ಸೋಮವಾರ, ಸೆಪ್ಟೆಂಬರ್ 16, 2019
23 °C
ಸಂಕಷ್ಟದ ಸುಳಿಯಲ್ಲಿ ಹೋಟೆಲ್‌ ಮಾಲೀಕರು, ಕಾರ್ಮಿಕರು

ಕೊಡಗು ಪ್ರವಾಹ: ಪ್ರವಾಸೋದ್ಯಮಕ್ಕೂ ಪೆಟ್ಟು, ಚೇತರಿಕೆಗೆ ಬೇಕು ವರ್ಷ

Published:
Updated:
Deccan Herald

ಮಡಿಕೇರಿ: ಮಹಾಮಳೆ, ಭೂಕುಸಿತದ ಸಂಕಷ್ಟಕ್ಕೆ ಸಿಲುಕಿರುವ ಕೊಡಗು ಜಿಲ್ಲೆಯ ಪ್ರವಾಸೋದ್ಯಮಕ್ಕೂ ಭಾರೀ ಹೊಡೆತ ಬಿದ್ದಿದೆ. ‘ಪ್ರವಾಸಿಗರ ಸ್ವರ್ಗ’, ‘ಕರ್ನಾಟಕದ ಕಾಶ್ಮೀರ’ ಎಂದೆಲ್ಲಾ ಕರೆಸಿಕೊಳ್ಳುವ ಕೊಡಗಿನಲ್ಲಿ ಸುರಿಯೋ ಮಳೆಯನ್ನು ಕಣ್ತುಂಬಿಕೊಳ್ಳಲು ಅದೆಷ್ಟೋ ಪ್ರವಾಸಿಗರು ಆಗಸ್ಟ್‌ ಹಾಗೂ ಸೆಪ್ಟೆಂಬರ್‌ನಲ್ಲಿ ಲಗ್ಗೆಯಿಡುತ್ತಿದ್ದರು. ಆದರೆ, ಈ ತಿಂಗಳಲ್ಲಿ ಸುರಿದ ಮಹಾಮಳೆಯಿಂದ ಪ್ರವಾಸೋದ್ಯಮವು ನೆಲಕಚ್ಚಿದ್ದು ಚೇತರಿಕೆಗೆ ಹಲವು ದಿನಗಳೇ ಹಿಡಿಯಲಿದೆ ಎಂದು ಪ್ರವಾಸೋದ್ಯಮದಿಂದ ಬದುಕು ಕಟ್ಟಿಕೊಂಡವರು ನೋವು ತೋಡಿಕೊಳ್ಳುತ್ತಿದ್ದಾರೆ.

ಮಳೆ ನಿಂತರೂ ಜಿಲ್ಲೆಯಲ್ಲಿ ಭೂಕುಸಿತದ ಆತಂಕ ಇನ್ನೂ ಮನೆ ಮಾಡಿದೆ. ಪ್ರವಾಸಿಗರ ವಾಸ್ತವ್ಯಕ್ಕೆ ಆ. 31ರ ತನಕ ಹೋಂಸ್ಟೇ, ರೆಸಾರ್ಟ್‌ ನೀಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ಎಲ್ಲೆಡೆ ಪ್ರವಾಸಿಗರಿಲ್ಲದೆ ಭಣಗುಡುತ್ತಿರುವ ದೃಶ್ಯ ಕಂಡುಬರುತ್ತಿದೆ.

ಪ್ರವಾಸಿ ತಾಣಗಳಾದ ಅಬ್ಬಿ, ಮಲ್ಲಳ್ಳಿ, ಇರ್ಪು ಜಲಪಾತಗಳು, ದುಬಾರೆ ಸಾಕಾನೆ ಶಿಬಿರ, ತಲಕಾವೇರಿ, ಭಾಗಮಂಡಲ, ಕಾವೇರಿ ನಿಸರ್ಗಧಾಮ, ರಾಜಾಸೀಟ್‌, ಓಂಕಾರೇಶ್ವರ ದೇಗುಲ, ಹಾರಂಗಿ ಜಲಾಶಯದತ್ತ ಪ್ರವಾಸಿಗರ ಸುಳಿವಿಲ್ಲ. ತಡಿಯಂಡಮೋಳ್‌, ಪುಷ್ಪಗಿರಿ, ಮಾಂದಲ್‌ಪಟ್ಟಿ, ಬ್ರಹ್ಮಗಿರಿಯಲ್ಲೂ ಚಾರಣ ಸ್ಥಗಿತವಾಗಿದೆ.

‘ಪ್ರವಾಸಿ ತಾಣಗಳಲ್ಲಿ ವ್ಯಾಪಾರ ನಡೆಸುತ್ತಿದ್ದವರೂ ಅಂಗಡಿ ಬಂದ್‌ ಮಾಡಿ ಮನೆಯತ್ತ ಹೆಜ್ಜೆ ಹಾಕಿದ್ದಾರೆ. ಭಾಗಮಂಡಲದಲ್ಲಿ ಹೂವು, ಹಣ್ಣು, ಕಾಯಿ ಮಾರಾಟ ಮಾಡುತ್ತಿದ್ದವರು ಊರಿಗೆ ತೆರಳಿದ್ದು ಇನ್ನೂ ವಾಪಸ್‌ ಆಗಿಲ್ಲ. ಕಳೆದ ಹಲವು ವರ್ಷಗಳಿಂದ ನಾಲ್ಕರಿಂದ ಐದು ದಿನಗಳ ಕಾಲ ಮಾತ್ರ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತಗೊಂಡು ನೀರು ಇಳಿಯುತಿತ್ತು. ಆದರೆ, ಈ ಬಾರಿ ಒಂದು ತಿಂಗಳು ಜಲಾವೃತಗೊಂಡಿತ್ತು’ ಎಂದು ಭಾಗಮಂಡಲದ ನಿವಾಸಿ ಅರುಣ್ ತಿಳಿಸಿದರು.

‘ಜಿಲ್ಲಾಡಳಿತ ಸೂಚಿಸಿರುವ ಅವಧಿ ಮುಗಿದರೂ ಪ್ರವಾಸೋದ್ಯಮ ಚೇತರಿಸಿಕೊಳ್ಳುವುದು ಕಷ್ಟ. ಎತ್ತರ ಪ್ರದೇಶದಲ್ಲಿರುವ ಹೋಂಸ್ಟೇಗಳಿಗೆ ತೆರಳಲು ರಸ್ತೆಯೂ ಇಲ್ಲ. ಭೂಕುಸಿತದ ಆತಂಕದಿಂದ ಇನ್ಮುಂದೆ ಪ್ರವಾಸಿಗರು ಈ ಪ್ರದೇಶಕ್ಕೆ ಬರಲೂ ಹಿಂದೇಟು ಹಾಕುತ್ತಾರೆ. ಸಾವಿರಾರು ಕುಟುಂಬಗಳಿಗೆ ಪ್ರವಾಸೋದ್ಯಮ ಜೀವನ ಕಲ್ಪಿಸಿತ್ತು. ಬರೀ ಕೃಷಿಕರಿಗಲ್ಲದೇ ಹೋಂಸ್ಟೇ, ರೆಸಾರ್ಟ್‌ ಮಾಲೀಕರು, ಕಾರ್ಮಿಕರು, ಬಾಡಿಗೆಯ ಜೀಪು ಓಡಿಸುತ್ತಿದ್ದರು, ವ್ಯಾಪಾರಿಗಳು, ಹೋಟೆಲ್‌ ಮಾಲೀಕರು, ಸಾಂಬಾರು ಪದಾರ್ಥ ಮಾರಾಟಗಾರರಿಗೂ ಮಳೆಯು ಸಂಕಷ್ಟ ತಂದೊಡ್ಡಿತು’ ಎಂದು ಹೋಂಸ್ಟೇ ಮಾಲೀಕ ಕವನ್‌ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

ಕೊಡಗಿಗೆ ದೇಶದ ವಿವಿಧೆಡೆಯಿಂದ ವಾರ್ಷಿಕ ಅಂದಾಜು 16ರಿಂದ 18 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ. ಅದರಲ್ಲೂ ಮಡಿಕೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

‘ದುಬಾರೆ ಸಾಕಾನೆ ಶಿಬಿರಕ್ಕೆ ಪ್ರತಿ ತಿಂಗಳು 25 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಮಳೆಯ ಅನಾಹುತದಿಂದ ಯಾರೂ ಇತ್ತ ಕಡೆ ಬರುತ್ತಿಲ್ಲ. ದುಬಾರೆಯಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗರ ನಡುವೆ ಗಲಾಟೆ ನಡೆದಿದ್ದ ಕಾರಣ ರ್‍ಯಾಫ್ಟಿಂಗ್‌ ಅನ್ನೂ ಜಿಲ್ಲಾಡಳಿತ ನಿಷೇಧಿಸಿತ್ತು. ನಮಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದೆ. ಅರಣ್ಯ ಇಲಾಖೆಗೂ ರ್‍ಯಾಫ್ಟಿಂಗ್‌, ಬೋಟಿಂಗ್‌, ಪ್ರವೇಶ ಶುಲ್ಕದಿಂದ ವಾರ್ಷಿಕ ₹ 60 ಲಕ್ಷದಷ್ಟು ಆದಾಯ ಬರುತಿತ್ತು. ಅದೂ ಕಡಿಮೆಯಾಗಿದೆ’ ಎಂದು ರ್‍ಯಾಫ್ಟಿಂಗ್‌ ಕಾರ್ಮಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

2017ರ ಜೂನ್‌ನಿಂದ 2018ರ ಜೂನ್‌ವರೆಗೆ ದ್ವೀಪದಂತಿರುವ ಕಾವೇರಿ ನಿಸರ್ಗಧಾಮಕ್ಕೆ ಅಂದಾಜು 5 ಲಕ್ಷ, ಲಕ್ಷ್ಮಣತೀರ್ಥ ನದಿ ಜಲಧಾರೆಯಾಗಿ ಧುಮ್ಮಿಕ್ಕುವ ಇರ್ಪು ಜಲಪಾತ ವೀಕ್ಷಿಸಲು 2.50 ಲಕ್ಷ, ಮಡಿಕೇರಿ ರಾಜಾಸೀಟ್‌ಗೆ 6 ಲಕ್ಷ, ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರಕ್ಕೆ 3.50 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

‘ಆಗಸ್ಟ್‌ನಲ್ಲಿ ಜಲಪಾತ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಬರುತ್ತಿದ್ದರು. ವಸತಿಗೃಹಗಳೂ ಭರ್ತಿ ಆಗುತ್ತಿದ್ದವು. ಸೆಪ್ಟೆಂಬರ್‌, ಅಕ್ಟೋಬರ್‌ನಲ್ಲಿ ಪ್ರವಾಸಿಗರಿಗೆ ಕೊಠಡಿಗಳೇ ಸಿಗುತ್ತಿರಲಿಲ್ಲ. ಆದರೆ, ಮಹಾಮಳೆ ಕೊಡಗಿನ ಬದುಕಿನ ಚಿತ್ರಣವನ್ನೇ ಬದಲಾಯಿಸಿತು. ಪ್ರವಾಸೋದ್ಯಮ ಜತೆಗೆ ಜನರ ಜೀವನ ಸುಧಾರಣೆಗೂ ಹಲವು ತಿಂಗಳು ಬೇಕು’ ಎಂದು ಹೋಟೆಲ್‌ ಉದ್ಯಮಿ ಹರೀಶ್‌ ಭಟ್‌ ಹೇಳಿದರು.

Post Comments (+)