ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಮಿಕರ ಕಷ್ಟಕ್ಕೆ ಕರಗಿದ ಸರ್ಕಾರ: ಸಂತಸದಿಂದ ಊರಿನತ್ತ ಹೊರಟ ಕಾರ್ಮಿಕರು

500 ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ
Last Updated 4 ಮೇ 2020, 0:56 IST
ಅಕ್ಷರ ಗಾತ್ರ

ಬೆಂಗಳೂರು: ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ, ತಮ್ಮ ಊರುಗಳಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದೆ. ಭಾನುವಾರ ಒಂದೇ ದಿನ 500 ಬಸ್‌ಗಳಲ್ಲಿ 15 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಸಂತಸದಿಂದ ಪ್ರಯಾಣ ಮಾಡಿದರು.

ಪ್ರತಿಯೊಬ್ಬರ ಹೆಸರು, ಮೊಬೈಲ್ ಸಂಖ್ಯೆಪಡೆದು ಆರೋಗ್ಯ ತಪಾಸಣೆ ನಡೆಸಿದ ನಂತರ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ.ಸೋಮವಾರ ಮತ್ತು ಮಂಗಳವಾರ ಕೂಡ ಉಚಿತ ಪ್ರಯಾಣಕ್ಕೆ ಅವಕಾಶ ಇದೆ.

ಶನಿವಾರ ಬೆಳಿಗ್ಗೆ ಒಪ್ಪಂದದ ಆಧಾರದಲ್ಲಿ ಬಸ್ ಪಡೆದು ಮೂರುಪಟ್ಟು ದರದಲ್ಲಿ ಕಾರ್ಮಿಕರು ಪ್ರಯಾಣ ಮಾಡಿದ್ದರು. ಮಧ್ಯಾಹ್ನದ ನಂತರ ಒಂದು ಕಡೆಯ ದರ ಮಾತ್ರ ಪಡೆದು ಪ್ರಯಾಣಕ್ಕೆ ವ್ಯವಸ್ಥೆ ಮಾಡಿಕೊಡಲಾಗಿತ್ತು.

ಒಂದೂವರೆ ತಿಂಗಳಿಂದ ಕೂಲಿಯೂ ಇಲ್ಲದೆ ಬರಿಗೈ ಆಗಿರುವ ಕಾರ್ಮಿಕರು ಟಿಕೆಟ್ ಪಡೆದು ಪ್ರಯಾಣಿಸಲು ಸಾಧ್ಯವಾಗದೆ ಕೆಂಪೇಗೌಡ ಬಸ್‌ ನಿಲ್ದಾಣದಲ್ಲೇ ಮಕ್ಕಳು–ಮರಿ, ಗಂಟು–ಮೂಟೆಗಳೊಂದಿಗೆ ಉಳಿದಿದ್ದರು.

ಇದಕ್ಕೆ ತಕ್ಷಣವೇ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಬಾಸ್ಕರ್ ಅವರನ್ನು ಕರೆಸಿಕೊಂಡು, ‘ಇದಕ್ಕೆ ತಗಲುವ ವೆಚ್ಚ ಎಷ್ಟು’ ಎಂಬ ಮಾಹಿತಿ ಕೇಳಿದರು.‘₹8 ಕೋಟಿ ಆಗುತ್ತದೆ’ ಎಂದು ವಿಜಯಭಾಸ್ಕರ್‌ ಉತ್ತರಿಸಿದರು. ‘ಎಷ್ಟೇ ಆಗಲಿ ತಕ್ಷಣವೇ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಿ’ ಎಂದು ಸೂಚಿಸಿದರು.

‘ಉಚಿತ ಬಸ್ ವ್ಯವಸ್ಥೆಗೆ ಬೇಕಿರುವ ಹಣವನ್ನು ಭಿಕ್ಷೆ ಬೇಡಿಯಾದರೂ ಕೊಡುತ್ತೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶನಿವಾರ ಹೇಳಿದ್ದರು. ಭಾನುವಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರೂ ನಿಲ್ದಾಣಕ್ಕೆ ಭೇಟಿ ನೀಡಿದ್ದರು.

‘ತುತ್ತಿನ ಚೀಲ ತುಂಬಿಸಿಕೊಳ್ಳಲು ಊರು ಬಿಟ್ಟು ಬೆಂಗಳೂರಿಗೆ ಬಂದ ನಾವು ಒಂದೂವರೆ ತಿಂಗಳಿಂದ ಸಂಕಟ ಅನುಭವಿಸಿದ್ದೇವೆ.ದಿನಕ್ಕೆ ಒಂದೇ ಹೊತ್ತು ಊಟ ಮಾಡಿದರೂ ಮತ್ತೆಂದೂ ಊರು ಬಿಡೆವು’ ಎಂದು ಬಾಗಲಕೋಟೆಯ ಸಂಗಪ್ಪ ಹೇಳಿದರು.

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಸೇರಿ ನಿಗಮದ ಹಿರಿಯ ಅಧಿಕಾರಿಗಳು ರಾತ್ರಿ ತನಕ ಬಸ್ ನಿಲ್ದಾಣದಲ್ಲೇ ಇದ್ದು ಕಾರ್ಮಿಕರನ್ನು ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಿದರು.

₹1 ಕೋಟಿ ನೀಡಿದ ಕೆಪಿಸಿಸಿ
ಕಾರ್ಮಿಕರನ್ನು ಊರುಗಳಿಗೆ ತಲುಪಿಸಲು ತಗಲುವ ವೆಚ್ಚ ಭರಿಸಿಕೊಳ್ಳಲು ₹1 ಕೋಟಿ ಮೊತ್ತದ ಚೆಕ್ ನೀಡಲು ಕೆಪಿಸಿಸಿ ಮುಂದಾಯಿತು. ಅದನ್ನು ಪಡೆಯಲು ಕೆಎಸ್‌ಆರ್‌ಟಿಸಿ ನಿರಾಕರಿಸಿತು.

‘ಮಹಾರಾಷ್ಟ್ರದಿಂದ ರೈಲು ಸೇವೆ ಇಲ್ಲ’
ಬೆಳಗಾವಿ:‘
ಮಹಾರಾಷ್ಟ್ರದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚಿರುವ ಕಾರಣ ಕಾರ್ಮಿಕರು ಅಲ್ಲಿಂದ ರಾಜ್ಯದ ಯಾವುದೇ ಜಿಲ್ಲೆಗಳಿಗೆ ಬರಲು ಅವಕಾಶ ಕೊಡುವುದಿಲ್ಲ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶನಿವಾರ ಹೇಳಿದ್ದಾರೆ. ಸದ್ಯಕ್ಕೆ ಅಲ್ಲಿಗೆ ರೈಲು ಸೇವೆ ಒದಗಿಸುವ ಬಗ್ಗೆ ಯೋಜಿಸಿಲ್ಲ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಸ್ಪಷ್ಟ ಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT