ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಬೆಂಗಳೂರು ‘ಕೇಂದ್ರ’ಕ್ಕೆ ಭಾರಿ ಪೈಪೋಟಿ

ಬಿ.ಕೆ. ಹರಿಪ್ರಸಾದ್‌, ರಿಜ್ವಾನ್, ಸಲೀಂ ಅಹಮದ್‌, ಆರ್. ರೋಷನ್ ಬೇಗ್ ಮಧ್ಯೆ ಸೆಣಸಾಟ
Last Updated 18 ಫೆಬ್ರುವರಿ 2019, 10:34 IST
ಅಕ್ಷರ ಗಾತ್ರ

ಬೆಂಗಳೂರು: ಸತತ ಎರಡು ಬಾರಿ ಬಿಜೆಪಿಯ ಪಿ.ಸಿ. ಮೋಹನ್ ಗೆದ್ದಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ಗೆ ಹಿರಿಯಾಳುಗಳಿಂದ ಭಾರಿ ಪೈಪೋಟಿ ಶುರುವಾಗಿದೆ.

2014ರ ಲೋಕಸಭಾ ಚುನಾವಣೆಯಲ್ಲಿ 1.38 ಲಕ್ಷ ಮತಗಳ ಅಂತರದಿಂದ ಸೋತಿದ್ದ ವಿಧಾನ ಪರಿಷತ್ತಿನ ಹಾಲಿ ಸದಸ್ಯ ರಿಜ್ವಾನ್ ಅರ್ಷದ್‌ ಈ ಬಾರಿಯೂ ಕಣಕ್ಕೆ ಇಳಿಯಲು ತಯಾರಿ ನಡೆಸಿದ್ದಾರೆ. ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್‌, ಶಿವಾಜಿನಗರ ಶಾಸಕ ಆರ್. ರೋಷನ್ ಬೇಗ್‌, ಮುಖಂಡ ಸಲೀಂ ಅಹಮದ್‌, ಮಾಜಿ ಸಂಸದ ಎಚ್.ಟಿ. ಸಾಂಗ್ಲಿಯಾನ ಸ್ಪರ್ಧೆಗೆ ಆಸಕ್ತಿ ತೋರಿದ್ದಾರೆ. ಇದು ಕಾಂಗ್ರೆಸ್‌ ನಾಯಕರ ತಲೆನೋವಿಗೆ ಕಾರಣವಾಗಿದೆ.

ಶಿವಾಜಿನಗರ, ಗಾಂಧಿನಗರ, ಶಾಂತಿನಗರ, ಚಾಮರಾಜಪೇಟೆ, ಸರ್ವಜ್ಞನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದು, ಮಹದೇವಪುರ, ಸಿ.ವಿ. ರಾಮನ್‌ನಗರ, ರಾಜಾಜಿನಗರಗಳಲ್ಲಿ ಬಿಜೆಪಿ ಪ್ರತಿನಿಧಿಗಳಿದ್ದಾರೆ. ಎಂಟರಲ್ಲಿ ಐದು ಕ್ಷೇತ್ರಗಳು ಕಾಂಗ್ರೆಸ್‌ ಕೈಯಲ್ಲಿರುವುದರ ಜತೆಗೆ ಕೆ.ಜೆ. ಜಾರ್ಜ್‌ ಹಾಗೂ ಜಮೀರ್ ಅಹಮದ್‌ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಉತ್ತರ ಮತ್ತು ದಕ್ಷಿಣದಲ್ಲಿ ಒಕ್ಕಲಿಗರಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ. ಬೆಂಗಳೂರಿನ ಮೂರು ಕ್ಷೇತ್ರಗಳನ್ನು ಪ್ರಭಾವಿಸುವ ಸಂಖ್ಯೆಯಲ್ಲಿರುವ ಹಿಂದುಳಿದ ಸಮುದಾಯಕ್ಕೆ ಕೇಂದ್ರ ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಡಬೇಕು ಎಂಬ ಬೇಡಿಕೆ ಈಗ ಬಲವಾಗುತ್ತಿದೆ.

ಕೇಂದ್ರ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದ ಬಳಿಕ 2009ರಲ್ಲಿ ಎಚ್.ಟಿ. ಸಾಂಗ್ಲಿಯಾನ, 2013ರಲ್ಲಿ ರಿಜ್ವಾನ್ ಅರ್ಷದ್‌ ಈ ಕಣಕ್ಕೆ ಇಳಿದಿದ್ದರು. ಹೀಗೆ, ಅಲ್ಪಸಂಖ್ಯಾತರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡುತ್ತಿರುವುದರಿಂದ ಇದನ್ನೆ ಬಂಡವಾಳ ಮಾಡಿಕೊಳ್ಳುವ ಬಿಜೆಪಿ ‘ಹಿಂದು’ ಮತಗಳನ್ನು ಕ್ರೋಡೀಕರಿಸಲು ಅವಕಾಶ ಸಿಗುವಂತಾಗಿದೆ. ಐವರು ಕಾಂಗ್ರೆಸ್ ಶಾಸಕರಿದ್ದರೂ ಹಿಂದು–ಅಲ್ಪಸಂಖ್ಯಾತ ಎಂಬ ಮತ ವಿಭಜನೆ ತಂತ್ರವನ್ನು ಬಿಜೆಪಿ ಬಳಸುವುದರಿಂದ ಗೆಲುವಿನ ಹಾದಿ ಸುಗಮವಾಗುತ್ತಿದೆ. ಈ ಬಾರಿ ಇದನ್ನು ತಪ್ಪಿಸಬೇಕು ಎಂಬ ಆಗ್ರಹ ಪಕ್ಷದ ವಲಯದಲ್ಲೇ ವ್ಯಕ್ತವಾಗಿದೆ.

ಶಾಸಕರಿಗೆ ಟಿಕೆಟ್ ಇಲ್ಲ: ಲೋಕಸಭೆ ಚುನಾವಣೆಯಲ್ಲಿ ಶಾಸಕರಿಗೆ ಟಿಕೆಟ್ ನೀಡುವುದಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಆರ್. ರೋಷನ್ ಬೇಗ್ ಅವರಿಗೆ ಟಿಕೆಟ್ ತಪ್ಪಿಸುವ ಉದ್ದೇಶಕ್ಕೆ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್‌ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಪರಿಷತ್ ಪ್ರತಿನಿಧಿಸುತ್ತಿರುವ ರಿಜ್ವಾನ್ ಅರ್ಷದ್ ಅವರಿಗೂ ಇದು ಅನ್ವಯವಾಗಬೇಕು ಎಂಬ ಬೇಡಿಕೆ ಈಗ ಹುಟ್ಟಿಕೊಂಡಿದೆ. ಆಂಧ್ರಪ್ರದೇಶದಲ್ಲಿ ಲೋಕಸಭೆ ಚುನಾವಣೆಗೆ ನಿಲ್ಲುವವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸ್ಪರ್ಧಿಸುವ ಪರಂಪರೆ ಆರಂಭವಾಗಿದೆ. ಅದು ಕರ್ನಾಟಕದಲ್ಲೂ ನಡೆಯಲಿ ಎಂಬ ಚರ್ಚೆಯೂ ಶುರುವಾಗಿದೆ. ದಿನೇಶ್‌, ಕೃಷ್ಣ ಬೈರೇಗೌಡ, ಜಾರ್ಜ್ ಅವರು ರಿಜ್ವಾನ್ ಪರ ಇದ್ದಾರೆ.

‘ಸರ್ಕಾರದಲ್ಲಿ ಸಚಿವ ಸ್ಥಾನ ಕೊಡಿ, ಇಲ್ಲವಾದರೆ ಕೇಂದ್ರದಲ್ಲಿ ಸ್ಪರ್ಧಿಸಲು ಅವಕಾಶ ಕೊಡಿ’ ಎಂದು ರೋಷನ್ ಬೇಗ್ ಪಟ್ಟು ಹಿಡಿದಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ತಮ್ಮ ಪ್ರಭಾವ ಇಟ್ಟುಕೊಂಡಿರುವ ಅವರು, ಟಿಕೆಟ್‌ಗಾಗಿ ದೆಹಲಿಯಲ್ಲೇ ಮೊಕ್ಕಾಂ ಹೂಡಿದ್ದು ತಮ್ಮ ಯತ್ನ ಮುಂದುವರಿಸಿದ್ದಾರೆ.

ಹಿಂದುಳಿದ ಸಮುದಾಯ ಪ್ರತಿನಿಧಿಸುವ ಪಿ.ಸಿ. ಮೋಹನ್ ಎದುರು ಹಿಂದುಳಿದ ಸಮುದಾಯದ ನಾಯಕರಾದ ಹರಿಪ್ರಸಾದ್ ಅವರನ್ನೇ ಕಣಕ್ಕೆ ಇಳಿಸಿದರೆ ಪ್ರಬಲ ಸ್ಪರ್ಧೆ ಎದುರಾಗಲಿದೆ ಎಂದು ಹಿರಿಯರ ಗುಂಪು ವಾದಿಸಲಾರಂಭಿಸಿದೆ. ಐವರು ಶಾಸಕರ ಬಲ, ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ಮುಸ್ಲಿಂ, ಕ್ರೈಸ್ತರ ಮತಗಳ ಜತೆಗೆ ಹಿಂದುಳಿದವರು, ತಮಿಳು ಭಾಷಿಗರ ಮತಗಳೂ ಕಾಂಗ್ರೆಸ್‌ ತೆಕ್ಕೆಗೆ ಬರಲಿವೆ ಎಂಬುದು ಈ ಗುಂಪಿನ ಪ್ರತಿಪಾದನೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಹರಿಪ್ರಸಾದ್‌ ಬೆಂಬಲಿಗರು ಈ ತರ್ಕವನ್ನು ವಿವರಿಸಿದ್ದಾರೆ. ಅಲ್ಲದೇ, ಒಂದು ಸೀಟನ್ನಾದರೂ ಹಿಂದುಳಿದವರಿಗೆ ನೀಡಲೇಬೇಕು ಎಂದು ಹಕ್ಕೊತ್ತಾಯ ಮಂಡಿಸಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ, ಅಧ್ಯಕ್ಷ ರಾಹುಲ್ ಗಾಂಧಿ, ಅಹ್ಮದ್‌ ಪಟೇಲ್ ಅವರ ಜತೆಗೆ ನಿಕಟ ಬಾಂಧವ್ಯ ಹೊಂದಿರುವ ಹರಿಪ್ರಸಾದ್‌, ತಮ್ಮ ಪ್ರಭಾವವನ್ನು ಬಳಸುವ ಇರಾದೆಯಲ್ಲಿದ್ದಾರೆ.

**

ಉತ್ತರಕ್ಕೆ ಕೃಷ್ಣ ಬೈರೇಗೌಡ, ದಕ್ಷಿಣಕ್ಕೆ ಪ್ರಿಯಕೃಷ್ಣ

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸಲುಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಉತ್ಸುಕರಾಗಿದ್ದು, ಕ್ಷೇತ್ರ ಬಿಟ್ಟುಕೊಡಬೇಕು ಎಂಬ ಬೇಡಿಕೆ ಆರಂಭವಾಗಿದೆ.

ಹಾಗೊಂದು ವೇಳೆ ಸಹಮತ ಮೂಡದೇ ಇದ್ದರೆ, ಕಾಂಗ್ರೆಸ್‌ನಿಂದ ಸಚಿವ ಕೃಷ್ಣ ಬೈರೇಗೌಡ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಎಂ.ಆರ್. ಸೀತಾರಾಂ, ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಜಕುಮಾರ್ ಪ್ರಯತ್ನ ನಡೆಸಿದ್ದಾರೆ.

ದಕ್ಷಿಣ ಕ್ಷೇತ್ರದಿಂದ ಗೋವಿಂದರಾಜನಗರ ಕ್ಷೇತ್ರದ ಮಾಜಿ ಶಾಸಕ ಪ್ರಿಯಕೃಷ್ಣ ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ಚರ್ಚೆ ನಡೆದಿದೆ. ವಿಜಯನಗರ ಕ್ಷೇತ್ರದ ಶಾಸಕರಾದ ಪ್ರಿಯಕೃಷ್ಣ ತಂದೆ ಎಂ. ಕೃಷ್ಣಪ್ಪ ಅವರು ಈ ಕ್ಷೇತ್ರದಲ್ಲಿ ಅನಂತ್ ಕುಮಾರ್ ಎದುರು ಸ್ಪರ್ಧಿಸಿ ಸೋತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT