ಅತೃಪ್ತರು ಮನಸ್ಸು ಬದಲಿಸಿಕೊಳ್ಳದಿದ್ದರೆ ಶಿಸ್ತು ಕ್ರಮ: ‘ಕೈ’ ನಾಯಕರ ಎಚ್ಚರಿಕೆ

7
ಕೆಪಿಸಿಸಿ ಸರ್ವಸದಸ್ಯರ ಸಭೆ

ಅತೃಪ್ತರು ಮನಸ್ಸು ಬದಲಿಸಿಕೊಳ್ಳದಿದ್ದರೆ ಶಿಸ್ತು ಕ್ರಮ: ‘ಕೈ’ ನಾಯಕರ ಎಚ್ಚರಿಕೆ

Published:
Updated:

ಬೆಂಗಳೂರು: ‘ಅತೃಪ್ತ ಶಾಸಕರು ಮನಸ್ಸು ಬದಲಿಸಿಕೊಳ್ಳದಿದ್ದರೆ ಶಿಸ್ತು ಕ್ರಮ ಖಚಿತ’ ಎಂದು ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಖಡಕ್‌ ಎಚ್ಚರಿಕೆ ನೀಡಲಾಗಿದೆ.

ಅರಮನೆ ಮೈದಾನದಲ್ಲಿ ಬುಧವಾರ ನಡೆದ ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಕಾಂಗ್ರೆಸ್  ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ‘ಇದು ಹೀಗೇ ಮುಂದುವರಿದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ’ ಎಂದರು.

‘ಅತೃಪ್ತರಿಗೆ ಎರಡು ಬಾರಿ ನೋಟಿಸ್ ನೀಡಲಾಗಿದೆ. ಬಜೆಟ್ ಅಧಿವೇಶನಕ್ಕೆ ಹಾಜರಾಗುವಂತೆ ವಿಪ್ ನೀಡಲಾಗಿದೆ. ಈ ಸೂಚನೆಯನ್ನು ಪಾಲಿಸಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

‘25ರಿಂದ 30 ಶಾಸಕರಿಗೆ ಬಿಜೆಪಿಯವರು ಆಮಿಷವೊಡ್ಡಿದ್ದಾರೆ. ಕಳೆದ ರಾತ್ರಿಯೂ ಜೆಡಿಎಸ್ ಶಾಸಕರೊಬ್ಬರ ಮನೆಗೆ ಬಿಜೆಪಿಯವರು ₹ 30 ಕೋಟಿ ತೆಗೆದುಕೊಂಡು ಹೋಗಿದ್ದರು. ಆದರೆ, ಆ ಶಾಸಕರು ಹಣ ಸ್ವೀಕರಿಸಲಿಲ್ಲ. ಬದಲಾಗಿ ಬಿಜೆಪಿಯವರಿಗೆ ಕೈಮುಗಿದು ವಾಪಸ್ ತೆಗೆದುಕೊಂಡು ಹೋಗಲು ಸೂಚಿಸಿದ್ದಾರೆ’.

‘ಮತ್ತೊಬ್ಬ ಶಾಸಕರ ಮನೆಯಲ್ಲಿ ₹ 5 ಕೋಟಿ ಇಟ್ಟಿರುವ ಬಿಜೆಪಿಯವರು ಉಳಿದದ್ದನ್ನು ನಂತರ ಮಾತನಾಡೋಣ ಎಂದಿದ್ದಾರೆ. ಬಿಜೆಪಿ ವರಿಷ್ಠರೇ ಆಪರೇಷನ್ ಕಮಲದಲ್ಲಿ ಭಾಗಿಯಾಗಿದ್ದಾರೆ. ಇಷ್ಟೆಲ್ಲ ದುಡ್ಡು ಎಲ್ಲಿಂದ ಬರುತ್ತದೆ. ಅಮಿತ್ ಶಾ- ನರೇಂದ್ರ ಮೋದಿ ಅವರೂ ಇದರಲ್ಲಿ ಪಾಲುದಾರರು’ ಎಂದು ಸಭೆಯಲ್ಲಿ ಸಿದ್ದರಾಮಯ್ಯ ಆರೋಪಿಸಿದರು ಎನ್ನಲಾಗಿದೆ.‌

ಸಭೆಯ ಬಳಿಕ ಮಾತನಾಡಿದ ದಿನೇಶ್ ಗುಂಡೂರಾವ್, ‘ಬಜೆಟ್ ಅಧಿವೇಶನಕ್ಕೆ ಅನಾವಶ್ಯಕವಾಗಿ ಬಿಜೆಪಿಯವರು ಅಡ್ಡಿಪಡಿಸಿದರೆ ಸಭಾಧ್ಯಕ್ಷರು ನಿಯಮಾನುಸಾರ ಕ್ರಮ ತೆಗೆದುಕೊಳ್ಳುತ್ತಾರೆ’ ಎಂದರು.

‘ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರುವುದರಿಂದ ಎಲ್ಲರೂ ಎಚ್ಚರಿಕೆಯಿಂದ ಹೇಳಿಕೆಗಳನ್ನು ನೀಡಬೇಕು’ ಎಂದು ಅವರು ಸಲಹೆ ನೀಡಿದರು.

‘ಸಿದ್ದಗಂಗಾ ಶ್ರೀಗಳಿಗೆ ಮರಣೋತ್ತರವಾಗಿ ‘ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಪ್ರಿಯಾಂಕಾ ಗಾಂಧಿ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನಿಯೋಜಿಸಿದ ರಾಹುಲ್ ಗಾಂಧಿ ಅವರನ್ನು ಅಭಿನಂದಿಸಲು ತೀರ್ಮಾನಿಸಲಾಯಿತು’ ಎಂದೂ ದಿನೇಶ್ ತಿಳಿಸಿದರು.

ಇದೇ ವೇಳೆ ಪಕ್ಷದ ಮುಖವಾಣಿಯಾದ ‘ನಮ್ಮ ಕಾಂಗ್ರೆಸ್’ ಪಾಕ್ಷಿಕವನ್ನು ಬಿಡುಗಡೆ ಮಾಡಲಾಯಿತು.

ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಇದ್ದರು.

ಸಭೆಯ ನಿರ್ಣಯಗಳು

* ಇದೇ 15ರಿಂದ ಮಾರ್ಚ್ 15 ರವರೆಗೆ ಬೂತ್ ಮಟ್ಟದಲ್ಲಿ ಜನಸಂಪರ್ಕ ಅಭಿಯಾನ

* ಸಾಲ ಮನ್ನಾ, ಬಡವರ ಬಂಧು ಸೇರಿ ಮೈತ್ರಿ ಸರ್ಕಾರದ ಕಾರ್ಯಕ್ರಮಗಳ ಪ್ರಚಾರ

* ಇದೇ 16ರಿಂದ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯಕರ್ತರಿಗೆ ತರಬೇತಿ

* ಬಜೆಟ್ ಅಧಿವೇಶನ ನಂತರ ಲೋಕಸಭೆ ಸೀಟು ಹಂಚಿಕೆ ಮಾತುಕತೆ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !