ಭಾನುವಾರ, ಮಾರ್ಚ್ 7, 2021
29 °C
ಬೆಂಗಳೂರಿನ ನಿವಾಸದಲ್ಲಿ ನಿಧನ, ಉತ್ಸವದಂತೆ ನಡೆಯುತ್ತಿದ್ದ ಹಾಕಿ ಕ್ರೀಡಾಕೂಟ 

ಕೊಡವ ಕೌಟುಂಬಿಕ ಹಾಕಿ ಜನಕ ಪಾಂಡಂಡ ಕುಟ್ಟಪ್ಪ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ‘ಕೊಡವ ಕೌಟುಂಬಿಕ ಹಾಕಿ ಉತ್ಸವ’ದ ಜನಕ ಪಾಂಡಂಡ ಕುಟ್ಟಪ್ಪ (86) ಅವರು ಬೆಂಗಳೂರಿನ ಬಸವೇಶ್ವರ ನಗರದ ತಮ್ಮ ನಿವಾಸದಲ್ಲಿ ಗುರುವಾರ ನಿಧನರಾದರು. 

ಮೃತರಿಗೆ ಇಬ್ಬರು ಪುತ್ರಿಯರು ಹಾಗೂ ಪುತ್ರ ಇದ್ದಾರೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ನಿವೃತ್ತ ವ್ಯವಸ್ಥಾಪಕರಾಗಿದ್ದ ಅವರು ಬ್ಯಾಂಕ್‌ ಉದ್ಯೋಗಿ ಆಗಿದ್ದ ಅವಧಿಯಲ್ಲಿ ಅವರಿಗೆ ಹಾಕಿ ಕ್ರೀಡೆಯ ಬಗ್ಗೆ ಅತೀವ ಆಸಕ್ತಿ ಬೆಳೆದಿತ್ತು. 

ಕೊಡಗಿನ ಕರಡ ಗ್ರಾಮದಲ್ಲಿ 1997ರಲ್ಲಿ ತಮ್ಮ ಸಹೋದರ ದಿವಂಗತ ಕಾಶಿ ಅವರೊಂದಿಗೆ ಸೇರಿ ಆರಂಭಿಸಿದ ಕೊಡವ ಹಾಕಿ ಟೂರ್ನಿ ಬೃಹದಾಕಾರವಾಗಿ ಬೆಳೆದು ನಿಂತಿದೆ. ಪ್ರತಿ ವರ್ಷ ಏಪ್ರಿನ್‌ನಲ್ಲಿ ಉತ್ಸವದಂತೆ ಈ ಕ್ರೀಡಾಕೂಟ ನಡೆಯುತ್ತಾ ಬರುತ್ತಿದೆ.
ಒಲಿಂಪಿಕ್ಸ್ ಮಾದರಿಯಲ್ಲಿಯೇ ವಿಶ್ವದಾದ್ಯಂತ ಕೊಡವ ಕೌಟುಂಬಿಕ ಹಾಕಿ ಉತ್ಸವ ಗಮನ ಸೆಳೆದಿತ್ತು. 

22 ವಷ೯ಗಳೂ ಹಾಕಿ ಹಬ್ಬಕ್ಕೆ ಮಾರ್ಗದರ್ಶನ ನೀಡುತ್ತಿದ್ದರು ಕುಟ್ಟಪ್ಪ. ಪ್ರತಿ ವರ್ಷವೂ ಉದ್ಘಾಟನೆ ಸಮಾರಂಭಕ್ಕೆ ಆಗಮಿಸಿ ಕ್ರೀಡಾಕೂಟಕ್ಕೆ ಶುಭ ಹಾರೈಸುತ್ತಿದ್ದರು. ಕೊಡವ ಹಾಕಿ ಪಂದ್ಯಾವಳಿ ಆರಂಭಿಸಿದ್ದಕ್ಕೆ ಪಾಂಡಂಡ ಕುಟ್ಟಪ್ಪ ಅವರು ಲಿಮ್ಕಾ ಬುಕ್ ಆಫ್ ರೆಕಾಡ್ಸ್೯ನಲ್ಲಿಯೂ ಸ್ಥಾನ ಪಡೆದಿದ್ದರು. ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದರು.

ಕುಟ್ಟಪ್ಪ ಅವರ ಆಶಯದಂತೆ ಯಶಸ್ವಿಯಾಗಿ ನಡೆಯುತ್ತಿದ್ದ ಕೌಟುಂಬಿಕ ಹಾಕಿ ಹಬ್ಬವು 2019ರಲ್ಲಿ ಪ್ರವಾಹ ಕಾರಣಕ್ಕೆ ಹಾಗೂ ಈ ವರ್ಷ ಕೊರೊನಾ ಸೋಂಕಿನ ಭೀತಿಯಿಂದ ರದ್ದಾಗಿತ್ತು.

ಹಬ್ಬವೇ ಆಗಿತ್ತು: ಕೊಡಗಿನಲ್ಲಿ ಕಾವೇರಿ ಸಂಕ್ರಮಣ, ಪುತ್ತರಿ ಹಾಗೂ ಕೈಲ್‌ಪೋಳ್ದ್‌ ಪ್ರಮುಖ ಹಬ್ಬಗಳು. ಅದರಂತೆ ಏಪ್ರಿಲ್‌, ಮೇನಲ್ಲಿ ನಡೆಯುತ್ತಿದ್ದ ಹಾಕಿ ಟೂರ್ನಿಯು ಕೊಡವ ಕುಟುಂಬಗಳ ಪಾಲಿಗೆ ಉತ್ಸವವೇ ಆಗಿ ಹೋಗಿತ್ತು. 300ಕ್ಕೂ ಹೆಚ್ಚು ಕೌಟುಂಬಿಕ ತಂಡಗಳು ಹೆಸರು ನೋಂದಾಯಿಸಿಕೊಂಡು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದವು. ಹಾಕಿ ಹಬ್ಬವನ್ನು ಪಾಂಡಂಡ ಕುಟ್ಟಪ್ಪ ಅವರು ಆರಂಭಿಸುವಾಗ ಕೊಡಗಿನಲ್ಲಿ ಹಾಕಿ ಪರಿಸ್ಥಿತಿ ಬಹಳ ಶೋಚನೀಯವಾಗಿತ್ತು. ಆ ಬಳಿಕ ಪ್ರತಿ ಮನೆಯಲ್ಲೂ ಹಾಕಿ ಆಟಗಾರರು ಉದಯಿಸಿದರು. ಕಳೆದ 22 ವರ್ಷಗಳಿಂದ ಕೌಟುಂಬಿಕ ಹಾಕಿಯಲ್ಲಿ ಆಡಿದ ಅದೆಷ್ಟೋ ಆಟಗಾರರು ರಾಜ್ಯ, ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ. ಹಾಕಿ ಎಂಬುದು ಕೊಡಗಿನಲ್ಲಿ ಉಸಿರಾಗಿದೆ. 

ಸರ್ಕಾರದ ನೆರವು: ಆರಂಭದಲ್ಲಿ ಪ್ರತಿ ಕುಟುಂಬವೊಂದು ವರ್ಷಕ್ಕೊಮ್ಮೆ ಜವಾಬ್ದಾರಿ ವಹಿಸಿಕೊಳ್ಳುತ್ತಿತ್ತು. ಈಗಲೂ ವರ್ಷಕ್ಕೊಂದು ಕುಟುಂಬ ಜವಾಬ್ದಾರಿ ವಹಿಸಿಕೊಂಡರೂ ಸರ್ಕಾರದ ನೆರವೂ ಟೂರ್ನಿಗೆ ಲಭಿಸುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು