ಬುಧವಾರ, ಜೂನ್ 23, 2021
23 °C

ಲಾಕ್‌ಡೌನ್‌ ಉಲ್ಲಂಘನೆ: ಭೂಸನೂರು ಜಾತ್ರೆಯಲ್ಲಿ ಪಾಲ್ಗೊಂಡ 13 ಮಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಜಾತ್ರೆ ನಡೆಸಿದ ಆರೋಪದ ಮೇಲೆ ಆಳಂದ ತಾಲ್ಲೂಕು ಭೂಸನೂರು ಗ್ರಾಮದ 13 ಮಂದಿಯನ್ನು ಭಾನುವಾರ ಬಂಧಿಸಲಾಗಿದೆ.

ಭೂಸನೂರು ಗ್ರಾಮದೇವರಾದ ಹನುಮಂತನ ದೇವಸ್ಥಾನದ ಮುಖಂಡರು, ಗ್ರಾಮದ ಹಿರಿಯರ ನೇತೃತ್ವದಲ್ಲಿ ಏ. 16ರಂದು ನಸುಕಿನ 3ಕ್ಕೆ ರಥೋತ್ಸವ ನಡೆಸಲಾಗಿತ್ತು. ಜಾತ್ರೆಯ ವಿಡಿಯೊ ತುಣುಕುಗಳು ಏ. 18ರಂದು ವೈರಲ್‌ ಆಗಿದ್ದವು. ಅದನ್ನು ಅನುಸರಿಸಿ, ಗ್ರಾಮಕ್ಕೆ ಭೇಟಿ ನೀಡಿದ ಪೊಲೀಸರು ಆರೋಪಿಗಳಲ್ಲಿ ಕೆಲವರನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ತಿಳಿಸಿದ್ದಾರೆ.

ಲಾಕ್‌ಡೌನ್‌ ಮುಗಿಯುವವರೆಗೆ ಹಾಗೂ ಜಿಲ್ಲೆಯಲ್ಲಿ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿ ಇರುವುದರಿಂದ ಜಾತ್ರೆ ನಡೆಸದಂತೆ ತಾಲ್ಲೂಕು ಆಡಳಿತ ಸೂಚನೆ ನೀಡಿತ್ತು. ದೇವಸ್ಥಾನದವರು ಇದಕ್ಕೆ ಒಪ್ಪಿ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಆದರೂ ಪೊಲೀಸರ ಕಣ್ಣು ತಪ್ಪಿಸಿ, ನಸುಕಿನಲ್ಲಿ ಜಾತ್ರೆ ನಡೆಸಲಾಗಿದೆ. ಇದರಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. 

ಏ. 17ರಂದು ಚಿತ್ತಾಪುರ ತಾಲ್ಲೂಕಿನ ರಾವೂರು ಗ್ರಾಮದಲ್ಲಿ ಸಿದ್ಧಲಿಂಗೇಶ್ವರ ರಥೋತ್ಸವ ನಡೆಸಿದ ಪ್ರಕರಣ ಹೊರಬಿದ್ದ ನಂತರವೇ ಭೂಸನೂರು ಪ್ರಕರಣ ಕೂಡ ಆಚೆಗೆ ಬಂದಿತು. ರಾವೂರು ಜಾತ್ರೆಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು 20 ಮಂದಿಯನ್ನು ಬಂದಿಸಿದ್ದು, 200ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಈ ಎರಡೂ ಪ್ರಕರಣಗಳ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೊರಿನಾ ಭೀತಿ ಮತ್ತಷ್ಟು ಹೆಚ್ಚಾಗಿದ್ದು, ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ರಾವೂರು ಹಾಗೂ ಭೂಸನೂರು ಗ್ರಾಮಗಳಲ್ಲಿ ಈಗಾಗಲೇ ಸೀಲ್‌ಡೌನ್‌ ಮಾಡಿದ್ದು, ಗ್ರಾಮಕ್ಕೆ ಯಾರೂ ಬರದಂತೆ ಹಾಗೂ ಹೊರಕ್ಕೆ ಯಾರೂ ಹೋಗದಂತೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು