ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಾಖಲೆ ಇಲ್ಲದೆ ₹ 50 ಸಾವಿರ ಕೊಂಡೊಯ್ದರೆ ತಾಪತ್ರಯ’

ಖಾಸಗಿ ಕಾರ್ಯಕ್ರಮಕ್ಕೆ ಅನುಮತಿ ಬೇಕಿಲ್ಲ: ಚುನಾವಣಾ ಆಯೋಗ
Last Updated 14 ಮಾರ್ಚ್ 2019, 20:11 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾರ್ವಜನಿಕರು ₹ 50 ಸಾವಿರ ನಗದು ಮತ್ತು ₹ 10 ಸಾವಿರಕ್ಕಿಂತ ಹೆಚ್ಚು ಮೌಲ್ಯದ ಉಡುಗೊರೆ ಸಾಗಿಸುವ ವೇಳೆ ಸೂಕ್ತ ದಾಖಲೆಗಳನ್ನು ಜೊತೆಯಲ್ಲಿ ಕೊಂಡೊಯ್ಯಬೇಕು’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ (ಸಿಇಒ) ಸಂಜೀವ್‌ ಕುಮಾರ್‌ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಕ್ರಮ ತಡೆಯಲು ನಾಕಾ, ಫ್ಲೈಯಿಂಗ್‌ ಸ್ಕ್ವಾಡ್‌, ಸ್ಪಾಟಿಕ್‌ ಸರ್ವಿಯಲೆನ್ಸ್‌ ತಂಡಗಳನ್ನು ಸ್ಥಾಪಿಸಲಾಗಿದೆ. ತಪಾಸಣೆ ವೇಳೆ ದಾಖಲೆ ಹಾಜರುಪಡಿಸದಿದ್ದರೆ ಆಯೋಗ ಕ್ರಮ ತೆಗೆದುಕೊಳ್ಳಲಿದೆ’ ಎಂದು ಎಚ್ಚರಿಸಿದರು.

ಎಲ್ಲ ದಾಖಲೆಗಳಿದ್ದೂ ಚೆಕ್‌‍ಪೋಸ್ಟ್‌ಗಳಲ್ಲಿ ತೊಂದರೆ ಉಂಟು ಮಾಡಿದರೆ, ಆ ಬಗ್ಗೆ ಪರಿಶೀಲಿಸಲು ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಬಾಧಿತರು ಈ ಸಮಿತಿಗೆ ದೂರು ನೀಡಬಹುದು ಎಂದು ವಿವರಿಸಿದರು.

ಹಣಕಾಸು ಸೇವೆಗಳ ಇಲಾಖೆ ನೀಡಿರುವ ‘ಸ್ಟಾಂಡರ್ಡ್‌ ಆಪರೇಟಿಂಗ್‌ ಪ್ರೊಸೀಜರ್‌ (ಎಸ್‌ಒಪಿ)’ ಪ್ರಕಾರ ಬ್ಯಾಂಕುಗಳ ಎಟಿಎಂಗಳಿಗೆ ಹಣ ತುಂಬಿಸಲು ಹೊರಗುತ್ತಿಗೆ ಏಜೆನ್ಸಿಗಳು ನಗದು ಸಾಗಿಸುವ ಸಂದರ್ಭದಲ್ಲಿ ಕರೆನ್ಸಿಯ ವಿವರ ಮತ್ತು ಅಧಿಕೃತ ದಾಖಲೆಗಳನ್ನು ಹೊಂದಿರಬೇಕು ಎಂದರು.

‘ಮದುವೆ, ಹುಟ್ಟು ಹಬ್ಬ, ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಯಾವುದೇ ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಮತಿ ಪಡೆಯುವ ಅಗತ್ಯ ಇಲ್ಲ. ಆದರೆ, ಅಂತಹ ಕಾರ್ಯಕ್ರಮಗಳ ಮೇಲೆ ನೀತಿಸಂಹಿತೆ ಜಾರಿ ದಳದ ಅಧಿಕಾರಿಗಳು ಕಣ್ಣಿಟ್ಟಿರುತ್ತಾರೆ’ ಎಂದರು.

ಸಾರ್ವಜನಿಕ ಕಾರ್ಯಕ್ರಮದ ನೆಪದಲ್ಲಿ ರಾಜಕೀಯ ವ್ಯಕ್ತಿಗಳು ನಗದು, ಉಡುಗೊರೆ, ಮದ್ಯ, ಊಟದ ವ್ಯವಸ್ಥೆ ಸೇರಿದಂತೆ ಮತದಾರರನ್ನು ಓಲೈಸಲು ಯಾವುದೇ ರೀತಿಯ ಆಮಿಷ ಒಡ್ಡಿದರೆ ಆಯೋಗ ಕಾನೂನು ಕ್ರಮ ತೆಗೆದುಕೊಳ್ಳಲಿದೆ ಎಂದೂ ಅವರು ಎಚ್ಚರಿಕೆ ನೀಡಿದರು.

ಲೋಕಸಭೆ ಚುನಾವಣೆಗೆ ರಚಿಸಿದ ತಂಡಗಳು

ವಿವರ; ಸಂಖ್ಯೆ

ಕ್ಷಿಪ್ರ ಕಾರ್ಯಾಚರಣೆ; 1,512

ಸ್ಥಿರ ಕಣ್ಗಾವಲು; 1,837

ಸಹಾಯಕ ವೆಚ್ಚ ವೀಕ್ಷಕರು; 232

ಲೆಕ್ಕ ಪರಿಶೋಧಕರು; 257

ವಿಡಿಯೊ ವೀಕ್ಷಣಾ ತಂಡ (ವಿವಿಟಿ); 331

**

ನಿರ್ದಿಷ್ಟ ಅರ್ಜಿ ಸಲ್ಲಿಸಿದವರ ಹೆಸರುಗಳನ್ನು ಮತದಾರ ಪಟ್ಟಿಯಿಂದ ತೆಗೆದುಹಾಕಲಾಗಿದೆ.
–ಸಂಜೀವ್‌ ಕುಮಾರ್‌, ರಾಜ್ಯ ಮುಖ್ಯ ಚುನಾವಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT