ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕ್ಕೆ ಸುಬ್ರಹ್ಮಣ್ಯ ವಿವಾದ: ಚೈತ್ರಾ ಕುಂದಾಪುರ, ಭಕ್ತರ ನಡುವೆ ಜಟಾಪಟಿ

ದೇವಸ್ಥಾನದ ಪೂಜೆ ಪುನಸ್ಕಾರದ ಬಗ್ಗೆ ಫೇಸ್‌ಬುಕ್‌ ಪುಟದಲ್ಲಿ ಟೀಕಿಸಿದ್ದ ಚೈತ್ರಾ
Last Updated 25 ಅಕ್ಟೋಬರ್ 2018, 20:15 IST
ಅಕ್ಷರ ಗಾತ್ರ

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಸಂಪುಟ ನರಸಿಂಹ ಸ್ವಾಮಿ ಮಠ ನಡುವಿನ ಭಿನ್ನಾಭಿಪ್ರಾಯ ಮತ್ತೆ ತಾರಕ್ಕೇರಿದೆ. ಹಿಂದೂ ವಿಚಾರಧಾರೆಗಳ ಬಗ್ಗೆ ಆವೇಶ ಭರಿತರಾಗಿ ಭಾಷಣ ಮಾಡುತ್ತಿದ್ದ ಚೈತ್ರಾ ಕುಂದಾಪುರ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಭಕ್ತರ ನಡುವೆ ನಡೆದ ಜಟಾಪಟಿಯಿಂದಾಗಿ ಈ ಭಿನ್ನಾಭಿಪ್ರಾಯ ಕುರಿತು ಮತ್ತೆ ಚರ್ಚೆ ಶುರುವಾಗಿವೆ.

ಮಠದ ಪರ ಮಾತನಾಡಿರುವ ಚೈತ್ರಾ ಕುಂದಾಪುರ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆ ಪುನಸ್ಕಾರ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ಫೇಸ್‌ಬುಕ್‌ ಪುಟದಲ್ಲಿ ಟೀಕಿಸಿದ್ದರು. ದೇವಸ್ಥಾನದ ಭಕ್ತರು ಈ ಹೇಳಿಕೆಯನ್ನು ಖಂಡಿಸಿ, ವಾದ ಪ್ರತಿವಾದಗಳು ನಡೆದಿದ್ದವು. ತನಗೆ ಸವಾಲು ಹಾಕಿದ ಗುರುಪ್ರಸಾದ್‌ ಪಂಜ ಅವರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಚೈತ್ರಾ ಅವರನ್ನು ಗುರುವಾರ ಬಂಧಿಸಲಾಗಿದೆ.

ಪ್ರಕರಣದ ಹಿನ್ನೆಲೆ: ದೇಶದ ವಿವಿಧೆಡೆಯ ಆಸ್ತಿಕರು ಕುಕ್ಕೆ ಸುಬ್ರಹಣ್ಯ ದೇವಸ್ಥಾನಕ್ಕೆ ಬಂದು ಆಶ್ಲೇಷಾ ಬಲಿ ಅಥವಾ ಸರ್ಪಸಂಸ್ಕಾರ ಸೇವೆ ಮಾಡಿಸುವುದು ವಾಡಿಕೆ. ಇದಕ್ಕಾಗಿ ದೇವಸ್ಥಾನದಲ್ಲಿ ಮುಂಚಿತವಾಗಿ ಆನ್‌ಲೈನ್‌ ಬುಕಿಂಗ್‌ ಮಾಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಆನ್‌ಲೈನ್‌ ಬುಕಿಂಗ್‌ ಸಂದರ್ಭ ಪೂಜಾ ದಿನಾಂಕ ನಿಗದಿಪಡಿಸಿದವರಿಗೆ ವಸತಿಯನ್ನೂ ಕಾದಿರಿಸಿ ಸೂಕ್ತ ವ್ಯವಸ್ಥೆ ಮಾಡಲಾಗುತ್ತದೆ.

ಆದರೆ ಈ ಆನ್‌ಲೈನ್‌ ವ್ಯವಸ್ಥೆಯ ಅರಿವು ಇಲ್ಲದವರು ನೇರವಾಗಿ ದೇವಸ್ಥಾನಕ್ಕೆ ಬಂದಾಗ ಸೇವೆ ಸಲ್ಲಿಸಲು ಸರತಿಯ ಪ್ರಕಾರ ಕೆಲ ದಿನಗಳ ಕಾಲ ಕಾಯಬೇಕಾಗುತ್ತದೆ. ಈ ಸಂದರ್ಭದಲ್ಲಿ ಕುಕ್ಕೆ ದೇವಸ್ಥಾನದ ಬಳಿಯೇ ಇರುವ ಸಂಪುಟ ನರಸಿಂಹ ಸ್ವಾಮಿ ಮಠದ ಸಿಬ್ಬಂದಿ, ‘ನಮ್ಮ ಮಠದಲ್ಲಿ ಪ್ರತ್ಯೇಕ ಆಶ್ಲೇಷಾ ಬಲಿ ಮತ್ತು ಸರ್ಪ ಸಂಸ್ಕಾರ ಸೇವೆ ಮಾಡುವ ಅವಕಾಶವಿದೆ’ ಎಂಬ ಮಾಹಿತಿ ನೀಡಿದಾಗ ದೂರದೂರಿನಿಂದ ಬಂದ ಭಕ್ತರು ಸಹಜವಾಗಿ ಅತ್ತ ತೆರಳುತ್ತಾರೆ ಎಂಬುದು ದೇವಸ್ಥಾನದ ಭಕ್ತರ ಆರೋಪ.

ದೇವಸ್ಥಾನದಲ್ಲಿ ಸಾಮೂಹಿಕವಾಗಿ ನಡೆಯುವ ಪೂಜೆಗಳಿಗೆ ಕಡಿಮೆ ಶುಲ್ಕ (ಸುಮಾರು ₹ 3,200) ಪಡೆಯಲಾಗುತ್ತದೆ. ಆದರೆ ಮಠದಲ್ಲಿ ವೈಯಕ್ತಿಕ ರೀತಿಯಲ್ಲಿ ಪೂಜೆಗಳನ್ನು ಆಯೋಜಿಸುವುದಕ್ಕೆ ಶುಲ್ಕ ಸುಮಾರು ₹ 20 ಸಾವಿರವಾಗುತ್ತದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಗ್ಗೆ ನಂಬಿಕೆ ಇರಿಸಿ ಬರುವ ಭಕ್ತರ ದಾರಿ ತಪ್ಪಿಸಲಾಗುತ್ತಿದೆ ಎಂಬ ಆರೋಪ ಇದೀಗ ಸಂಪುಟ ನರಸಿಂಹ ಸ್ವಾಮಿ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರ ಮೇಲೆ ಬಂದಿದೆ. ಭಕ್ತರು ಇಚ್ಛಿಸಿದಲ್ಲಿ ಕುಕ್ಕೆ ಕ್ಷೇತ್ರದ ಯಾವ ಸ್ಥಳದಲ್ಲಾದರೂ ಸೇವೆ ಸಲ್ಲಿಸಬಹುದು ಎಂಬ ಸಮಜಾಯಿಷಿಯನ್ನು ಮಠ ನೀಡುತ್ತದೆ.

ಸೇವೆ ಎಲ್ಲಿ ಮಾಡಿದರೂ ಸಲ್ಲುವುದು ದೇವರಿಗೆ

ದೇವಸ್ಥಾನದಲ್ಲಿ ಆಶ್ಲೇಷಾ ಬಲಿ ಮತ್ತು ಸರ್ಪ ಸಂಸ್ಕಾರ ಸಾಮೂಹಿಕವಾಗಿ ನಡೆಯುತ್ತದೆ. ಪ್ರತ್ಯೇಕವಾಗಿ ನಡೆಸುವ ಇಚ್ಛೆಯಿದ್ದ ಭಕ್ತರಿಗಷ್ಟೇ ಮಠದಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಆಶ್ಲೇಷಾ ಬಲಿ ಮತ್ತು ಸರ್ಪಸಂಸ್ಕಾರ ಯಾವುದೇ ಕ್ಷೇತ್ರದಲ್ಲಿ ನಡೆಸಿದರೂ ನಾಗದೇವರಿಗೇ ಅರ್ಘ್ಯ ನೀಡಲಾಗುತ್ತದೆ. ಆದ್ದರಿಂದ ಮಠದಲ್ಲಿ ನಡೆಯುವ ಸೇವಾ ಚಟುವಟಿಕೆಯಿಂದ ದೇವಸ್ಥಾನದ ಭಕ್ತರಿಗೆ ಯಾವುದೇ ತೊಂದರೆಯಾಗಲಿ, ನಷ್ಟವಾಗಲೀ ಇಲ್ಲ ಎಂದು ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ಚೈತ್ರಾಗೆ ನ್ಯಾಯಾಂಗ ಬಂಧನ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬುಧವಾರ ಸಂಜೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಹಾಗೂ ಅವರ 8 ಮಂದಿ ಬೆಂಬಲಿಗರನ್ನು ಬಂಧಿಸಿರುವ ಪೊಲೀಸರು, ಗುರುವಾರ ಸುಳ್ಯ ತಾಲ್ಲೂಕು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆರೋಪಿಗಳಿಗೆ ನವೆಂಬರ್‌ 3ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

**

ಕ್ಷೇತ್ರಕ್ಕೆಂದು ಬರುವ ಭಕ್ತರು ಅರಿವಿಲ್ಲದೆ ಮಠದಲ್ಲಿ ದುಬಾರಿ ಶುಲ್ಕ ತೆತ್ತು ಸೇವೆ ಸಲ್ಲಿಸಿದರೆ ಅದರ ಅಪಖ್ಯಾತಿ ಬರುವುದು ಕುಕ್ಕೆ ಕ್ಷೇತ್ರಕ್ಕೆ. ಇದನ್ನು ಒಪ್ಪಲಾಗದು
– ನಿತ್ಯಾನಂದ ಮುಂಡೋಡಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT