ಜಿಂದಾಲ್‌ಗೆ‌ ಭೂಮಿ ಮಾರಾಟ, ಉಪಸಮಿತಿ‌ ಸ್ಥಳ ಪರಿಶೀಲಿಸಲಿ: ಆನಂದ್, ಅನಿಲ್ ಲಾಡ್

ಗುರುವಾರ , ಜೂಲೈ 18, 2019
23 °C

ಜಿಂದಾಲ್‌ಗೆ‌ ಭೂಮಿ ಮಾರಾಟ, ಉಪಸಮಿತಿ‌ ಸ್ಥಳ ಪರಿಶೀಲಿಸಲಿ: ಆನಂದ್, ಅನಿಲ್ ಲಾಡ್

Published:
Updated:

ಬಳ್ಳಾರಿ: ಜಿಂದಾಲ್‌ಗೆ 3666 ಎಕರೆ ಭೂಮಿ ಮಾರಾಟ ಮಾಡುವ ಕುರಿತು‌ ಶಿಫಾರಸು ನೀಡುವ ಮು‌ನ್ನ ಸಂಪುಟ ಉಪಸಮಿತಿಯು ಬಳ್ಳಾರಿಗೆ ಬಂದು ಸ್ಥಳ ಪರಿಶೀಲಿಸಬೇಕು ಎಂದು ಶಾಸಕ‌ ಆನಂದ್‌ಸಿಂಗ್ ಹಾಗೂ ಕಾಂಗ್ರೆಸ್ ಮುಖಂಡ ‌ಅನಿಲ್‌ ಲಾಡ್‌ ಆಗ್ರಹಿಸಿದರು.

ನಗರದಲ್ಲಿ‌ ಸೋಮವಾರ ಜಂಟಿ‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಉಪಸಮಿತಿಯ ‌ಕೆಲಸ ಬೆಂಗಳೂರಿನಲ್ಲಿ ‌ಕುಳಿತು ತೀರ್ಮಾನ ‌ಕೈಗೊಳ್ಳುವುದಲ್ಲ. ಹಳ್ಳಿಗಳಿಗೆ ಬರಬೇಕು.‌ ಜನರ ಅಹವಾಲು ಆಲಿಸಬೇಕು' ‌ಎಂದು ಹೇಳಿದರು.

'ಜಿಂದಾಲ್‌ಗೆ‌ ನೀಡಿರುವ ಗುತ್ತಿಗೆ ಅವಧಿಯನ್ನು ಮುಂದುವರಿಸಲೇನೂ ಅಡ್ಡಿ ಇಲ್ಲ. ಆದರೆ ಮಾರಾಟ ಮಾಡಿದರೆ, ಭೂಮಿಯನ್ನು ಜಿಂದಾಲ್ ಬ್ಯಾಂಕಿಗೆ ಅಡ ಇಡಬಾರದು ಎಂಬ ಷರತ್ತನ್ನು ವಿಧಿಸಲೇಬೇಕು’ ಎಂದು ಆಗ್ರಹಿಸಿದರು.

‘ನಾವು‌ ಯಾವುದೇ ಕಾರ್ಖಾನೆ‌ಯ ವಿರುದ್ಧ ಇಲ್ಲ. ಆದರೆ ಸರ್ಕಾರ ಸರಿಯಾದ ನಿರ್ಧಾರ ಕೈಗೊಳ್ಳಬೇಕು. ಲೀಸ್ ಕಮ್ ಸೇಲ್ ಡೀಡ್ ಮೂಲಕ‌ ಕಾರ್ಖಾನೆಗಳಿಗೆ ಭೂಮಿ ಕೊಡಬಾರದು. ಹಿಂದೆ‌ ಅಂಥ ‌ನಿರ್ಧಾರವಾಗಿದ್ದರೂ, ಅದನ್ನು ರದ್ದು ಮಾಡಬೇಕು’ ಎಂದು ಒತ್ತಾಯಿಸಿದರು.

ಜಿಂದಾಲ್ ಜಿಲ್ಲಾಮಟ್ಟದಲ್ಲಿ‌ ಎಷ್ಟು ಜನ‌ ಯುವಜನರಿಗೆ ಉದ್ಯೋಗ ನೀಡಿದೆ. ಸುತ್ತಮುತ್ತಲ ‌ಹಳ್ಳಿಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹೇಗೆ ಸಹಕರಿಸಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದೂ ಆಗ್ರಹಿಸಿದರು.

ಕಾರ್ಖಾನೆಗಳಿಂದ ಸಂಡೂರು ತಾಲ್ಲೂಕಿನಲ್ಲಿ‌ ಹೆಚ್ಚು‌ ನಷ್ಟವಾಗುತ್ತಿದೆ. ಅಲ್ಲಿನ ಕುರೇಕುಪ್ಪದಲ್ಲಿ‌ ಜನಪರ ದನಿ‌ ಎತ್ತಬೇಕಾಗಿದ್ದವರು ಶಾಸಕ‌ ಈ.ತುಕಾರಾಂ. ‌ಹಾಗೆ ಮಾಡದೇ ಇರುವುದಕ್ಕೆ ಅವರಿಗೆ ಏನಾದರೂ ‌ಸಹಾಯ‌ ಸಿಕ್ಕಿರಬಹುದು ಎಂದೂ ಅವರು ಟೀಕಿಸಿದರು.

ನಾನು, ಜಿಂದಾಲ್ ಸಂಸ್ಥೆಯ ಎದುರು‌ ನಿಲ್ಲಲು ಶಕ್ತಿ‌ ಇರುವ ಶಾಸಕನಲ್ಲ. ಸ್ಥಳೀಯರಿಗೆ ಮಾತನಾಡಲು ಅವಕಾಶವೇ ಇಲ್ಲ. ‌ಪೊಲೀಸರೇ ಜನರನ್ನು‌ ಹೆದರಿಸುತ್ತಿದ್ದಾರೆ‌ ಎಂದು ಆನಂದ್ ಸಿಂಗ್ ದೂರಿದರು.

‘3666 ಎಕರೆ ಭೂಮಿಯನ್ನು ಎಕರೆಗೆ ₹1.20 ಲಕ್ಷದಂತೆ, ₹43.99 ಕೋಟಿಗೆ ಸರ್ಕಾರ ಮಾರಲು ನಿರ್ಧರಿಸಿದೆ.‌ಅದನ್ನು‌ ಎಕರೆಗೆ ಕನಿಷ್ಠ ₹ 50 ಲಕ್ಷ ದರದಲ್ಲಿ ಜಿಂದಾಲ್ ಅಡವಿಟ್ಟರೆ ₹1866 ಕೋಟಿ ಸಾಲ‌ ಸಿಗುತ್ತದೆ. ಚಾರ್ಟರ್ಡ್ ಅಕೌಂಟೆಂಟ್ ಮೂಲಕ ಎಕರೆಗೆ  ₹1 ಕೋಟಿಯಂತೆ ಮೌಲ್ಯಮಾಪನ ಮಾಡಿಸಿದರೆ, ₹ 3666 ಕೋಟಿ ಸಾಲ ಸಿಗುತ್ತದೆ. ಹೀಗಾಗಿ ಜಿಂದಾಲ್‌ಗೆ ಭೂಮಿ ಮಾರುವುದೇ ಆದರೆ, ಅದನ್ನು ‌ಬ್ಯಾಂಕ್‌ನಲ್ಲಿ‌ ಅಡ ‌ಇಡಬಾರದು ಎಂಬ ಷರತ್ತನ್ನು ವಿಧಿಸಬೇಕು’ ಎಂದು ಅನಿಲ್ ಲಾಡ್ ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !