ಬುಧವಾರ, ನವೆಂಬರ್ 13, 2019
21 °C

ಅನುಮತಿ ರಹಿತ ಆನ್‌ಲೈನ್‌ ಮದ್ಯ ಮಾರಾಟ ಸಲ್ಲ: ಹೈಕೋರ್ಟ್‌

Published:
Updated:

ಬೆಂಗಳೂರು: ‘ಅಬಕಾರಿ ಇಲಾಖೆ ಅನುಮತಿ ಇಲ್ಲದೆ ಆನ್‌ಲೈನ್‌ನಲ್ಲಿ ಮದ್ಯ ಬುಕಿಂಗ್‌, ಸಾಗಣೆ ಮತ್ತು ಮಾರಾಟದಂತಹ ಚಟುವಟಿಕೆಗಳಿಗೆ ಆಸ್ಪದವಿಲ್ಲ’ ಎಂದು ಹೈಕೋರ್ಟ್‌ ಆದೇಶಿಸಿದೆ. 

ಆನ್‌ಲೈನ್ ಮದ್ಯ ಮಾರಾಟಕ್ಕೆ ನೀಡಲಾಗಿದ್ದ ಅನುಮತಿ ಪತ್ರ ಹಿಂಪಡೆದ ಅಬಕಾರಿ ಇಲಾಖೆ ಆಯುಕ್ತರ ಕ್ರಮವನ್ನು ಪ್ರಶ್ನಿಸಿ ನಗರದಲ್ಲಿರುವ ಚೆನ್ನೈ ಮೂಲದ ‘ಎಚ್‌ಐಪಿ ಬಾರ್ ಪ್ರೈವೇಟ್ ಲಿಮಿಟೆಡ್’ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುಜಾತಾ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾ ಮಾಡಿದೆ.

‘ಕರ್ನಾಟಕ ಅಬಕಾರಿ ಕಾಯ್ದೆ-1965ರ ಅನುಸಾರ ಅನುಮತಿ ಅಥವಾ ಪರವಾನಗಿ ನೀಡದ ಹೊರತು ಆನ್‌ಲೈನ್‌ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ. ಆನ್‌ಲೈನ್ ಮದ್ಯ ಮಾರಾಟಕ್ಕೆ ನೀಡಲಾಗಿದ್ದ ಅನುಮತಿ ಪತ್ರ ಹಿಂಪಡೆದ ಅಬಕಾರಿ ಇಲಾಖೆಯ ನಿರ್ಧಾರ ಸೂಕ್ತವಾಗಿಯೇ ಇದೆ. ಇದು ಸಾರ್ವಜನಿಕ ಹಿತಾಸಕ್ತಿಯಿಂದ ಹಿಂಪಡೆದ ಆದೇಶವಾಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ಆನ್‌ಲೈನ್ ಮಾರಾಟದಿಂದ ಅಪ್ರಾಪ್ತರೂ ಮದ್ಯಪಾನದ ಚಟಕ್ಕೆ ದಾಸರಾಗುತ್ತಾರೆ. ಇದರಿಂದ ಯುವಪೀಳಿಗೆ ನಿಯಂತ್ರಣ ಸಾಧ್ಯವಿಲ್ಲ. ಆನ್‌ಲೈನ್‌ನಲ್ಲಿ ಮದ್ಯ ಖರೀದಿಸುವವರ ವಯಸ್ಸು ಗುರುತಿಸುವುದು ಹಾಗೂ ವಹಿವಾಟಿನ ಮೇಲ್ವಿಚಾರಣೆ ನಡೆಸುವುದು ಕಷ್ಟ’ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.

ಆಕ್ಷೇಪಣೆ ಏನು?: ‘ಆನ್‌ಲೈನ್ ಮೂಲಕ ಮದ್ಯ ಮಾರಾಟಕ್ಕೆ ಯಾವುದೇ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ. ಷೋಕಾಸ್ ನೋಟಿಸ್ ನೀಡದೆ ಏಕಾಏಕಿ ಅನುಮತಿ ಪತ್ರ ವಾಪಸು ಪಡೆದಿರುವುದು ಕಾನೂನು ಬಾಹಿರ. ಇದು ಸಂವಿಧಾನದ 14 ಮತ್ತು 19 (1) (ಜಿ) ವಿಧಿಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ’ ಎಂದು ಅರ್ಜಿದಾರ ಸಂಸ್ಥೆ ವಾದಿಸಿತ್ತು.

ಅರ್ಜಿದಾರರ ಪರ ಹಿರಿಯ ವಕೀಲ ಪಿ. ಚಿದಂಬರಂ ಹಾಗೂ ಧ್ಯಾನ್ ಚಿನ್ನಪ್ಪ ಮತ್ತು ರಾಜ್ಯ ಸರ್ಕಾರದ ಪರ ಈ ಹಿಂದಿನ ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಅವರು ವಾದ ಮಂಡಿಸಿದ್ದರು.

ಪ್ರತಿಕ್ರಿಯಿಸಿ (+)