ಶುಕ್ರವಾರ, ಏಪ್ರಿಲ್ 23, 2021
22 °C
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆಗೆ ಬಿಜೆಪಿ ಸದಸ್ಯರ ಆಗ್ರಹ

‍ಪರಿಷತ್‌ನಲ್ಲಿ ಗದ್ದಲ: ಕಲಾಪ ಮುಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬಹುಮತ ಕಳೆದುಕೊಂಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿ ಸೋಮವಾರ ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷ ಬಿಜೆಪಿ ಸದಸ್ಯರು ಪಟ್ಟುಹಿಡಿದು ಗದ್ದಲ ನಡೆಸಿದ ಹಿನ್ನೆಲೆಯಲ್ಲಿ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

‘16 ಶಾಸಕರು ರಾಜೀನಾಮೆ ನೀಡಿದ್ದು, ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಸರ್ಕಾರವೇ ಅಸ್ತಿತ್ವದಲ್ಲಿ ಇಲ್ಲ. ತಕ್ಷಣ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು’ ಎಂದು ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸಪೂಜಾರಿ ಆಗ್ರಹಿಸಿದರು. ಇದಕ್ಕೆ ಇತರೆ ಸದಸ್ಯರು ಧ್ವನಿಗೂಡಿಸಿದರು.

ಪ್ರತಿಪಕ್ಷದ ಸದಸ್ಯರು ಎದ್ದುನಿಂತು ಘೋಷಣೆ ಕೂಗಿ, ಗದ್ದಲ ನಡೆಸಿದರು. ಭಿತ್ತಿಪತ್ರಗಳನ್ನು ಹಿಡಿದು ಧಿಕ್ಕಾರ ಮೊಳಗಿಸಿದರು. ‘ಮೊದಲು ಬಹುಮತ ತೋರಿಸಲಿ; ಅಲ್ಪ ಮತದ ಸರ್ಕಾರ ತೊಲಗಲಿ’ ಮೊದಲಾದ ಭಿತ್ತಿಪತ್ರಗಳು ಪ್ರದರ್ಶನಗೊಂಡವು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಕಡೆಯಿಂದಲೂ ಭಿತ್ತಿಪತ್ರಗಳ ಪ್ರದರ್ಶನ ನಡೆಯಿತು. ‘ಶಾಸಕರ ಖರೀದಿಗೆ ನರೇಂದ್ರ ಮೋದಿ, ಅಮಿತ್ ಶಾ ಕಾರಣ; ಸರ್ಕಾರ ಅಸ್ಥಿರಗೊಳಿಸಲು ಮೋದಿ, ಶಾ ಕಾರಣ’ ಮತ್ತಿತರ ಭಿತ್ತಿಪತ್ರಗಳು ರಾರಾಜಿಸಿದವು.

ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಎರಡೂ ಕಡೆಯೂ ಘೋಷಣೆ, ಧಿಕ್ಕಾರಗಳು ಜೋರು ಪಡೆದುಕೊಂಡವು. ಯಾರು ಏನು ಹೇಳುತ್ತಿದ್ದಾರೆ ಎಂಬುದು ಕೇಳದಾಯಿತು. ಗದ್ದಲದ ನಡುವೆಯೇ ಪರಸ್ಪರ ಆರೋಪ– ಪ್ರತ್ಯಾರೋಪಗಳ ವಿನಿಮಯ ನಡೆಯಿತು. ಬಿಜೆಪಿ ಸದಸ್ಯರು ಸಭಾಪತಿ ಅಂಗಳಕ್ಕೆ ಬಂದು, ಭಿತ್ತಪತ್ರಗಳನ್ನು ಹಿಡಿದು ಘೋಷಣೆ ಕೂಗಲಾರಂಭಿಸಿದರು. ಸಭಾಪತಿ ಸ್ಥಾನದಲ್ಲಿದ್ದ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರು ಗದ್ದಲ ನಿಲ್ಲಿಸುವಂತೆ ಪದೇಪದೇ ಮನವಿ ಮಾಡಿದರು. ಘೋಷಣೆ ಮತ್ತಷ್ಟು ಹೆಚ್ಚಾಗುತ್ತಿದ್ದಂತೆ ಕಲಾಪ ಮುಂದೂಡಿದರು.

ಬೆಳಿಗ್ಗೆ 11 ಗಂಟೆಗೆ ಕಲಾಪ ಆರಂಭವಾಗಬೇಕಿದ್ದು, ಕೋರಂ ಕೊರತೆಯಿಂದಾಗಿ 12.15ಕ್ಕೆ ಸದನ ಸೇರುತ್ತಿದ್ದಂತೆ ಪ್ರಶ್ನೋತ್ತರ ಕೈಗೆತ್ತಿಕೊಳ್ಳುವುದಾಗಿ ಸಭಾಧ್ಯಕ್ಷರು ಪ್ರಕಟಿಸಿದರು. ಕ್ರಿಯಾ ಲೋಪ ಎತ್ತಿದ ಬಿಜೆಪಿ ಸದಸ್ಯರು, ತಮಗೆ ಮಾತನಾಡಲು ಅವಕಾಶ ನೀಡುವಂತೆ ಒತ್ತಾಯಿಸಿದರು.

ಅದಕ್ಕೆ ಅವಕಾಶ ನೀಡದೆ, ಕಾರ್ಯಕಾಲಪ ಪಟ್ಟಿಯಂತೆ ಸಭೆ ನಡೆಸಲಾಗುವುದು. ಯಾರೂ ಗದ್ದಲ ಮಾಡಬಾರದು. ‘ಸೂಚನಾ ಪತ್ರ ಕೊಟ್ಟರೆ ಪರಿಶೀಲಿಸಲಾಗುವುದು’ ಎಂದು ತಿಳಿಸಿದರು.

ಇದಕ್ಕೆ ಒಪ್ಪದ ವಿರೋಧ ಪಕ್ಷದವರು, ಮಾತನಾಡಲು ಅವಕಾಶ ನೀಡಬೇಕು. ನಂತರ ಪ್ರಶ್ನೋತ್ತರ ಆರಂಭಿಸಬಹುದು. ಎಲ್ಲ ಸಚಿವರು ರಾಜೀನಾಮೆ ನೀಡಿದ್ದಾರೆ, ಮುಖ್ಯಮಂತ್ರಿ ಮಾತ್ರ ಇದ್ದಾರೆ. ಯಾರು ಉತ್ತರ ಕೊಡುತ್ತಾರೆ, ಸಚಿವರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು. ಉತ್ತರ ನೀಡಲು ಸಿದ್ಧರಿದ್ದೇವೆ ಎಂದು ಸಚಿವರು ಎದ್ದು ನಿಂತರು. ‘ನೀವು ರಾಜೀನಾಮೆ ನೀಡಿದ್ದೀರಿ’ ಎಂದು ಕೆಣಕುತ್ತಲೇ ಗದ್ದಲ ಜೋರು ಮಾಡಿದ್ದರು. ಆಗ ಕಲಾಪ ಮುಂದೂಡಲಾಯಿತು. ಸಭೆ ಆರಂಭವಾದ 15 ನಿಮಿಷದಲ್ಲೇ ಕೊನೆಗೊಂಡಿತು. ಮಧ್ಯಾಹ್ನ ಮತ್ತೆ ಕಲಾಪ ಸೇರುತ್ತಿದ್ದಂತೆ ಗದ್ದಲ ಮುಂದುವರಿದಿದ್ದರಿಂದ ಮುಂದೂಡಲಾಯಿತು.

**

ಉತ್ತರ ಕೊಡಲು ಯಾರಿದ್ದಾರೆ. ಎಲ್ಲ ಸಚಿವರು ರಾಜೀನಾಮೆ ನೀಡಿದ್ದಾರೆ
- ಆಯನೂರು ಮಂಜುನಾಥ್

**

ಸರ್ಕಾರವೇ ಅಸ್ತಿತ್ವದಲ್ಲಿ ಇಲ್ಲ. ಉತ್ತರ ಎಲ್ಲಿಂದ ನೀಡುತ್ತಾರೆ
- ಕೋಟ ಶ್ರೀನಿವಾಸ ಪೂಜಾರಿ

**

ರಾಜೀನಾಮೆ ಇವರ (ವಿರೋಧ ಪಕ್ಷ) ಕೈಗೆ ಕೊಟ್ಟಿದ್ದೇವೆಯೆ?
- ಸಾ.ರಾ.ಮಹೇಶ್, ಪ್ರವಾಸೋದ್ಯಮ ಸಚಿವ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು