟಣದ ಪಂಜರ್ಪೇಟೆಯಲ್ಲಿ ಭಾನುವಾರ ಕೊಡವ ವಿಧಿವಿಧಾನ ಹಾಗೂ ಸೇನಾ ಗೌರವದೊಂದಿಗೆ ನಡೆಯಿತು.

ವಯೋಸಹಜ ಅನಾರೋಗ್ಯದಿಂದಾಗಿ ಪಂಜರಪೇಟೆಯಲ್ಲಿನ ಸ್ವಗೃಹ ಲಕ್ಷ್ಮಿನಿವಾಸದಲ್ಲಿ ನಿವೃತ್ತ ಲೆ.ಜ. ಕೋದಂಡ ಎನ್.ಸೋಮಣ್ಣ ಅವರು ಶನಿವಾರ ನಿಧನ ಹೊಂದಿದ್ದರು. ಮಧ್ಯಾಹ್ನ ಸುಮಾರು 12.15ಕ್ಕೆ ಮನೆಯ ಹಿಂದಿರುವ ಕಾಫಿತೋಟದಲ್ಲಿ ಸೇನಾ ಗೌರವ, ನಿವೃತ್ತ ಸೇನಾಧಿಕಾರಿಗಳು ಹಾಗೂ ಕೆಲ ಸಂಬಂಧಿಕರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ಬೆಂಗಳೂರಿನಿಂದ ಆಗಮಿಸಿದ ಸೇನೆಯ ಎಂ.ಇ.ಜಿ ತಂಡವು ಮೇ. ಅರ್ನವ್ ಗುಪ್ತ ಹಾಗೂ ಪ್ಯಾರಾ ಮಿಲಿಟರಿಯ ಮೇ. ಪಾಂಚಾಲ್ ಗುಪ್ತ ನೇತೃತ್ವದಲ್ಲಿ ಅಗಲಿದ ಹಿರಿಯ ಸೇನಾಧಿಕಾರಿಗೆ ಗೌರವ ಸಲ್ಲಿಸಿತು.ಈ ಸಂದರ್ಭ ಮೃತರ ಪತ್ನಿ ರೇಣು, ಪುತ್ರಿ ಶರನ್ ಪೆಮ್ಮಯ್ಯ ಹಾಗೂ ಮೊಮ್ಮಕ್ಕಳು ಇದ್ದರು.

ಕೊರೊನಾದಿಂದ ವಿದೇಶದಿಂದ ಆಗಮಿಸುವ ವಿಮಾನ ಸಂಚಾರ ರದ್ದುಗೊಂಡಿದ್ದು, ಅಮೆರಿಕಾದಲ್ಲಿ ವೈದ್ಯರಾಗಿರುವ ಮಗ ಡಾ. ನಿವೇದ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಜಿಲ್ಲೆಯ ವಿವಿಧೆಡೆಯಲ್ಲಿನ ನಿವೃತ್ತ ಸೇನಾಧಿಕಾರಿಗಳು, ಗಣ್ಯರು ಸೇರಿದಂತೆ ಪಟ್ಟಣದ ಸುತ್ತಮುತ್ತಲಿನ ಅಭಿಮಾನಿಗಳು, ಹಿತೈಷಿಗಳು ಶನಿವಾರ ಸಂಜೆಯಿಂದಲೇ ಪಾರ್ಥಿವ ಶರೀರದ ದರ್ಶನ ಪಡೆದರು.

ತಾಲ್ಲೂಕು ಆಡಳಿತದ ಪರವಾಗಿ ಶಿರಸ್ತೇದಾರ್‌ ಎಚ್.ಕೆ.ಪೊನ್ನು, ಡಿ.ವೈ.ಎಸ್.ಪಿ ಜಯಕುಮಾರ್, ಕಂದಾಯ ಇಲಾಖೆಯ ಅಧಿಕಾರಿ, ಕಾವೇರಿ ಸೇನೆಯ ರವಿ ಚಂಗಪ್ಪ, ಕೋಲತಂಡ ರಘು ಮಾಚಯ್ಯ, ಎ.ಐ.ಸಿ.ಸಿ ವಕ್ತಾರ ಬ್ರಿಜೇಶ್ ಕಾಳಪ್ಪ, ಕಾಂಗ್ರೆಸ್‌ನ ಪ್ರಮುಖರಾದ ಟಿ.ಪಿ.ರಮೇಶ್, ಪಂಜರ್ಪೇಟೆ ಕೊಡವಕೇರಿಯ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಪಟ್ಟಣ ಪಂಚಾಯಿತಿ ಇಂಜಿನಿಯರ್ ಎಂ.ಪಿ.ಹೇಮ್ ಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯರು, ಮಡಿಕೇರಿಯಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಪಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂ ಅಧ್ಯಕ್ಷ ನಿವೃತ್ತ ಕರ್ನಲ್ ಕೆ.ಸಿ.ಸುಬ್ಬಯ್ಯ, ಸಂಚಾಲಕ ನಿವೃತ್ತ ಮೇಜರ್ ನಂಜಪ್ಪ ಪುಷ್ಪಗುಚ್ಚ ಸಲ್ಲಿಸಿ ನಮನ ಸಲ್ಲಿಸಿದರು.

ಹಿರಿಯ ಸೇನಾಧಿಕಾರಿಯ ಅಂತ್ಯಕ್ರಿಯೆಯ ಸಂದರ್ಭ ಕೆಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗೈರುಹಾಜರಿ ಎದ್ದು ಕಾಣುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT