ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ತಿಂಗಳಿನಿಂದ ವೇತನ ಇಲ್ಲ!

13 ವರ್ಷಗಳ ಹೋರಾಟದಲ್ಲಿ ಗೆದ್ದವರ ವಿರುದ್ಧ ಸರ್ಕಾರದ ಸೇಡು?
Last Updated 22 ಸೆಪ್ಟೆಂಬರ್ 2019, 18:55 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ 13 ವರ್ಷಗಳ ಕಾನೂನು ಹೋರಾಟದ ಬಳಿಕ ಉದ್ಯೋಗ ಗಿಟ್ಟಿಸಿಕೊಂಡ 1998ನೇ ಸಾಲಿನ 17 ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳು ಆರು ತಿಂಗಳಿನಿಂದ ವೇತನ ಇಲ್ಲದೆ ಪರದಾಡುತ್ತಿದ್ದಾರೆ.

ಆದರೆ, ಹೈಕೋರ್ಟ್‌ ತೀರ್ಪು ಪ್ರಕಾರ ಪರಿಷ್ಕೃತಗೊಂಡ ಈ ಸಾಲಿನ ಆಯ್ಕೆಪಟ್ಟಿಯಿಂದ ಹೊರಗುಳಿದು, ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿರುವ 36 ಅಧಿಕಾರಿಗಳು ಇನ್ನೂ ಹುದ್ದೆಯಲ್ಲೇ ಮುಂದುವರಿದಿದ್ದಾರೆ. ಅಷ್ಟೇ ಅಲ್ಲ, ಈ ಪಟ್ಟಿಯಲ್ಲಿ ಇಬ್ಬರು ತಹಶೀಲ್ದಾರ್‌ಗಳೂ ಇದ್ದಾರೆ. ಈ ಪೈಕಿ, ಒಬ್ಬರು ಕೆಎಎಸ್‌ ಕಿರಿಯ ಶ್ರೇಣಿಗೆ ಈ ಹಿಂದೆಯೇ ಬಡ್ತಿ ಪಡೆದಿದ್ದು, ಅವರಿಗೆ ಇದೀಗ, ಹಿರಿಯ ಶ್ರೇಣಿಗೆ ಬಡ್ತಿ ನೀಡಲಾಗಿದೆ.

ಅಷ್ಟೇ ಅಲ್ಲದೆ, ಇದೇ ಸಾಲಿನಲ್ಲಿ ಹುದ್ದೆ ಬದಲಾಗುವ ಮೂಲಕ ಹಿಂಬಡ್ತಿಗೊಂಡು ಐಎಎಸ್‌ ಶ್ರೇಣಿ ಕಳೆದು
ಕೊಳ್ಳುವ ಭೀತಿಯಲ್ಲಿರುವ 11 ಅಧಿಕಾರಿಗಳು ಸಿಎಟಿ ನೀಡಿರುವ ತಡೆಯಾಜ್ಞೆಯ ನೆರಳಿನಲ್ಲೇ ಮುಂದುವರಿದಿದ್ದಾರೆ.

ಈ ಸಾಲಿನಲ್ಲಿ 383 ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳು ನೇಮಕಗೊಂಡಿದ್ದು, ಅವರೆಲ್ಲರೂ 2006 ರಿಂದ ಹುದ್ದೆಯಲ್ಲಿದ್ದಾರೆ. ಹೈಕೋರ್ಟ್ ತೀರ್ಪು ಅನ್ವಯ ಕೆಪಿಎಸ್‌ಸಿ ಆ. 22 ರಂದು ಗೆಜೆಟ್‌ ಹೊರಡಿಸಿ, ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಪರಿಷ್ಕೃತ ನೇಮಕಾತಿ ಪಟ್ಟಿ ಪ್ರಕಾರ 173 ಅಧಿಕಾರಿಗಳ ಹುದ್ದೆಗಳು ಸ್ಥಾನಪಲ್ಲಟಗೊಂಡಿವೆ.

‘ಕೆಪಿಎಸ್‌ಸಿ ಮತ್ತು ರಾಜ್ಯ ಸರ್ಕಾರದ ವಿರುದ್ಧದ ಕಾನೂನು ಹೋರಾಟದಲ್ಲಿ ಕೊನೆಗೂ ಗೆದ್ದು, ಹುದ್ದೆ ಪಡೆಯಲು ಅರ್ಹರಾದೆವು. ಖಾಸಗಿಯಾಗಿ ಬೇರೆ ಬೇರೆ ಉದ್ಯೋಗದಲ್ಲಿದ್ದ ನಾವು, ಇದೇ ಏಪ್ರಿಲ್‌ ತಿಂಗಳಲ್ಲಿ ಸರ್ಕಾರಿ ಹುದ್ದೆ ಸಿಕ್ಕಿದ ಸಂಭ್ರಮವನ್ನೂ ಅನುಭವಿಸಿದೆವು. ಆರು ತಿಂಗಳಾದರೂ ಮೊದಲ ತಿಂಗಳ ವೇತನ ಕೈಸೇರಿಲ್ಲ. ವೇತನ ಬಟವಾಡೆ ಇನ್ನೂ ಎರಡು ತಿಂಗಳು ವಿಳಂಬ ಆಗಬಹುದಂತೆ. ವೇತನ ಇಲ್ಲದಿರುವುದರಿಂದ ಕುಟುಂಬ ನಿರ್ವಹಣೆಯೇ ಕಷ್ಟವಾಗುತ್ತಿದೆ’ ಎಂದು ಕೋರ್ಟ್‌ ತೀರ್ಪು ಪ್ರಕಾರ ಕೆಲಸಕ್ಕೆ ಸೇರಿದ ಅಧಿಕಾರಿಯೊಬ್ಬರು ಹೇಳಿದರು.

ಅ. 21ಕ್ಕೆ ‘ಸುಪ್ರೀಂ’ ವಿಚಾರಣೆ

1998ನೇ ಸಾಲಿನ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನೇ ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದ್ದು, ಎಲ್ಲ ಮೇಲ್ಮನವಿಗಳೂ ವಜಾಗೊಂಡಿವೆ. ಆದರೂ ಹಿಂಬಡ್ತಿ ಪಡೆಯಬೇಕಿದ್ದ ಅಧಿಕಾರಿಗಳ ವಿಷಯದಲ್ಲಿ ರಾಜ್ಯ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಖಲೀದ್‌ ಅಹ್ಮದ್‌ ಮತ್ತು ಇತರರು ಸಲ್ಲಿಸಿದ ಅರ್ಜಿ ಅ. 21ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಅಲ್ಲದೆ, ಇದೇ ಪ್ರಕರಣ ಇತ್ಯರ್ಥಗೊಳ್ಳುವವರೆಗೆ ಈ ಸಾಲಿನಲ್ಲಿ ಆಯ್ಕೆಯಾದವರಿಗೆ ಪದೋನ್ನತಿ ನೀಡಬಾರದು ಎಂದೂ ದೂರುದಾರರು ಮನವಿ ಮಾಡಿದ್ದರು. ಈ ಸಂಬಂಧ, 2018ರ ಜುಲೈ 14ರಂದೇ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿತ್ತು. ‘ನ್ಯಾಯಾಲಯ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟು’ ಎಂಬ ಷರತ್ತು ವಿಧಿಸಿ ಐಎಎಸ್‌ಗೆ ಬಡ್ತಿ ನೀಡಿದ್ದರೂ ಕ್ರಮ ತೆಗೆದುಕೊಂಡಿಲ್ಲ. ಪದೋನ್ನತಿಯನ್ನೂ ನೀಡುತ್ತಿದೆ. ಈ ವಿಷಯವನ್ನು ವಿಚಾರಣೆಯ ವೇಳೆ ಗಮನಕ್ಕೆ ತರಲಾಗುವುದು ಎಂದು ದೂರುದಾರರು ಹೇಳಿದರು.

ಕೆಎಎಸ್‌ ಅಧಿಕಾರಿಗಳಿಗೂ ವೇತನ ಇಲ್ಲ!

ಪರಿಷ್ಕೃತ ಪಟ್ಟಿಯಿಂದಾಗಿ ಇತರ ಇಲಾಖೆಗಳಿಂದ ಉಪ ವಿಭಾಗಾಧಿಕಾರಿ (ಎ.ಸಿ) ಹುದ್ದೆಗೆ ಸೇರಿದ ಎಂಟು ಅಧಿಕಾರಿಗಳೂ ಸೇರಿ ಸ್ಥಾನಪಲ್ಲಟಗೊಂಡ ಸುಮಾರು 40 ಅಧಿಕಾರಿಗಳಿಗೂ ಮೂರು ತಿಂಗಳಿನಿಂದ ಸರ್ಕಾರ ವೇತನ ನೀಡಿಲ್ಲ. ಹುದ್ದೆಯನ್ನೂ ತೋರಿಸಿಲ್ಲ. ಈ ಅಧಿಕಾರಿಗಳಿಗೆ ಜ್ಯೇಷ್ಠತೆ ನಿಗದಿಪಡಿಸಿ ವೇತನ ನೀಡಬೇಕಿದೆ. ಆದರೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆ ಕೆಲಸವನ್ನು ಇನ್ನೂ ಮಾಡಿಲ್ಲ ಎಂದೂ ಗೊತ್ತಾಗಿದೆ.

***

ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳಿಗೆ ಆರು ತಿಂಗಳಿನಿಂದ ವೇತನ ಸಿಗದಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ತಕ್ಷಣವೇ ಗಮನಹರಿಸುತ್ತೇನೆ.

ಟಿ.ಎಂ. ವಿಜಯಭಾಸ್ಕರ,ಮುಖ್ಯ ಕಾರ್ಯದರ್ಶಿ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT