ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತಿಮ ಆದೇಶಕ್ಕೆ ಬದ್ಧವಾಗಿರಲಿದೆ: ಹೈಕೋರ್ಟ್

ಕೆಪಿಎಸ್‌ಸಿ 2015ರ ತಂಡದ ನೇಮಕಾತಿ: ಸಂತ್ರಸ್ತರಿಂದ ರಿಟ್‌ ಅರ್ಜಿ
Last Updated 18 ಜೂನ್ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: 'ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮುಖಾಂತರ 2015ರ ಸಾಲಿನ ಗೆಜೆಟೆಡ್ ಪ್ರೊಬೇಷನರಿಯ 428 ಹುದ್ದೆಗಳ ನೇಮಕಾತಿಯು ಸಂತ್ರಸ್ತ ಅಭ್ಯರ್ಥಿಗಳು ಸಲ್ಲಿಸಿರುವ ರಿಟ್ ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ' ಎಂದು ಹೈಕೋರ್ಟ್ ಆದೇಶಿಸಿದೆ.

'2015ರ ಸಾಲಿನ ನೇಮಕಾತಿಯ ಅಕ್ರಮಗಳನ್ನು ಸಿಬಿಐ ತನಿಖೆಗೆ ಒಪ್ಪಿಸಲು ನಿರ್ದೇಶಿಸಬೇಕು ಮತ್ತು ಅಂತಿಮ ಆಯ್ಕೆ ಪಟ್ಟಿಗೆ ತಡೆ ನೀಡಬೇಕು’ ಎಂದು ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಅರವಿಂದ ಕುಮಾರ್ ಹಾಗೂ ಅಶೋಕ ಎಸ್. ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ. ಅಂತೆಯೇ, ‘ಪರೀಕ್ಷೆಯ ಡಿಜಿಟಲ್‌ ಮೌಲ್ಯಮಾಪನದ ಡಾಟಾ ಹಾಗೂ ಲಿಖಿತ ಪರೀಕ್ಷೆಯ ಉತ್ತರ ಪತ್ರಿಕೆಗಳು, ಸಿಸಿಟಿವಿಯಲ್ಲಿ ಸಂಗ್ರಹವಾಗಿರುವ ದೃಶ್ಯಗಳನ್ನು ಮುಂದಿನ ವಿಚಾರಣೆಯವರೆಗೂ ಸಂಗ್ರಹಿಸಿಡಬೇಕು' ಎಂದೂ ನ್ಯಾಯಪೀಠವು ಕೆಪಿಎಸ್‌ಸಿಗೆ ತಾಕೀತು ಮಾಡಿದೆ.

'ಆಕ್ಷೇಪಣೆ ಸಲ್ಲಿಸಲು ನಾಲ್ಕು ತಿಂಗಳಿಂದ ವಿಳಂಬ ಮಾಡಲಾಗುತ್ತಿದೆ' ಎಂದು ಕೆಪಿಎಸ್‌ಸಿ ಮತ್ತು ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಪೀಠ 15 ದಿನಗಳ ಕಡೆಯ ಅವಕಾಶ ನೀಡಿದೆ. 52 ಸಂತ್ರಸ್ತ ಅಭ್ಯರ್ಥಿಗಳು ಈ ಅರ್ಜಿ ಸಲ್ಲಿಸಿದ್ದಾರೆ.

ಕೋರಿಕೆ ಏನು?: ‘2015ರ ತಂಡದ ಕೆಪಿಎಸ್‌ಸಿ ಪರೀಕ್ಷೆಯ ಡಿಜಿಟಲ್‌ ಮೌಲ್ಯಮಾಪನದಲ್ಲಿ ಭಾರಿ ಅಕ್ರಮ ನಡೆದಿದೆ. ಇದನ್ನು ಪತ್ತೆಹಚ್ಚಲು ಸೈಬರ್‌ ಅಪರಾಧ ವಿಭಾಗದ ತಜ್ಞರನ್ನು ಒಳಗೊಂಡ ಸತ್ಯಶೋಧನಾ ಸಮಿತಿ ರಚಿಸಬೇಕು ಮತ್ತು ಇದನ್ನು ಸಿಬಿಐ ತನಿಖೆಗೆ ಒಪ್ಪಿಸಲು ನಿರ್ದೇಶಿಸಬೇಕು’ ಎಂಬುದು ಅರ್ಜಿದಾರರ ಕೋರಿಕೆ.

ಆರೋಪಗಳೇನು?: ‘ಡಿಜಿಟಲ್‌ ಮೌಲ್ಯಮಾಪನ ನಡೆಸಿರುವ ಲಿಖಿತ ಪರೀಕ್ಷೆಯ ಉತ್ತರ ಪತ್ರಿಕೆಗಳಲ್ಲಿ ತಮಗೆ ಬೇಕಾದ ಅಭ್ಯರ್ಥಿಗಳ ಅಂಕಗಳನ್ನು ತಿದ್ದಲಾಗಿದೆ. ಸೂಪರ್ ಯೂಸರ್ ಕಂಟ್ರೋಲ್ ಘಟಕದ ಪಾಸ್‌ವರ್ಡ್ ಬಳಸಿ ಪದೇ ಪದೇ ಲಾಗಿನ್ ಆಗಿ ಅಕ್ರಮ ಎಸಗಲಾಗಿದೆ. ಪಾಸ್‌ವರ್ಡ್‌ ಅನ್ನು ಪರೀಕ್ಷಾ ಮುಖ್ಯ ನಿಯಂತ್ರಕರು ಮಾತ್ರ ಉಪಯೋಗಿಸಲು ಅವಕಾಶವಿದೆ‌. ಆದರೆ, ಹೆಚ್ಚು ಜನ ಇದರ ಪಾಸ್‌ವರ್ಡ್ ಬಳಕೆ ಮಾಡಿದ್ದಾರೆ ಎಂಬುದು ಅರ್ಜಿದಾರರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT