ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ವಿವಿ: ಅಭಿವೃದ್ಧಿಗೆ ಅಡ್ಡಿಯಾದ ಭೂ ವಿವಾದ

ಮೂರು ಪಟ್ಟು ಭೂಮಿ, ₹ 10 ಕೋಟಿ ಹಣ ನೀಡಿದರೂ ಗುತ್ತಿಗೆ ನವೀಕರಣಕ್ಕೆ ಮೀನಮೇಷ
Last Updated 4 ಸೆಪ್ಟೆಂಬರ್ 2019, 6:39 IST
ಅಕ್ಷರ ಗಾತ್ರ

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯಕ್ಕೆ 40 ವರ್ಷಗಳ ಹಿಂದೆ ಸರ್ಕಾರ ನೀಡಿದ್ದ ಭೂಮಿ ಮತ್ತೆ ವಿವಾದಕ್ಕೀಡಾಗಿದೆ. ಕ್ಯಾಂಪಸ್‌ ಒಳಗೆ ನಡೆಯುತ್ತಿದ್ದ ಅಭಿವೃದ್ಧಿಕಾಮಗಾರಿಗಳಿಗೆ ಅರಣ್ಯ ಇಲಾಖೆ ತಡೆಯೊಡ್ಡಿದೆ.

ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕಾಗಿ 1979ರಲ್ಲಿ ಭದ್ರಾವತಿ ತಾಲ್ಲೂಕು ಸಿಂಗನಮನೆ ಅರಣ್ಯ ಪ್ರದೇಶಕ್ಕೆ ಸೇರಿದ 230 ಎಕರೆಯನ್ನು 20 ವರ್ಷಗಳ ಗುತ್ತಿಗೆ ಆಧಾರದ ಮೇಲೆ (ಪ್ರತಿ ಎಕೆರೆಗೆ ವಾರ್ಷಿಕ ₹ 50ರ ಶುಲ್ಕ) ಸರ್ಕಾರ ಮಂಜೂರು ಮಾಡಿತ್ತು. ಇದಾದ 8 ವರ್ಷಗಳ ನಂತರ ಕುವೆಂಪು ವಿಶ್ವವಿದ್ಯಾಲಯ ಜನ್ಮ ತಾಳಿತ್ತು. ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿ ಒಳಗೊಂಡ ನೂತನ ವಿಶ್ವವಿದ್ಯಾಲಯಕ್ಕೆ ಜಾಗಹಸ್ತಾಂತರಿಸಲಾಗಿತ್ತು. (2008ರ ನಂತರ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿ ಒಳಗೊಂಡಿದೆ).

ಸಮಸ್ಯೆಯಾದ ಅಭಯಾರಣ್ಯ ಕಾಯ್ದೆ: ಕುವೆಂಪು ವಿಶ್ವವಿದ್ಯಾಲಯ ಸ್ಥಾಪನೆಯಾಗಿ ಕೆಲವೇ ವರ್ಷಗಳಲ್ಲಿ ಹಲವು ಅಧ್ಯಯನ ಕೇಂದ್ರಗಳು ಅಲ್ಲಿ ತಲೆ ಎತ್ತಿದವು. ಕಲೆ, ವಿಜ್ಞಾನ, ವಾಣಿಜ್ಯ, ಶಿಕ್ಷಣ ನಿಕಾಯಗಳಿಗೆ ಸೇರಿದ 35 ಸ್ನಾತಕೋತ್ತರ ವಿಭಾಗಗಳು, 45 ಸ್ನಾತಕೋತ್ತರ ಕೋರ್ಸ್‌ಗಳು, ಹಲವು ಅಧ್ಯಯನ ಪೀಠಗಳು, ಗ್ರಂಥಾಲಯ, ಹಲವು ಹಾಸ್ಟೆಲ್‌ ಕಟ್ಟಡಗಳು, ಭಾಷಾ ಪ್ರಯೋಗಾಲಯ, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ, ಪರಿಶಿಷ್ಟ ಜಾತಿ, ಹಿಂದುಳಿದ ವರ್ಗಗಳ ಸೇವಾ ಕೇಂದ್ರಗಳು, ಆಂತರಿಕ ಗುಣಮಟ್ಟ ಖಾತ್ರಿ ಘಟಕ, ಲೈಂಗಿಕ ಕಿರುಕುಳ ಪರಿಹಾರ ಘಟಕ, ಕುಂದುಕೊರತೆ ಪರಿಹಾರ ಘಟಕ, ಉದ್ಯೋಗ ಮಾಹಿತಿ ಕೇಂದ್ರ, ಸಲಹಾ ಕೇಂದ್ರ, ಅಧಿಕಾರಿಗಳು, ಪ್ರಾಧ್ಯಾಪಕರು ಮತ್ತು ಸಿಬ್ಬಂದಿ ವಸತಿ ಗೃಹಗಳು ಸೇರಿ ಹಲವು ಕಟ್ಟಡಗಳು ಅಲ್ಲಿ ತಲೆಎತ್ತಿವೆ. ಪ್ರಸ್ತುತ 10 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ವಿಶ್ವವಿದ್ಯಾಲಯ ಇರುವ ಅರಣ್ಯ ಪ್ರದೇಶವನ್ನೂ ಕೇಂದ್ರ ಸರ್ಕಾರ ಭದ್ರಾ ಅಭಯಾರಣ್ಯ ವ್ಯಾಪ್ತಿಗೆ ಸೇರಿಸಿತ್ತು. 1999ರಲ್ಲಿ ಗುತ್ತಿಗೆ ಅವಧಿ ನವೀಕರಿಸುವ ವೇಳೆಗೆ ಈ ಭೂಮಿ ಕೇಂದ್ರ ಅರಣ್ಯ ಇಲಾಖೆಯ ಸ್ವಾಧೀನಕ್ಕೆ ಹೋಗಿತ್ತು. ಅಭಯಾರಣ್ಯ ವ್ಯಾಪ್ತಿಯ ಕಾರಣ ನವೀಕರಣದ ಪ್ರಸ್ತಾವ ನನೆಗುದಿಗೆ ಬಿದ್ದಿತ್ತು. ಅಂದು ಜಾಗ ನೀಡಿದ್ದ ರಾಜ್ಯ ಸರ್ಕಾರ ಭೂಮಿಯನ್ನು ಡಿನೋಟಿಫೈ ಮಾಡಿರಲಿಲ್ಲ. ಇದರಿಂದ ವಿಶ್ವವಿದ್ಯಾಲಯ ಸಾಕಷ್ಟು ಸಮಸ್ಯೆ ಎದುರಿಸುವಂತಾಯಿತು. ಕೊನೆಗೆ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.

ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ಹಸಿರುಪೀಠ ₹ 43 ಕೋಟಿ ದಂಡ ವಿಧಿಸಿದ್ದಲ್ಲದೇ, 230 ಎಕರೆ ಬದಲಿಗೆ ಬೇರೆ ಸ್ಥಳದಲ್ಲಿ ಅದರ ಮೂರು ಪಟ್ಟು ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಲು ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ನಂತರ ವಿಶ್ವವಿದ್ಯಾಲಯದ ಮೇಲ್ಮನವಿ ಪುರಸ್ಕರಿಸಿದ ಪೀಠ ₹ 10 ಕೋಟಿ ದಂಡ ಹಾಗೂ ಹಿಂದಿನ ಆದೇಶದಂತೆ ಬದಲಿ ಭೂಮಿ ನೀಡಲು ಸೂಚಿಸಿತ್ತು. ಕೊನೆಗೂ ರಾಜ್ಯ ಸರ್ಕಾರ ಕೆಲವು ತಿಂಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆ ಎನ್‌.ಆರ್.ಪುರದ ಬಳಿ ಅರಣ್ಯ ಇಲಾಖೆಗೆ 948 ಎಕರೆ ನೀಡಿದೆ. ದಂಡದ ಮೊತ್ತ ಬಿಡುಗಡೆ ಮಾಡಿದೆ. ಆದರೂ, ಅರಣ್ಯ ಇಲಾಖೆ ಗುತ್ತಿಗೆ ಅವಧಿ ನವೀಕರಿಸಿಲ್ಲ. ಅಭಿವೃದ್ಧಿ ಕಾಮಗಾರಿ ಮುಂದುವರಿಸಲುಒಪ್ಪಿಗೆ ನೀಡುತ್ತಿಲ್ಲ.

‘ಕುವೆಂಪು ವಿಶ್ವವಿದ್ಯಾಲಯ ಇರುವ ಪ್ರದೇಶ ಅಭಯಾರಣ್ಯ ವ್ಯಾಪ್ತಿಗೆ ಸೇರುತ್ತದೆ.ಹಾಗಾಗಿ, ಗುತ್ತಿಗೆನವೀಕರಣ ಅಥವಾ ಹಸ್ತಾಂತರ ಮಾಡಲುಕೇಂದ್ರಸರ್ಕಾರಅನುಮತಿ ನೀಡಬೇಕು. ಆ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಸಮಯಬೇಕಾಗುತ್ತದೆ.ಅಲ್ಲಿಯವರೆಗೂ ಅಭಿವೃದ್ಧಿ ಕಾರ್ಯಗಳಿಗೆ ಅವಕಾಶ ನೀಡಲು ಸಾಧ್ಯವಿಲ್ಲ’ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

***

ಸರ್ಕಾರ ಬದಲಿ ಭೂಮಿ ನೀಡಿದೆ. ಹಣ ಮಂಜೂರು ಮಾಡಿದೆ. ಆದರೆ, ಅರಣ್ಯ ಇಲಾಖೆ ಇದುವರೆಗೂ ಹಣದ ಬೇಡಿಕೆ ಪತ್ರ ಸಲ್ಲಿಸಿಲ್ಲ. ತುರ್ತು ಅಗತ್ಯವಿರುವ ಮಹಿಳಾ ಹಾಸ್ಟೆಲ್‌ ಕಟ್ಟಡ ನಿರ್ಮಾಣಕ್ಕೂ ಬಿಡುತ್ತಿಲ್ಲ. ಇದರಿಂದ 500ಕ್ಕೂ ಹೆಚ್ಚು ಮಹಿಳೆಯರು ಸಮಸ್ಯೆ ಎದುರಿಸುವಂತಾಗಿದೆ.
–ಎಚ್‌.ಎಸ್.ಭೋಜ್ಯಾನಾಯ್ಕ, ಕುಲಸಚಿವ, ಕುವೆಂಪು ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT