ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೈಸ್ತರು ಸೌಹಾರ್ದ ತತ್ವ ಅನುಸರಿಸುತ್ತಿರುವುದು ಶ್ಲಾಘನೀಯ: ಯಡಿಯೂರಪ್ಪ

ಆರೋಗ್ಯ ಮಾತೆ ಚರ್ಚ್‌ಗೆ ‘ಕಿರು ಬೆಸಿಲಿಕಾ’ ಮುಕುಟ
Last Updated 15 ಜನವರಿ 2020, 13:43 IST
ಅಕ್ಷರ ಗಾತ್ರ

ಹರಿಹರ: ಹಲವು ಕ್ರೈಸ್ತ ಧರ್ಮಗುರುಗಳು ಹಾಗೂ ಸಾವಿರಾರು ಕ್ರೈಸ್ತ ಧರ್ಮೀಯರ ಸಮ್ಮುಖದಲ್ಲಿ ಧಾರ್ಮಿಕ ವಿಧಿ–ವಿಧಾನಗಳನ್ನು ಬುಧವಾರ ಪೂರೈಸಿ ನಗರದ ಆರೋಗ್ಯ ಮಾತೆ ಚರ್ಚ್‌ ಅನ್ನು ‘ಕಿರು ಬೆಸಿಲಿಕಾ’ (ಮಹಾ ದೇವಾಲಯ) ಎಂದು ಅಧಿಕೃತವಾಗಿ ಘೋಷಿಸಲಾಯಿತು.

ಬೆಂಗಳೂರಿನ ಆರ್ಚ್‌ ಬಿಷಪ್‌ ಡಾ. ಪೀಟರ್‌ ಮಚಾಡೊ ಸಾನ್ನಿಧ್ಯದಲ್ಲಿ ಬೆಳಿಗ್ಗೆ ‘ಕಿರು ಬೆಸಿಲಿಕಾ’ ಘೋಷಣೆಯ ವಿಧಿ–ವಿಧಾನಗಳ ವಿಶೇಷ ಪೂಜೆ ನಡೆಯಿತು. ಗೋವಾ, ದಮನ್‌ನ ಆರ್ಚ್‌ ಬಿಷಪ್‌ ಡಾ. ಫಿಲಿಪ್‌ ನೇರಿ ಫೆರಾವೊ ಅವರು ‘ಬಲಿ ಪೂಜೆ’ ವಿಧಾನಗಳನ್ನು ಪೂರೈಸಿದರು. ಬಳಿಕ ಧರ್ಮ ಗುರುಗಳು ಹಾಗೂ ಕ್ರೈಸ್ತ ಧರ್ಮೀಯರು ಮಹಾ ಪ್ರಸಾದ ಸ್ವೀಕರಿಸಿದರು.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಪ್ರಮಾಣಪತ್ರದ ಫಲಕವನ್ನು ಅನಾವರಣಗೊಳಿಸುವ ಮೂಲಕ ಆರೋಗ್ಯ ಮಾತೆ ಚರ್ಚ್‌ಗೆ ‘ಕಿರು ಬೆಸಿಲಿಕಾ’ ಮುಕುಟವನ್ನು ತೊಡಿಸಿದರು.

‘ಕನ್ನಡದ ಮಣ್ಣಿನಲ್ಲಿ ಬಹುತ್ವಕ್ಕೆ ಉದಾಹರಣೆ ಎನ್ನುವಂತೆ ಎಲ್ಲರೂ ಸೌಹಾರ್ದದಿಂದ ಬದುಕುತ್ತಿದ್ದೇವೆ. ಯಾವುದೇ ವ್ಯಕ್ತಿ ಅಥವಾ ಸಮುದಾಯ ಸ್ಥಳೀಯರ ಜೊತೆಗೆ ಹೊಂದಿಕೊಂಡು ಸೌಹಾರ್ದದಿಂದ ಬದುಕು ನಡೆಸಿದಾಗ ಶಾಂತಿ, ಸಹನೆ, ನೆಮ್ಮದಿ ನೆಲೆಗೊಳ್ಳಲು ಸಾಧ್ಯ. ಕ್ರೈಸ್ತರು ಈ ತತ್ವ ಅನುಸರಿಸುತ್ತಿರುವುದು ಶ್ಲಾಘನೀಯ’ ಎಂದು ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

‘ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವಾ ಕ್ಷೇತ್ರಗಳಲ್ಲಿ ಕ್ರೈಸ್ತ ಸಂಸ್ಥೆಗಳ ಕೊಡುಗೆ ಅನುಪಮ. ನಾವೆಲ್ಲ ಕೂಡಿ ಶಾಂತಿಯ ತೋಟವಾದ ಕರ್ನಾಟಕವನ್ನು ಮತ್ತಷ್ಟು ಸುಂದರ ಹಾಗೂ ಸಮೃದ್ಧ ನಾಡನ್ನಾಗಿ ಗಟ್ಟಿಗೊಳಿಸೋಣ’ ಎಂದು ಕರೆ ನೀಡಿದರು.

ಆರೋಗ್ಯ ಮಾತೆ ಚರ್ಚ್‌ನ ಫಾದರ್‌ ಆಂಥೋನಿ ಪೀಟರ್‌ ಹಾಜರಿದ್ದರು. ಆರೋಗ್ಯ ಮಾತೆ ಚರ್ಚ್‌ ಭಾರತದ 25ನೇ ಹಾಗೂ ಕರ್ನಾಟಕ ಮೂರನೇ ‘ಕಿರು ಬೆಸಿಲಿಕಾ’ ಎನಿಸಿಕೊಂಡಿದೆ.

ಯಾತ್ರಿನಿವಾಸಕ್ಕೆ 10 ಎಕರೆ ಬೇಡಿಕೆ

‘ಜಾತಿ–ಮತ ಭೇದವನ್ನು ಮರೆತು ಆರೋಗ್ಯ ಮಾತೆ ಚರ್ಚ್‌ಗೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಬರುತ್ತಾರೆ. ವೃದ್ಧರಿಗೆ, ಮಹಿಳೆಯರಿಗೆ ತಂಗಲು ಇಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಹೀಗಾಗಿ ಇಲ್ಲಿ ಯಾತ್ರಿನಿವಾಸ ನಿರ್ಮಿಸಲು ವಿಶೇಷ ಅನುದಾನ ಕೊಡಬೇಕು. ಇದಕ್ಕಾಗಿ 10 ಎಕರೆ ಜಾಗವನ್ನೂ ನೀಡಬೇಕು’ ಎಂದು ಶಿವಮೊಗ್ಗದ ಬಿಷಪ್‌ ಡಾ. ಫ್ರಾನ್ಸಿಸ್‌ ಸಿರಾವೊ ಎಸ್‌.ಜೆ. ಅವರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT