ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೃಷಿ ಪಂಡಿತ’ರ ಕೋಪ– ಓಡೋಡಿ ಬಂದ ಸಿ.ಎಂ.

ಸಮಾರಂಭದಲ್ಲಿ 7 ಮಂದಿ ಕೃಷಿಕರಿಗೆ ಕೃಷಿ ಪಂಡಿತ ಪ್ರಶಸ್ತಿ ಮತ್ತು 14 ಮಂದಿಗೆ ಕೃಷಿ ಪ್ರಶಸ್ತಿ ಪ್ರದಾನ
Last Updated 6 ಮಾರ್ಚ್ 2019, 18:50 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿಯೇ ಪ್ರಶಸ್ತಿ ಪ್ರದಾನ ಮಾಡಬೇಕು ಎಂದು ಕೃಷಿ ಪಂಡಿತ ಹಾಗೂ ಕೃಷಿ ಪ್ರಶಸ್ತಿ ಪುರಸ್ಕೃತರು ಪಟ್ಟು ಹಿಡಿದರು. ಕೃಷಿ ಸಾಧಕರ ಕೋಪಕ್ಕೆ ಮಣಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಧಾವಿಸಿ ಬಂದು ಪ್ರಶಸ್ತಿ ಪ್ರದಾನ ಮಾಡಿದರು.

ಕೃಷಿ ಇಲಾಖೆಯ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಬುಧವಾರ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು.

ಬೆಳಿಗ್ಗೆ 11.30ಕ್ಕೆ ಕಾರ್ಯಕ್ರಮ ನಿಗದಿಯಾಗಿತ್ತು. ಮಧ್ಯಾಹ್ನ 12.30 ಕಳೆದರೂ ಕುಮಾರಸ್ವಾಮಿ ಬರಲಿಲ್ಲ. ಮುಖ್ಯಮಂತ್ರಿ ಬರುವುದಿಲ್ಲ ಎಂದು ಖಚಿತಪಡಿಸಿಕೊಂಡು ಸಂಘಟಕರು ಕಾರ್ಯಕ್ರಮ ಆರಂಭಿಸಿದರು. ಸ್ವಾಗತ, ಪ್ರಾಸ್ತಾವಿಕ ಮಾತು ಸುಮಾರು 20 ನಿಮಿಷ ನಡೆಯಿತು. 12.55ಕ್ಕೆ ಕೃಷಿ ಸಚಿವ ಎನ್‌.ಎಚ್‌. ಶಿವಶಂಕರ ರೆಡ್ಡಿ ಪ್ರಶಸ್ತಿ ಪ್ರದಾನ ಮಾಡಲು ಮುಂದಾದರು.

‘ಮುಖ್ಯಮಂತ್ರಿ ಎಲ್ಲಿ’ ಎಂದು ಪ್ರಶಸ್ತಿ ಪುರಸ್ಕೃತರು ಪ್ರಶ್ನಿಸಿದರು. ‘ಅವರು ಬರುವುದಿಲ್ಲ. ಅವರು ಬೇರೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ’ ಎಂದು ಸಂಘಟಕರು ಸಮಜಾಯಿಷಿ ನೀಡಿದರು. ಇದರಿಂದ ಕೆರಳಿದ ರೈತರು, ‘ಕುಮಾರಸ್ವಾಮಿ ಪ್ರದಾನ ಮಾಡಿದರೆ ಮಾತ್ರ ಪ್ರಶಸ್ತಿ ಸ್ವೀಕರಿಸುತ್ತೇವೆ. ಇಲ್ಲದಿದ್ದರೆ ಬೇಡವೇ ಬೇಡ’ ಎಂದು ಪಟ್ಟು ಹಿಡಿದರು.

‘ಮೈತ್ರಿ ಸರ್ಕಾರ ರೈತ ಪರ ಎಂದು ಹೇಳಿಕೊಳ್ಳುತ್ತಿದೆ. ಆದರೆ, ಸಾಧಕರನ್ನು ಸನ್ಮಾನಿಸಲು ಮುಖ್ಯಮಂತ್ರಿಗೆ ಸಮಯವಿಲ್ಲ. ರಾಜಕೀಯ ಲಾಭಕ್ಕಾಗಿ ರೈತ ಪರ ಎನ್ನುತ್ತಿದ್ದಾರೆ. ಅವರ ಕಾಳಜಿ ಇಲ್ಲಿ ಗೊತ್ತಾಗುತ್ತದೆ. ರೈತರಿಗಿಂತ ರಾಜಕೀಯ ಹೆಚ್ಚಾಯಿತೇ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಭಾಂಗಣದಲ್ಲಿದ್ದವರು ಘೋಷಣೆಗಳನ್ನು ಕೂಗಿದರು. ಶಿವಶಂಕರ ರೆಡ್ಡಿ ದೂರವಾಣಿ ಕರೆ ಮಾಡಿ ಈ ವಿಷಯವನ್ನು ಕುಮಾರಸ್ವಾಮಿ ಅವರಿಗೆ ತಿಳಿಸಿದರು. ‘ನಾನೇ ಬಂದು ಪ್ರಶಸ್ತಿ ಪ್ರದಾನ ಮಾಡುತ್ತೇನೆ’ ಎಂದು ಸಮಾಧಾನಿಸಿದರು. ಬಳಿಕ ಬಂದು ಪ್ರಶಸ್ತಿ ಪ್ರದಾನ ಮಾಡಿದರು.

‘ರೈತರಿಗೆ ನೋವಾಗಿದ್ದಕ್ಕೆ ಕ್ಷಮೆಯಾಚಿಸುತ್ತೇನೆ. ಏಳು ಕೆರೆಗಳ ಅಭಿವೃದ್ಧಿ ಸಂಬಂಧ ಕಾರ್ಪೊರೇಟ್‌ ಕಂಪನಿಗಳ ಜತೆಗೆ ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಕೆಲವು ಪೂರ್ವನಿಗದಿತ ಹಾಗೂ ಇನ್ನೂ ಕೆಲವು ಪೂರ್ವನಿಗದಿತವಲ್ಲದ ಕಾರ್ಯಕ್ರಮಗಳು ಇರುತ್ತವೆ. ಸ್ಥಾನ ಉಳಿಸಿಕೊಳ್ಳಲು ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ’ ಎಂದು ಕುಮಾರಸ್ವಾಮಿ ಹೇಳಿದರು.

‘ರೈತರಿಗೆ ಅವಮಾನ ಮಾಡಬೇಕು ಎಂಬ ಉದ್ದೇಶ ಇರಲಿಲ್ಲ. ನಾನು ಗೈರುಹಾಜರಾಗಿದ್ದರೆ ಮುಖ್ಯಮಂತ್ರಿಯಿಂದ ರೈತರಿಗೆ ಅವಮಾನ ಎಂಬ ಸುದ್ದಿ ಬರುತ್ತಿತ್ತು. ಇದಕ್ಕೆ ಹೆದರಿ ಓಡೋಡಿ ಬಂದೆ’ ಎಂದು ಅವರು ಹೇಳಿದರು.

ಅನ್ನದಾತರಿಗೆ ಅನ್ನ ಇಲ್ಲ–ಆಕ್ರೋಶ: ಸಮಾರಂಭ ಮುಗಿದ ಬಳಿಕವೂ ರೈತರ ಪ್ರತಿಭಟನೆ ಮುಂದುವರಿಯಿತು. ‘ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದು ಸಂಘಟಕರು ಪ್ರಕಟಿಸಿದರು. ಎಲ್ಲ ರೈತರು ಊಟದ ಸಭಾಂಗಣಕ್ಕೆ ತೆರಳಿದರು. ಕೆಲವು ಮಂದಿ ಊಟ ಮಾಡಿ ಮುಗಿಸುತ್ತಿದ್ದಂತೆ ‘ಊಟ ಖಾಲಿಯಾಗಿದೆ’ ಎಂದು ಬಡಿಸುವವರು ತಿಳಿಸಿದರು. ಇದರಿಂದ ಕೋಪಗೊಂಡ ಕೃಷಿಕರು, ‘ರೈತರಿಗೆ ಊಟ ಹಾಕದ ಸರ್ಕಾರ’ ಎಂದು ಘೋಷಣೆ ಕೂಗಿದರು. ಪಾತ್ರೆಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಶಸ್ತಿ ಪುರಸ್ಕೃತರ ವಿವರ

ಕೃಷಿ ಪಂಡಿತ (ಪ್ರಥಮ) ₹1.25 ಲಕ್ಷ, ಕೃಷಿ ಪಂಡಿತ (ದ್ವಿತೀಯ) ₹1 ಲಕ್ಷ, ಕೃಷಿ ಪಂಡಿತ (ತೃತೀಯ) ₹75,000 ಹಾಗೂ ಕೃಷಿ ಪಂಡಿತ (ಉದಯೋನ್ಮುಖ)₹50,000 ನಗದು ಒಳಗೊಂಡಿತ್ತು.

2016–17ರ ಕೃಷಿ ಪಂಡಿತರು: ಬೆಳಗಾವಿ ಕುರುಗುಂದದ ದಯಾನಂದ ಜಗದೀಶ ಅಪ್ಪಯ್ಯನವರ ಮಠ (ಪ್ರಥಮ), ಬೀದರ್‌ ಬಗದಲ್‌ನ ಮಹಮ್ಮದ್‌ ಗುಲಾಮ್‌ ಅಹ್ಮದ್‌ (ದ್ವಿತೀಯ), ಬೆಳಗಾವಿಯ ಪಾಮಲದಿನ್ನಿಯ ಸಣ್ಣಯಮನಪ್ಪ ಭೀಮಪ್ಪ ರಾಜಾಪುರೆ (ತೃತೀಯ), ಚಿಕ್ಕಬಳ್ಳಾಪುರ ಹುಜುಗೂರಿನ ಎಂ. ರಾಮಯ್ಯ (ತೃತೀಯ).

2017–18ರ ಕೃಷಿ ಪಂಡಿತರು: ದಾವಣಗೆರೆ ಕವಳಿತಾಂಡದ ಮಂಜಾ ನಾಯ್ಕ ಕೆ.ಎಸ್‌. (ಪ್ರಥಮ), ಬಾಗಲಕೋಟೆ ಮುಗಳಖೋಡದ ಶ್ರೀಕಾಂತ ಕುಂಬಾರ (ದ್ವಿತೀಯ), ಬೆಳಗಾವಿ ಕಾರದಗಾದ ಲಕ್ಷ್ಮಣ ಈಶ್ವರ ಪಸಾರೆ (ತೃತೀಯ).

ಕೃಷಿ ಪ್ರಶಸ್ತಿ: ಕೆ.ರಾಂಬಾಬು (ಬಳ್ಳಾರಿ), ಹನುಮಂತಯ್ಯ (ಕುಣಿಗಲ್), ಕಲ್ಮೇಶ್ ರಾಯಗೊಂಡಪ್ಪ (ಅಥಣಿ), ಈರಯ್ಯ ಸಂಗಯ್ಯ ಪೂಜಾರಿ (ಅಥಣಿ), ಶ್ರೀಮಂತ ತಿಪ್ಪಣ್ಣಾ ಅಕ್ಕೋಳೆ (ರಾಯಭಾಗ), ಶರಣಪ್ಪ ಮಲಕಪ್ಪ ಯಂಕಂಚಿ (ಸಿಂದಗಿ), ಮಹದೇವಪ್ಪ ಬಸಪ್ಪ ಬಾಳಿಕಾಯಿ (ಕಲಘಟಗಿ), ಟಿ.ಶಶಿಧರ್ (ಕೆ.ಆರ್.ನಗರ), ಶೋಭಾ (ದೇವನಹಳ್ಳಿ), ವೀರಪ್ಪ ಶ್ರೀಶೈಲ ಗದಗ (ಬೈಲಹೊಂಗಲ), ಟಿ.ನಾಗರಾಜಪ್ಪ (ಹೊನ್ನಾಳಿ), ಜಯಶ್ರೀ (ಜಮಖಂಡಿ), ಗಂಗಾಧರಪ್ಪ (ಗೌರಿ ಬಿದನೂರು), ಬಾವುರಾಜ ರಾಯಗೊಂಡಪ್ಪ ಬಸರಗಿ(ಅಥಣಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT