ಶನಿವಾರ, ಜೂಲೈ 4, 2020
28 °C
ಕೊರೊನೋತ್ತರ ಕಾಲದಲ್ಲಿ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ

ಶಿಕ್ಷಣ‌ ವ್ಯವಸ್ಥೆ ಸರಿಪಡಿಸಲು‌ ಅಮೂಲ್ಯ ಅವಕಾಶ: ಶಿಕ್ಷಣ ಸಚಿವರಿಗೆ ಪತ್ರ

ರಾಜಾರಾಂ ತಲ್ಲೂರು Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಿಕ್ಷಣ ವ್ಯವಸ್ಥೆಯ ಅಮೂಲಾಗ್ರ ಬದಲಾವಣೆಗೆ ಇಂದಿನ ಸನ್ನಿವೇಶವು ಸುವರ್ಣಾವಕಾಶ ಒದಗಿಸಿದೆ ಎಂದು ಅಭಿಪ್ರಾಯಪಟ್ಟಿರುವ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಈ ಕುರಿತು ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. 

ಮಾನ್ಯ ಸುರೇಶ್‌ ಕುಮಾರ್‌ ಅವರಿಗೆ, ನಮಸ್ಕಾರ.

ಕೊರೊನೋತ್ತರ ದಿನಗಳ ಶಿಕ್ಷಣ ಹೇಗೆಂದು ಜಗತ್ತಿನಾದ್ಯಂತ ದೇಶಗಳು ಚಿಂತನೆಯಲ್ಲಿ ತೊಡಗಿವೆ. ಕರ್ನಾಟಕದಲ್ಲೂ ತಾವು ಮತ್ತು ತಮ್ಮ ಇಲಾಖೆ ಈ ಬಗ್ಗೆ ಯೋಚಿಸುತ್ತಿರುವುದನ್ನು ಗಮನಿಸಿದ್ದೇನೆ. ಈ ಹಿನ್ನೆಲೆಯಲ್ಲಿ ತಮಗೆ ಈ ಪತ್ರ ಬರೆಯುತ್ತಿದ್ದೇನೆ.

ಈ ಸಂಕಟವನ್ನು ಅವಕಾಶ ಎಂದು ಪರಿಗಣಿಸಿ ಕರ್ನಾಟಕದ ಶಿಕ್ಷಣ ವ್ಯವಸ್ಥೆಯನ್ನು ಅಮೂಲಾಗ್ರ ಬದಲಾವಣೆ ಮಾಡುವುದಕ್ಕೆ ಮನಸ್ಸು ಮಾಡುವುದಿದ್ದರೆ ಇದು ನಿಮಗೆ ಸುವರ್ಣಾವಕಾಶ. ನಾನು ಮುಂದೆ ಹೇಳಲಿರುವ ಬಹುತೇಕ ಅಂಶಗಳಿಗೆ ಒಂದೋ ಈಗಾಗಲೇ ಇರುವ ಕಾನೂನುಗಳಲ್ಲೇ “ಇನ್ ಹೆರೆಂಟ್” ಅವಕಾಶಗಳಿವೆ. ನೀತಿ ನಿರೂಪಕ ತಂಡದ ಮುಖ್ಯಸ್ಥರಾಗಿ ನಿಮ್ಮಿಂದ ಇರುವ ಏಕೈಕ ನಿರೀಕ್ಷೆ ಎಂದರೆ ಖಾಸಗಿ ಶಿಕ್ಷಣ ಲಾಬಿಯಿಂದ ದೂರ ನಿಂತು ಈ ವಿಚಾರಗಳನ್ನು ನಾಡಿನ ಸಮಷ್ಟಿಯ ಹಾಗೂ ದೂರಗಾಮಿ ಪರಿಣಾಮಗಳ ಹಿನ್ನೆಲೆಯಲ್ಲಿ ಗಮನಿಸಬೇಕೆಂಬುದು.

ಹಾಗೆ ಮಾಡಿದಲ್ಲಿ ಒಂದೇ ಕಲ್ಲಿನಿಂದ ಹತ್ತಾರು ಹಣ್ಣುಗಳನ್ನು ಉದುರಿಸುವ ಅವಕಾಶ ಸಿಗಲಿದೆ ಮತ್ತು ಶಿಕ್ಷಣ ಕ್ಷೇತ್ರ ಎಂದೆಂದಿಗೂ ನಿಮ್ಮನ್ನು ನೆನಪಿಸಿಕೊಳ್ಳಲಿದೆ.

ತಾವು ಮಾಡಬೇಕಾಗಿರುವ ಮೂರು ಕಾನೂನು ಬದಲಾವಣೆಗಳು ಎಂದರೆ:

ಒಂದು - “ಪ್ರೌಢ ಶಾಲಾ ಹಂತದ ತನಕ ಯಾವನೇ ವಿದ್ಯಾರ್ಥಿ/ವಿದ್ಯಾರ್ಥಿನಿ ಕಡ್ಡಾಯವಾಗಿ ತಮ್ಮ ನಿವಾಸದ ಸ್ಥಳದಿಂದ ಒಂದು ಕಿಲೊಮೀಟರ್ ಒಳಗಿನ (ಗ್ರಾಮೀಣ ಪ್ರದೇಶಗಳಲ್ಲಿ 2-3ಕಿಮೀ) ಒಳಗಿನ ಶಾಲೆಗಳಲ್ಲೇ ಓದಬೇಕು.” ಎಂದು.

ಎರಡು - “ಪ್ರೌಢಶಾಲಾ ಹಂತದ ತನಕ ಹೆಣ್ಣುಮಕ್ಕಳಿಗೆ ಈಗಾಗಲೇ ಇರುವ ಉಚಿತ ಶಿಕ್ಷಣವನ್ನು ಗಂಡು ಮಕ್ಕಳಿಗೂ ವಿಸ್ತರಿಸುವುದು.”

ಮೂರು - “ಕೌಶಲ ಕಲಿಕೆ” ಪ್ರಾಥಮಿಕ ಶಿಕ್ಷಣದ ಕಡ್ಡಾಯ ಭಾಗ ಆಗಬೇಕು.

ಹೀಗೆ ಮಾಡಿದಾಗ,

1. ಖಾಸಗಿ ಮತ್ತು ಸರ್ಕಾರಿ ಶಾಲೆಗಳ ನಡುವಿನ “ಶಿಕ್ಷಣ ಗುಣಮಟ್ಟ”ದ ತಾರತಮ್ಯ ತನ್ನಿಂತಾನೆ ಇಲ್ಲದಾಗಲಿದೆ.

2. ಮುಚ್ಚಲು ಸಿದ್ಧವಾಗಿರುವ ಎಲ್ಲ ಸರ್ಕಾರಿ ಶಾಲೆಗಳೂ ಮತ್ತೆ ಜೀವಂತಗೊಳ್ಳಲಿವೆ.

3. ಸಾವಿರ-ಲಕ್ಷಗಳ ಡೊನೇಷನ್ ವಸೂಲಿ ದಂಧೆ ನಿಯಂತ್ರಣಕ್ಕೆ ಬರಲಿದೆ.

4. ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮಕ್ಕೆ ಆದ್ಯತೆ ಕೊಡುವುದರಿಂದ ತಪ್ಪಿಸಿಕೊಳ್ಳಲು ಚಾಪೆಯಡಿ ತೂರಿಕೊಳ್ಳುವ ಪ್ರಯತ್ನಗಳು ತಂತಾನೆ ವಿಫಲಗೊಳ್ಳಲಿದ್ದು, ಆ ಉದ್ದೇಶಕ್ಕೆ ಬಲ ಸಿಗಲಿದೆ. ಕನ್ನಡಕ್ಕೆ ಆದ್ಯತೆಯುಳ್ಳ, ಇಂಗ್ಲೀಷನ್ನು ಕಡೆಗಣಿಸದ ಶಿಕ್ಷಣ ವ್ಯವಸ್ಥೆಯೊಂದು ತಾನೇ ತಾನಾಗಿ ಮೂಡಿಬರಲಿದೆ.

5. ಸರ್ಕಾರಿ ಶಾಲೆಗಳ ಮೂಲಸೌಕರ್ಯ ಮತ್ತು ಖಾಸಗಿಶಾಲೆಗಳ ಶಿಕ್ಷಕರ ಶೋಷಣೆ ನಿಲ್ಲಲಿದೆ.

6. ದಟ್ಟಣೆ ಇರುವಲ್ಲಿ ಹೊಸ ಸರ್ಕಾರಿ ಶಾಲೆಗಳಿಗೆ ಅವಕಾಶ ಸಿಗಲಿದೆ. ಇದು ಉದ್ಯೋಗಾವಕಾಶಗಳನ್ನೂ ಸೃಷ್ಟಿಸಲಿದೆ.

ಇವಿಷ್ಟು ಸಮಗ್ರ ಸ್ವರೂಪದ ಬದಲಾವಣೆಗಳಾದರೆ, ಕೊರೊನಾ ಸಂಕಟದ ನಿವಾರಣೆಗೂ ಈ ಕ್ರಮಗಳು ಸಹಾಯ ಮಾಡಲಿವೆ. ಹೇಗೆಂದರೆ:

1. ಮಕ್ಕಳ ಮನೆ ಹತ್ತಿರ ಇರುವುದರಿಂದ ವಾಹನ ಪ್ರಯಾಣ ತೀರಾ ಅಗತ್ಯ ಇರುವುದಿಲ್ಲ.

2. ಮಧ್ಯಾಹ್ನದ ಊಟಕ್ಕೆ ಮನೆಯನ್ನು ಅವಲಂಬಿಸುವವರು ಮನೆಯನ್ನು ಅವಲಂಬಿಸಿದರೆ, ಉಳಿದವರಿಗೆ ಶಾಲೆಯಲ್ಲಿ ಪೌಷ್ಠಿಕ ಆಹಾರ ನೀಡಲು ಸಾಧ್ಯ ಆಗುತ್ತದೆ.

3. ತರಗತಿ ಕೋಣೆಗಳಲ್ಲಿ ಅಂತರ ಕಾಯ್ದುಕೊಳ್ಳಲು, 30ಮಕ್ಕಳಲ್ಲಿ ಪ್ರತೀ 15ಮಂದಿಗೆ ದಿನಬಿಟ್ಟು ದಿನ ತರಗತಿ ವ್ಯವಸ್ಥೆ ಮಾಡಬಹುದು. ಉಳಿದ 15 ಮಂದಿಗೆ ತರಗತಿಗಳಿಲ್ಲದ ದಿನ ಹೆಚ್ಚುವರಿ ಇ-ಲರ್ನಿಂಗ್ ಜೊತೆಗೆ ಕೃಷಿ, ತೋಟಗಾರಿಕೆ, ಕ್ರೀಡೆ, ಸಮಾಜ ಸೇವೆಯಂತಹ 'ಕೌಶಲ ವೃದ್ಧಿ' ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅವಕಾಶ ಮಾಡಿಕೊಡಬಹುದು.
ತಾವು ಈ ನಿಟ್ಟಿನಲ್ಲಿ ಯೋಚಿಸಬೇಕೆಂದು ಕೋರಿಕೆ.

ವಿಶ್ವಾಸಗಳೊಂದಿಗೆ,

ರಾಜಾರಾಂ ತಲ್ಲೂರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು