ಭಾನುವಾರ, ಸೆಪ್ಟೆಂಬರ್ 20, 2020
23 °C
ಮೈಸೂರು ದಸರಾ

‘ಬರೆನು ನಾನು, ಬಿಡೆವು ನಾವು’– ಲಾರಿ ಹತ್ತಲು ಒಲ್ಲೆನೆಂದು ಕಣ್ಣೀರಾದ ಲಕ್ಷ್ಮಿ ಆನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಕ್ಷ್ಮಿ ಆನೆಯನ್ನು ಲಾರಿಗೆ ಹತ್ತಿಸುವ ಪ್ರಯತ್ನದಲ್ಲಿ ಗೋಪಿ

ಮೈಸೂರು: ವೈಭವದ ದಸರಾ ಮೆರವಣಿಗೆ ಮುಗಿಸಿರುವ ಗಜಪಡೆಯಲ್ಲಿ ಗುರುವಾರ ಆತಂಕ ಛಾಯೆ. ಇಷ್ಟು ದಿನ ಅರಮನೆಯ ಸುತ್ತಲೂ ಓಡಾಡುತ್ತ ನಗರ ಪ್ರದಕ್ಷಿಣೆ ಮಾಡುತ್ತಿದ್ದ ಆನೆಗಳಿಗೆ ಮರಳಿ ಕಾಡಿಗೆ ಹೋಗಲು ಮನಸ್ಸೇ ಬರಲಿಲ್ಲ.

ಮೂಲ ಶಿಬಿರಗಳಿಗೆ ಕರೆದೊಯ್ಯಲು ಬಂದಿದ್ದ ಲಾರಿಗಳನ್ನು ಕಾಣುತ್ತಿದ್ದಂತೆ ಆನೆಗಳು ಹಿಂದಡಿಯಿಟ್ಟವು.

ಈ ಬಾರಿ ದಸರಾಗೆ ಬಂದಿದ್ದ ಅತಿ ಕಿರಿ ಆನೆ ಎನಿಸಿಕೊಂಡಿದ್ದ 17 ವರ್ಷದ ಲಕ್ಷ್ಮಿಗೆ ಮಾತ್ರ ಯಾರೇ ಪುಸಲಾಯಿಸಿದರೂ, ಏನೇ ಪ್ರಯತ್ನಿಸಿದರೂ ಹಟ ಕಡಿಮೆಯಾಗಲಿಲ್ಲ. ಮನೆ ಬಿಟ್ಟು ಬರಲು ಒಲ್ಲದ ಮಕ್ಕಳಂತೆ ‘ನಾ ಬರೋದಿಲ್ಲ..., ನಾನೆಲ್ಲೂ ಬರೋದಿಲ್ಲ...’ ಎಂದು ರಚ್ಚೆಹಿಡಿಯಿತು. 

ಹಗ್ಗ ಜಗ್ಗಿ ಬೇರೆ ಆನೆಗಳ ಮೇಲೂ ಆಕ್ರೋಶ ವ್ಯಕ್ತಪಡಿಸಿತು. ಲಕ್ಷ್ಮಿಯನ್ನು ಸಮಾಧಾನಪಡಿಸಿ ಶಿಬಿರಕ್ಕೆ ಕರೆದೊಯ್ಯಲು ಅಂಬಾರಿ ಹೊರುವ ಅರ್ಜುನನೇ ಬಂದರೂ ಪ್ರಯೋಜನವಾಗಲಿಲ್ಲ.

ಇದನ್ನೂ ಓದಿ: ಮುಗಿದ ದಸರಾ ಸಂಭ್ರಮ: ಕಾಡಿಗೆ ಹೊರಟವು ಮೆರವಣಿಗೆ ಆನೆಗಳು

ಮೊದಲಿಗೆ ಗೋಪಿ, ನಂತರ ಅರ್ಜುನ, ದುರ್ಗಾಪರಮೇಶ್ವರಿ ಹಾಗೂ ವಿಕ್ರಂ ಆನೆಗಳು ಸೊಂಡಲಿನಿಂದ ತಳ್ಳಿ, ಮುಂದಲೆ ಮತ್ತು ದಂತದಿಂದ ನೂಕಿದರೂ ಲಕ್ಷ್ಮಿ ಮಾತು ಕೇಳಲಿಲ್ಲ. ‘ಬೇಕಾದರೆ ನೀವೆಲ್ಲ ಹೋಗಿ, ನಾನು ಬರಲ್ಲ...’ ಎಂದು ತನ್ನ ನಿರ್ಧಾರಕ್ಕೆ ಗಟ್ಟಿಯಾಗಿ ಅಂಟಿಕೊಂಟಿತು. ಮಾವುತರು, ಸಹಾಯಕರು, ಅರಣ್ಯ ಸಿಬ್ಬಂದಿಯೂ ಹೈರಾಣಾದರು.

ಎರಡೂವರೆ ಗಂಟೆ ದಾಟುತ್ತಿದ್ದಂತೆ ಸಿಬ್ಬಂದಿ ಮತ್ತೊಂದು ಲಾರಿ ತರಿಸಿ ಹೊಸ ತಂತ್ರಕ್ಕೆ ಮೊರೆಹೋದರು. ಸುತ್ತ ಮೂರು ಲಾರಿ ನಿಲ್ಲಿಸಿ, ಗೋಪಿ ಆನೆ ಸಹಾಯದಿಂದ ಲಕ್ಷ್ಮಿಯನ್ನು ಲಾರಿ ಏರುವಂತೆ ಮಾಡಲಾಯಿತು. ಆನೆಗಳು ಒಲ್ಲದ ಮನಸ್ಸಿನಿಂದ ಲಾರಿ ಏರುತ್ತಿರುವುದು ಅವುಗಳ ವರ್ತನೆಯೇ ತೋರುತ್ತಿತ್ತು. 

ಇದೇ ಸಂದರ್ಭ ಬೇರೆಬೇರೆ ಸ್ಥಳಗಳಲ್ಲಿ ಆನೆಗಳನ್ನು ಲಾರಿಗೆ ಹತ್ತಿಸುವ ಪ್ರಯತ್ನವಂತು ಮುಂದುವರಿಯಿತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು